ಕನಕಪುರ

ಕಂದಾಯ ಇಲಾಖೆ ರೈತರ ಮನೆಬಾಗಿಲಿಗೆ

ರೈತರು ತಾಲ್ಲೂಕು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಕಂದಾಯ ಇಲಾಖೆಯ ಅಧಿಕಾರಿ, ಸಿಬ್ಬಂದಿಯನ್ನೇ ರೈತರ ಮನೆ ಬಾಗಿಲಿಗೆ ಕಳುಹಿಸಿ ಅವರ ಸಮಸ್ಯೆಗಳನ್ನು ಬಗೆಹರಿಸುವುದು ಇದರ ಉದ್ದೇಶವಾಗಿದೆ

ಕನಕಪುರ: ಸಾಕಷ್ಟು ವರ್ಷಗಳಿಂದ ರೈತರ ಪಹಣಿಯಲ್ಲಿ ಸಮಸ್ಯೆಗಳಿರುವುದನ್ನು ಗಮನಿಸಿರುವ ರಾಮನಗರ ಜಿಲ್ಲಾಡಳಿತ ಅದನ್ನು ಪರಿಹರಿಸಲು ಕಂದಾಯ ರೈತರ ಮನೆಬಾಗಿಲಿಗೆ ಎಂಬ ವಿನೂತನ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ. ಡಾ.ಬಿ.ಆರ್‌. ಮಮತ ತಿಳಿಸಿದರು.

ಕಸಬಾ ಹೋಬಳಿ ಚಿಕ್ಕಮುದುವಾಡಿ ಮತ್ತು ಅಳ್ಳಿಮಾರನಹಳ್ಳಿ ಗ್ರಾಮ ವ್ಯಾಪ್ತಿಯ ಗಾಣಾಳು ಗ್ರಾಮ ಮತ್ತು ಕಾಲೊನಿಗಳಿಗೆ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಮಾತನಾಡಿದರು.

ರೈತರು ತಾಲ್ಲೂಕು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಕಂದಾಯ ಇಲಾಖೆಯ ಅಧಿಕಾರಿ, ಸಿಬ್ಬಂದಿಯನ್ನೇ ರೈತರ ಮನೆ ಬಾಗಿಲಿಗೆ ಕಳುಹಿಸಿ ಅವರ ಸಮಸ್ಯೆಗಳನ್ನು ಬಗೆಹರಿಸುವುದು ಇದರ ಉದ್ದೇಶವಾಗಿದೆ ಎಂದರು.

ಖಾತೆದಾರರ ಹೆಸರು ತಿದ್ದುಪಡಿ, ವಿಸ್ತೀರ್ಣ ತಿದ್ದುಪಡಿ, ಬೆಳೆ ತಿದ್ದುಪಡಿ, ಪೌತಿಖಾತೆ, ವಿಭಾಗ ಪತ್ರದಂತೆ ಖಾತೆ, ಹಳೆಯ ದಾನ ಪತ್ರ/ವಿಲ್ ಪತ್ರದಂತೆ ಖಾತೆ, ಪೋಡಿ, ಹಳೆಯ ಕ್ರಯಪತ್ರದಂತೆ ಖಾತೆ, ಹಿಸ್ಸಾ/ಪೋಡಿ ಅದಲು-ಬದಲು, ಇಂಡೀಕರಣವಾಗದೆ ಇರುವ ಪ್ರಕರಣಗಳು, ಸಾಗುವಳಿ ಚೀಟಿಯಂತೆ ಖಾತೆ ಹಾಗೂ ಇತರೆ ಪ್ರಕರಣಗಳ ಸಮಸ್ಯೆಗಳನ್ನು ಬಗೆಹರಿಸಲು ಕಂದಾಯ ಇಲಾಖೆಯ ಗ್ರಾಮ ಸಹಾಯಕರು, ಗ್ರಾಮ ಲೆಕ್ಕಿಗರು ಹಾಗೂ ಅಧಿಕಾರಿಗಳು ರೈತರ ಮನೆ ಮನೆಗೆ ಭೇಟಿ ನೀಡಿ ಉಚಿತವಾಗಿ ಅರ್ಜಿ ನೀಡಿ ಅವರ ಜಮೀನಿನ ಸಮಸ್ಯೆ ಬಗೆಹರಿಸುವ ಪ್ರಯತ್ನವಾಗಿದೆ. ಜಿಲ್ಲೆಯ ಕನಕಪುರ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ
ಜಾರಿಗೊಳಿಸಲಾಯಿತು. ಅದರ ಯಶಸ್ಸಿನಿಂದ ಕನಕಪುರ ತಾಲ್ಲೂಕಿನಾದ್ಯಂತ ಈ ಪ್ರಕ್ರಿಯೆಯನ್ನು ಜಾರಿಗೊಳಿಸಲಾಗಿದೆ ಎಂದರು.

ಮೊದಲಿಗೆ ಪೋಡಿ ಮುಕ್ತ ಗ್ರಾಮ ಅಭಿಯಾನ ಚಾಲನೆಯಲ್ಲಿರುವ ಚಿಕ್ಕಮುದವಾಡಿಯಲ್ಲಿನ ರಾಜಶೇಖರ್ ಅವರ ಮನೆಗೆ ತೆರಳಿದ ಜಿಲ್ಲಾಧಿಕಾರಿ ಈ ಯೋಜನೆ ಸದುಪಯೋಗ ಪಡಿಸಿಕೊಂಡು ಸಮಸ್ಯೆ ಅಥವಾ ದಾಖಲಾತಿಗಳನ್ನು ಬಗೆಹರಿಸಿಕೊಳ್ಳುವಂತೆ ತಿಳಿಸಿದರು.

ನಂತರ ಹಲವು ಗ್ರಾಮಸ್ಥರ ಮನೆಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಯವರು ಕಂದಾಯ ಇಲಾಖೆಯಿಂದ ಹಮ್ಮಿಕೊಳ್ಳಲಾಗಿರುವ ಈ ಯೋಜನೆಯಡಿ ಸಿಬ್ಬಂದಿಗಳು ಮನೆ ಮನೆಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಹರಿಸಲು ಬರುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಂಡರು.

ಸರ್ಕಾರದ ಸೌಲಭ್ಯಗಳು ಜನರಿಗೆ ತಲುಪುತ್ತಿರುವ ಬಗ್ಗೆಯೂ ಖಾತ್ರಿ ಪಡಿಸಿಕೊಳ್ಳಲು ಅಂಗವಿಕಲರು, ಹಿರಿಯ ನಾಗರಿಕರನ್ನು ಭೇಟಿ ಮಾಡಿ ಮಾಸಾಶನ ತಲುಪುತ್ತಿರುವ ಬಗ್ಗೆ ವಿಚಾರಿಸಿದರು.

ಅಳ್ಳಿಮಾರನಳ್ಳಿಗೆ ಭೇಟಿ ನೀಡಿ ಗ್ರಾಮದಲ್ಲಿರುವ 186 ಕುಟುಂಬಗಳು, ರೈತರು 480 ಎಕರೆ ಪ್ರದೇಶಗಳಲ್ಲಿ ಬೆಳೆದಿರುವ ಬೆಳೆಗಳ ಬಗ್ಗೆ ಮಾಹಿತಿ, ಕೆರೆಕಟ್ಟೆಗಳು ತುಂಬಿರುವ ಬಗ್ಗೆ ಆ ಗ್ರಾಮದಲ್ಲಿರುವ 89 ಬೋರ್‍ವೆಲ್‍ಗಳ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದರು.

ಗಾಣಾಳು ಗ್ರಾಮದಲ್ಲಿ ಮನೆ ಮನೆಗೆ ಭೇಟಿ ನೀಡಿ ಜಯಮ್ಮ, ದಾಸೇಗೌಡ ಅವರಿಂದ ಕಟಾವು ಮಾಡಿದ ನಂತರ ಭತ್ತ, ರೇಷ್ಮೆ ಮೊದಲಾದ ಬೆಳೆಗಳಿಗೆ ರೋಗ ಹರಡದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ಸಾರ್ವಜನಿಕರಿಗೆ ತಿಳಿಸಿದರು.

ತಹಶೀಲ್ದಾರ್ ಆರ್‌. ಯೋಗಾನಂದ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಚಿಕ್ಕಮುದವಾಡಿ, ಅಳ್ಳಿಮಾರನಹಳ್ಳಿ ಗ್ರಾಮಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದರು

Comments
ಈ ವಿಭಾಗದಿಂದ ಇನ್ನಷ್ಟು

ಮಾಗಡಿ
ಮಳೆಯಿಂದ ಮಾವು ಫಸಲು ನಾಶ

ಮಾಗಡಿ ‘ತಾಲ್ಲೂಕಿನಲ್ಲಿ ಬೀಳುತ್ತಿರುವ ಜೋರು ಮಳೆಯಿಂದಾಗಿ ಮಾವು ಬೆಳೆಗಾರರು ಕಂಗಾಲಾಗಿದ್ದೇವೆ’ ಎಂದು ನಾಯಕನ ಪಾಳ್ಯದ ರೈತ ರಾಜಾ ರಂಗಪ್ಪ ನಾಯಕ ಅವರು ಬೇಸರ ವ್ಯಕ್ತಪಡಿಸಿದರು. ...

18 Jun, 2018
ಹಣ ಉಳಿಸಿ ಗುಣಪಡಿಸುವ ‘ಜನೌಷಧಿ’

ರಾಮನಗರ
ಹಣ ಉಳಿಸಿ ಗುಣಪಡಿಸುವ ‘ಜನೌಷಧಿ’

18 Jun, 2018

ಚನ್ನಪಟ್ಟಣ
ಕಾಲುಬಾಯಿ ಜ್ವರ ಕುರಿತ ಬೀದಿ ನಾಟಕ 

ಜಾನುವಾರುಗಳಿಗೆ ಕಾಣಿಸಿಕೊಳ್ಳುತ್ತಿರುವ ಕಾಲುಬಾಯಿ ಜ್ವರದಿಂದ ಹೈನೋದ್ಯಮಕ್ಕೆ ದೊಡ್ಡ ಪೆಟ್ಟು ಬಿದ್ದು ರೈತರ ಜಂಘಾಬಲವೇ ಉಡುಗಿ ಹೋಗಿದೆ ಎಂದು ‘ನೇಗಿಲ ಯೋಗಿ ಸಾಂಸ್ಕೃತಿಕ ಟ್ರಸ್ಟ್’ ಕಾರ್ಯದರ್ಶಿ...

18 Jun, 2018

ರಾಮನಗರ
ಈದ್ ಉಲ್‌ ಫಿತ್ರ್‌ ಸಂಭ್ರಮ

ರಂಜಾನ್ ಉಪವಾಸದ ಮುಕ್ತಾಯದ ಬಳಿಕ ಈದ್‌ ಉಲ್‌ ಫಿತ್ರ್‌ ಅನ್ನು ಮುಸ್ಲಿಮರು ಶನಿವಾರ ಸಂಭ್ರಮದಿಂದ ಆಚರಿಸಿದರು.

17 Jun, 2018

ರಾಮನಗರ
ಬಿಡದಿಯಲ್ಲಿ ನವ ಬೆಂಗಳೂರು ನಿರ್ಮಾಣಕ್ಕೆ ಚಿಂತನೆ

ಬೆಂಗಳೂರುನಗರಿಗೆ ಪರ್ಯಾಯವಾಗಿ ‘ನವ ಬೆಂಗಳೂರು’ ನಿರ್ಮಾಣಕ್ಕೆ ಚಿಂತನೆ ನಡೆದಿದೆ. ಬಿಡದಿ ಭಾಗದಲ್ಲಿ ಈ ಪರ್ಯಾಯ ನಗರಿ ನಿರ್ಮಾಣಕ್ಕೆ ಯೋಜಿಸಿರುವುದು ವಿಶೇಷ.

17 Jun, 2018