ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುರಣಿಸಲಿದೆ ಸಂತೂರ್‌ ನಿನಾದ...

Last Updated 14 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

* ಖ್ಯಾತ ಸಂಗೀತಗಾರರ ಗಾನ–ನಾದ ಪಯಣ ಕೇಳಲು ರೋಚಕ. ನಿಮ್ಮ ಅನುಭವ ಏನು?
ನಮ್ಮದು ಸಂಗೀತದ ಮನೆತನ. ತಂದೆ ಪಂ.ಸಿ.ಆರ್‌.ವ್ಯಾಸ್‌ ಹಿಂದೂಸ್ತಾನಿ ಗಾಯಕರು. 13 ವರ್ಷ ಹುಡುಗನಿರುವಾಗಲೇ ಸಂಗೀತ ಕಲಿಯಲಾರಂಭಿಸಿದೆ. ನಾನು ದೊಡ್ಡ ಗಾಯಕನಾಗಬೇಕು ಎಂಬುದು ತಂದೆಯ ಕನಸು. ಹೀಗಾಗಿ ಅವರು ಕಛೇರಿಗೆ ಹೋಗುವಾಗಲೆಲ್ಲ ತಂಬೂರ ಸಾಥಿಗೆ ನನ್ನನ್ನೇ ಕರೆದುಕೊಂಡು ಹೋಗುತ್ತಿದ್ದರು. ಗಾಯನದ ಆಳ ಅಗಲಗಳನ್ನು ತಿಳಿಯಲು ಎಳೆ ವಯಸ್ಸಿನಿಂದಲೇ ಸಾಧ್ಯವಾದದ್ದು ಹಾಗೆ.

ಅದು 1966ನೇ ಇಸವಿ. ಒಮ್ಮೆ ತಂದೆಯವರೊಡನೆ ಮುಂಬಯಿಯಲ್ಲಿ ಪಂ. ಶಿವಕುಮಾರ ಶರ್ಮ ಅವರ ಸಂತೂರ್‌ ಕಛೇರಿ ಕೇಳಲು ಹೋಗಿದ್ದೆ. ಸಂತೂರ್‌ ನಾದ ನನ್ನನ್ನು ಅಕ್ಷರಶಃ ಕಟ್ಟಿಹಾಕಿತು. ಈ ವಾದ್ಯವನ್ನು ಒಲಿಸಿಕೊಳ್ಳಲೇ ಬೇಕು ಎಂಬ ಅದಮ್ಯ ಛಲ ಆಗಲೇ ಬೆಳೆಯಿತು. ಆಗ ನಾನು ಎಂಟನೇ ತರಗತಿಯಲ್ಲಿದ್ದೆ. ತಂದೆಗೆ ನಾನು ವಾದ್ಯದಲ್ಲಿ ಹೆಸರು ಮಾಡುವುದಕ್ಕಿಂತ ಹಾಡುವುದರಲ್ಲೇ ಖ್ಯಾತಿ ಗಳಿಸಬೇಕೆಂಬ ಆಸಕ್ತಿ ಇತ್ತು. ಒಂಬತ್ತು ವರ್ಷ ಗಾಯನ ಕಲಿತೆ. ಪದವಿ ಓದಿದ ಬಳಿಕ ತಂದೆಯ ಮನವೊಲಿಸಿ ಸಂತೂರ್‌ ಕಲಿಯಲಾರಂಭಿಸಿದೆ. ಆಗ ನನಗೆ 21 ವರ್ಷ. ಪಂ.ಶಿವಕುಮಾರ್‌ ಶರ್ಮ ಅವರ ಬಳಿಯೇ ಶಿಷ್ಯತ್ವ ಪಡೆದೆ. ಸುಮಾರು 20 ವರ್ಷಗಳ ನಿರಂತರ ತಾಲೀಮು ನಡೆಸಿದೆ. ಸಂತೂರ್‌ ನಾದ ಬಹಳ ಇಷ್ಟಪಟ್ಟದ್ದು ಜತೆಗೆ ಸಂಗೀತದ ಎಲ್ಲ ಆಯಾಮಗಳನ್ನು ತಿಳಿದುಕೊಂಡದ್ದು ವಾದನದಲ್ಲಿ ಬೇಗ ಯಶ ಸಾಧಿಸಲು ಸಾಧ್ಯವಾಯಿತು.

* ಮೊದಲ ಸಂತೂರ್‌ ಕಛೇರಿ ನೀಡಿದ ಪುಳಕವನ್ನು ಹಂಚಿಕೊಳ್ಳುವಿರಾ?
1986ರಲ್ಲಿ ಮುಂಬೈಯ ಬೆಂಗಾಲಿ ಸಂಸ್ಥೆಯೊಂದು ಅದರ ವಾರ್ಷಿಕೋತ್ಸವಕ್ಕೆ ನನ್ನ ಸಂತೂರ್‌ ಕಛೇರಿ ವ್ಯವಸ್ಥೆ ಮಾಡಿತ್ತು. ಹೊಸ ಹುಮ್ಮಸ್ಸು, ಉತ್ಸಾಹದಿಂದಲೇ ವೇದಿಕೆ ಏರಿದೆ. ಕಿಕ್ಕಿರಿದು ತುಂಬಿದ ಸಭಾಂಗಣ. ನನ್ನ ಗುರು ಪಂ. ಶಿವಕುಮಾರ ಶರ್ಮ, ಹಿಂದೂಸ್ತಾನಿ ಗಾಯನ ದಿಗ್ಗಜ ಪಂ. ಭೀಮಸೇನ ಜೋಶಿ ಮೊದಲ ಸಾಲಿನಲ್ಲಿ ಕೇಳುಗರಾಗಿ ಕುಳಿತಿದ್ದರು. ನಾನು ತನ್ಮಯನಾಗಿ ಸಂತೂರ್‌ ನುಡಿಸಲಾರಂಭಿಸಿದೆ. ಕೇಳುಗರ ಕಡೆಗೆ ಕಣ್ಣು ಹಾಯಿಸಲೇ ಇಲ್ಲ. ವಾದ್ಯದ ಮೇಲೆಯೇ ನನ್ನ ಸಂಪೂರ್ಣ ಗಮನವಿತ್ತು. ಸುಮಾರು ಒಂದು ಗಂಟೆ ಕಾಲ ನಿರಂತರವಾಗಿ ನುಡಿಸಿದೆ. ನಾದದ ಎಳೆಎಳೆಯಲ್ಲೂ ಗುರುವಿನ ಶ್ರದ್ಧೆ, ಪರಿಶ್ರಮಕ್ಕೆ ಜೀವ ತುಂಬಲಾರಂಭಿಸಿದೆ. ಕಛೇರಿ ಸಂಪೂರ್ಣ ಯಶಸ್ವಿಯಾಯಿತು. ನನ್ನ ಗುರುಗಳು, ಪಂ. ಭೀಮಸೇನ ಜೋಶಿ ಅವರು ನನ್ನ ವಾದನವನ್ನು ಬಹಳ ಕೊಂಡಾಡಿದರು. ನಂತರ ಲೆಕ್ಕವಿಲ್ಲದಷ್ಟು ಕಛೇರಿಗಳನ್ನು ನೀಡಿದ್ದೇನೆ. ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಯುರೋಪ್‌ ರಾಷ್ಟ್ರಗಳಲ್ಲಿ ಸಂತೂರ್‌ ನಾದ ಉಣಬಡಿಸಿದ್ದೇನೆ.

* ನಿಮ್ಮ ಸಂಗೀತ ಜೀವನದ ಅತ್ಯಂತ ಸಂತಸದ ಕ್ಷಣ ಯಾವುದು?
1993ರಲ್ಲಿ ಮುಂಬೈಯ ರಂಗ ಭವನ ಓಪನ್‌ ಏರ್‌ ಆಡಿಟೋರಿಯಂನಲ್ಲಿ ಐದು ಪ್ರಮುಖ ಕಲಾವಿದರ ಕಛೇರಿ ಏರ್ಪಾಡಾಗಿತ್ತು. ಜಸ್‌ರಾಜ್‌, ಉಸ್ತಾದ್‌ ಅಮ್ಜದ್‌ ಅಲಿಖಾನ್‌, ಜಾಕೀರ್‌ ಹುಸೇನ್‌, ಕಿಶೋರಿ ಅಮೋನ್‌ಕರ್‌ ಅವರ ಕಛೇರಿಗಳ ಜತೆಗೆ ನನ್ನ ಸಂತೂರ್‌ ವಾದನ. ಇಷ್ಟು ಹೆಸರಾಂತ ಕಲಾವಿದರ ಜತೆಗೆ ನನ್ನದೂ ಕಛೇರಿ ಇದ್ದದ್ದು ನನಗೆ ಬಹಳ ಖುಷಿ, ಹೆಮ್ಮೆ ತಂದ ಸಂಗತಿಯಾಗಿತ್ತು. ಎಲ್ಲ ಕಲಾವಿದರೂ ಕಛೇರಿ ನಡೆಯುವ ಸ್ಥಳಕ್ಕೆ ಆಗಮಿಸಿದರು. ಆಗ ಕಿಶೋರಿ ಅಮೋನ್‌ಕರ್‌ ಅವರ ತಾಯಿಗೆ ಅನಾರೋಗ್ಯವಾದ ಸುದ್ದಿ ಬಂತು. ಹೀಗಾಗಿ ಅವರು ತಕ್ಷಣ ಹೊರಡಬೇಕಾಯಿತು. ಇದೇ ಕಾರಣಕ್ಕೆ ಕೊನೆಗೆ ಇದ್ದ ನನ್ನ ಕಛೇರಿಯನ್ನು ಮೊದಲಿಗೇ ಹಾಕಿದರು. ದಿಗ್ಗಜರ ಕಛೇರಿ ಕೇಳಲು ಕಿಕ್ಕಿರಿದು ಸಂಗೀತಾಭಿಮಾನಿಗಳು ಸೇರಿದ್ದರು. ಇಂಥ ಒಳ್ಳೆಯ ಅವಕಾಶ ಸಿಕ್ಕಿದ್ದಕ್ಕಾಗಿ ನನಗೆ ತುಂಬ ಖುಷಿಯಾಯಿತು. ನಾನು ನುಡಿಸಿದ ಸಂತೂರ್‌ ನಾದ ಕೂಡ ಎಲ್ಲರನ್ನು ಸೆಳೆದಿತ್ತು. ಅಷ್ಟೂ ಕಲಾವಿದರು ನನಗೆ ಅಭಿನಂದನೆ ಸಲ್ಲಿಸಿದರು. ಇದು ನಿಜಕ್ಕೂ ನನ್ನ ಜೀವನದಲ್ಲಿ ಮರೆಯಲಾರದ ಘಟನೆಯಾಗಿ ಉಳಿದಿದೆ.

* ಸಂಗೀತ ಕ್ಷೇತ್ರದಲ್ಲಿ ಸಾಧನೆಯಷ್ಟೇ ಅವಕಾಶಗಳು ಮುಖ್ಯ. ಒಮ್ಮೆ ಕೇಳುಗರ ಹೃದಯದಲ್ಲಿ ನೆಲೆ ನಿಂತರೆ ಅವಕಾಶಗಳು ತಾನಾಗೇ ಒಲಿಯುತ್ತವೆ ಎಂಬುದು ಬಹುತೇಕ ಎಲ್ಲ ಕಲಾವಿದರ ಅಭಿಪ್ರಾಯವೂ ಹೌದು. ನಿಮ್ಮ ಅನಿಸಿಕೆ ಏನು?
ಒಬ್ಬ ಕಲಾವಿದನಿಗೆ ಅವಕಾಶ ಸಿಗಲೇ ಬೇಕು. ತನ್ನ ಪ್ರತಿಭೆ ಅನಾವರಣಕ್ಕೆ ವೇದಿಕೆ ಸಿಕ್ಕರೆ ಮಾತ್ರ ಅದು ಸಾಧ್ಯ. ನನಗಂತೂ ಮೊದಲಿನಿಂದಲೂ ಮೇಲಿಂದ ಮೇಲೆ ಅವಕಾಶ ಸಿಗುತ್ತಲೇ ಇತ್ತು. ಹೀಗಾಗಿ ದೇಶ ವಿದೇಶಗಳಲ್ಲಿ ನೂರಾರು ಪ್ರತಿಷ್ಠಿತ ವೇದಿಕೆಗಳಲ್ಲಿ ಲೆಕ್ಕವಿಲ್ಲದಷ್ಟು ಕಛೇರಿಗಳನ್ನು ನೀಡಿದ್ದೇನೆ. 2017ರ ಅಕ್ಟೋಬರ್‌ನಲ್ಲಿ ಯೂರೋಪಿಯನ್‌ ಪಾರ್ಲಿಮೆಂಟ್‌ನಲ್ಲಿ ನಾನು ಸಂತೂರ್‌ ವಾದನ ನಡೆಸಿಕೊಟ್ಟಿದ್ದೇನೆ. ಜಗತ್ತಿನ 27 ದೇಶಗಳಿಂದ ಬಂದ ಪ್ರತಿನಿಧಿಗಳು ಅಲ್ಲಿ ಭಾಗವಹಿಸಿದ್ದರು. ನನ್ನನ್ನು ಅಲ್ಲಿ ಭಾರತೀಯ ಸಂಗೀತ ಪ್ರತಿನಿಧಿಯಾಗಿ ಕಳುಹಿಸಲಾಗಿತ್ತು. ಇದು ನನ್ನ ಪಾಲಿಗೆ ಒದಗಿದ ಸುವರ್ಣಾವಕಾಶ. ಕಳೆದ ವರ್ಷ ಚಿಕಾಗೋದಲ್ಲಿ ನಡೆದ ವಿಶ್ವ ಸಂಗೀತ ಸಮ್ಮೇಳನ, ಸ್ಕಾಟ್‌ಲೆಂಡ್‌ನಲ್ಲಿ ನಡೆದ ಎಡಿನ್‌ಬರ್ಗ್‌ ಸಮ್ಮೇಳನದಲ್ಲಿ ನೀಡಿದ ಕಛೇರಿಗಳೂ ನನಗೆ ಪ್ರಮುಖವಾದದ್ದೇ.

* ನಮ್ಮಲ್ಲಿ ಸಂತೂರ್‌ ವಾದಕರ ಸಂಖ್ಯೆ ಬಹಳ ಕಡಿಮೆ. ಖ್ಯಾತನಾಮರಂತೂ ಬೆರಳೆಣಿಕೆಯಷ್ಟೇ. ವಿಶಿಷ್ಟ ನಾದ ಕೊಡುವ ಸಂತೂರ್‌ ಕಡೆಗೆ ಯುವ ಮನಸ್ಸು ಏಕೆ ಆಸಕ್ತಿ ತಾಳುತ್ತಿಲ್ಲ..?
ಸಂತೂರ್‌ ವಾದ್ಯಕ್ಕೆ ಹೆಚ್ಚಿನ ಇತಿಹಾಸವಿಲ್ಲ. ಸುಮಾರು 60 ವರ್ಷಗಳ ಹಿಂದೆ ಪಂ. ಶಿವಕುಮಾರ್‌ ಶರ್ಮ ಅವರ ತಂದೆ ಪಂ. ಉಮಾದತ್ತ ಶರ್ಮ ಸಂತೂರ್‌ ವಾದನವನ್ನು ಮೊದಲ ಬಾರಿಗೆ ಹಿಂದೂಸ್ತಾನಿ ಸಂಗೀತಲೋಕಕ್ಕೆ ಪರಿಚಯಿಸಿದವರು. ಮೊದಲು ಈ ವಾದ್ಯಕ್ಕೆ 100 ತಂತಿ ಇತ್ತು. ಪಂ. ಶಿವಕುಮಾರ್‌ ಶರ್ಮ ಇದನ್ನು ಸ್ವಲ್ಪ ಮಾರ್ಪಾಡು ಮಾಡಿ 91 ತಂತಿಗಳನ್ನು ಮಾತ್ರ ಉಳಿಸಿಕೊಂಡು ಜನಪ್ರಿಯಗೊಳಿಸಿದ್ದಾರೆ. ಸರೋದ್‌, ಸಿತಾರ್‌ಗಳಂತೆ ಈ ವಾದ್ಯಕ್ಕೆ ಹೆಚ್ಚಿನ ಮನ್ನಣೆ ಇನ್ನೂ ಸಿಕ್ಕಿಲ್ಲ, ಆದರೂ ಈ ವಾದ್ಯ ಕಲಿಯಲು ಯುವ ಪ್ರತಿಭಾವಂತರು ಮುಂದೆ ಬರುತ್ತಿದ್ದಾರೆ. ಕಲಿಯುವ ಮಕ್ಕಳೂ ಇದ್ದಾರೆ. ನಿಧಾನಕ್ಕೆ ಇದು ಜನಪ್ರಿಯ ಆಗಬಹುದು ಎಂಬುದು ನನ್ನ ಭಾವನೆ.

* ನಿಮ್ಮ ಸಂತೂರ್‌ ವಾದ್ಯದಲ್ಲಿ ಯಾವ ರಾಗಗಳು ಪದೇ ಪದೇ ಮತ್ತು ಹೆಚ್ಚಾಗಿ ಅನುರಣಿಸುತ್ತಿರುತ್ತವೆ?
ನನ್ನ ನುಡಿಸಾಣಿಕೆಯಲ್ಲಿ ‘ಪ್ರಹರ ರಾಗ’ಗಳಿಗೆ ಮೊದಲ ಆದ್ಯತೆ. ಆಯಾಯ ಪ್ರಹರಕ್ಕೆ (ಸಮಯ) ಸರಿಹೊಂದುವ ರಾಗಗಳನ್ನೇ ಆಯ್ಕೆ ಮಾಡುತ್ತೇನೆ. ಭೈರಾಗಿ ಬೈರವ್‌, ತೋಡಿ, ಗುರ್ಜರಿ ತೋಡಿ, ಮಧುವಂತಿ, ಭೂಪಾಲಿ, ಹಂಸಧ್ವನಿ, ಕೀರವಾಣಿ, ಪೂರ್ಯಕಲ್ಯಾಣ್‌, ಭಾಗೇಶ್ರೀ, ದುರ್ಗಾ.. ಹೀಗೆ ಎಲ್ಲ ರಾಗಗಳೂ ನನಗೆ ಬಹಳ ಇಷ್ಟ. ನೂರೆಂಟು ರಾಗಗಳನ್ನು ನುಡಿಸುವ ಬದಲು ಹತ್ತು ಹದಿನೈದು ರಾಗಗಳಲ್ಲಿ ಪರಿಪೂರ್ಣತೆ ಸಾಧಿಸುವುದು ಮುಖ್ಯ ಎಂದು ನನ್ನ ಭಾವನೆ. ಒಮ್ಮೆ ಪಂ. ಭೀಮಸೇನ ಜೋಶಿ ಹೇಳಿದ್ದರು.. ‘ ನೂರು ರಾಗ ಕಲಿಯುವ ಬದಲು 4–6 ರಾಗಗಳನ್ನು ಸರಿಯಾಗಿ ಕಲಿ. ಅದನ್ನೇ ನಿರಂತರವಾಗಿ ರಿಯಾಜ್‌ ಮಾಡು. ಆ ರಾಗದ ಆಳ ಅಗಲವನ್ನು ಚೆನ್ನಾಗಿ ತಿಳಿ. ತಾನ್‌ಗಳ ಪ್ರಯೋಗ, ರಾಗ ಲಕ್ಷಣಗಳನ್ನು ಅಭ್ಯಾಸ ಮಾಡು. ಖಂಡಿತಾ ಯಶಸ್ಸು ನಿನ್ನದಾಗುತ್ತದೆ..’ ಎಂದು. ಅವರ ಮಾರ್ಗದರ್ಶನ, ಸಲಹೆ ನಿಜಕ್ಕೂ ಬಹಳ ಅಮೂಲ್ಯವಾದದ್ದು.

* ಬೆಂಗಳೂರಿನಲ್ಲಿ ಕಛೇರಿ ನೀಡಲು ಇಷ್ಟ ಎಂದಿರಿ. ಕಾರಣವೇನು?
ಸಾಮಾನ್ಯವಾಗಿ ಎಲ್ಲ ಕಲಾವಿದರು ಬೆಂಗಳೂರಿಗೆ ಬರಲು ಇಷ್ಟಪಡುತ್ತಾರೆ. ನನಗೂ ಅಷ್ಟೆ. ಅತ್ಯಂತ ಸುಂದರ ನಗರ ಇದು. ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಸಂಗೀತಮಯ ವಾತಾವರಣ ಚೆನ್ನಾಗಿದೆ. ಎಲ್ಲ ಮನೆಗಳಲ್ಲೂ ಸಂಗೀತ ಆಸಕ್ತಿ ಇರುವ ಮಕ್ಕಳು ಕಾಣಸಿಗುತ್ತಾರೆ. ನಗರದ ಚೌಡಯ್ಯ ಹಾಲ್‌ನಲ್ಲಿ, ಐಐಎಸ್‌ಸಿ ಸಭಾಂಗಣದಲ್ಲಿ ಈ ಹಿಂದೆ ನೀಡಿರುವ ಸಂಗೀತ ಕಛೇರಿಗಳು ಸದಾ ನೆನಪಿನಲ್ಲಿ ಉಳಿಯುವಂತಿವೆ. ಮೇಲಾಗಿ ಇಲ್ಲಿನ ಕೇಳುಗರ ಸಹೃದಯ, ಸಂಗೀತ ಮನಸ್ಸು ನಿಜಕ್ಕೂ ಮೆಚ್ಚುವಂಥದ್ದು.

***

‘ಕಲರ್ಸ್‌ ಆಫ್ ಸಂತೂರ್’ ಪಂ. ಸತೀಶ್‌ ವ್ಯಾಸ್ ಅವರಿಂದ ಸಂತೂರ್ ವಾದನ: ತಬಲ ಸಾಥೀ– ಆದಿತ್ಯ ಕಲ್ಯಾಣಪುರ್‌, ಆಯೋಜನೆ ಮತ್ತು ಸ್ಥಳ– ಜೆ.ಎನ್. ಟಾಟಾ ಸಭಾಂಗಣ, ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌, ಶನಿವಾರ ಸಂಜೆ 5.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT