ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಅತ್ಯಮೂಲ್ಯ, ಮಿತಬಳಕೆ ಇರಲಿ

Last Updated 16 ಡಿಸೆಂಬರ್ 2017, 8:30 IST
ಅಕ್ಷರ ಗಾತ್ರ

ದೇವನಹಳ್ಳಿ: ರೈತರು ಕಡಿಮೆ ನೀರಿನಲ್ಲಿ ಸಮಗ್ರ ಬೇಸಾಯ ಅಳವಡಿಸಿಕೊಂಡರೆ ಹೆಚ್ಚು ಅನುಕೂಲವಾಗಲಿದೆ ಎಂದು ಜಿಕೆವಿಕೆ ಬೇಸಾಯ ಶಾಸ್ತ್ರ ನಿವೃತ್ತ ಪ್ರಾಧ್ಯಾಪಕ ಡಾ.ನಾಗರಾಜ್ ತಿಳಿಸಿದರು. ಶಾಂತಫಾರಂ ಪ್ರಗತಿ ಪರ ರೈತ ಕೆ.ಎಸ್ ಹರೀಶ್ ಅವರ ತೋಟದಲ್ಲಿ ಶುಕ್ರವಾರ ಭತ್ತ ಬೆಳೆಯ ಕ್ಷೇತ್ರೋತ್ವವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ತಲಾಂತರದಿಂದ ವಿವಿಧ ತಳಿಯ ಭತ್ತಗಳನ್ನು ರೈತರು ಬೆಳೆಯುತ್ತಿದ್ದಾರೆ. ನೀರಿನ ಲಭ್ಯತೆ ಕಡಿಮೆಯಿಂದಾಗಿ ರೈತರು ಕೈಬಿಡುತ್ತಿದ್ದಾರೆ. ವಿದೇಶದಲ್ಲಿ ಪ್ರಾಕೃತಿಕ ಸಂಪತ್ತಾಗಿರುವ ನೀರನ್ನು ದ್ರವರೂಪದ ಚಿನ್ನ ಎಂದು ಕರೆಯುತ್ತಾರೆ. ನೀರನ್ನು ಬಳಸುವುದು ಮತ್ತು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಶೇ 70 ರಷ್ಟು ಕೃಷಿಗೆ, ಶೇ 30 ರಷ್ಟು ಕುಡಿಯಲು ನೀರನ್ನು ಬಳಸಿಕೊಳ್ಳಲಾಗುತ್ತಿದೆ’ ಎಂದರು.

ರಾಜ್ಯದಲ್ಲಿ ಒಟ್ಟಾರೆ 13.5 ಲಕ್ಷ ಎಕರೆ ನೀರಾವರಿ ವಿಸ್ತರಣೆ ಇದೆ. ಇದಕ್ಕೆ 650 ಟಿಎಂಸಿ ನೀರು ಬೇಕು. ಕಬ್ಬು ಬೆಳೆಗೆ ಶೇ 27 ರಷ್ಟು ಬಳಕೆ ಮಾಡಲಾಗುತ್ತಿದೆ. ರಾಜ್ಯಕ್ಕೆ ಒಟ್ಟು 1,600 ಟಿಎಂಸಿ ನೀರು ಬೇಡಿಕೆ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ನೂರಾರು ಟಿಎಂಸಿ ಮಳೆ ನೀರು ವ್ಯರ್ಥವಾಗಿ ಸಮುದ್ರದ ಪಾಲಾಗುತ್ತಿದೆ. ಅನೇಕ ದಶಕಗಳು ಕಳೆದರೂ ನೀರು ಹಂಚಿಕೆ ವ್ಯಾಜ್ಯಗಳಿಗೆ ಪರಿಹಾರ ಸಿಕ್ಕಿಲ್ಲ ಎಂದರು.

ಭತ್ತ ಬೆಳೆಯಲು ಅನೇಕ ತಳಿ ಮತ್ತು ವಿಧಾನಗಳಿವೆ. ನೀರನ್ನು ಗದ್ದೆಯಲ್ಲಿ ನಿಲ್ಲಿಸಿ ಮತ್ತು ಕೆಸರು ಗದ್ದೆಯನ್ನಾಗಿಸಿ ಭತ್ತ ಬೆಳೆಯುವ ಪರಿಪಾಠ ಈ ಹಿಂದಿನಿಂದ ಬಂದಿದೆ. ಇದೊಂದು ಭ್ರಮೆ ಎಂಬುದನ್ನು ವಿಜ್ಞಾನಿಗಳು ಸಾಬೀತು ಮಾಡಿದ್ದಾರೆ. ಒಂದು ಕೊಯ್ಲು ಭತ್ತ ಬೆಳೆಯಲು ಅರ್ಧ ಎಕರೆಗೆ ಕನಿಷ್ಠ 150 ಸೆಂ.ಮೀ ಮಳೆ ಬೇಕು. ಇದೇ ನೀರನ್ನು ಶೇ 60ರಷ್ಟು ಉಳಿಸಿ ಭತ್ತ ಬೆಳೆಯಲು ಏರೋಬಿಕ್ ಪದ್ಧತಿಯಿಂದ ಸಾಧ್ಯವಿದೆ ಎಂದರು.

ಸತತ ಐದು ವರ್ಷಗಳ ಸಂಶೋಧನೆಯ ಫಲವಾಗಿ ಗದ್ದೆಯಲ್ಲಿ ನೀರು ನಿಲ್ಲಿಸದೇ ಹನಿ ನೀರಾವರಿ ಮೂಲಕ ಮಣ್ಣಿನ ಫಲವತ್ತತೆಯನ್ನು ಉಳಿಸಿಕೊಂಡು ಅತ್ಯುತ್ತಮ ಇಳುವರಿ ಪಡೆಯಬಹುದು. ಮಳೆಗಾಲದಲ್ಲಿ ಈ ಪದ್ಧತಿ ಉತ್ತಮ. ಬೇಸಿಗೆಯಲ್ಲಿ ಇದನ್ನು ಮಾಡಬಾರದು ಎಂದರು.

ಕೃಷಿ ವಿಜ್ಞಾನ ಕೇಂದ್ರ ಜಿಲ್ಲಾ ಹಿರಿಯ ವಿಜ್ಞಾನಿ ಡಾ.ಕೆ.ಎಸ್.ಶ್ರೀನಿವಾಸಪ್ಪ ಮಾತನಾಡಿ, ಲಭ್ಯತೆ ಕಡಿಮೆ ಇದ್ದರೂ ನೀರನ್ನು ವಿವಿಧ ರೀತಿಯಲ್ಲಿ ವ್ಯರ್ಥ ಮಾಡುತ್ತಿದ್ದೇವೆ. 5,500 ರಿಂದ 6 ಸಾವಿರ ಲೀಟರ್ ನೀರಿನಿಂದ ಒಂದು ಕೆ.ಜಿ ಭತ್ತ ಬೆಳೆಯಬೇಕು. ಏರೋಬಿಕ್ ಪದ್ಧತಿಯಿಂದ ನೀರು ಕಡಿಮೆ ಉತ್ಪಾದನಾ ವೆಚ್ಚ ತಗ್ಗಿಸಬಹುದು. ಮಣ್ಣು ಮತ್ತು ನೀರಿನ ಸಂರಕ್ಷಣೆ ರೈತರಿಗೆ ಅತಿಮುಖ್ಯ. ಬಹು ವಾರ್ಷಿಕ ಬೆಳೆಗಳ ನಡುವೆ ಮಧ್ಯಂತರ ಬೆಳೆ ಭತ್ತ ಉತ್ತಮ ಎಂದರು.

ಕೃಷಿ ವಿಶ್ವವಿದ್ಯಾನಿಲಯ ಸಂಶೋಧನಾ ನಿರ್ದೆಶಕ ಡಾ.ವೈಜಿ ಷಡಕ್ಷರಿ ಮಾತನಾಡಿ, ಹವಾಮಾನಕ್ಕೆ ಅನುಗುಣವಾಗಿ ತಾಂತ್ರಿಕತೆ ಬಳಸಿಕೊಂಡು ಬೆಳೆಗಳನ್ನು ಬೆಳೆಯಬೇಕು. ಏರೋಬಿಕ್ ಪದ್ಧತಿ ಭತ್ತ ಬೆಳೆಗೆ ಉತ್ಕೃಷ್ಟವಾಗಿದೆ ಎಂದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ, ವಿಜ್ಞಾನಿಗಳಾದ ಡಾ.ಸೋಮಶೇಖರ್, ವಿ.ಭಾಸ್ಕರ್, ಜಿ.ಜಿ ಶಶಿಧರ್, ರೈತ ಮುಖಂಡರು ಇದ್ದರು.

ಭತ್ತ ಬೆಳೆಗಾರ ರೈತ ಕೆ.ಎಸ್ ಹರೀಶ್ ಮಾತನಾಡಿ, ಪ್ರತಿವರ್ಷ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಕಾವೇರಿ ನೀರಿಗಾಗಿ ಗಲಾಟೆ ಮಾಡಿಕೊಳ್ಳುತ್ತವೆ ಎಂದು ಅಭಿಪ್ರಾಯ ಪಟ್ಟರು.

ಕೆಸರು ಗದ್ದೆಯಲ್ಲಿ ರೈತರು ಭತ್ತ ಬೆಳೆಯುವುದನ್ನು ಅಯಾ ರಾಜ್ಯಗಳು ನಿಷೇಧಿಸಬೇಕು ಎಂದು ಅವರು ಹೇಳಿದರು. ಉಚಿತ ಅಕ್ಕಿ ವಿತರಣೆ, ಅಮ್ಮ ಮತ್ತು ಇಂದಿರಾ ಕ್ಯಾಂಟೀನ್‌ನಿಂದ ರೈತರನ್ನು ಮತ್ತು ಕಾರ್ಮಿಕರನ್ನು ಸರ್ಕಾರ ಸೋಮಾರಿಗಳನ್ನಾಗಿ ಮಾಡುತ್ತಿದೆ ಎಂದರು.

ರೈತರಿಗೆ ತಾಂತ್ರಿಕ ಸಲಹೆ ನೀಡಿ ಕೈಗೆ ಕೆಲಸ ನೀಡಬೇಕು. ಕೃಷಿ ಇಲಾಖೆ ಕೃಷಿ ಹೊಂಡದಂತಹ ಉತ್ತಮ ಯೋಜನೆಯಿಂದ ರೈತರಿಗೆ ಅನುಕೂಲವಾಗಿದೆ. ನೀರಾವರಿ ಇರುವ ಜಿಲ್ಲೆಯಲ್ಲಿನ ರೈತರಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಬಯಲು ಸೀಮೆ ರೈತರು ಭತ್ತ ಬೆಳೆಯಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT