ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭವಿಷ್ಯದಲ್ಲಿ ಪೆಟ್ರೋಲ್‌ಗೆ ಜಿಎಸ್‌ಟಿ

ರಾಜ್ಯ ಹಣಕಾಸು ಸಚಿವರ ತಂಡದ ಮುಖ್ಯಸ್ಥ ಸುಶೀಲ್‌ ಮೋದಿ ಅಭಿಮತ
Last Updated 14 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಪೆಟ್ರೋಲ್‌ ಉತ್ಪನ್ನ, ವಿದ್ಯುತ್‌, ಮುದ್ರಾಂಕ ಶುಲ್ಕ ಮತ್ತು ರಿಯಲ್‌ ಎಸ್ಟೇಟ್‌ ವಹಿವಾಟುಗಳು ಭವಿಷ್ಯದಲ್ಲಿ ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ ತರುವುದನ್ನು ಜಿಎಸ್‌ಟಿ ಮಂಡಳಿಯು ಗಂಭೀರವಾಗಿ ಪರಿಗಣಿಸಲಿದೆ’ ಎಂದು ಬಿಹಾರದ ಹಣಕಾಸು ಸಚಿವ ಸುಶೀಲ್‌ ಕುಮಾರ್‌ ಮೋದಿ ಹೇಳಿದ್ದಾರೆ.

ಗುರುವಾರ ಇಲ್ಲಿ ನಡೆದ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ (ಫಿಕ್ಕಿ) ವಾರ್ಷಿಕ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ‘ಸಂವಿಧಾನ ತಿದ್ದುಪಡಿ ಇಲ್ಲದೇ ಇದನ್ನು ಜಾರಿಗೆ ತರಬಹುದು. ಆದರೆ, ಕಾರ್ಯಗತಗೊಳಿಸಲು ಯಾವುದೇ ಕಾಲಮಿತಿ ನಿಗದಿಪಡಿಸುವುದು ಸದ್ಯಕ್ಕೆ ಸಾಧ್ಯವಾಗಲಾರದು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮೋದಿ ಅವರು ಜಿಎಸ್‌ಟಿ  ಜಾರಿಗೆ ಸಂಬಂಧಿಸಿದಂತೆ ರಚಿಸಲಾಗಿರುವ ರಾಜ್ಯ ಹಣಕಾಸು ಸಚಿವರ ತಂಡದ ಮುಖ್ಯಸ್ಥರಾಗಿದ್ದಾರೆ. ಸದ್ಯಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ವರಮಾನದ ಶೇ 40ರಷ್ಟನ್ನು ಪೆಟ್ರೋಲಿಯಂ ಉತ್ಪನ್ನಗಳಿಂದಲೇ ಪಡೆಯುತ್ತಿವೆ.

‘ಒಂದು ವೇಳೆ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ, ಆ ಸಂದರ್ಭದಲ್ಲಿ ಜಾರಿಯಲ್ಲಿ ಇರುವ ಗರಿಷ್ಠ ತೆರಿಗೆ ಹಂತದ ದರಗಳು ಅನ್ವಯವಾಗಲಿವೆ. ತಮ್ಮ ವರಮಾನ ಕಾಯ್ದುಕೊಳ್ಳಲು ಪ್ರತ್ಯೇಕ ಸೆಸ್‌ ವಿಧಿಸಲು ರಾಜ್ಯಗಳು ಸ್ವತಂತ್ರವಾಗಿರುತ್ತವೆ’ ಎಂದರು.

ವರಮಾನ ಸ್ಥಿರಗೊಂಡ ನಂತರ, ತೆರಿಗೆ ಹಂತಗಳನ್ನು ಕಡಿಮೆ ಮಾಡುವ ಸಾಧ್ಯತೆ ಇದೆ ಎಂದೂ ಅವರು ಸುಳಿವು ನೀಡಿದರು. ‘ಸದ್ಯದ ಗರಿಷ್ಠ ತೆರಿಗೆ ದರವಾಗಿರುವ ಶೇ 28, ಶೇ 25ಕ್ಕೆ ಇಳಿಸಬಹುದು.  ಶೇ 12 ಮತ್ತು ಶೇ 18 ತೆರಿಗೆ ಹಂತಗಳನ್ನು ವಿಲೀನಗೊಳಿಸಿ ಹೊಸ ದರ ನಿರ್ಧರಿಸುವ ಸಾಧ್ಯತೆ ಇದೆ’ ಎಂದರು.

ಇನ್ಫೊಸಿಸ್‌ನ ಸಮರ್ಥನೆ: ‘ಜಿಎಸ್‌ಟಿಎನ್‌ ನಿರ್ವಹಣೆಗೆ ಇನ್ಫೊಸಿಸ್‌ ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡಿರುವುದು ಸರಿಯಾದ ನಿರ್ಧಾರವಾಗಿದೆ. ಈ ಜಾಲ ತಾಣ ತೆರಿಗೆ ಪಾವತಿಯ ಎಲ್ಲ ಹೊರೆಯನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದೆ. ಸದ್ಯಕ್ಕೆ ಈ ಸಾಮರ್ಥ್ಯದ ಶೇ 30ರಷ್ಟನ್ನು ಮಾತ್ರ ಬಳಸಿಕೊಳ್ಳಲಾಗಿದೆ.

‘ಮೌಲ್ಯವರ್ಧಿತ ತೆರಿಗೆಯಂತೆ (ವ್ಯಾಟ್‌), ಜಿಎಸ್‌ಟಿ ಕೂಡ ಯಶಸ್ವಿಯಾಗಿ ಕಾರ್ಯಗತಗೊಳ್ಳುತ್ತಿದೆ.  ಎರಡು ಮೂರು ವರ್ಷಗಳ ನಂತರ ರಾಜ್ಯಗಳು ಕೇಂದ್ರ ಸರ್ಕಾರದಿಂದ ಪರಿಹಾರ ಕೇಳದಿರುವ ಸಂದರ್ಭ ಬರಲಿದೆ’ ಎಂದೂ ವಿಶ್ವಾಸ ವ್ಯಕ್ತಪಡಿಸಿದರು.

ಅತಿದೊಡ್ಡ ಗಳಿಕೆ: ‘ಜಿಎಸ್‌ಟಿ’ಯು ದೇಶದ ಒಕ್ಕೂಟ ವ್ಯವಸ್ಥೆಯನ್ನು ಸಮರ್ಥವಾಗಿ ಪ್ರತಿನಿಧಿಸುವ ಮೊದಲ ಕಾಯ್ದೆಯಾಗಿದೆ. ಹೊಸ ವ್ಯವಸ್ಥೆ ಜಾರಿಗೆ ಬಂದ ನಂತರ ರಾಜ್ಯ ಸರ್ಕಾರಗಳ ವರಮಾನ ಹೆಚ್ಚಳಗೊಂಡಿಲ್ಲ. ಆದರೆ, ಈ ವ್ಯವಸ್ಥೆಯು ರಾಜ್ಯಗಳಿಗೆ ಗಮನಾರ್ಹ ಸ್ವಾತಂತ್ರ್ಯ ನೀಡಿದೆ’ ಎಂದು ಜಮ್ಮು ಮತ್ತು ಕಾಶ್ಮೀರದ ಹಣಕಾಸು ಸಚಿವ ಹಸೀಬ್‌ ಡ್ರಾಬು ವಿಶ್ಲೇಷಿಸಿದರು.

‘ಜಿಎಸ್‌ಟಿ ಜಾರಿಗೊಳಿಸಿರುವುದು ಜಾಗತೀಕರಣ, ಉದಾರೀಕರಣದಂತೆ ತೀವ್ರ ಗಮನ ಸೆಳೆಯದಿದ್ದರೂ ಆರ್ಥಿಕತೆಯಲ್ಲಿ ಔಪಚಾರಿಕತೆ ತರಲು ಸಹಕಾರಿಯಾಗಿದೆ’ ಎಂದರು.

ರಿಟರ್ನ್‌ ಸಲ್ಲಿಕೆ ಇನ್ನಷ್ಟು ಸರಳ
ರಿಟರ್ನ್‌ ಸಲ್ಲಿಕೆ ಪ್ರಕ್ರಿಯೆಯನ್ನು ಇನ್ನಷ್ಟು ಸರಳ ಮತ್ತು ತ್ವರಿತಗೊಳಿಸಲಾಗಿದೆ ಎಂದು ಜಿಎಸ್‌ಟಿಎನ್‌ ತಿಳಿಸಿದೆ.

‘ತೆರಿಗೆ ಪಾವತಿದಾರರ ಅಗತ್ಯಕ್ಕೆ ಅನುಗುಣವಾದ ಆಯ್ಕೆಗಳನ್ನು ಜಾಲತಾಣದಲ್ಲಿ ನೀಡಲಾಗಿದೆ. ಅವರು ಕೇಳುವ ಪ್ರಶ್ನೆಗಳಿಗೆ ತಕ್ಕ ಆಯ್ಕೆಗಳು ಮಾತ್ರವೇ ಜಾಲತಾಣದಲ್ಲಿ ಕಾಣಿಸಿಕೊಳ್ಳಲಿವೆ’ ಎಂದು  ಜಿಎಸ್‌ಟಿಎನ್‌ ಸಿಇಒ ಪ್ರಕಾಶ್‌ ಕುಮಾರ್ ತಿಳಿಸಿದ್ದಾರೆ.

ಮೊದಲಿಗೆ ‘ಜಿಎಸ್‌ಟಿಆರ್‌–3ಬಿ’ಯಲ್ಲಿ ಈ ಆಯ್ಕೆಗಳನ್ನು ನೀಡಲಾಗಿದೆ. ತೆರಿಗೆ ವ್ಯಾಪ್ತಿಗೆ ಬರದೇ ಇದ್ದರೂ ಭವಿಷ್ಯದ ದೃಷ್ಟಿಯಿಂದ ಜಿಎಸ್‌ಟಿಗೆ ನೋಂದಣಿ ಆಗಿರುವವರು ಸಹ ರಿಟರ್ನ್‌ ಸಲ್ಲಿಸಬೇಕು. ಆದರೆ ಅವರು ತೆರಿಗೆ ಲೆಕ್ಕಪತ್ರದ ಮಾಹಿತಿ ಭರ್ತಿ ಮಾಡಬೇಕಿಲ್ಲ. ಹೀಗಾಗಿ ಅವರಿಗೆ ‘ಶೂನ್ಯ’ (nil) ಆಯ್ಕೆ ಲಭ್ಯವಾಗುವಂತೆ ಮಾಡಲಾಗಿದೆ.

ಈ ಮೊದಲು ರಿಟರ್ನ್‌ ಸಲ್ಲಿಸುವಾಗ ಎಲ್ಲಾ ರೀತಿಯ ಪಾವತಿ ಮತ್ತು ರಿಟರ್ನ್ ಸಲ್ಲಿಕೆ ಅರ್ಜಿಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ ಇನ್ನುಮುಂದೆ ತೆರಿಗೆದಾರರಿಗೆ ಅಗತ್ಯ ಇರುವ ಆಯ್ಕೆಗಳು ಮಾತ್ರವೇ ಕಾಣಿಸಿಕೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT