ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಥೆನಾಲ್ ಬಳಕೆಗೆ ಒತ್ತು: ಸಾರಸ್ವತ್‌

Last Updated 15 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಮಂಗಳೂರು: ‘ಕಚ್ಚಾ ತೈಲದ ಆಮದು ಪ್ರಮಾಣ ತಗ್ಗಿಸಲು ಮಿಥೆನಾಲ್ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ’ ಎಂದು ನೀತಿ ಆಯೋಗದ ಸದಸ್ಯ ಡಾ.ವಿ.ಕೆ. ಸಾರಸ್ವತ್‌ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ದಿಸೆಯಲ್ಲಿ ನೀತಿ ಆಯೋಗವು ಸಂಶೋಧನಾ ಸಂಸ್ಥೆಗಳು ಹಾಗೂ ತೈಲು ಕಂಪೆನಿಗಳ ಜತೆ ವಿಚಾರ ವಿನಿಮಯ ನಡೆಸುತ್ತಿದೆ’ ಎಂದರು.

‘ದೇಶದಲ್ಲಿ ಬಳಕೆ ಆಗುತ್ತಿರುವ ಎಲ್‌ಪಿಜಿಯ ಬಹುತೇಕ ಪ್ರಮಾಣವನ್ನು ಆಮದು ಮಾಡಲಾಗುತ್ತಿದೆ. ಮಿಥೆನಾಲ್ ಅನ್ನು ಉರುವಲು ಆಗಿಯೂ ಬಳಕೆ ಮಾಡಬಹುದಾಗಿದ್ದು, ಎಲ್‌ಪಿಜಿಯ ಶೇ 20 ರಷ್ಟು ಬೇಡಿಕೆ ಪೂರೈಸಬಹುದಾಗಿದೆ.

‘ಸ್ವಿಟ್ಜರ್ಲೆಂಡ್‌ನ ಕಂಪನಿಯೊಂದು ಭಾರತದಲ್ಲಿ ಮಿಥೆನಾಲ್‌ ಸಂಸ್ಕರಣಾ ಘಟಕ ಸ್ಥಾಪಿಸಲಿದೆ. ಈ ಘಟಕದಿಂದ ಸಿಎನ್‌ಜಿ ಮಾದರಿಯಲ್ಲಿಯೇ ಮಿಥೆನಾಲ್‌ ಕಿಟ್‌ಗಳನ್ನು ತಯಾರಿಸಬಹುದಾಗಿದೆ.

‘ದೇಶದ ಭವಿಷ್ಯದ ಅವಶ್ಯಕತೆಗಳನ್ನು ಗಮನದಲ್ಲಿ ಇಟ್ಟುಕೊಂಡು ಮಿಥೆನಾಲ್‌ ಬಳಕೆಯ ಕುರಿತು ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ. ಇದೇ ವಿಷಯವಾಗಿ ಐಐಟಿ, ಎನ್‌ಐಟಿ ಸೇರಿದಂತೆ ವಿವಿಧ ಸಂಶೋಧನಾ ಸಂಸ್ಥೆಗಳಲ್ಲಿ ಸಮ್ಮೇಳನಗಳನ್ನು ಆಯೋಜಿಸಲಾಗುತ್ತಿದ್ದು, ಅನೇಕ ಹೊಸ ವಿಚಾರಗಳ ಮಂಡನೆಯಾಗುತ್ತಿದೆ’ ಎಂದರು.

‘ಸಮುದ್ರ ತೀರದ ಮರಳಿನಲ್ಲಿ ವಿದ್ಯುನ್ಮಾನ ವಾಹನ ವ್ಯವಸ್ಥೆಗೆ ಅಗತ್ಯವಾಗಿರುವ ಅನೇಕ ಖನಿಜಾಂಶಗಳಿದ್ದು, ಈ ಮರಳಿನ ಗಣಿಗಾರಿಕೆ ತೀವ್ರಗೊಳಿಸಬೇಕು. ಆದರೆ, ಈ ಮರಳನ್ನು ವಿದೇಶಕ್ಕೆ ರಫ್ತು ಮಾಡುವುದಕ್ಕೆ ನಿರ್ಬಂಧ ವಿಧಿಸಬೇಕಾಗಿದೆ’ ಎಂದರು.

ಏಪ್ರಿಲ್‌ನಲ್ಲಿ ‘ಬಿಎಸ್‌–6’ ಇಂಧನ
‘ಮುಂದಿನ ಏಪ್ರಿಲ್‌ನಿಂದ ದೆಹಲಿಯಲ್ಲಿ ‘ಬಿಎಸ್ 6’  ಮಾಲಿನ್ಯ ನಿಯಂತ್ರಣ ಮಾನದಂಡ ಬಳಕೆ ಆರಂಭವಾಗಲಿದೆ. 2020 ರ ವೇಳೆಗೆ ‘ಯುರೋ 6’ ಮಾನದಂಡ ಬಳಕೆಗೆ ಬರಲಿದೆ’ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಅಧ್ಯಕ್ಷ ಸಂಜೀವ್ ಸಿಂಗ್ ತಿಳಿಸಿದರು.

‘ಮಿಥೆನಾಲ್‌ ಜತೆಗೆ ಇಥೆನಾಲ್‌ ಬಳಕೆಗೂ ಐಒಸಿ ಹೆಚ್ಚಿನ ಗಮನ ನೀಡುತ್ತಿದ್ದು, ಹರಿಯಾಣ, ಗುಜರಾತ್‌ ಸೇರಿದಂತೆ ಮೂರು ಕಡೆಗಳಲ್ಲಿ ಇಥೆನಾಲ್ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಇಥೆನಾಲ್‌ನಿಂದ ಒಟ್ಟು ಬಳಕೆಯ ಶೇ 10 ರಷ್ಟು ಇಂಧನವನ್ನು ಪೂರೈಸಬಹುದಾಗಿದೆ’ ಎಂದರು.

*
ಮಿಥೆನಾಲ್‌ ಅನ್ನು ಇಂಧನವಾಗಿ ಬಳಕೆ ಮಾಡುವ ಕುರಿತು  ಕೇಂದ್ರ ಸರ್ಕಾರ ಶೀಘ್ರ ಅಧಿಸೂಚನೆ ಹೊರಡಿಸಲಿದೆ.
–ಡಾ. ವಿ.ಕೆ. ಸಾರಸ್ವತ್‌,
ನೀತಿ ಆಯೋಗದ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT