ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಡಪ’ ಎಂಬ ಆರ್‌ಜಿವಿ ಬಾಂಬು!

Last Updated 15 ಡಿಸೆಂಬರ್ 2017, 9:22 IST
ಅಕ್ಷರ ಗಾತ್ರ

ಸದಾ ವಿವಾದದ ಸುಳಿಯಲ್ಲಿ ಸಿಕ್ಕಿ ಪ್ರಚಾರದ ಅಲೆಯಲ್ಲಿ ತೇಲುವ ಸಿನಿಮಾ ನಿರ್ದೇಶಕ ರಾಮ್‌ಗೋಪಾಲ್‌ ವರ್ಮಾ ಕೈಯಲ್ಲಿ ಹೊಸ ಬಾಂಬು ಹಿಡಿದಿದ್ದಾರೆ. ಅದರ ಹೆಸರು ‘ಕಡಪ’. ಆಂಧ್ರಪ್ರದೇಶದ ರಾಯಲಸೀಮೆ ಪ್ರದೇಶದಲ್ಲಿ ರೆಡ್ಡಿ ಸಾಮ್ರಾಜ್ಯದಲ್ಲಿ ‘ರಕ್ತಚರಿತ್ರೆ’ಯ ತಾಜಾ ಕತೆಗಳನ್ನೇ ತುಂಬಿ ತಯಾರಿಸಿರುವ ಬಾಂಬ್‌ ಇದು. ಹೌದು, ಆರ್‌ಜಿವಿ ತಯಾರಿಸಿರುವ ಈ ಬಾಂಬ್‌ ಇಷ್ಟರಲ್ಲೇ ವೆಬ್‌ ಸರಣಿಯಾಗಿ ಸಿಡಿಯಲಿದೆ. ತಮ್ಮ ಫೇಸ್‌ಬುಕ್‌ ಪುಟದಲ್ಲಿ ಸ್ವತಃ ವರ್ಮಾ ಈ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ.

‘ಪರಮಸತ್ಯವೊಂದನ್ನು ಹೇಳಲು ಬಯಸಿದ್ದೇನೆ. ಸಿನಿಮಾ ಮೂಲಕ ಅದನ್ನು ಹೇಳಲು ಸಾಧ್ಯವಿಲ್ಲ ಎಂಬುದು ನನಗೆ ಗೊತ್ತಿದೆ. ಅದಕ್ಕೆ ವೆಬ್‌ ಸರಣಿಯ ಮೂಲಕ ಜಗತ್ತಿಗೆ ವಾಸ್ತವವನ್ನು ತಲುಪಿಸುವ ತೀರ್ಮಾನ ಮಾಡಿದ್ದೇನೆ. ಕಡಪ ಜಿಲ್ಲೆಯಲ್ಲಿ ರೆಡ್ಡಿ ಸಹೋದರರು ನಡೆಸಿದ ಕ್ರೌರ್ಯಗಳನ್ನು ಯಾವುದೇ ಮುಚ್ಚುಮರೆ, ವಿಜೃಂಭಣೆ ಇಲ್ಲದೆ ಜಗತ್ತಿಗೆ ತೋರಿಸುವುದಷ್ಟೇ ನನ್ನ ಉದ್ದೇಶ’ ಎಂದು ಆರ್‌ಜಿವಿ, ವೆಬ್ ಸರಣಿಗೆ ಇಳಿದ ಬಗ್ಗೆ ಸಮರ್ಥಿಸಿಕೊಂಡಿದ್ದಾರೆ.

‘ರಕ್ತಚರಿತ್ರ ಸಿನಿಮಾದಲ್ಲಿ ನಾನು ಅಪರಾಧ ಕೃತ್ಯಗಳನ್ನು ವೈಭವೀಕರಿಸಿ ತೋರಿಸಿದ್ದೇನೆ ಎಂದು ಕೆಲವರು ಭಾವಿಸಿದ್ದಾರೆ. ಎಷ್ಟು ವೈಭವೀಕರಿಸಬಹುದು? ಸತ್ಯದಿಂದಾಚೆ ವೈಭವೀಕರಿಸಲು ಸಾಧ್ಯವೇ? ‘ರೆಡ್ಡಿ ಸಾಮ್ರಾಜ್ಯದಿಂದ ಸಂತ್ರಸ್ತರಾದ ಎಷ್ಟೋ ಮಂದಿ ರಕ್ತಚರಿತ್ರ ಬಿಡುಗಡೆಯಾದ ಬಳಿಕ ನನ್ನನ್ನು ಭೇಟಿಯಾಗಿ ತಮ್ಮ ಸಂಕಷ್ಟಗಳನ್ನು ತೋಡಿಕೊಂಡಿದ್ದರು.

ಅಧಿಕಾರದ ಮತ್ತಿನಲ್ಲಿ ಒಂದು ಇಡೀ ಪ್ರಾಂತ್ಯವನ್ನು ಅಕ್ರಮ ಚಟುವಟಿಕೆಗಳ ಮೂಲಕವೇ ತಮ್ಮ ಹಿಡಿತದಲ್ಲಿಟ್ಟುಕೊಂಡ ರೆಡ್ಡಿ ಸಹೋದರರ ಕೃತ್ಯಗಳ ಪೂರ್ಣಪಾಠವಾಗಿ ‘ಕಡಪ’ ಬರಲಿದೆ. ‘ರಕ್ತಚರಿತ್ರೆ’ ನಿರ್ಮಿಸುವ ವೇಳೆ ರಾಯಲ್‌ಸೀಮೆಯಲ್ಲಿನ ಅಮಾನುಷ ಕೃತ್ಯಗಳ ಇತಿಹಾಸವನ್ನು ನಾನು ಕೆದಕಿದ್ದೆನಷ್ಟೇ. ಹಾಗಾಗಿ ಅದರಲ್ಲಿ ತಳಮಟ್ಟದ ವಿವರಗಳು ಅದರಲ್ಲಿ ಇರಲಿಲ್ಲ’ ಎಂದು ಹೇಳುವ ಮೂಲಕ ‘ಕಡಪ’ದ ಗಾಂಭೀರ್ಯದ ಸುಳಿವು ನೀಡಿದ್ದಾರೆ.

</p><p>ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ ಈ ಸುಳಿವಿಗೆ ಪುಷ್ಟಿ ನೀಡುವಂತಿದೆ. ರೆಡ್ಡಿ ಸಾಮ್ರಾಜ್ಯದ ಅಕ್ರಮವನ್ನು ಒಂದೆಳೆ ಪ್ರಶ್ನಿಸಿದವರನ್ನು, ಪ್ರಶ್ನಿಸಿದ ಗುಮಾನಿ ಇದ್ದವರನ್ನು ಹಾಡುಹಗಲೇ ಅಟ್ಟಾಡಿಸಿ ಕೊಂದ, ಕೈಕಾಲು ಕತ್ತರಿಸಿದ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ಟ್ರೇಲರ್‌ನಲ್ಲಿ ಚಿತ್ರಿಸಲಾಗಿದೆ. ಹಸುಗಳ ಹಟ್ಟಿಯಲ್ಲಿ, ನದಿಗಳಲ್ಲಿ ಉದ್ದುದ್ದಕ್ಕೆ ಬಿದ್ದಿರುವ ಹೆಣಗಳು, ಹಗಲಲ್ಲೇ ಎಲ್ಲರ ಮುಂದೆ ನಡೆಯುವ ಅತ್ಯಾಚಾರ, ಅತ್ಯಾಚಾರ ಮಾಡಿದಾತನ ಮರ್ಮಾಂಗಕ್ಕೆ ಅದೇ ಹೆಣ್ಣು ಮಗಳು ಸೌದೆಯಿಂದ ಗುದ್ದಿ ಕೊಲ್ಲುವುದು... ಹೀಗೆ ಹಸಿಹಸಿ ಚಿತ್ರಣಗಳಲ್ಲಿ ರಕ್ತ ಚಿಮ್ಮುತ್ತಿದ್ದರೆ ನೋಡುಗನ ಎದೆ ಝಲ್ಲೆನ್ನುತ್ತದೆ. ಸರಣಿ ಹೇಗಿದ್ದೀತು ಎಂಬ ಕುತೂಹಲವನ್ನೂ ಉಳಿಸುತ್ತದೆ.</p><p>ತೆಲುಗಿನಲ್ಲಿ ಪ್ರಸಾರವಾಗಲಿರುವ, ಅಂತರರಾಷ್ಟ್ರೀಯ ವೆಬ್‌ ಸರಣಿ ಇದು ಎಂಬ ಮತ್ತೊಂದು ಹೆಗ್ಗಳಿಕೆಯೂ ಆರ್‌ಜಿವಿ ಮುಡಿಗೇರಿದೆ.</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT