ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರಿ ಮೀರಿದ ಕಬ್ಬು ನಾಟಿ; ಹೆಚ್ಚಿದ ಒಲವು

Last Updated 16 ಡಿಸೆಂಬರ್ 2017, 6:46 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯ ವ್ಯಾಪ್ತಿಯಲ್ಲಿ ಖಾಸಗಿ, ಸಹಕಾರಿ ವಲಯದಲ್ಲಿ ಎರಡು ಹೊಸ ಸಕ್ಕರೆ ಕಾರ್ಖಾನೆಗಳ ಆರಂಭ, ಬೆಳೆಗಾರರಿಂದ ಕಬ್ಬು ಖರೀದಿಸುವಿಕೆಯಲ್ಲಿ ಕಾರ್ಖಾನೆಗಳ ನಡುವೆ ಧಾರಣೆಯ ಪೈಪೋಟಿ ಏರ್ಪಟ್ಟಿದೆ. ತೊಗರಿ, ಸಜ್ಜೆ, ಮೆಕ್ಕೆಜೋಳ ಸೇರಿದಂತೆ ಇನ್ನಿತರೆ ಕೃಷಿ ಉತ್ಪನ್ನಗಳ ಧಾರಣೆ ಕುಸಿತ. ಕಬ್ಬಿನ ಬೆಳೆ ನಿರ್ವಹಣೆಗೆ ಕಡಿಮೆ ಖರ್ಚು, ಕಾಲುವೆ, ನದಿ ನೀರಿನ ನೀರಾವರಿ ಸೌಲಭ್ಯ ಹೆಚ್ಚಿದಂತೆ ಕಬ್ಬು ಬೆಳೆಯುವ ಪ್ರದೇಶವೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.

ಮುಂಗಾರು ಹಂಗಾಮಿನಲ್ಲಿ ಎರಡು ಸಾವಿರ ಹೆಕ್ಟೇರ್‌ನಲ್ಲಿ ಕಬ್ಬು ನಾಟಿಯ ಗುರಿಯನ್ನು ಜಿಲ್ಲಾ ಕೃಷಿ ಇಲಾಖೆ ಹೊಂದಿದ್ದರೆ, ಹತ್ತು ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಹೊಸದಾಗಿ ಕಬ್ಬು ನಾಟಿ ನಡೆದಿತ್ತು. ಇದೀಗ ಹಿಂಗಾರು ಹಂಗಾಮಿನಲ್ಲೂ ಸಹ ನಾಟಿಯ ಪ್ರದೇಶ ಹೆಚ್ಚಿದೆ.

6 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬು ನಾಟಿ ಮಾಡುವ ಗುರಿ ಇತ್ತು. ಆದರೆ, ಈಗಾಗಲೇ 7,500ಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬಿನ ನಾಟಿ ನಡೆದಿದೆ. ನೀರಾವರಿ ಆಸರೆಯಲ್ಲಿ ಇನ್ನೂ ಕಬ್ಬಿನ ನಾಟಿಗೆ ಅವಕಾಶವಿದ್ದು, ದುಪ್ಪಟ್ಟುಗೊಳ್ಳುವ ನಿರೀಕ್ಷೆ ಕೃಷಿ ಇಲಾಖೆಯದ್ದು.

‘ಜಲಸಂಪನ್ಮೂಲ ಇಲಾಖೆ ಆಲಮಟ್ಟಿ ಜಲಾಶಯವನ್ನು ಕೇಂದ್ರೀಕರಿಸಿಕೊಂಡು, ಜಿಲ್ಲೆಗೆ ಲಭಿಸಿರುವ ನೀರನ್ನು ಸದುಪಯೋಗಪಡಿಸಿಕೊಳ್ಳಲು, ಕಾಲುವೆ ಕಾಮಗಾರಿಗಳಿಗೆ ಶರವೇಗ ನೀಡಿ, ಪೂರ್ಣಗೊಳಿಸಿ ನೀರು ಹರಿಸುತ್ತಿರುವುದು ಬೆಳೆಗಾರರ ನೀರಿನ ಬರ ನೀಗಿಸಿದೆ. ಇದರ ಪರಿಣಾಮ ಬಹುತೇಕರು ಕಡಿಮೆ ಖರ್ಚಿನ ನಿರ್ವಹಣೆಯ ಕಬ್ಬು ಬೆಳೆಯಲು ಒಲವು ತೋರುತ್ತಿರುವುದರಿಂದ, ಹೊಸದಾಗಿ ಕಬ್ಬಿನ ನಾಟಿ ಮಾಡುವವರ ಸಂಖ್ಯೆಯೂ, ಪ್ರದೇಶವೂ ಹೆಚ್ಚಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ಡಾ.ಬಿ.ಮಂಜುನಾಥ್‌ ತಿಳಿಸಿದರು.

‘ವಿಜಯಪುರ ತಾಲ್ಲೂಕಿನ ಮಮದಾಪುರ ಹೋಬಳಿ, ಬಸವನಬಾಗೇವಾಡಿ ತಾಲ್ಲೂಕಿನ ಕೊಲ್ಹಾರ ಹೋಬಳಿ, ಮುದ್ದೇಬಿಹಾಳ ತಾಲ್ಲೂಕಿನ ತಾಳಿಕೋಟೆ, ನಾಲತವಾಡ ಭಾಗ, ಸಿಂದಗಿ ತಾಲ್ಲೂಕಿನ ದೇವರಹಿಪ್ಪರಗಿ ಭಾಗ ಹೊರತುಪಡಿಸಿ ಸಿಂದಗಿ, ಆಲಮೇಲ ಹೋಬಳಿಯಲ್ಲಿ, ಇಂಡಿ ತಾಲ್ಲೂಕಿನ ಚಡಚಣ ಭಾಗ ಹೊರತುಪಡಿಸಿ ಎಲ್ಲೆಡೆ ಕಬ್ಬಿನ ನಾಟಿ ನಡೆದಿದೆ.

ಒಂದೆರೆಡು ವರ್ಷಗಳಲ್ಲಿ ಜಿಲ್ಲೆ ಸಂಪೂರ್ಣ ನೀರಾವರಿಗೊಳಪಡಲಿದ್ದು, ಬಹುತೇಕರು ಕಬ್ಬು ಬೆಳೆಯಲು ಮುಂದಾಗಲಿದ್ದಾರೆ. ಆಗ ನಾಟಿಯ ಪ್ರಮಾಣವೂ ದುಪ್ಪಟ್ಟು, ನಾಲ್ಕೈದು ಪಟ್ಟು ಹೆಚ್ಚಲಿದೆ’ ಎಂದು ಕೃಷಿ ಇಲಾಖೆಯ ತಾಂತ್ರಿಕ ವಿಭಾಗದ ಅಧಿಕಾರಿ ಎ.ಪಿ.ಬಿರಾದಾರ ಮಾಹಿತಿ ನೀಡಿದರು.

‘ಹಿಂದಿನ ವರ್ಷದಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ 54,000 ಹೆಕ್ಟೇರ್‌ನಲ್ಲಿ ಕಬ್ಬು ಬೆಳೆಯಿದ್ದರೆ, ಪ್ರಸ್ತುತ ಸಾಲಿನಲ್ಲಿ ಇಲ್ಲಿವರೆಗೂ 51,000 ಹೆಕ್ಟೇರ್‌ನಲ್ಲಿ ಬೆಳೆಯಿದೆ. ಹೊಸದಾಗಿ ನಾಟಿಯಾಗುವುದು ಬಿರುಸುಗೊಂಡರೆ, ಹಿಂದಿನ ವರ್ಷದ ದಾಖಲೆ ಸರಿಗಟ್ಟಲಿದೆ’ ಎಂದು ಹೇಳಿದರು.

* * 

ವಿಜಯಪುರ ಜಿಲ್ಲೆಯಲ್ಲಿ ಈಚೆಗೆ ಕಾರ್ಖಾನೆಗಳ ಸಂಖ್ಯೆಯೂ ಹೆಚ್ಚಿದೆ. ಕಬ್ಬಿನ ಧಾರಣೆಯೂ ಚಲೋ ಸಿಗಲಿದೆ ಎಂಬ ಭರವಸೆಯಿಂದ ಕಬ್ಬು ಬೆಳೆಯುವವರ ಸಂಖ್ಯೆ, ಪ್ರದೇಶ ಹೆಚ್ಚಳಗೊಂಡಿದೆ
ಡಾ.ಬಿ.ಮಂಜುನಾಥ್‌
ಜಂಟಿ ಕೃಷಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT