ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಭರಿಸಲಿದೆ ‘ಎಂಡಿಆರ್‌’ ಶುಲ್ಕ

ನಗದುರಹಿತ ವಹಿವಾಟು ಉತ್ತೇಜಿಸಲು ಸಂಪುಟದ ನಿರ್ಧಾರ
Last Updated 15 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಡೆಬಿಟ್‌ ಕಾರ್ಡ್‌ ಬಳಸಿ ₹ 2,000ವರೆಗಿನ ಮೊತ್ತ ಪಾವತಿಸುವುದರ ಮೇಲಿನ ‘ಎಂಡಿಆರ್‌’ ಶುಲ್ಕವನ್ನು ಕೇಂದ್ರ ಸರ್ಕಾರವೇ ಭರಿಸಲು ಮುಂದಾಗಿದೆ.

ನಗದುರಹಿತ (ಡಿಜಿಟಲ್‌) ವಹಿವಾಟು ಉತ್ತೇಜಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 2018ರ ಜನವರಿ 1ರಿಂದ ಎರಡು ವರ್ಷಗಳವರೆಗೆ ಈ ಉತ್ತೇಜನಾ ಕೊಡುಗೆ ಜಾರಿಯಲ್ಲಿ ಇರಲಿದೆ.

‘ಡೆಬಿಟ್‌ ಕಾರ್ಡ್‌, ಭೀಮ್‌ ಆ್ಯಪ್‌ ಅಥವಾ ಆಧಾರ್‌ ಆಧರಿಸಿದ ಪಾವತಿ ವ್ಯವಸ್ಥೆ ಮೂಲಕ ಹಣ ಪಾವತಿಸಿದ ಶುಲ್ಕವನ್ನು ಕೇಂದ್ರ ಸರ್ಕಾರವು ಬ್ಯಾಂಕ್‌ಗಳಿಗೆ ಮರು ಪಾವತಿಸಲಿದೆ. ಇದರಿಂದ ಬೊಕ್ಕಸಕ್ಕೆ ₹ 2,512 ಕೋಟಿ ಹೊರೆ ಬೀಳಲಿದೆ’ ಎಂದು ಕೇಂದ್ರ ಐ.ಟಿ ಸಚಿವ ರವಿಶಂಕರ್‌ ಪ್ರಸಾದ್‌ ತಿಳಿಸಿದ್ದಾರೆ.

‘₹ 2,000 ವರೆಗಿನ ಎಲ್ಲ ವಹಿವಾಟಿಗೆ ಸಂಬಂಧಿಸಿದಂತೆ ಇನ್ನು ಮುಂದೆ ಗ್ರಾಹಕರು ಮತ್ತು ವರ್ತಕರ ಮೇಲೆ ಎಂಡಿಆರ್‌ ರೂಪದಲ್ಲಿ ಹೆಚ್ಚಿನ ಹೊರೆ ಬೀಳುವುದಿಲ್ಲ. ಇದು ನಗದುರಹಿತ ವಹಿವಾಟು ಅಳವಡಿಸಿಕೊಳ್ಳಲು ಉತ್ತೇಜನ ನೀಡಲಿದೆ. ಕಡಿಮೆ ನಗದು ಆರ್ಥಿಕತೆಯತ್ತ ಸಾಗಲೂ ಇದರಿಂದ ಸಾಧ್ಯವಾಗಲಿದೆ’ ಎಂದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶುಕ್ರವಾರ ಇಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಚರ್ಮ, ಪಾದರಕ್ಷೆ ಉದ್ದಿಮೆಗೆ ಕೊಡುಗೆ: ಚರ್ಮೋದ್ಯಮ ಮತ್ತು ಪಾದರಕ್ಷೆ ತಯಾರಿಕೆ ವಲಯಕ್ಕೆ ಕೇಂದ್ರ ಸರ್ಕಾರವು ₹ 2,600 ಕೋಟಿಗಳ ವಿಶೇಷ ಕೊಡುಗೆ ಪ್ರಕಟಿಸಿದೆ. ಕೇಂದ್ರ ಸಚಿವ ಸಂಪುಟ ಈ ನಿರ್ಧಾರ ಕೈಗೊಂಡಿದೆ.

ಈ ಎರಡೂ ಉದ್ದಿಮೆಗಳಲ್ಲಿ ಮೂರು ವರ್ಷಗಳಲ್ಲಿ 3.24 ಲಕ್ಷ ಕೋಟಿ ಉದ್ಯೋಗ ಅವಕಾಶ ಸೃಷ್ಟಿಸಲು ಈ ಕೊಡುಗೆ ನೆರವಾಗಲಿದೆ. ಇದರಿಂದ ಚರ್ಮೋದ್ಯಮದ ಮೂಲಸೌಕರ್ಯಗಳ ಅಭಿವೃದ್ಧಿ, ಪರಿಸರ ಸಂಬಂಧಿ ಸಮಸ್ಯೆಗಳ ಪರಿಹಾರ, ಹೆಚ್ಚುವರಿ ಹೂಡಿಕೆ, ಉತ್ಪಾದನೆ ಹೆಚ್ಚಳ ಮತ್ತು ಉದ್ಯೋಗ ಸೃಷ್ಟಿ ಸಾಧ್ಯವಾಗಲಿದೆ ಎಂದು ಸರ್ಕಾರ ತಿಳಿಸಿದೆ.

ತೆರಿಗೆ ಉತ್ತೇಜನಾ ಕ್ರಮಗಳು ಬಂಡವಾಳ ಹೂಡಿಕೆಯನ್ನೂ ಉತ್ತೇಜಿಸಲಿವೆ. ಕಾರ್ಮಿಕ ಕಾಯ್ದೆಗಳಲ್ಲಿ ಸುಧಾರಣೆಗೆ ಕಾರಣವಾಗಲಿವೆ. ಪೂರಕ ಉದ್ದಿಮೆಗಳ ಬೆಳವಣಿಗೆಯೂ ಸಾಧ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಏನಿದು ಎಂಡಿಆರ್‌?
ಸರಕು ಮತ್ತು ಸೇವೆಗಳ ಖರೀದಿಗೆ ಬಳಕೆದಾರರು ಡೆಬಿಟ್‌ / ಕ್ರೆಡಿಟ್‌ ಕಾರ್ಡ್‌ ಬಳಸಿ ಪಾಯಿಂಟ್‌ ಆಫ್‌ ಸೇಲ್‌ ಮೂಲಕ ಹಣ ಪಾವತಿಸಿದ್ದಕ್ಕೆ ವರ್ತಕರು ಬ್ಯಾಂಕ್‌ಗಳಿಗೆ ಸಲ್ಲಿಸುವ ಶುಲ್ಕಕ್ಕೆ ಮರ್ಚಂಟ್‌ ಡಿಸ್ಕೌಂಟ್‌ ರೇಟ್‌ (ಎಂಡಿಆರ್‌) ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT