ನವಜಾತಶಿಶು: ನೆತ್ತಿಯ ಕಡೆ ಇರಲಿ ಗಮನ

ಆಗತಾನೇ ಹುಟ್ಟಿದ ಮಗುವಿನ ತಲೆಯ ಭಾಗ ತುಂಬ ಮೃದು. ಅದನ್ನು ಕಾಪಾಡಲು ವಿಶೇಷ ಕಾಳಜಿ ಅಗತ್ಯ. ಹುಟ್ಟಿದ ಕೂಸಿನ ಕೂದಲು ಮತ್ತೆ ಮತ್ತೆ ಉದುರಿ ಹೊಸಗೂದಲು ಚಿಗುರುತ್ತದೆ. ಇಂತಹ ಸಹಜ ಪ್ರಕ್ರಿಯೆಗಳ ಬಗ್ಗೆ ಹಿರಿಯ ತಲೆಮಾರಿನ ಮಂದಿಗೆ ಚೆನ್ನಾಗಿ ಅರಿವಿತ್ತು. ಹೊಸ ಪೀಳಿಗೆಯ ಸೋದರಿಯರಿಗೆ ಇಲ್ಲಿದೆ ಕೆಲವು ಕಿವಿಮಾತುಗಳು.

ನವಜಾತಶಿಶು: ನೆತ್ತಿಯ ಕಡೆ ಇರಲಿ ಗಮನ

ಮೂವತ್ತರ ಹರೆಯದ ನವ್ಯಾ ಇದೀಗ ಸಾಫ್ಟವೇರ್‌ ಉದ್ಯೋಗಿ. ಕೈತುಂಬಾ ಸಂಬಳ. ಮದುವೆಯಾಯಿತು. ಆಕೆ ಪುಟ್ಟ ತಾಲೂಕು ಕೇಂದ್ರದಿಂದ ರಾಜಧಾನಿ ಸೇರಿದವಳು. ಮೊದಲ ಮಗು ಹುಟ್ಟಿದ ಸಂಭ್ರಮ. ಹುಟ್ಟಿದ ಹೆಣ್ಣುಮಗುವಿಗೆ ತಲೆಕೂದಲು ಬಹಳ ಕಡಿಮೆ ಇತ್ತು. ಎಲ್ಲಿ ತನ್ನ ಗಂಡನ ತಲೆಯಂತೆ ಬಕ್ಕತಲೆಯಾಗಿ ಬಿಡುತ್ತದೋ ಎಂಬ ಆತಂಕ ನವ್ಯಾಳದು. ನಾಲ್ಕಾರು ಬಾರಿ ಶಿಶುವೈದ್ಯರನ್ನು ಕಂಡರೂ ಸೂಕ್ತ ಸಲಹೆ–ಮಾರ್ಗದರ್ಶನ ದೊರೆಯಲಿಲ್ಲ. ಆಕೆಯ ಆತಂಕಕ್ಕೆ ಕಾರಣವೇ ಇಲ್ಲ. ವರ್ಷ ತುಂಬುವ ತನಕ ಶಿಶುವಿನ ತಲೆಯಲ್ಲಿ ಹಲವು ಬಾರಿ ಕೂದಲು ಉದುರುತ್ತದೆ. ಮತ್ತೆ ಹೊಸ ಕೂದಲು ಹುಟ್ಟುತ್ತದೆ. ನವ್ಯಾಳ ನವಜಾತ ಶಿಶು ಮಾತ್ರ ಅಲ್ಲ, ಎಲ್ಲ ಮಕ್ಕಳು ಸದಾ ಕಾಲ ನಿದ್ರಿಸುತ್ತಲೇ ಇರುವುದು ಸಹಜ. ತಲೆಯ ಭಾಗದಲ್ಲಿ ಘರ್ಷಣೆ ಉಂಟಾಗುತ್ತದೆ. ಆಗ ಕೊಂಚ ಕೂದಲು ಭಾಗದ ಸವಕಳಿ ಸಹಜ. ನವ್ಯಾಳಿಗೆ ಮಕ್ಕಳಲ್ಲಿ ವರ್ಷ ತುಂಬುವವರೆಗೂ ಎರಡು ಬಾರಿ ಕೂದಲು ಬೆಳೆಯುವ ಬಗ್ಗೆ ಅರಿವಿರಲಿಲ್ಲ. ಹುಟ್ಟಿದ ಸಮಯದಲ್ಲಿದ್ದ ಕೂದಲು ಜುಟ್ಟು ತಾನಾಗಿಯೇ ಒಮ್ಮೆ ಉದುರಿ ಹೋಗುತ್ತದೆ. ಅನಂತರ ಕೂದಲಿನ ಎರಡನೆಯ ಬೆಳೆ ಹುಟ್ಟುತ್ತದೆ. ಇಂತಹದು ನವಜಾತ ಮಕ್ಕಳ ಸಹಜ ಸಂಗತಿ. ಆದಕ್ಕೆ ಆತಂಕ ಪಡಬಾರದು. ಮೊದಲ ಬೆಳೆ ಉದುರಿದರೇನಂತೆ, ಎರಡನೆಯ ಬೆಳೆಯ ಕೂದಲು ಖಂಡಿತ ಶಾಶ್ವತ. ಹೇಗೂ ಹಲ್ಲಿನ ಎರಡು ಬೆಳೆ ನಮಗೆ ಪರಿಚಿತ. ಅದೇ ಮಾದರಿಯಿದು. ಎರಡು ಬೆಳೆಯ ಹಸುಗೂಸಿನ ಕೂದಲಿನ ಬಗ್ಗೆ ನಿಮಗೆ ತಿಳಿದಿರಲಿ.

ನಾಗರತ್ನಳದು ಇನ್ನೊಂದು ಶಂಕೆ. ಹುಟ್ಟಿದ ಮಗುವಿನ ನೆತ್ತಿಯ ಭಾಗ ಇನ್ನೂ ಕೂಡಿಲ್ಲ ಎಂಬ ಧಾವಂತ. ಹತ್ತಿಗಿಂತ ಮೃದುವಾದ ಆ ಭಾಗದಲ್ಲಿ ಏನಾಗಿಬಿಡುತ್ತದೋ ಎಂಬ ನಾಗರತ್ನಳ ಆತಂಕವನ್ನು ಆಕೆ ಶಿಶುತಜ್ಞರ ಬಳಿ ಚಿರ್ಚಿಸಿಯೂ ಇದ್ದಳು. ಆದರೆ ಅವರು ಆ ಬಗ್ಗೆ ಖಚಿತ ಉತ್ತರ ನೀಡಲಿಲ್ಲ. ಅವರು ಶಿಶುಶಸ್ತ್ರವೈದ್ಯರನ್ನು ಕಾಣಲು ತಿಳಿಸಿದರು. ಆಗ ನಾಗರತ್ನಳಿಗೆ ಇನ್ನೂ ಭಯ ಹೆಚ್ಚಿತು. ಶಸ್ತ್ರವೈದ್ಯರೂ ಸಹ ಹೆದರಿದವರ ಮೇಲೆ ಹಲ್ಲಿ ಬಿಟ್ಟ ಹಾಗೆ ಭಯ ಪಡಿಸಿಯೇಬಿಟ್ಟರು. ಇಂತಹದು ಬಲು ಅಪರೂಪದ ಕೇಸು. ಅದನ್ನು ಸರ್ಜರಿ ಮಾಡಿ ಮುಚ್ಚಿಬಿಡೋಣ ಎಂದು ಹೇಳಿದ್ದು ಕೇಳಿ ನಾಗರತ್ನಳಿಗೆ ಇನ್ನಷ್ಟು ದಿಗಿಲಾಯಿತು. ದೂರದ ಗೋಕಾಕ್‌ನಲ್ಲಿದ್ದ ಅಜ್ಜಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿದಳು. ಅಜ್ಜಿ ಹೇಳಿದ ಮಾತು ಕೇಳಿ ನಾಗರತ್ನಳಿಗೆ ಸಮಾಧಾನವಾಯಿತು. ಆಕೆಯ ಅಮ್ಮನೂ ಸೇರಿದಂತೆ ಅಜ್ಜಿಗೆ ಹದಿನೈದು ಮಕ್ಕಳು! ಅಂತಹ ಅಪ್ರತಿಮ ಅನುಭವ ನಾಗರತ್ನಳ ಅಜ್ಜಿಗಿತ್ತು. ಆಕೆ ಹೇಳಿದ್ದು ಇಷ್ಟೆ ‘ನಿಂಗೇನು ಹುಚ್ಚು ಹಿಡಿದಿದೆಯಾ? ಅದೇನು ಅಪರೇಶನ್ ಮಾಡುತ್ತಾರೆ? ಮಗುವಿನ ನೆತ್ತಿ ಕೂಡಲು ಕನಿಷ್ಠ ನಾಲ್ಕು ತಿಂಗಳು ಬೇಕು; ಅದೂ ತಿಳಿಯದ  ಆ ವೈದ್ಯರ ಹತ್ತಿರ ಮತ್ತೊಮ್ಮೆ ಹೋಗಬೇಡ’ ಎಂದು ನಾಗರತ್ನಳನ್ನು ಅಜ್ಜಿ ಚೆನ್ನಾಗಿ ತರಾಟೆಗೆ ತೆಗೆದುಕೊಂಡರು. ಅಜ್ಜಿಯ ಮಾತು ಅಕ್ಷರಶಃ ನಿಜ. ನೆತ್ತಿಯ ಮೃದುತನ ಮಾತ್ರ ಅಲ್ಲ. ತಲೆಯ ಬುರುಡೆಯ ಹಿಂಭಾಗ ಸಹ ತೀರಾ ಮೃದು ಇರುತ್ತದೆ. ಅಂತಹ ಎರಡೂ ದೈವಕೃತ ಛಿದ್ರಗಳನ್ನು ಸದಾ ಕಾಪಾಡುವ ಒಂದೇ ಘನ ಉದ್ದೇಶ ಹಿಂದಿನ ಕಾಲದ ಜುಟ್ಟು ಉದ್ದನೆಯದಾಗಿ ಬಿಡುವ ಸಂಪ್ರದಾಯ ಇತ್ತು. ಹುಟ್ಟುಗೂದಲನ್ನು ಬಹುತೇಕ ಮನೆದೇವರಿಗೆ ಮುಡುಪಿಡುವ ಮತ್ತು ಮುಡಿಕೊಡುವ ಸಂಪ್ರದಾಯ ಆಡಿ ತೋರಿಸಿದ ಅಜ್ಜಿಗೆ ನಾಗರತ್ನ ಮನಸಾರೆ ವಂದಿಸಿದಳು.

ಹೆರಿಗೆಯ ಸಂದರ್ಭದಲ್ಲಿ ಸುಲಭವಾಗಿ ಮಗುವು ಹೊರಜಗತ್ತು ಕಾಣುವ ಸಲುವಾಗಿ ತಲೆ ಬುರುಡೆಯ ಮೂಳೆಗಳು ಅತ್ತಲಿತ್ತ ಜರುಗಬೇಕಾಗುತ್ತದೆ. ಮೆದುಳಿನ ಪೂರ್ಣ ಬೆಳವಣಿಗೆ ಪರ್ಯಂತ ಅಂತಹ ಡೋಲಾಯಮಾನ ಸ್ಥಿತಿ ಸಹಜ. ಅಂತಹ ಪ್ರಕ್ರಿಯೆಗೆ ಸಹಜ ಅನುಕೂಲ ಪರಿಸರ ಏರ್ಪಡಲು ನೆತ್ತಿಯ ಮತ್ತು ಹಿಂಭಾಗದ ಎರಡು ಕಡೆಯ ಮೃದು ರಂಧ್ರಗಳು ನವಜಾತ ಶಿಶುವಿನ ಶಿರದಲ್ಲಿವೆ. ಇದಕ್ಕೆ ‘ಫೊಂಟಾನೆಲ್’ ಎಂಬ ವೈದ್ಯಕೀಯ ಪರಿಭಾಷೆ ಇದೆ. ಅದು ಬಹಳ ಮೃದುವಾದ ಪದರ. ಅತ್ತ ರಂಧ್ರವೂ ಇಲ್ಲ, ಇತ್ತ ಮೂಳೆಯೂ ಇಲ್ಲ. ಅಷ್ಟು ಮಾತ್ರ ಅಲ್ಲ. ಅಂತಹ ದೈವಕೃತ ಛಿದ್ರದಲ್ಲಿ ನೀವು ಹೃದಯದ ಬಡಿತ ಹಾಗೂ ನಾಡಿಮಿಡಿತ ಖಂಡಿತ ಕಾಣುವಿರಿ. ಅದು ಕೂಡ ಸಹಜ ಪ್ರಕ್ರಿಯೆ. ತಾನಾಗಿಯೇ ಅಂತಹ ಛಿದ್ರವು ಎರಡರಿಂದ ನಾಕು ತಿಂಗಳೊಳಗಾಗಿ ಮುಚ್ಚಿಕೊಳ್ಳುತ್ತದೆ. ತಲೆಯ ಆ ಭಾಗದಲ್ಲಿ ಕಪ್ಪನೆಯ ಮೃದು ಪೊರೆಯ ಹುರುಪೆಗಳೇಳುತ್ತವೆ. ಅದಕ್ಕೆ ದೇವರೇ ನೆತ್ತಿಗೆ ಹಚ್ಚುವ ಮದ್ದು ಎಂಬ ಜನಪದ ಪರಿಭಾಷೆ ಇದೆ.

ನೆತ್ತಿಗೆ ಎಣ್ಣೆ ಹಚ್ಚಿದರೆ ಅದು ಒಳಗೆ ಸೇರದು ಎಂದು ಆಧುನಿಕ ವೈದ್ಯರ ವಾದವಿದೆ. ಏಕೆಂದರೆ ಶವಪರೀಕ್ಷೆಯ ವೇಳೆಗೆ ನೆತ್ತಿ ಸೀಳಲು ಕುಡುಗೋಲು, ಮಚ್ಚು, ಗರಗಸವೇ ಬೇಕು ಎಂದು ಅವರ ವಾದ ಸರಣಿ. ಅಂತಹ ಗಟ್ಟಿಮೂಳೆ ದಾಟಿ ನಿಮ್ಮ ಎಣ್ಣೆಯ ಮಾಲೀಶು ಒಳಗೆ ಹೇಗೆ ಸೇರೀತು ಎಂಬ ಕುತರ್ಕದ ಮಾತಿದೆ. ಜಾನಪದದ ಬಾಣಂತನದ ಆರೈಕೆ ಮತ್ತು ಶಿಶು ದೇಖುರೇಖಿನ ಸಂಗತಿಗಳಲ್ಲಿದೆ ಎಣ್ಣೆಯ ಮಾಲೀಶಿಗೆ ಬಹು ಆದ್ಯತೆ. ಅಂತಹ ನೆತ್ತಿಯ ಮೃದು ಪದರದ ಮೂಲಕ ಮಾಲೀಶಿನ ಎಣ್ಣೆಯ ಉಪಕಾರಿ ಗುಣ ದೇಹ ಸೇರಲು ವಿಪುಲ ಅವಕಾಶ ಇದೆ. ಎಳವೆಯ ಬಾಲ್ಯವಷ್ಟೆ ಅಲ್ಲ. ನಿತ್ಯವೂ ಶಿರಸ್ಸಿಗೆ ಎಣ್ಣೆಯ ಮಾಲೀಶಿಗೆ ಎಲ್ಲ ಸಂಹಿತೆಗಳ ಉಪದೇಶವಿದೆ. ಅದು ನಮ್ಮ ದೇಶದ ಪ್ರಾಚೀನ ಚಿಕಿತ್ಸಾ ಶಾಸ್ತ್ರವೆನಿಸಿದ ಆಯುರ್ವೇದದ ಆರೋಗ್ಯ ಸೂತ್ರಗಳ ಪ್ರಥಮ ಪಾಠ. ಎಳವೆಯ ಈ ಪಾಠವಂತೂ ಬೆಳೆಯುವ ತನಕ ಶಿರಸ್ಸು ಕಾಪಾಡಲು ಸಾಕು.

Comments
ಈ ವಿಭಾಗದಿಂದ ಇನ್ನಷ್ಟು
ಗೊಂದಲವೇ ಖಿನ್ನತೆಗೆ ಕಾರಣವಾಗಿದೆ...

ಏನಾದ್ರೂ ಕೇಳ್ಬೋದು
ಗೊಂದಲವೇ ಖಿನ್ನತೆಗೆ ಕಾರಣವಾಗಿದೆ...

21 Apr, 2018
ಮರುಭೂಮಿಯ ಕರೆಯಾಲಿಸಿ...

ಪ್ರವಾಸ ಯಾಕೆ?
ಮರುಭೂಮಿಯ ಕರೆಯಾಲಿಸಿ...

21 Apr, 2018
ಹಗಲಲ್ಲೂ ನಿದ್ದೆ!

ಏನಾದ್ರೂ ಕೇಳ್ಬೋದು
ಹಗಲಲ್ಲೂ ನಿದ್ದೆ!

14 Apr, 2018
ಆಸೆ, ಪ್ರೀತಿಗಳ ತೂಗುಯ್ಯಾಲೆಯಲ್ಲಿ

ಮನುಷ್ಯ ಸಂಘಜೀವಿ
ಆಸೆ, ಪ್ರೀತಿಗಳ ತೂಗುಯ್ಯಾಲೆಯಲ್ಲಿ

14 Apr, 2018
ರಜೆಗೊಂದಿಷ್ಟು ನನ್ನ ತಯಾರಿ...

ರಜಾ ಮಜಾ
ರಜೆಗೊಂದಿಷ್ಟು ನನ್ನ ತಯಾರಿ...

14 Apr, 2018