ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಚಳಿಗಾಲದ ಅಧಿವೇಶನ

25 ಮಸೂದೆಗಳ ಅಂಗೀಕಾರಕ್ಕೆ ಯತ್ನ
Last Updated 14 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ವಿಳಂಬವಾಗಿರುವ ಸಂಸತ್ತಿನ ಚಳಿಗಾಲದ ಅಧಿವೇಶನ ಶುಕ್ರವಾರದಿಂದ ಆರಂಭವಾಗಲಿದೆ. ಮೂರು ವಾರಗಳ ಕಾಲ ಅಧಿವೇಶನ ನಡೆಯುವ ಸಾಧ್ಯತೆ ಇದೆ. ಕ್ರಿಸ್‌ಮಸ್‌ ಪ್ರಯುಕ್ತ ಮಧ್ಯದಲ್ಲಿ ನಾಲ್ಕು ದಿನ ಉಭಯ ಸದನಗಳ ಕಲಾಪಗಳಿಗೆ ವಿರಾಮವಿರಲಿದೆ.

ಗುಜರಾತ್‌ ಮತ್ತು ಹಿಮಾಚಲ ಪ್ರದೇಶಗಳ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಸಂಸತ್ತಿನ ಕಾರ್ಯಕಲಾಪಗಳ ದಿಶೆಯನ್ನು ನಿರ್ಧರಿಸುವ ನಿರೀಕ್ಷೆ ಇದೆ.

ಚಳಿಗಾಲದ ಅಧಿವೇಶನದಲ್ಲಿ ಒಟ್ಟು 25 ಮಸೂದೆಗಳ ಅಂಗೀಕಾರಕ್ಕೆ ಸರ್ಕಾರ ಯತ್ನಿಸಲಿದೆ. ಮಳೆಗಾಲದ ಅಧಿವೇಶನದ ನಂತರ ಸರ್ಕಾರ ಹೊರಡಿಸಿರುವ ಏಳು ಸುಗ್ರೀವಾಜ್ಞೆಗಳಿಗೆ ಸಂಬಂಧಿಸಿದ ಮಸೂದೆಗಳು ಅಂಗೀಕಾರವಾಗುವಂತೆ ನೋಡಿಕೊಳ್ಳಲು ಆದ್ಯತೆ ನೀಡಲಿದೆ.

ತ್ರಿವಳಿ ತಲಾಖ್‌ಗೆ ಸಂಬಂಧಿಸಿದ ‘ಮುಸ್ಲಿಂ ಮಹಿಳೆಯರ (ಮದುವೆ ಹಕ್ಕುಗಳ ರಕ್ಷಣೆ) ಮಸೂದೆ’ ಮತ್ತು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವ ಮಸೂದೆ ಬಗ್ಗೆ ಕಾವೇರಿದ ಚರ್ಚೆ ನಡೆಯುವ ನಿರೀಕ್ಷೆ ಇದೆ.

ಮಳೆಗಾಲದ ಅಧಿವೇಶನದ ಬಳಿಕ ಕೇಂದ್ರ ಸರ್ಕಾರವು ಭಾರತೀಯ ಅರಣ್ಯಗಳ ಕಾಯ್ದೆ ತಿದ್ದುಪಡಿ, ದಿವಾಳಿ ಸಂಹಿತೆ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮತ್ತು ಬ್ಯಾಂಕಿಂಗ್‌ ವ್ಯವಸ್ಥೆ ನಿಯಂತ್ರಣ ಕಾನೂನುಗಳ ಬಗ್ಗೆ ಕಾರ್ಯಕಾರಿ ಆದೇಶಗಳನ್ನು ಹೊರಡಿತ್ತು.

ಫಲಿತಾಂಶದ ಮೇಲೆ ಅವಲಂಬಿತ: ಬಹುತೇಕ ಮಸೂದೆಗಳ ಭವಿಷ್ಯ ಎರಡು ರಾಜ್ಯಗಳ ಚುನಾವಣಾ ಫಲಿತಾಂಶಗಳ ಮೇಲೆ ನಿಂತಿದೆ.

ಎರಡೂ ರಾಜ್ಯಗಳಲ್ಲಿ ಬಿಜೆಪಿ ಗೆದ್ದರೆ ಶಾಸನಗಳ ರಚನೆ ಕಾರ್ಯಸೂಚಿಯಲ್ಲಿ ಮೋದಿ ಸರ್ಕಾರಕ್ಕೆ ಇನ್ನಷ್ಟು ಬಲ ಬರಲಿದೆ. ಹೊಸ ಚೈತನ್ಯದಿಂದ ಮಸೂದೆಗಳ ಅಂಗೀಕಾರಕ್ಕೆ ಅದು ಪ್ರಯತ್ನಿಸಲಿದೆ.

ಒಂದು ವೇಳೆ, ಗುಜರಾತ್‌ನಲ್ಲಿ ಬಿಜೆಪಿಯ 22 ವರ್ಷಗಳ ಆಡಳಿತಕ್ಕೆ ತಡೆ ಒಡ್ಡಲು ಕಾಂಗ್ರೆಸ್ ಯಶಸ್ವಿಯಾದರೆ ಸಂಸತ್ತಿನಲ್ಲಿ ಕಾಂಗ್ರೆಸ್‌  ಕೈ ಮೇಲಾಗಲಿದೆ.

ಜಿಎಸ್‌ಟಿ ಜಾರಿಯಲ್ಲಿ ಗೊಂದಲ, ಕೇಂದ್ರ ಸಚಿವರು, ಬಿಜೆಪಿ ಪದಾಧಿಕಾರಿಗಳ ವಿರುದ್ಧದ ಭ್ರಷ್ಟಾಚಾರ ಆರೋಪ, ಕೃಷಿಕರ ಸಂಕಷ್ಟ, ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರದ ಕೈ ಕಟ್ಟಿಹಾಕಲು ಅದು ಯತ್ನಿಸಬಹುದು.

ವಿರೋಧ ಪಕ್ಷಗಳ ಜಂಟಿ ಕಾರ್ಯತಂತ್ರ
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್‌ ಅವರ ಕಚೇರಿಯಲ್ಲಿ ವಿರೋಧ ಪಕ್ಷಗಳ ಮುಖಂಡರು ಸಭೆ ನಡೆಸಿ ಅಧಿವೇಶನದಲ್ಲಿ ಅನುಸರಿಸಬೇಕಾದ ಜಂಟಿ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ ವಿರುದ್ಧ ಮೋದಿ ಹೇಳಿಕೆ, ವಿಧಾನ ಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗದ ಪಕ್ಷಪಾತ ಧೋರಣೆ, ಜೆಡಿಯು ವಿರುದ್ಧ ಬಂಡಾಯ ಎದ್ದಿರುವ ಶರದ್‌ ಯಾದವ್‌ ಮತ್ತು ಅಲಿ ಅನ್ವರ್‌ ಅನ್ಸಾರಿ ಅವರನ್ನು ರಾಜ್ಯಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದ ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಪ್ರಹಾರ ನಡೆಸಲು ತೀರ್ಮಾನಿಸಿವೆ.

ಚಳಿಗಾಲದ ಅಧಿವೇಶನ ವಿಳಂಬ ಆಗಿರುವುದಕ್ಕೆ ವಿರೋಧ ಪಕ್ಷಗಳು ಈಗಾಗಲೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿವೆ.

‘ಪ್ರಧಾನಿ ನರೇಂದ್ರ ಮೋದಿ ಅವರು ಪ್ರಜಾಪ್ರಭುತ್ವದ ಹತ್ಯೆ ಮಾಡುತ್ತಿದ್ದಾರೆ. ಸಂಸ್ಥೆಗಳನ್ನು ಶಿಥಿಲಗೊಳಿಸುತ್ತಿದ್ದಾರೆ’ ಎಂದು ಆರೋಪಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT