ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳನ್ನು ಅವರಷ್ಟಕ್ಕೇ ಬಿಟ್ಟು ಬಿಡಿ

Last Updated 15 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಕೆಲವು ದಿನಗಳ ಹಿಂದೆ ನನ್ನ ಮಗಳ ಶಾಲೆಯಲ್ಲಿ ಪೋಷಕರ ಸಭೆ ಇತ್ತು. ಶಿಕ್ಷಕರು ಮತ್ತು ಪೋಷಕರ ನಡುವಣ ಮಾತುಕತೆ ಮುಗಿದ ನಂತರ ಶಾಲೆಯ ಆಡಳಿತ ಮಂಡಳಿ ಪಾಲಕರಿಗೆ ಮಾತನಾಡಲು ಅವಕಾಶ ಕಲ್ಪಿಸಿತ್ತು.

ಯುಕೆಜಿಯಲ್ಲಿ ಓದುತ್ತಿರುವ ಮಗುವಿನ ತಾಯಿಯೊಬ್ಬರು ಎದ್ದು ನಿಂತು, ‘ನನ್ನ ಮಗನಿಗೆ ಶಿಕ್ಷಕರು ಕಡಿಮೆ ಹೋಮ್‌ವರ್ಕ್‌ ಕೊಡುತ್ತಿದ್ದಾರೆ. ದಿನಕ್ಕೆ ಕನಿಷ್ಠ ಪಕ್ಷ ಪಕ್ಷ ಮೂರು ಪುಸ್ತಕಗಳಲ್ಲಾದರೂ ಬರೆಯಲು ಕೊಡಿ’ ಎಂಬ ಬೇಡಿಕೆ ಮುಂದಿಟ್ಟರು! ಅಚ್ಚರಿ ಎಂದರೆ ಈ ಬೇಡಿಕೆಗೆ ಕೆಲವು ಪೋಷಕರ ಸಹಮತವೂ ಇತ್ತು.

ಇದನ್ನು ಕೇಳಿ ಆಡಳಿತ ಮಂಡಳಿಯವರಿಗೇ ಆಶ್ವರ್ಯವಾಯಿತು. ‘ಅಲ್ಲಾ ಮೇಡಂ, ಬೇರೆ ಕೆಲವು ಶಾಲೆಗಳಿಗೆ ಹೋಲಿಸಿದರೆ ನಮ್ಮಲ್ಲಿ ಸಬ್ಜೆಕ್ಟ್‌ ಕಡಿಮೆ. ಮನೆಕೆಲಸಗಳೂ ಕಡಿಮೆಯೇ. ಮಕ್ಕಳು ಶಾಲೆಯಲ್ಲಿ ಹೇಗೂ ತುಂಬಾ ಬರೆಯುತ್ತಾರೆ. ಹೀಗಿರುವಾಗ ಮನೆಯಲ್ಲೂ ಯಾಕೆ ಬರೆಯಬೇಕು ಎಂಬು ಬಯಸುತ್ತೀರಿ? ಹೋಮ್‌ವರ್ಕ್‌ ಕಡಿಮೆ ಇದ್ದರೆ ಮಕ್ಕಳೊಂದಿಗೆ ಬೆರೆಯಲು ಪೋಷಕರಿಗೆ ಹೆಚ್ಚು ಸಮಯ ಸಿಗುತ್ತದೆ. ಆ ಸಂತೋಷ ನಿಮಗಿಲ್ಲವೇ’ ಎಂದು ಆಡಳಿತ ಮಂಡಳಿ ಸದಸ್ಯರೊಬ್ಬರು ಕೇಳಿದರು.‌

ತಾಯಿಯ ವಿಚಿತ್ರ ಬೇಡಿಕೆಯ ಹಿಂದಿನ ಕಾರಣ ಇಷ್ಟೆ: ಅವರಿಗೆ ಒಂದು ವರ್ಷ ವಯಸ್ಸಿನ ಇನ್ನೊಂದು ಮಗುವಿದೆ. ಯುಕೆಜಿಗೆ ಹೋಗುವ ಅಣ್ಣ ಮನೆಯಲ್ಲಿ ಮಗುವಿಗೆ ಕೀಟಲೆ ಮಾಡುತ್ತಾನೆ. ಮನೆಕೆಲಸ ಹೆಚ್ಚು ಇದ್ದರೆ, ಅಷ್ಟು ಸಮಯ ಅವನು ಮಗುವಿನಿಂದ ದೂರ ಇರುತ್ತಾನೆ. ಅಷ್ಟು ಹೊತ್ತಾದರೂ ಮಕ್ಕಳ ಹರಟೆ ಕಡಿಮೆ ಆಗುತ್ತದಲ್ಲಾ ಎಂಬುದು ಆಕೆಯ ಯೋಚನೆ!

ಮಕ್ಕಳ ಹಿತದೃಷ್ಟಿಯಿಂದ ಇಂತಹ ಬೆಳವಣಿಗೆ ಎಂದಿಗೂ ಒಳ್ಳೆಯದಲ್ಲ. ಕೆಲವು ವರ್ಷಗಳ ಹಿಂದಿನ ಶಿಕ್ಷಣ ವ್ಯವಸ್ಥೆಗೆ ಇಂದಿನ ವ್ಯವಸ್ಥೆಯನ್ನು ಹೋಲಿಸಿದರೆ, ಈಗಿನ ಮಕ್ಕಳಿಗೆ ಓದು ಎನ್ನುವುದು ಹೊರೆಯಾಗಿದೆ ಎಂಬುದು ನಿಸ್ಸಂಶಯ.

ಐದಾರು ಪಠ್ಯಗಳಿಲ್ಲದ (ವಿಷಯಗಳು) ಪೂರ್ವ ಪ್ರಾಥಮಿಕ ಶಾಲೆಗಳೇ (ಎಲ್‌ಕೆಜಿ, ಯುಕೆಜಿ) ಈಗ ಕಡಿಮೆ. ಕನ್ನಡವನ್ನೇ ಮೂಲೆಗುಂಪು ಮಾಡಿ ಇಂಗ್ಲಿಷ್, ಹಿಂದಿಯ ಹೇರಿಕೆ ಶುರುವಾಗಿದೆ. ಹೆಚ್ಚು ಅಂಕಗಳಿಸುವ ಉದ್ದೇಶಕ್ಕಾಗಿ ಮಾತ್ರ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಬೋಧಿಸಲಾಗುತ್ತಿದೆ.

ವಾರಕ್ಕೊಂದು ಬಗೆಯ ಪರೀಕ್ಷೆ, ಹೆಚ್ಚಿನ ಅಂಕಕ್ಕಾಗಿ ಸ್ಪರ್ಧೆ, ಇತರೆ ಶಾಲಾ ಚಟುವಟಿಕೆಗಳು... ಹೀಗೆ ಮಕ್ಕಳಿಗೆ ಬಾಲ್ಯದ ಸಂಭ್ರಮವನ್ನು ಆಚರಿಸಲು ಸಮಯವೇ ಇಲ್ಲದಂತೆ ಮಾಡಲಾಗುತ್ತಿದೆ. ಇಂಗ್ಲಿಷ್ ಮಾಧ್ಯಮದ ಆಸೆಗೆ ಬಿದ್ದು ಕಂದಮ್ಮಗಳಿಗೆ ಕನಸು ಕಾಣಲೂ ಪುರಸೊತ್ತು ಇಲ್ಲದ ಹಾಗೆ ನಾವು ಪಾಲಕರೇ ಮಾಡಿದ್ದೇವೆ.

ಮೊದಲೆಲ್ಲ ಮಕ್ಕಳು ಟ್ಯೂಷನ್‌ಗೆ ಹೋಗುತ್ತಾರೆ ಎಂದರೆ ಮಕ್ಕಳು ಓದುವುದರಲ್ಲಿ ಚುರುಕು ಇಲ್ಲ ಎಂಬ ಅರ್ಥ ಇತ್ತು. ಈಗ ನೋಡಿ, ಟ್ಯೂಷನ್‌ಗೆ ಹೋಗದ ಮಕ್ಕಳನ್ನು ಹುಡುಕುವುದು ನಿಜಕ್ಕೂ ಕಷ್ಟದ ಕೆಲಸ! ಮಕ್ಕಳು ಚೆನ್ನಾಗಿ ಓದಲಿ, ಹೆಚ್ಚು ಅಂಕಗಳಿಸಿ ದೊಡ್ಡ ಸಂಬಳದ ಉದ್ಯೋಗ ಹಿಡಿಯಲಿ ಎಂಬ ಹಪಾಹಪಿಯಿಂದ ಅವರನ್ನು ಸಣ್ಣ ತರಗತಿಯಿಂದಲೇ ಟ್ಯೂಷನ್‌ಗೆ ದಬ್ಬಲಾಗುತ್ತಿದೆ.

ಬೆಳಗ್ಗೆ ಬೇಗ ಏಳು, ಪಾಠ ಓದು, ಶಾಲೆಗೆ ಹೋಗು, ಬಂದು ಹೋಮ್‌ವರ್ಕ್ ಮಾಡು, ಮತ್ತೆ ಟ್ಯೂಷನ್‌ಗೆ ಹೋಗು.... ಇವಿಷ್ಟೇ ಮಕ್ಕಳ ದಿನಚರಿಯಾಗಿ ಹೋಗಿದೆ. ಹೀಗಿರುವಾಗ ಮಕ್ಕಳಿಗೆ ಹೊರೆ ಅಷ್ಟು ಕಡಿಮೆಯಾಯಿತೆಂದು ಸಂತೋಷಪಡುವ ಬದಲು ಇನ್ನೂ ಬರೆಯಲು ಕೊಡಿ ಎಂದು ಕೇಳುವುದು ವಿಚಿತ್ರ ಎನಿಸುವುದಿಲ್ಲವೇ?

ಈಗಿನ ಮಕ್ಕಳು ಅಂಗಳದಲ್ಲಿ ಆಡುವುದು ಕಾಣಿಸುವುದೇ ವಿರಳ. ಸಿಕ್ಕಿದ ಹತ್ತು ನಿಮಿಷ ಬಿಡುವಲ್ಲೂ ಮಕ್ಕಳ ಕೈಯಲ್ಲಿ ಮೊಬೈಲ್ ರಾರಾಜಿಸುತ್ತಿರುತ್ತವೆ. ಬದಲಾದ ನಮ್ಮ ಜೀವನಶೈಲಿಯ ಪರಿಣಾಮ ನಮ್ಮ ಮಕ್ಕಳ ಮೇಲೆಯೇ ಆಗುತ್ತಿದೆ.

ನಾವು ಚಿಕ್ಕವರಿದ್ದಾಗ ಖಂಡಿತ ಹೀಗಿರಲಿಲ್ಲ. ಪಾಠ ಎಂದೂ ನಮ್ಮಿಂದ ನಮ್ಮ ಬಾಲ್ಯವನ್ನು ಕಸಿದುಕೊಳ್ಳಲಿಲ್ಲ. ಹೆತ್ತವರೂ ನಮ್ಮನ್ನು ಇಷ್ಟು ಪೀಡಿಸಿರಲಿಲ್ಲ. ಸಂಜೆ ಆಟವಾಡಲು ಬೇಕಾದಷ್ಟು ಸಮಯವೂ ಇತ್ತು, ಬಹಳಷ್ಟು ಜೊತೆಗಾರರೂ ಇದ್ದರು. ಈಗಿನಂತೆ ಸಂಕುಚಿತ ಪ್ರಪಂಚದಲ್ಲಿ ನಾವು ಬದುಕಲಿಲ್ಲ.

ಅಂದ ಮೇಲೆ, ನಮ್ಮ ಮಕ್ಕಳಿಗೆ ಮಾತ್ರ ಯಾಕೆ ಈ ಹೇರಿಕೆ? ಬದುಕಲು ಬೇಕಾಗುವುದು ಅಂಕಗಳಲ್ಲ; ಬುದ್ಧಿ ಎಂಬ ಸತ್ಯ ಯಾಕೆ ಕಾಣಿಸುವುದಿಲ್ಲ? ಮಗು ಹುಟ್ಟುವ ಗಳಿಗೆಯಿಂದ ಹಿಡಿದು ಆತ/ಆಕೆ ಓದುವ ಶಾಲೆ, ಗೆಳೆಯರು, ಆಯ್ದು ಕೊಳ್ಳುವ ವಿಷಯ, ಮಾಡಬೇಕಾದ ಕೆಲಸ ಎಲ್ಲವನ್ನೂ ನಾವೇ ಯಾಕೆ ನಿಶ್ಚಯಿಸುತ್ತೇವೆ? ನಮ್ಮ ಮಗುವಾದ ಮಾತ್ರಕ್ಕೆ ನಮ್ಮ ಎಲ್ಲ ಮಾತುಗಳನ್ನೂ ಕೇಳಲಿ ಎಂದೇಕೆ ಬಯಸುತ್ತೇವೆ?

ಇದಕ್ಕೆ ಇರುವುದು ಒಂದೇ ಪರಿಹಾರ. ಪೋಷಕರು ತಮ್ಮ ಆಲೋಚನಾ ಶೈಲಿಯನ್ನು ಸಂಪೂರ್ಣವಾಗಿ ಬದಲಾಯಿಸುವುದು.

ಪೋಷಕರೇ, ಮಕ್ಕಳ ಜೀವನವನ್ನು ಅವರಿಗೆ ಬಿಟ್ಟು ಬಿಡೋಣ. ಅವರ ಆಸೆ, ಆಕಾಂಕ್ಷೆಗಳಿಗೆ ತಕ್ಕಂತೆಯೇ ಅವರು ಬಾಳಲಿ. ತೀರ್ಮಾನಗಳನ್ನು ಅವರೇ ತೆಗೆದುಕೊಳ್ಳಲಿ. ತಪ್ಪಿದರೆ ತಿದ್ದೋಣ, ಬೇಕಾದಲ್ಲಿ ಸಲಹೆ ಕೊಡೋಣ. ಆದರೆ, ನಾವು ಹೇಳಿದಂತೆಯೇ ನಡೆಯಬೇಕು ಎಂದು ಬಯಸದಿರೋಣ. ತಮ್ಮ ಕಾಲಮೇಲೆ ನಿಂತು ಇತರರಿಗೆ ತಲೆನೋವಾಗದಂತೆ ಬಾಳುವ ದಾರಿಯನ್ನು ಅವರಿಗೆ ತೋರಿಸೋಣ. ಇರುವ ಒಂದೇ ಒಂದು ಜೀವನವನ್ನು ಸಂತೋಷದಿಂದ ಬಾಳುವ ಅವಕಾಶವನ್ನು ಅವರಿಗೆ ಕಲ್ಪಿಸಿಕೊಡೋಣ.

ಒಂದು ವೇಳೆ, ಮಕ್ಕಳು ಆರಂಭದಲ್ಲಿ ತಪ್ಪು ಮಾಡಿದರೂ ಮುಂದಿನ ಹೆಜ್ಜೆ ಇಡುವಾಗ ಅದು ಪಾಠ ಕಲಿಸುತ್ತದೆ; ಪುನರಾವರ್ತನೆ ಆಗದಂತೆ ಎಚ್ಚರಿಸುತ್ತದೆ. ಮಕ್ಕಳು ಓದಿ ಕಲಿಯುವುದಕ್ಕಿಂತಲೂ ಹೆಚ್ಚಿನ ಜೀವನ ಪಾಠವನ್ನು ತಂದೆ ತಾಯಿಯರನ್ನು ನೋಡಿ ಕಲಿಯುತ್ತಾರೆ ಎಂಬುದನ್ನು ನಾವು ಎಂದಿಗೂ ನೆನಪಿನಲ್ಲಿಟ್ಟುಕೊಳ್ಳಬೇಕು. ನಾವು ಜವಾಬ್ದಾರಿಯುತವಾಗಿ ನಡೆದುಕೊಂಡರೆ ಮಕ್ಕಳು ಕೂಡ ಜವಾಬ್ದಾರಿಯುತ ಜೀವನ ನಡೆಸುತ್ತಾರೆ. ತಾವಾಗಿಯೇ ದೇಶದ ಒಬ್ಬ ಜವಾಬ್ದಾರಿಯುತ ಪ್ರಜೆಯಾಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT