ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಚರಿತ ತಂದ ಕಥನ ಕುತೂಹಲ

Last Updated 15 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಕಲೆ, ಸಂಗೀತ, ನಾಟಕ, ಸಾಹಿತ್ಯ, ಚಿತ್ರ, ಶಿಲ್ಪ, ಚಲನಚಿತ್ರಗಳ ಬಗೆಗೆ ಆಸಕ್ತಿ ಬೆಳೆಸಿಕೊಂಡ ಒಂದಿಷ್ಟು ಜನ ಮೂರು ವರ್ಷದ ಹಿಂದೆ ಕಟ್ಟಿಕೊಂಡ ತಂಡ ಲೋಕಚರಿತ. ಆಸಕ್ತ ಮನಸ್ಸುಗಳನ್ನು ವಿವಿಧ ಕ್ಷೇತ್ರದ ದಿಗ್ಗಜರೊಂದಿಗೆ ಮುಖಾಮುಖಿಯಾಗಿಸುವುದು ತಂಡದ ಮುಖ್ಯ ಉದ್ದೇಶ. ಸದ್ಯ ಈ ತಂಡ ‘ಕಥನ ಕುತೂಹಲ’ದ ಮೂಲಕ ವಿಭಿನ್ನ ಪ್ರಯೋಗವನ್ನು ಜನರ ಮುಂದಿಡಲು ತಯಾರಿ ನಡೆಸಿದೆ. ಕನ್ನಡ ಸಾಹಿತ್ಯ ಲೋಕದ ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಂಡು ಅವುಗಳನ್ನು ರಂಗಭೂಮಿಯಲ್ಲಿ ಪ್ರಸ್ತುತ ಪಡಿಸುವುದೇ ಕಥನ ಕುತೂಹಲದ ವಿಶೇಷ.

ವೃತ್ತಿ ಮತ್ತು ಕ್ಷೇತ್ರ ವಿಭಿನ್ನವಾದರೂ ಆಸಕ್ತಿಯ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿ ತಿಂಗಳ ಎರಡನೇ ಭಾನುವಾರ ಲೋಕಚರಿತ ಮಿತ್ರಕೂಟ ಹೆಸರಲ್ಲಿ ಸದಸ್ಯರೆಲ್ಲಾ ಸೇರಿ ಚರ್ಚೆ ನಡೆಸುತ್ತಿದ್ದರು.

ವಿವೇಕ ಶಾನಭಾಗ, ಜಯಂತ ಕಾಯ್ಕಿಣಿ, ಕೆ.ವಿ. ಅಕ್ಷರ, ನಾಗೇಶ ಹೆಗಡೆ, ಎಂ.ಎಸ್. ಶ್ರೀರಾಮ್, ಜಿ.ಎಸ್. ಭಾಸ್ಕರ್, ರಾಧಾಕೃಷ್ಣನ್ ನಯ್ಯರ್, ಬಿ.ಆರ್. ವಿಶ್ವನಾಥ್, ಕಲಾಗಂಗೋತ್ರಿ ಮಂಜು, ಚಿದಂಬರರಾವ್ ಜಂಬೆ, ಉಷಾ ಪಿ. ರೈ, ಜನಾರ್ಧನ ರೆಡ್ಡಿ, ಕಲಾಗಂಗೋತ್ರಿ ಮಂಜು, ಸ್ವರೂಪ್ ಶರ್ಮನ್, ವೀರನಾರಾಯಣ, ನಟರಾಜ ಹುಳಿಯಾರ್, ಮುಕುಂದರಾವ್, ಜೆ. ಶ್ರೀನಿವಾಸ ಮೂರ್ತಿ, ಜಯಂತ ಕಾಯ್ಕಿಣಿ, ರಘುನಂದನ, ಪ್ರತಿಭಾ ನಂದಕುಮಾರ್, ಚಿರಂಜೀವ್ ಸಿಂಗ್, ಎಂ.ಎಸ್, ಆಶಾದೇವಿ, ಸುಂದರ್ ಸಾರುಕ್ಕೈ, ಬಿ.ವಿ. ರಾಜಾರಾಮ್, ಕೆ.ಎಸ್. ನಾಗರತ್ನಮ್ಮ, ಮಲ್ಲಿಕಾರ್ಜುನ ಕಟಗೋಳ, ಶ್ರೀನಿವಾಸ ವೈದ್ಯ ಮುಂತಾದವರು ಭಾಗವಹಿಸಿ ಇಲ್ಲಿ ಸಂವಾದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.

ಇವುಗಳಿಂದ ಸ್ಫೂರ್ತಿ ಪಡೆದು ಗೀತ ಚರಿತ ಎನ್ನುವ ಕಾರ್ಯಕ್ರಮವನ್ನು ತಂಡ ಈ ಮೊದಲು ಹೆಣೆದಿತ್ತು. ಹಳೆಯ ರಂಗಗೀತೆಗಳನ್ನು ಬಳಸಿಕೊಂಡು ಮಾಡಿದ ಈ ಕಾರ್ಯಕ್ರಮ ಮೂರು ಪ್ರದರ್ಶನ ಕಂಡು ಮೆಚ್ಚುಗೆ ಗಳಿಸಿತ್ತು. ಹೀಗಾಗಿ ‘ಕಥಾ ಚರಿತ‘ ಯೋಜನೆಯನ್ನು ತಂಡ ಕೈಗೆತ್ತುಕೊಂಡಿದೆ. ಅದರ ಮೊದಲ ಕಂತು ಈ ‘ಕಥನ ಕುತೂಹಲ’.

ಕನ್ನಡ ಸಾಹಿತ್ಯ ಲೋಕದ ಒಂದಷ್ಟು ಕಥೆಗಳನ್ನು ರಂಗರೂಪಕ್ಕೆ ತರುವುದೇ ಇದರ ಉದ್ದೇಶ. ಮೂರ್ನಾಲ್ಕು ತಿಂಗಳಿನಿಂದ ಸದಸ್ಯರು ಕನ್ನಡದ ಸುಮಾರು 30 ಕಥೆಗಳನ್ನು ಓದಿ ಅವುಗಳಲ್ಲಿ ಪ್ರಸ್ತುತ ಸನ್ನಿವೇಶಗಳಿಗೆ ಹೊಂದುವ ಹತ್ತು ಕಥೆಗಳನ್ನು ಪ್ರಸ್ತುತಪಡಿಸಲು ಆರಿಸಿಕೊಂಡಿದ್ದಾರೆ.

ದೇವನೂರು ಮಹಾದೇವ ಅವರ ‘ಡಾಂಬರು ಬಂದುದು’ ಮತ್ತು ‘ಎದೆಗೆ ಬಿದ್ದ ಅಕ್ಷರ’, ಎಂ.ಎಸ್‌. ಶ್ರೀರಾಮ್‌ ಅವರ ‘ಸಲ್ಮಾನ್‌ ಖಾನನ ಡಿಫಿಕಲ್ಟೀಸ್‌’, ವಸುಧೇಂದ್ರ ಅವರ ‘ಹುಲಿಗೆವ್ವ’, ಅಶೋಕ ಹೆಗಡೆ ಅವರ ‘ಕತ್ತಲು’, ಯಶವಂತ ಚಿತ್ತಾಲ ಅವರ ‘ಸುತ್ತೋ ಸುತ್ತೋ ಸುತ್ತಾಟ’, ಪಿ.ಲಂಕೇಶರ ‘ನಾನಲ್ಲ’, ಪೂರ್ಣಚಂದ್ರ ತೇಜಸ್ವಿ ಅವರ `ಡೇರ್ ಡೆವಿಲ್ ಮುಸ್ತಾಫಾ', ನಟರಾಜ್ ಹುಳಿಯಾರ್ ಅವರ`ದಾದಾ ಕ ಪಹಾಡ್', ಮೌನೇಶ ಬಡಿಗೇರ ಅವರ`ಶಫಿ ಎಲೆಕ್ಟ್ರಿಕಲ್ಸ್'.

ನಾಟಕಕ್ಕೆ ತಂಡದ ಸದಸ್ಯರದ್ದೇ ನಿರ್ದೇಶನವಿದೆ. ವಿಭಿನ್ನ ಕ್ಷೇತ್ರದ ಹಿನ್ನೆಲೆಯುಳ್ಳ ಸದಸ್ಯರು ತಂಡದಲ್ಲಿರುವುದರಿಂದ ಯಾರಿಗೆ ಯಾವಾಗ ಸಮಯ ಹೊಂದಾಣಿಕೆ ಆಗುತ್ತದೋ ಆವಾಗ ತಾಲೀಮು ನಡೆಸುತ್ತಿದ್ದರು. ರಂಗಾಭ್ಯಾಸ ಮಲ್ಲೇಶ್ವರದಲ್ಲಿರುವ ಎಂ.ಇ.ಎಸ್‌. ಕಿಶೋರ ಕೇಂದ್ರದಲ್ಲಿ ನಡೆಯುತ್ತಿತ್ತು.

‘ಕಥೆಗಳನ್ನು ರಂಗದ ಮೇಲೆ ತರಲಾಗಿದೆ. ಆದರೆ ಇದನ್ನು ಪ್ರಸ್ತುತಿ (ಪ್ರೆಸೆಂಟೇಶನ್‌) ರೀತಿಯಲ್ಲಿ ಜನರ ಮುಂದಿಡುವ ಪ್ರಯತ್ನವನ್ನು ಯಾರೂ ಮಾಡಿಲ್ಲ. ಮೊದಲ ಪ್ರದರ್ಶನ ಕಲಾಗ್ರಾಮದಲ್ಲಿ ಮಾಡಿದ್ದೇವೆ. ಮುಂದೆ ಚಿಕ್ಕ ಸ್ಥಳದಲ್ಲಾದರೂ ಇದನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಸಾಧ್ಯವಾಗುವಂತೆ ನಿರೂಪಿಸಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ ಲೋಕಚರಿತದ ನವೀನ್‌ ಆರ್‌.ಎನ್‌.

ಕಾರ್ಯಕ್ರಮ ನಡೆಯುವ ಸ್ಥಳ– ಕಲಾಗ್ರಾಮ, ಮಲ್ಲತ್ತಹಳ್ಳಿ, ಶನಿವಾರ ಸಂಜೆ 7. ಟಿಕೆಟ್‌ ದರ ₹100

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT