ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಿಂದ ಮಾತ್ರ ಅಭಿವೃದ್ಧಿ: ಸಿದ್ದರಾಮಯ್ಯ

Last Updated 16 ಡಿಸೆಂಬರ್ 2017, 7:16 IST
ಅಕ್ಷರ ಗಾತ್ರ

ಗಂಗಾವತಿ: ‘ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದಾರೆ. ಆದರೆ ನಿಜವಾಗಿಯೂ ಇದು ಬಿಜೆಪಿಯಿಂದ ಸಾಧ್ಯವಿಲ್ಲ. ಸಬ್‌ ಕಾ ಸಾಥ್ ಸಬ್‌ ಕಾ ವಿಕಾಸ್ ಕೇವಲ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದ ವೇದಿಕೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಸಿದ್ದರಾಮಯ್ಯ ಬಿಜೆಪಿ, ಜೆಡಿಎಸ್ ವಿರುದ್ಧ ಹರಿಹಾಯ್ದರು.

‘ಬಿಜೆಪಿ ಕೇವಲ ಹಿಂದುತ್ವದ ಅಡಿಯಲ್ಲಿ ಕೆಲಸ ಮಾಡುತ್ತದೆ. ಅವರಿಗೆ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರು ಬೇಕಿಲ್ಲ. ಕೋಮು ಭಾವನೆ ಉಂಟು ಮಾಡುವುದು ಅವರ ಮನಃಸ್ಥಿತಿ, ಸಮಾಜ, ಜಾತಿ, ವರ್ಗ, ಧರ್ಮ ಮತ್ತು ಜನರ ಮಧ್ಯೆ ಕಿಚ್ಚು ಹೊತ್ತಿರುವುದು ಬಿಜೆಪಿಗರ ಧ್ಯೇಯ’ ಎಂದು ಕುಟುಕಿದರು.

‘ಗುಂಡ್ಲುಪೇಟೆ, ನಂಜನಗೂಡು ಚುನಾವಣೆ ಪೂರ್ವದಲ್ಲಿ ಮಿಷನ್ 150 ಎಂದು ಓಡಾಡುತ್ತಿದ್ದ ಯಡಿಯೂರಪ್ಪ, ಉಪ ಚುನಾವಣೆಯಲ್ಲಿ ಸೋಲುತ್ತಿದ್ದಂತೆಯೇ ವರಸೆ ಬದಲಿಸಿದ್ದಾರೆ. ಈ ರಾಜ್ಯ ಕಂಡ ಅತ್ಯಂತ ಭ್ರಷ್ಟ ಸಿಎಂ ಯಡಿಯೂರಪ್ಪ ಎಂದು ಜರಿದರು.

‘ಯಡಿಯೂರಪ್ಪ, ಅನಂತಕುಮಾರ ಹೆಗ್ಡೆ, ನಳೀನ್ ಕುಮಾರ ಕಟೀಲ್, ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ ಸೇರಿದಂತೆ ಬಹುತೇಕ ಬಿಜೆಪಿಗರು ಅನಾಗರಿಕರು. ಅವರಿಗೆ ಸಂಸ್ಕಾರ, ಸಂಸ್ಕೃತಿ ಸಂಸದೀಯ ಭಾಷೆ ಎಂಬುವುದು ಗೊತ್ತಿಲ್ಲ. ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ಅವರಿಗೆ ನಂಬಿಕೆ ಇಲ್ಲ ಎಂದರು.

ಬಿಜೆಪಿಗರು 150 ಸ್ಥಾನದ ಕನಸು ಕಾಣುತ್ತಿದ್ದು, ಕೇವಲ 50 ಸ್ಥಾನ ಪಡೆಯಲು ಸಾಧ್ಯವಾಗದು. ಇನ್ನೂ ಜೆಡಿಎಸ್‌ ಕೇವಲ 25 ಸ್ಥಾನ ಸಿಕ್ಕರೆ ಅದೇ ದೊಡ್ಡ ಸಾಧನೆ. ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ, ಶಾಸಕ ಇಕ್ಬಾಲ್ ಅನ್ಸಾರಿ ಮಾತನಾಡಿದರು. ಶಾಸಕರಾದ ಶಿವರಾಜ ತಂಗಡಗಿ, ಬಾದರ್ಲಿ ಹಂಪನಗೌಡ, ರಾಘವೇಂದ್ರ ಹಿಟ್ನಾಳ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವಿರೂಪಾಕ್ಷಗೌಡ, ನಗರಸಭೆ ಅಧ್ಯಕ್ಷೆ ಸಣ್ಣ ಹುಲಿಗೆಮ್ಮ ಇದ್ದರು.

ನಿದ್ರೆಗೆ ಜಾರಿಗೆ ಸಿಎಂ

ಬೆಳಿಗ್ಗೆ ಕುಷ್ಟಗಿ, ಮಧ್ಯಾಹ್ನ ಕನಕಗಿರಿ ಹಾಗೂ ಸಂಜೆ ಗಂಗಾವತಿ ನಗರದ ಸತತ ಕಾರ್ಯಕ್ರಮಗಳಿಂದ ಬಳಲಿದಂತೆ ಕಂಡ ಸಿಎಂ ಸಿದ್ದರಾಮಯ್ಯ ವೇದಿಕೆಯಲ್ಲಿ ಕಿರು ನಿದ್ರೆಗೆ ಜಾರಿದರು. ಪಕ್ಕದಲ್ಲಿದ್ದ ಸಚಿವ ಬಸವರಾಜ ರಾಯರೆಡ್ಡಿ ಎರಡು ಬಾರಿ ಮುಖ್ಯಮಂತ್ರಿ ಅವರ ಕೈ ಅಲುಗಾಡಿಸುವ ಮೂಲಕ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT