ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ ಬರುತ್ತೆ ಬಸ್‌... ಹೊಗೆ ಉಗುಳದ ಬಸ್‌

Last Updated 15 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಟ್ರಾಫಿಕ್‌ನಲ್ಲಿ ಕರೆಂಟ್ ಬಸ್‌ಗಳನ್ನು ಓಡಿಸಲು ಸಾಧ್ಯವೇ? ಟ್ರಾಫಿಕ್ ಜಾಂ ಆದಾಗ ಬ್ಯಾಟರಿ ಖಾಲಿ ಆಗಿಹೋದ್ರೆ ಏನು ಮಾಡೋದು? ಬೇರೆ ಯಾವ ಊರಲ್ಲಾದ್ರೂ ಇಂಥ ಬಸ್‌ಗಳು ಓಡುತ್ತಿವಿಯೇ?’

– ಎಂ.ಜಿ.ರಸ್ತೆಯಿಂದ ಹೊರಟ ಜಿ–9 ಬಸ್ಸು ಶಿವಾಜಿನಗರ ತಲುಪುವವರೆಗೆ ಕಂಡಕ್ಟರ್‌ ಸಾಹೇಬರು ಪ್ರಶ್ನೆ ಮೇಲೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ನಾನು ಗೂಗಲ್‌ರಾಯರು ದಯಪಾಲಿಸಿದ ಉತ್ತರಗಳನ್ನು ಕನ್ನಡಕ್ಕೆ ಅನುವಾದಿಸಿ ಹೇಳಿ ಅವರ ಕುತೂಹಲ ತಣಿಸಿದೆ. ಶಿವಾಜಿನಗರದಲ್ಲಿ ಬಸ್‌ ಲೋಡ್ ಆದ ಕಾರಣ ಕಂಡಕ್ಟರ್‌ಗೆ ಮತ್ತೆ ಮಾತು ಮುಂದುವರಿಸಲು ಆಗಲಿಲ್ಲ.

ಈ ಪ್ರಸಂಗ ಮನದಲ್ಲಿ ಹಸಿಹಸಿಯಾಗಿರುವಾಗಲೇ ನಮ್ಮ ಬಿಎಂಟಿಸಿ ಅಧಿಕಾರಿಗಳು ವಿದ್ಯುತ್ ಚಾಲಿತ 150 ಬಸ್‌ ಖರೀದಿ ನಿರ್ಧಾರದಿಂದ ಹಿಂದೆ ಸರಿದಿರುವ ಮಾತುಗಳು ಕೇಳಿಬರುತ್ತಿವೆ.

‘ನಮ್ಮ ಸಿಬ್ಬಂದಿಗೆ ಎಲೆಕ್ಟ್ರಿಕ್ ಬಸ್‌ಗಳ ನಿರ್ವಹಣೆ ಗೊತ್ತಿಲ್ಲ. ಖಾಸಗಿಯವರು ಬಸ್ ಖರಿದೀಸಲಿ. ನಾವು ರೂಟ್ ಕೊಡ್ತೀವಿ, ಬಸ್ ನಿಲ್ಲಿಸೋಕೆ ಜಾಗ ಕೊಡ್ತೀವಿ. ಪ್ರತಿ ಕಿ.ಮೀ.ಗೆ ಇಷ್ಟು ಎಂದು ಹಣ ಪಾವತಿಸುತ್ತೇವೆ. ನಿರ್ವಹಣೆ ಮತ್ತು ಚಾಲನೆ ಅವರ ಹೊಣೆ. ನಿರ್ವಾಹಕ ಮತ್ತು ವ್ಯವಸ್ಥೆ ನಮ್ಮ ಜವಾಬ್ದಾರಿ’ ಎನ್ನುವುದು ಇದೀಗ ಬಿಎಂಟಿಸಿ ವಲಯದಲ್ಲಿ ಕೇಳಿಬರುತ್ತಿರುವ ಮಾತು.

ಎಲೆಕ್ಟ್ರಿಕ್‌ ಬಸ್‌ಗಳು ದೇಶದ ವಿವಿಧ ನಗರಗಳಲ್ಲಿ ಈಗಾಗಲೇ ಕಾರ್ಯಾರಂಭ ಮಾಡಿವೆ. ಹಿಮಾಚಲ ಪ್ರದೇಶ ಸಾರಿಗೆ ನಿಗಮವು (ಎಚ್‌ಆರ್‌ಟಿಸಿ) ಸುಮಾರು 50 ಕಿ.ಮೀ. ಅಂತರದ ಮನಾಲಿ–ರೋಹ್ತಾಂಗ್‌ ಮಾರ್ಗದಲ್ಲಿ ಈಗಾಗಲೇ ಎಲೆಕ್ಟ್ರಿಕ್ ಬಸ್‌ಗಳನ್ನು ಓಡಿಸುತ್ತಿದೆ. ದೇಶದ ವಿವಿಧ ನಗರಗಳಲ್ಲಿ ನಡೆದಿರುವ, ಬೆಂಗಳೂರಿಗೆ ಮಾದರಿಯಾಗಬಲ್ಲ ಪ್ರಯತ್ನಗಳ ಪರಿಚಯ ಇಲ್ಲಿದೆ.

ಮುಂಬೈ ವಾಸಿಗಳ ಹರ್ಷ

‘ಬೃಹನ್‌ ಮುಂಬೈ ಎಲೆಕ್ಟ್ರಿಕ್‌ ಸಪ್ಲಯ್‌ ಅಂಡ್ ಟ್ರಾನ್ಸ್‌ಪೋರ್ಟ್‌ (ಬೆಸ್ಟ್‌) ಸಂಸ್ಥೆಯು ಕಳೆದ ತಿಂಗಳು (ನ.10) ಮೂರು ವಿದ್ಯುತ್ ಚಾಲಿತ ಬಸ್‌ಗಳನ್ನು ರಸ್ತೆಗಿಳಿಸಿತು. ಗೋಲ್ಡ್‌ಸ್ಟೋನ್ ಕಂಪೆನಿ ನಿರ್ಮಾಣದ, 32 ಸೀಟ್‌ಗಳ ಈ ಬಸ್‌ಗಳಲ್ಲಿ ಬ್ಯಾಟರಿ ಚಾರ್ಜ್‌ ಆಗಲು ಮೂರು ಗಂಟೆ ಬೇಕು. ಒಮ್ಮೆ ಸಂಪೂರ್ಣ ಚಾರ್ಜ್‌ ಆದರೆ 200 ಕಿ.ಮೀ. ಸಂಚರಿಸಬಲ್ಲವು.

ಬೆಸ್ಟ್‌ ಅಧಿಕಾರಿಗಳ ಲೆಕ್ಕಾಚಾರದ ಪ್ರಕಾರ ಈ ಬಸ್‌ಗಳ ಪ್ರತಿ ಕಿ.ಮೀ. ಸಂಚಾರಕ್ಕೆ ₹8 ವೆಚ್ಚವಾಗುತ್ತದೆ. ಸಿಎನ್‌ಜಿ ಬಸ್‌ಗಳಲ್ಲಿ ಪ್ರತಿ ಕಿ.ಮೀ. ಸಂಚಾರಕ್ಕೆ ₹15 ವೆಚ್ಚವಾಗುತ್ತಿತ್ತು. ಒಂದು ವಿದ್ಯುತ್ ಚಾಲಿತ ಬಸ್‌ನ ಬೆಲೆ ₹1.61 ಕೋಟಿ. ಸಿಎನ್‌ಜಿ ಬಸ್‌ ಬೆಲೆ ₹80 ಲಕ್ಷ ಮಾತ್ರ. ಈ ಬಸ್‌ಗಳ ಬಳಕೆಯಿಂದ ವಾಯುಮಾಲಿನ್ಯ ಮತ್ತು ಶಬ್ದಮಾಲಿನ್ಯಕ್ಕೂ ಕಡಿವಾಣ ಹಾಕಿದಂತೆ ಆಗಿದೆ.

ನಾಗಪುರದಲ್ಲಿ ಈ ಹಿಂದೆಯೇ ವಿದ್ಯುತ್ ಚಾಲಿತ ಬಸ್‌ಗಳ ಬಳಕೆ ಆರಂಭವಾಗಿತ್ತು. ಅಲ್ಲಿನ ನಗರ ಸಾರಿಗೆ ಸಂಸ್ಥೆಯು 70 ವಿದ್ಯುತ್ ಚಾಲಿತ ಬಸ್‌ಗಳ ಖರೀದಿಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

ಮಾಲಿನ್ಯದಿಂದ ಮುಕ್ತಿ

ಮೊದಲ ನೋಟದ ಪ್ರೇಮವೇ ಅಂಕುರಿಸಲು ಸಾಧ್ಯವಿಲ್ಲದಷ್ಟು ಹೊಂಜು ಮುಸುಕಿ
ಜಗತ್ತಿನ ಗಮನ ಸೆಳೆದಿದ್ದ ನಗರ ದೆಹಲಿ.
ಇದೀಗ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಗರ ಸಾರಿಗೆ ವ್ಯವಸ್ಥೆಗೆ 500 ವಿದ್ಯುತ್ ಚಾಲಿತ ಬಸ್‌ಗಳನ್ನು ಸೇರಿಸುವ ನಿರ್ಧಾರದ ಹಿಂದೆಯೂ ಇದೇ ಹೊಂಜು ಕೆಲಸ ಮಾಡಿರಬಹುದು.

2016ರ ಮಾರ್ಚ್‌ನಲ್ಲಿಯೇ ದೆಹಲಿ ಸಾರಿಗೆ ಸಂಸ್ಥೆಯು ಎಲೆಕ್ಟ್ರಿಕ್ ಬಸ್ ಸಂಚಾರದ ಪ್ರಾಯೋಗಿಕ ಪರೀಕ್ಷೆ ನಡೆಸಿತ್ತು. ಈ ಪ್ರಯೋಗ ಯಶಸ್ವಿಯೂ ಆಗಿತ್ತು. ಅಸಮರ್ಪಕ ನಿರ್ವಹಣೆ ಕಾರಣಕ್ಕೆ ಕೆಟ್ಟು ನಿಲ್ಲುವ ಬಸ್‌ಗಳು ದೆಹಲಿ ಸಾರಿಗೆ ನಿಗಮದ ದೊಡ್ಡ ತಲೆನೋವು. ವಿದ್ಯುತ್ ಚಾಲಿತ ಬಸ್‌ ಮೂರು ತಿಂಗಳ ಅವಧಿಯಲ್ಲಿ ಒಮ್ಮೆಯೂ ಕೆಟ್ಟು ನಿಲ್ಲಲಿಲ್ಲ. ಈ ಸಂಗತಿ ಅಲ್ಲಿನ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಬಸ್ ನಿರ್ವಹಣೆಗೆ ವ್ಯಯಿಸುತ್ತಿರುವ ಕೋಟ್ಯಂತರ ರೂಪಾಯಿ ಹಣವನ್ನೂ ವಿದ್ಯುತ್ ಚಾಲಿತ ಬಸ್‌ಗಳು ಉಳಿಸಿಕೊಡುತ್ತವೆ ಎನ್ನುವ ಕಾರಣಕ್ಕೆ ಅಧಿಕಾರಿಗಳು ಇಂಥ ಬಸ್‌ಗಳ ಖರೀದಿಗೆ ಒಲವು ತೋರುತ್ತಿದ್ದಾರೆ.

ಗುಡ್ಡಗಾಡಿನಲ್ಲಿ ವಿದ್ಯುತ್ ಬಸ್

ಗುಡ್ಡ ಕಣಿವೆಗಳು ಏರು–ಇಳಿಜಾರು ಮತ್ತು ಕಡಿದಾದ ತಿರುವಿನ ರಸ್ತೆಗಳೇ ಬಹುಸಂಖ್ಯೆಯಲ್ಲಿ ಇರುವ ಹಿಮಾಚಲ ಪ್ರದೇಶದಲ್ಲಿ ನಗರ ಪ್ರದೇಶಗಳ ಜೊತೆಗೆ ಗ್ರಾಮೀಣ ಪ್ರದೇಶಕ್ಕೂ ವಿದ್ಯುತ್‌ ಚಾಲಿತ ಬಸ್‌ಗಳ ಸೇವೆ ಲಭ್ಯವಾಗಿದೆ. ಕಳೆದ ಸೆಪ್ಟೆಂಬರ್‌ನಿಂದ ಗೋಲ್ಡ್‌ಸ್ಟೋನ್ ಕಂಪೆನಿಯ 26 ಆಸನಗಳ ಬಸ್‌ಗಳು ಕುಲು–ಮನಾಲಿ–ರೋಹ್‌ತಾಂಗ್‌ ಮಾರ್ಗದಲ್ಲಿ ಸಂಚಾರ ಆರಂಭಿಸಿವೆ. ದೀರ್ಘಾವಧಿ ಬಾಳಿಕೆ ಬರುವ ಲಿಥಿಯಂ ಐರನ್ ಫಾಸ್ಫೇಟ್ ಬ್ಯಾಟರಿ ಅಳವಡಿಸಿರುವ ಈ ಬಸ್‌ಗಳು ಒಮ್ಮೆ ಚಾರ್ಜ್‌ ಆದರೆ 200 ಕಿ.ಮೀ. ಸಂಚರಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT