ಹಾಗಲಕಾಯಿ ಕಹಿ ನಾಲಗೆಗೆ ರುಚಿ

ಔಷಧೀಯ ಗುಣಗಳಿಂದ ಕೂಡಿದ ತರಕಾರಿ ಹಾಗಲಕಾಯಿ. ಅದರಕ್ಕೆ ಕಹಿ ಎನಿಸಿದರೂ ಉದರಕ್ಕೆ ಸಿಹಿ. ಇದು ಹೆಚ್ಚಿನ ಪ್ರಮಾಣದಲ್ಲಿ ಶರ್ಕರ ಪಿಷ್ಟ, ಪ್ರೋಟೀನ್, ‘ಸಿ’ ಜೀವಸತ್ವ, ಖನಿಜಾಂಶಗಳನ್ನು ಒಳಗೊಂಡಿರುತ್ತದೆ. ಮಧುಮೇಹಿಗಳಿಗೆ ಒಳ್ಳೆಯದು. ಇದರ ಸೇವನೆಯಿಂದ ರೋಗನಿರೋಧಕ ಶಕ್ತಿ ವೃದ್ಧಿಸುವುದು. ಹಾಗಲಕಾಯಿಯಿಂದ ಸಾಂಬಾರು, ಪಲ್ಯ, ಗೊಜ್ಜು ಅಲ್ಲದೆ ಹಲವು ಬಗೆಯ ಅಡುಗೆಯನ್ನು ಮಾಡಬಹುದು. ಅಂತಹ ಕೆಲವು ಅಡುಗೆಗಳನ್ನು ತಯಾರಿಸುವ ವಿಧಾನವನ್ನು ವಿವರಿಸಿದ್ದಾರೆ, ಸಹನಾ ಕಾಂತಬೈಲು.

ಹಾಗಲಕಾಯಿ ಕಹಿ ನಾಲಗೆಗೆ ರುಚಿ

ಹಾಗಲಕಾಯಿ ರೊಟ್ಟಿ
ಬೇಕಾಗುವ ಸಾಮಗ್ರಿಗಳು:
ತುರಿದ ಹಾಗಲಕಾಯಿ – 1/2ಕಪ್, ಅಕ್ಕಿಹಿಟ್ಟು – 2ಕಪ್, ಕಾಯಿತುರಿ – 1/2ಕಪ್, ಸಣ್ಣಗೆ ಹೆಚ್ಚಿದ ಈರುಳ್ಳಿ – 1/2ಕಪ್, ಹೆಚ್ಚಿದ ಹಸಿಮೆಣಸು, ಕರಿಬೇವು, ಶುಂಠಿ, ಕೊತ್ತಂಬರಿ ಸೊಪ್ಪು ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಹಾಗಲಕಾಯಿ ತುರಿಗೆ ಸ್ವಲ್ಪ ಉಪ್ಪು ಬೆರೆಸಿ ಕಾಲು ಗಂಟೆ ಇಡಿ. ಆಮೇಲೆ ರಸ ಹಿಂಡಿ ತೆಗೆದು ಕಾಯಿತುರಿ, ಈರುಳ್ಳಿ, ಅಕ್ಕಿಹಿಟ್ಟು, ಉಪ್ಪು, ಸಣ್ಣಗೆ ಹೆಚ್ಚಿದ ಹಸಿಮೆಣಸು, ಶುಂಠಿ, ಕರಿಬೇವು, ಕೊತ್ತಂಬರಿಸೊಪ್ಪು, ಅಗತ್ಯವಿರುವಷ್ಟು ನೀರು ಸೇರಿಸಿ ಗಟ್ಟಿಯಾಗಿ ಕಲಸಿ. ಬಾಳೆಎಲೆಯ ಮೇಲೆ ರೊಟ್ಟಿ ತಟ್ಟಿ ಕಾದ ಕಾವಲಿಗೆ ಎಣ್ಣೆ ಹಚ್ಚಿ ತಟ್ಟಿ ಇಟ್ಟ ರೊಟ್ಟಿಯನ್ನು ಕವುಚಿ ಹಾಕಿ ಬಾಳೆಎಲೆ ಬಾಡಿದ ನಂತರ ಎಲೆಯನ್ನು ತೆಗೆದು ತುಪ್ಪ ಹಾಕಿ ಎರಡು ಬದಿ ಕಂದುಬಣ್ಣ ಬರುವ ತನಕ ಬೇಯಿಸಿ. ಮಧುಮೇಹಿಗಳಿಗೆ ಬೆಳಗಿನ ಉಪಾಹಾರಕ್ಕೆ ಇದು ಬಹಳ ಒಳ್ಳೆಯ ತಿಂಡಿ.
***

ಹಾಗಲಕಾಯಿ ಸಂಡಿಗೆ
ಬೇಕಾಗುವ ಸಾಮಗ್ರಿಗಳು: ಹಾಗಲಕಾಯಿ – 6, ಉಪ್ಪು ರುಚಿಗೆ, ದಪ್ಪ ಮಜ್ಜಿಗೆ – 1ಕಪ್, ಕರಿಯಲು ಎಣ್ಣೆ.

ತಯಾರಿಸುವ ವಿಧಾನ: ಹಾಗಲಕಾಯಿಯನ್ನು ದುಂಡಗೆ, ತೆಳ್ಳಗೆ ಹೆಚ್ಚಿ ಬೀಜ ತೆಗೆದು ಅದಕ್ಕೆ ಮಜ್ಜಿಗೆ ಹಾಗೂ ಉಪ್ಪು ಬೆರೆಸಿ ಬಿಸಿಲಲ್ಲಿ ಒಣಗಿಸಿಟ್ಟರೆ ಬೇಕಾದಾಗ ಎಣ್ಣೆಯಲ್ಲಿ ಕರಿಯಬಹುದು. ಮೊಸರನ್ನದೊಂದಿಗೆ ನೆಂಜಿಕೊಳ್ಳಲು ರುಚಿಯಾಗಿರುತ್ತದೆ.

***

ಹಾಗಲಕಾಯಿ ಮೊಸರುಗೊಜ್ಜು
ಬೇಕಾಗುವ ಸಾಮಗ್ರಿಗಳು: ಹಾಗಲಕಾಯಿ –1, ತೆಂಗಿನತುರಿ – 1/2ಕಪ್, ತುಪ್ಪ –2ಚಮಚ, ಜೀರಿಗೆ – 1/2ಚಮಚ, ಸಾಸಿವೆ – 1ಚಮಚ, ಹಸಿಮೆಣಸು 2ರಿಂದ3, ಮೊಸರು – 1ಕಪ್, ಉಪ್ಪು ರುಚಿಗೆ, ಒಗ್ಗರಣೆಗೆ ಒಣಮೆಣಸು – 1, ಸಾಸಿವೆ – 1ಚಮಚ, ಎಣ್ಣೆ – 1ಚಮಚ, ಕರಿಬೇವಿನ ಸೊಪ್ಪು.

ತಯಾರಿಸುವ ವಿಧಾನ: ಹಾಗಲಕಾಯಿಯನ್ನು ಸಣ್ಣದಾಗಿ ಹೆಚ್ಚಿ ಬಾಣಲೆಗೆ ಹಾಕಿ ತುಪ್ಪ ಸೇರಿಸಿ ಸಣ್ಣ ಉರಿಯಲ್ಲಿ ಕಂದುಬಣ್ಣ ಬರುವಷ್ಟು ಹುರಿಯಿರಿ. ತೆಂಗಿನತುರಿ, ಹಸಿಮೆಣಸು, ಸಾಸಿವೆ, ಜೀರಿಗೆಯನ್ನು ರುಬ್ಬಿ ಹುರಿದ ಹಾಗಲಕಾಯಿ ಹೋಳುಗಳಿಗೆ ಸೇರಿಸಿ. ಮೊಸರು, ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ. ಸಾಸಿವೆ, ಕರಿಬೇವು ಸೊಪ್ಪಿನ ಒಗ್ಗರಣೆ ಕೊಡಿ. ಅನ್ನದೊಂದಿಗೆ ಕಲಸಿ ಉಣ್ಣಲು ಚೆನ್ನಾಗಿರುತ್ತದೆ.

***

ಹಾಗಲಕಾಯಿ ಹುಣಸೆಗೊಜ್ಜು
ಬೇಕಾಗುವ ಸಾಮಗ್ರಿಗಳು: ಹಾಗಲಕಾಯಿ – 1, ಹುಣಸೆಹಣ್ಣು ದೊಡ್ಡ ನೆಲ್ಲಿಕಾಯಿ ಗಾತ್ರ, ಹಸಿಮೆಣಸು – 2, ಅಚ್ಚ ಖಾರದ ಪುಡಿ – 1/2ಚಮಚ, ಬೆಲ್ಲ – 1/2ಅಚ್ಚು, ಉಪ್ಪು ರುಚಿಗೆ, ಒಗ್ಗರಣೆಗೆ ಒಣಮೆಣಸು – 1, ಸಾಸಿವೆ – 1ಚಮಚ, ಎಣ್ಣೆ – 1ಚಮಚ, ಬೆಳ್ಳುಳ್ಳಿ – 3ಎಸಳು, ಕರಿಬೇವಿನ ಸೊಪ್ಪು.

ತಯಾರಿಸುವ ವಿಧಾನ: ಹಾಗಲಕಾಯಿಯನ್ನು ಸಣ್ಣದಾಗಿ ಹೆಚ್ಚಿ. ಹಸಿಮೆಣಸನ್ನು ಸೀಳಿ. ಹೆಚ್ಚಿದ ಹೋಳುಗಳನ್ನು ಪಾತ್ರೆಯಲ್ಲಿ ಹಾಕಿ ಹುಣಸೆಹಣ್ಣು, ಬೆಲ್ಲ, ಉಪ್ಪು, ಅಚ್ಚ ಖಾರದ ಪುಡಿ, ಸ್ವಲ್ಪ ನೀರು ಸೇರಿಸಿ ಬೇಯಿಸಿ. ಈ ಮಿಶ್ರಣವು ತಿಳಿಸಾರಿಗಿಂತ ಸ್ವಲ್ಪ ಹೆಚ್ಚು ದಪ್ಪವಿರಬೇಕು. ಇದಕ್ಕೆ ಸಾಸಿವೆ, ಬೆಳ್ಳುಳ್ಳಿ ಒಗ್ಗರಣೆ ಕೊಡಿ. ಈಗ ಹಾಗಲಕಾಯಿ ಗೊಜ್ಜು ಸವಿಯಲು ಸಿದ್ಧ.

***

ಹಾಗಲಕಾಯಿ ಮೆಣಸುಕಾಯಿ
ಬೇಕಾಗುವ ಸಾಮಾಗ್ರಿ: ಹಾಗಲಕಾಯಿ - 2, ಒಣಮೆಣಸು - 6 , ಹಸಿಮೆಣಸು - 2, ಅರಿಶಿಣಪುಡಿ  – 1/4ಚಮಚ, ಮೆಣಸಿನಹುಡಿ – 1/2ಚಮಚ, ತೆಂಗಿನತುರಿ  – 1ಕಪ್, ಎಳ್ಳು  – 2ಚಮಚ, ಬೆಲ್ಲ – ನಿಂಬೆ ಗಾತ್ರ, ಹುಣಸೆಹಣ್ಣು ನೆಲ್ಲಿಕಾಯಿ ಗಾತ್ರ, ಉಪ್ಪು ರುಚಿಗೆ, ಎಣ್ಣೆ – 4ಚಮಚ, ಸಾಸಿವೆ, ಕರಿಬೇವು ಒಗ್ಗರಣೆಗೆ.

ತಯಾರಿಸುವ ವಿಧಾನ: ಹಾಗಲಕಾಯಿಯನ್ನು ಅರ್ಧ ಇಂಚು ಉದ್ದಕ್ಕೆ ಕತ್ತರಿಸಿ ಉಪ್ಪು, ಹುಣಸೆಹಣ್ಣು, ಮೆಣಸಿನ ಪುಡಿ, ಅರಿಶಿಣಪುಡಿ, ಬೆಲ್ಲ ಹಾಕಿ ಹಸಿಮೆಣಸನ್ನು ಸಿಗಿದು ಹಾಕಿ, ಹೆಚ್ಚು ನೀರು ಹಾಕದೆ ಬೇಯಿಸಿ. ಒಣಮೆಣಸಿನ ಕಾಯಿ, ಎಳ್ಳು ಬೇರೆ ಬೇರೆ ಹುರಿದು ತೆಂಗಿನಕಾಯಿ ತುರಿಯೊಂದಿಗೆ ರುಬ್ಬಿ, ಬೆಂದ ಹಾಗಲಕಾಯಿಗೆ ಹಾಕಿ ಕುದಿಸಿ. ಕರಿಬೇವು, ಸಾಸಿವೆ ಒಗ್ಗರಣೆ ಕೊಡಿ.
 

Comments
ಈ ವಿಭಾಗದಿಂದ ಇನ್ನಷ್ಟು
ದೀಪವಿರದ ಮನೆಗಳು, ಉರಿಯುವ ಒಲೆಗಳು…

ದ್ವಿತೀಯ ಬಹುಮಾನ ಪಡೆದ ಪ್ರಬಂಧ
ದೀಪವಿರದ ಮನೆಗಳು, ಉರಿಯುವ ಒಲೆಗಳು…

20 Jan, 2018
‘ಅತಿಯಾದ ಶಬ್ದವೇ ನನಗೆ ಅಲರ್ಜಿ!’

ಏನಾದ್ರೂ ಕೇಳ್ಬೋದು
‘ಅತಿಯಾದ ಶಬ್ದವೇ ನನಗೆ ಅಲರ್ಜಿ!’

20 Jan, 2018
ಮನೆಯೊಂದು ನಂದನವನ

ಮನೆ ಮನ
ಮನೆಯೊಂದು ನಂದನವನ

20 Jan, 2018
ಊರದನಗಳ ಕುರಿತ ನೂರೆಂಟು ನೆನಪುಗಳು

ಮೊದಲ ಬಹುಮಾನ ಪಡೆದ ಪ್ರಬಂಧ
ಊರದನಗಳ ಕುರಿತ ನೂರೆಂಟು ನೆನಪುಗಳು

13 Jan, 2018
‘ಕೋಮಲ ಮನಸ್ಸಿನ ಸಮತೂಕದ ಬರಹಗಳು’

ತೀರ್ಪುಗಾರರ ಟಿಪ್ಪಣಿ
‘ಕೋಮಲ ಮನಸ್ಸಿನ ಸಮತೂಕದ ಬರಹಗಳು’

13 Jan, 2018