ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಜಾವರ ಶ್ರೀಗಳಿಗೆ... ಸ್ಪಷ್ಟನೆಗಾಗಿ ಪತ್ರ

Last Updated 13 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

–ಕೆ.ಫಣಿರಾಜ್, ಉಡುಪಿ

ಮಾನ್ಯರೇ,
ಸಪ್ರೇಮ ಭೀಮ ವಂದನೆಗಳು. ಹೀಗೆ ಸಂಬೋಧಿಸುತ್ತಿರುವುದಕ್ಕೆ ಕಾರಣ: ತಮ್ಮ ಜತೆ ಮಾತುಕತೆಯಾಡಲು ನಂಗೊಂದು ನೆಲೆ ಬೇಕು; ತಮ್ಮ ಜೊತೆ ಜಾತಿ, ಮತ, ಅಧಿಕಾರಸ್ಥ ಸಂಸ್ಥೆಗಳ ಸಂಬಂಧ ಹಚ್ಚಿಕೊಂಡು ಮಾತನಾಡಲು ನನಗೆ ಇಷ್ಟವಿಲ್ಲ. ಹಾಗಾಗಿ, ಸದರಿ ಭಾರತದ ಸಂವಿಧಾನದ ಪ್ರಥಮ ಪರಿಚ್ಛೇದದ ಅನ್ವಯ ನಾವಿಬ್ಬರೂ ಭಾರತ ದೇಶದ ಸಮಾನ ಪ್ರಜೆಗಳು ಎನ್ನುವ ನೆಲೆಯಲ್ಲಿ ಮಾತ್ರ ತಮ್ಮ ಜೊತೆ ಮಾತನಾಡುವೆ.

ನಾನು ಮಾತನಾಡಲಿಕ್ಕೆ ಇಚ್ಛಿಸುವ ವಿಷಯ,ಕಳೆದ ನವೆಂಬರ್ 25-27ರ ವರೆಗೆ ಉಡುಪಿಯಲ್ಲಿ ನಡೆದ ‘ಧರ್ಮ ಸಂಸದ್’, ಅದು ತೆಗೆದುಕೊಂಡ ನಿರ್ಣಯಗಳು ಹಾಗೂ ಅವುಗಳ ಸಮ್ಮುಖ ತಾವುಗಳು ವ್ಯಕ್ತಪಡಿಸಿದ ಅಭಿಪ್ರಾಯಗಳು. ಇದಕ್ಕೆ, ಹದಿನೈದು ದಿವಸ ಕಾದಿದ್ದಕ್ಕೆ ಕಾರಣ, ತಾವು ಸಾಧಾರಣವಾಗಿ ತಮ್ಮ ಹೇಳಿಕೆಗಳ ನಂತರ ನೀಡುವ ಸಮಜಾಯಿಷಿಗಳು ಹಾಗೂ ಕೆಲವು ಪಂಡಿತೋತ್ತಮರು ತಮ್ಮ ಹೇಳಿಕೆಗಳನ್ನು ಹೇಗೆ ಸ್ವೀಕರಿಸಬೇಕು ಎಂದು ನೀಡುವ ಟೀಕುಗಳ ನಿರೀಕ್ಷೆಯಷ್ಟೇ. ಇಂತು ಈ ಪತ್ರವು.

ಮೊದಲಾಗಿ, ಭಾರತದ ಸಮಾನ ಪ್ರಜೆಗಳಾದರೂ ಜಾತಿ-ಮತ-ಅಂತಸ್ತು-ಲಿಂಗ ಸಂಬಂಧವಾಗಿ ನಮ್ಮಿಬ್ಬರಿಗೂ ಹಲವು ನೆಲೆಯ ಅಸ್ತಿತ್ವಗಳು ಇವೆ. ನಾವು ಸಾರ್ವಜನಿಕ ನೆಲೆಯಲ್ಲಿ, ಸಮಾಜದ ಒಟ್ಟು ಸ್ಥಿತಿಗತಿಗಳ ಬಗ್ಗೆ ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವಾಗ, ನಮ್ಮ ಅಸ್ತಿತ್ವದ ಯಾವ ಗುರುತಿನ ನೆಲೆಯಲ್ಲಿ ಆ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತೇವೆ ಎನ್ನುವುದರ ಮೇಲೆ, ಆ ಅಭಿಪ್ರಾಯದ ಅರ್ಥ-ಮೌಲ್ಯಗಳು ನಿರ್ಣಯವಾಗುತ್ತವೆ.
ಈ ನೆಲೆಯಲ್ಲಿ ನನ್ನ ಮೊದಲ ಕ್ಲೇಶ: ತಾವು ಸಾರ್ವಜನಿಕವಾಗಿ ಅಭಿಪ್ರಾಯ ವ್ಯಕ್ತಪಡಿಸುವಾಗ, ಶಿವಳ್ಳಿ ವೈಷ್ಣವ ಮಠವೊಂದರ ಯತಿಗಳಾಗಿ– ಆ ನೆಲೆಯಿಂದಲೇ, ಸಕಲ ಜಾತಿಗಳನ್ನೂ ನಿರ್ದೇಶಿಸುವ ಮಾರ್ಗದರ್ಶಕ ಹುದ್ದೆ ತಮಗೆ ಅನಾಯಾಸವಾಗಿ ಸಿಕ್ಕಿದೆ ಎಂಬ ನಂಬಿಕೆಯಲ್ಲಿ ಮಾತನಾಡುತ್ತಿದ್ದೀರಾ? ಅಥವಾ ಭಾರತದ ಸದ್ಯದ ಸಂವಿಧಾನಬದ್ಧ ಪ್ರಜಾಪ್ರಭುತ್ವ ಆಳ್ವಿಕೆಯನ್ನು ಬೇರುಸಹಿತ ಕಿತ್ತುಹಾಕಿ, ‘ಹಿಂದುತ್ವವಾದಿ ರಾಜಕೀಯ ಪ್ರಣಾಳಿಕೆ’ ಅನ್ವಯ ಪ್ರಭುತ್ವ ನಿರ್ಮಾಣ ಮಾಡಬೇಕೆನ್ನುವ ಆರ್‌ಎಸ್‌ಎಸ್‌ ಪ್ರಣೀತ ‘ಧರ್ಮ ಸಂಸದ್’ನ ಮಾರ್ಗದರ್ಶಕರಾಗಿ ಮಾತನಾಡುತ್ತಿದ್ದೀರಾ? ಈ ಕ್ಲೇಶಕ್ಕೆ ಕಾರಣವಿಷ್ಟೇ:ತಮ್ಮ ಉವಾಚ-ಆಚರಣೆಗಳನ್ನು ‘19ನೇ ಶತಮಾನದ ಸಹೃದಯಿ ಸಮಾಜ ಸುಧಾರಕ ಸಂತ ಪರಂಪರೆಯ ಮುಂದುವರಿಕೆಯಾಗಿ ಕಾಣಬೇಕು’ ಎಂದು ತಾವು ಹಾಗೂ ತಮ್ಮನ್ನು ಸಮರ್ಥಿಸುವ ಹಲವು ಪಂಡಿತರು ವಾದಿಸುತ್ತಾರೆ. ಆದರೆ, ಇದು ಸಾಧ್ಯವಾಗುವುದು ತಾವು ಸಂವಿಧಾನಬದ್ಧ ಸಾಮಾನ್ಯ ಪ್ರಜೆ ಎಂದು ಪರಿಗಣಿಸುವುದರಿಂದ ಮಾತ್ರವೇ! ಬಾಕಿ ಅಸ್ಮಿತೆಗಳೆಲ್ಲ ತಮ್ಮ ‘ಧರ್ಮ ಸಂಸದ್ ಹೇಳಿಕೆ’ಗಳ ಅಧಿಕಾರಯುಕ್ತತೆಯ ಪ್ರಶ್ನೆಗಳನ್ನು ಎತ್ತುವುದಕ್ಕೆ ಅವಕಾಶ ಮಾಡಿಕೊಡುತ್ತವೆ.

ಇವನ್ನು ನಾನು ಬರಿ ತರ್ಕ, ನ್ಯಾಯ ವೈಶೇಷಿಕದ ಪಂಡಿತ ಚರ್ಚೆಗಾಗಿ ಕೇಳುತ್ತಿಲ್ಲ; ತಮ್ಮ ಮಾತುಗಳ ಅಸ್ಮಿತೆಯ ಪ್ರಾಮಾಣಿಕತೆಯ ಹಿಂದೆ ಉಡುಪಿ, ಉಡುಪಿ ಜಿಲ್ಲೆ, ಕರಾವಳಿಯ ಮೂರು ಜಿಲ್ಲೆಗಳು ಹಾಗೂ ಮಿಕ್ಕಂತೆ ಚಾಚಿರುವ ನಾಡುಗಳ ಸಾಮಾನ್ಯ ಜನರ ಜೀವನದ ಸಹಜಬದುಕು– ಸಾವಿನ ಅಸ್ತಿತ್ವದ ಸಮಸ್ಯೆ ಇದೆ! ಈ ಹಿನ್ನೆಲೆಯಲ್ಲಿ ಕೆಲವು ಉತ್ತರಗಳನ್ನು ತಮ್ಮಿಂದ ಬೇಡುವೆನು:ತಮ್ಮ ‘ಧರ್ಮ ಸಂಸದ್’ ‘ಅಸ್ಪೃಶ್ಯತೆ ನಿವಾರಣೆ’ಯ ನಿರ್ಣಯವನ್ನು ಒಕ್ಕೊರಲಿನಿಂದ ಕೈಗೊಂಡಿತು. ಆದರೆ, ಅದಕ್ಕೆ ಪ್ರಾಯೋಗಿಕ ಮಾರ್ಗವಾಗಿ ಅದು ಸೂಚಿಸಿದ್ದು, ಮೇಲ್ಜಾತಿಯವರು ದಲಿತರ ಮನೆಗಳಿಗೆ ಹೋಗುವುದನ್ನು! ಇರಲಿ. ಅದಕ್ಕೆ ಪೂರಕವಾಗಿ, ತಾವು ‘1971 ರಿಂದಲೂ ದಲಿತರ ಕೇರಿಗಳಿಗೆ ತೆರಳಿ ಪಾದಪೂಜೆ’ ಸ್ವೀಕರಿಸುತ್ತಿರುವುದನ್ನೂ, ತಮ್ಮ ಮತಸ್ಥರ ನಡುವೆ ಇರುವ ವಿರೋಧವನ್ನು ಜೀರ್ಣಿಸಿಕೊಂಡು ತಮ್ಮ ಸುಧಾರಣಾ ಕಾರ್ಯಕ್ರಮ ನಡೆಸುತ್ತಿರುವ ಬಗ್ಗೆ ಹೇಳಿದ್ದೀರಿ. ಆದರೆ, ಈ ನಿರ್ಣಯ ಕೈಗೊಳ್ಳುವ ಸಮಯದಲ್ಲೇ, ಹತ್ತಿರದ ಮಠಗಳಲ್ಲಿ ಪಂಕ್ತಿಭೇದ ಭೋಜನಗಳು ನಡೆಯುತ್ತಿದ್ದವು! ಹಾಗೆಯೇ ಕೃಷ್ಣಾರ್ಚನೆಯ ಅಧಿಕಾರ ಅಷ್ಟಮಠಾಧೀಶರಿಗೆ ಮಾತ್ರ ಎಂಬ ವಾದಿರಾಜ ಕಾನೂನು ಜಾರಿಯಲ್ಲಿತ್ತು! ತಮ್ಮ ಸಹೃದಯವೇನೋ ಸರಿ. ಆದರೆ, 1971 ರಿಂದ ಈ ಬಗೆಯ ಜಾತಿ ಅಸಮಾನತೆಯ ನಿವಾರಣೆಗೆ ತಾವುಗಳು ಮಾಡಿದ ಪ್ರಯತ್ನವೇನು? ದಲಿತರು ಬಿಡಿ, ಬಂಟರು ಅಥವಾ ಗೌಡ ಸಾರಸ್ವತರು ಕೂಡ ಬ್ರಾಹ್ಮಣರ ಜೊತೆ ಪಂಕ್ತಿಯಲ್ಲಿ ಕೂತು ಉಣ್ಣುವ ಸ್ಥಿತಿ ಇದೆಯೇ! ಇಷ್ಟಿದ್ದೂ ತಾವು ಹೇಳುತ್ತೀರಿ: ‘ನಮ್ಮಲ್ಲಿ ಪ್ರತ್ಯೇಕ ಭೋಜನವೂ ಇದೆ, ಸಹಪಂಕ್ತಿ ಭೋಜನವೂ ಇದೆ’; ‘ಅಂತರ್ಜಾತಿ ವಿವಾಹ ವೈಯಕ್ತಿಕ. ಜಾತಿ ಸಮಸ್ಯೆ ನಿವಾರಣೆಗೆ ಮನಃ ಪರಿವರ್ತನೆಯ ಅಗತ್ಯವಿದೆ’. ಆ ‘ಮನಃಪರಿವರ್ತನೆ’ಗೆ 1971ರಿಂದ ತಾವು ಕೈಗೊಂಡ ಕಾರ್ಯಕ್ರಮಗಳನ್ನು ಮತ್ತು ಅವುಗಳ ಪರಾಮರ್ಶೆಯನ್ನು ನೀಡುವಿರೋ?

‘ಧರ್ಮ ಸಂಸದ್’ಗೆ ಪೂರ್ವಭಾವಿಯಾಗಿ ತಾವು ನೀಡಿದ ಮಾಧ್ಯಮ ಸಂದರ್ಶನಗಳಲ್ಲಿ, ‘ಬಾಬ್ರಿ ಮಸೀದಿ ಸ್ಥಳದಲ್ಲಿ ಕೇವಲ ಸಾಂಕೇತಿಕ ಕರಸೇವೆ ನಡೆಯುವುದಿತ್ತು; ಕೆಲವು ಕಿಡಿಗೇಡಿಗಳು ಧ್ವಂಸಕ್ಕಿಳಿದಾಗ ನಾನು ಪ್ರತಿಭಟಿಸಿದೆ...’ ಇತ್ಯಾದಿ ಹೇಳಿರುವಿರಿ. ಸರಿ, ನಂಬೋಣ. ಆದರೆ, ಉಡುಪಿಯ ‘ಧರ್ಮ ಸಂಸದ್’ನ ಮೊದಲ ದಿನವೇ ಮೋಹನ್ ಭಾಗವತ್ ಅವರು ‘ರಾಮ ಮಂದಿರ ನಿರ್ಮಾಣಕ್ಕೆ ಇದೀಗ ಅನುಕೂಲಕರ ವಾತಾವರಣ ಇದೆ. ನಿರ್ಮಾಣದ ವಿಷಯವು ಚಹಾ ಕಪ್ ಹಾಗೂ ಅದನ್ನು ಸವಿಯುವ ತುಟಿಗಳ ನಡುವಿನ ಅಂತರದಷ್ಟು ಮಾತ್ರ ಇದೆ. ಎಲ್ಲರೂ ಸಂಯಮದಿಂದ ಇರಿ’ ಎಂದು ಹೇಳಿದ್ದಾಗಿ ವರದಿಯಾಗಿದೆ.

ಆ ನಂತರದಲ್ಲಿ ತಾವು ಪತ್ರಿಕಾಗೋಷ್ಠಿಯಲ್ಲಿ ‘2018ರ ಅಕ್ಟೋಬರ್ ಹೊತ್ತಿಗೆ ರಾಮಜನ್ಮ ಭೂಮಿಯಲ್ಲಿ ದೇವಸ್ಥಾನ ನಿರ್ಮಾಣವಾಗುತ್ತದೆ’ ಎಂದು ತಿಳಿಸಿರುವಿರಿ! ವಿವಾದ ಇನ್ನೂ ಸುಪ್ರೀಂ ಕೋರ್ಟ್‌ನಲ್ಲಿದೆ ಎಂದು ತಿಳಿದಿದ್ದರೂ ಭಾಗವತ್ ಆ ಬಗೆಯ ಮಾತನಾಡುವುದು ಆಶ್ಚರ್ಯ ಉಂಟು ಮಾಡದು. ಯಾಕೆಂದರೆ, ಅವರ ಏಕೈಕ ಅಸ್ಮಿತೆ ಆರ್‌ಎಸ್‌ಎಸ್‌! ಇಷ್ಟು ಸ್ಪಷ್ಟವಾಗಿ ಭಾಗವತ್ ಹೇಳುವುದು ಹಾಗೂ ತಾವು ಅನುಮೋದಿಸುವುದು, ಇಂದಿನ ‘ಸಂವಿಧಾನದನ್ವಯ’ ಒಂದು ‘ಒಳಸಂಚು’– ಬಾಬ್ರಿ ಮಸೀದಿ ಧ್ವಂಸದ ಹಾಗೆ! ತಮ್ಮ ನಿಲುವೇನು ಶ್ರೀಗಳೇ?

‘ಸಮಾನ ನಾಗರಿಕ ಸಂಹಿತೆಗಾಗಿ ಸಂವಿಧಾನ ಬದಲಿಸಬೇಕು’ ಎಂದು ತಾವು ನಿವೇದಿಸಿಕೊಂಡಿದ್ದೀರಿ. ಸರಿ. ಸಂವಿಧಾನದ ಯಾವ ವಿಧಿಗಳ ಬಗ್ಗೆ ತಮ್ಮ ತಕರಾರಿದೆ? ತಾವು ಬಯಸುವ ಬದಲಾವಣೆ ಏನು? ಸ್ಪಷ್ಟವಾಗಿ ಸಾರ್ವಜನಿಕರಿಗೆ ತಿಳಿಸಿ.

‘ನಮ್ಮ ಈ ನಿಲುವುಗಳಿಂದ ಬಿಜೆಪಿಗೆ ಅನುಕೂಲವಾದರೆ ನಾವು ಹೊಣೆಯಲ್ಲ’ ಅಂದಿರುವಿರಿ. ತಮ್ಮ ನಿಲುವುಗಳಿಗೂ ಬಿಜೆಪಿಯ ರಾಜಕೀಯ ಪ್ರಣಾಳಿಕೆಗೂ ಸಂಬಂಧವಿದೆ ಎಂದು ನಾವು ಭಾವಿಸಿಕೊಂಡರೆ ಅದರಲ್ಲಿ ತಪ್ಪಿದೆಯೇ? ತಾವು ಇಂಥವನ್ನೆಲ್ಲ ಗಮನಿಸುತ್ತೀರಿ ಹಾಗೂ ತಮ್ಮನ್ನು ಸಮರ್ಥಿಸುವ ಪಂಡಿತೋತ್ತಮರು ಇಂಥ ಪಾಮರ ವಿಷಯಗಳ ಬಗ್ಗೆ ಪಾರಮಾರ್ಥಿಕ ಚಿಂತನೆ ನಡೆಸುವರು ಎಂಬ ಕಾರಣದಿಂದ ಈ ಪತ್ರ.

–ಜೈ ಭೀಮ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT