ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ, ಜೆಡಿಎಸ್‌ ನಿರಾಳ: ಕಾಂಗ್ರೆಸ್‌ನಲ್ಲಿ ಕಸರತ್ತು

Last Updated 16 ಡಿಸೆಂಬರ್ 2017, 8:45 IST
ಅಕ್ಷರ ಗಾತ್ರ

ಬಳ್ಳಾರಿ: ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಜಿಲ್ಲೆಯ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್‌ ವಿಚಾರದಲ್ಲಿ ಸದ್ಯಕ್ಕೆ ಬಿಜೆಪಿ ಮತ್ತು ಜೆಡಿಎಸ್‌ ನಿರಾಳವಾಗಿದ್ದರೆ, ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ಕಸರತ್ತು ಬಿರುಸಿನಿಂದ ನಡೆದಿದೆ.

ಹಿಂದಿನ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದಿದ್ದ ಬಿ.ನಾಗೇಂದ್ರ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ. ಆ ಬಗ್ಗೆ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಚನ್ನಬಸವನಗೌಡ ಅವರು ಕಾರ್ಯಕರ್ತರ ಸಭೆಗಳಲ್ಲಿ ಸ್ಪಷ್ಟ ಮುನ್ಸೂಚನೆಗಳನ್ನೂ ಬಿಟ್ಟುಕೊಟ್ಟಿದ್ದಾರೆ.

‘ಸ್ಪರ್ಧಿಸುವುದಾದರೆ ಬಿಜೆಪಿಯಿಂದ ಮಾತ್ರ’ ಎಂದು ನಾಗೇಂದ್ರ ಅವರೂ ಆಪ್ತರ ನಡುವೆ ಗಟ್ಟಿದನಿಯಲ್ಲಿ ಹೇಳಿಕೊಂಡಿದ್ದಾರೆ. ನಾಗೇಂದ್ರ ಅಕ್ರಮ ಗಣಿಗಾರಿಕೆಯ ಆರೋಪವನ್ನೂ ಎದುರಿಸುತ್ತಿದ್ದಾರೆ.

2008ರಲ್ಲಿ ಅವರು ಬಿಜೆಪಿಯಿಂದಲೇ ಸ್ಪರ್ಧಿಸಿ ಗೆದ್ದಿದ್ದರು. ಈಗ ಅವರೊಂದಿಗೆ ಟಿಕೆಟ್‌ಗಾಗಿ ಪೈಪೋಟಿ ನಡೆಸುವವರು ಪಕ್ಷದಲ್ಲಿ ಸದ್ಯಕ್ಕೆ ಯಾರೂ ಕಂಡುಬಂದಿಲ್ಲ. ಇದೇ ಕಾರಣಕ್ಕೆ ಬಿಜೆಪಿ ನಿರಾಳವಾಗಿದೆ.

ಜೆಡಿಎಸ್‌ನಲ್ಲೂ ಇದೇ ಸನ್ನಿವೇಶವಿದೆ. ಕಾಂಗ್ರೆಸ್‌ನಿಂದಲೇ ಎರಡು ಬಾರಿ ಸ್ಪರ್ಧಿಸಿ ಶಾಸಕರಾಗಿದ್ದ, ಬಿಜೆಪಿಯಲ್ಲೂ ಇದ್ದು ಬಂದಿರುವ ಎನ್‌.ಟಿ. ಬೊಮ್ಮಣ್ಣ ಜೆಡಿಎಸ್‌ ಸೇರಿದ್ದಾರೆ. ‘ಅನುಭವಿ ರಾಜಕಾರಣಿ’ಯಾಗಿರುವ ಅವರನ್ನೇ ಕಣಕ್ಕೆ ಇಳಿಸಲು ಪಕ್ಷ ನಿರ್ಧರಿಸಿದೆ.

ಅವರು 1999ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ, ಕಾಂಗ್ರೆಸ್‌ನ ಸಿರಾಜ್‌ ಶೇಖ್‌ ಅವರೆದುರು ಸೋತ ಬಳಿಕ, ಚುನಾವಣಾ ರಾಜಕೀಯದಲ್ಲಿ ಸಕ್ರಿಯರಾಗಿ ಪಾಲ್ಗೊಂಡಿರಲಿಲ್ಲ. 18 ವರ್ಷದ ಬಳಿಕ ಮತ್ತೆ ಅವರು ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ.

ಈ ‘ಅಜ್ಞಾತವಾಸ’ವನ್ನು ಪಕ್ಷ ಮತ್ತು ಬರಲಿರುವ ಚುನಾವಣೆ ಹೇಗೆ ಪರಿಹರಿಸುತ್ತದೆ ಎಂಬುದು ಕೂಡ ಕುತೂಹಲಕಾರಿಯಾಗಿದೆ. ಏಕೆಂದರೆ 1994ರಲ್ಲಿ ಜನತಾ ದಳದಿಂದ ಎನ್‌.ಎಂ.ನಬಿ ಅವರು ಗೆದ್ದಿದ್ದನ್ನು ಹೊರತುಪಡಿಸಿದರೆ, ಪಕ್ಷ ನಂತರ ಯಾರಿಗೂ ಸಮೀಪ ಸ್ಪರ್ಧೆಯನ್ನು ನೀಡಲು ಸಾಧ್ಯವಾಗಿಲ್ಲ.

ಕೊರತೆ: ಕಾಂಗ್ರೆಸ್‌ನಲ್ಲಿ ಮಾತ್ರ ‘ಗಟ್ಟಿ ಅಭ್ಯರ್ಥಿ’ಯೊಬ್ಬರ ಕೊರತೆ ಕಂಡುಬಂದಿದೆ. ಹಿಂದಿನ ಎರಡು ಚುನಾವಣೆಗಳಲ್ಲೂ ಸ್ಪರ್ಧಿಸಿ ಸೋತಿರುವ, ಈಗ ಜಿಲ್ಲಾ ಪಂಚಾಯಿತಿ ಸದಸ್ಯರಾಗಿರುವ ಎಸ್‌.ವೆಂಕಟೇಶ್‌ ಈ ಬಾರಿಯೂ ಆಕಾಂಕ್ಷಿ ಎನ್ನಲಾಗಿದೆ.

ದರೆ ಅವರಿಗಿಂತಲೂ, ಬೆಂಗಳೂರು ಮೂಲದ ಲೋಕೇಶ್‌ ನಾಯ್ಕ ಅವರ ಹೆಸರು ಕ್ಷೇತ್ರದಲ್ಲಿ ಹೆಚ್ಚು ಚಾಲ್ತಿಯಲ್ಲಿದೆ, ಕ್ಷೇತ್ರದ ಹಳ್ಳಿಗಳಲ್ಲಿ ಪ್ರತಿವಾರ ಮೂರು ದಿನ ಬೆಂಬಲಿಗರ ಪಡೆಯೊಂದಿಗೆ ಸಂಚರಿಸುತ್ತಿರುವ ಲೋಕೇಶ್‌ ಅದೇ ಕಾರಣಕ್ಕೆ ಚಾಲ್ತಿಯಲ್ಲಿದ್ದರೂ, ‘ಅವರು ಕ್ಷೇತ್ರದ ಹೊರಗಿನವರು’ ಎಂಬ ಅಂಶವೂ ಅದರೊಂದಿಗೆ ಸೇರಿಕೊಂಡಿದೆ. ಆದರೆ, ‘ಹಿಂದಿನ ಚುನಾವಣೆಗಳಲ್ಲಿ ಕ್ಷೇತ್ರದಲ್ಲಿ ಸುತ್ತಾಡಿ ಇಲ್ಲಿನ ನಾಡಿ ಮಿಡಿತವನ್ನು ಅವರು ಚೆನ್ನಾಗಿ ಅರಿತಿದ್ದಾರೆ. ಹೀಗಾಗಿಯೇ ಟಿಕೆಟ್‌ಗಾಗಿ ಪ್ರಬಲ ಪೈಪೋಟಿ ನಡೆಸಿದ್ದಾರೆ’ ಎಂಬ ಮಾತೂ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲೇ, ಬಿಜೆಪಿಯಿಂದ ನಾಗೇಂದ್ರ, ಕಾಂಗ್ರೆಸ್‌ನಿಂದ ಲೋಕೇಶ್‌ ಮತ್ತು ಜೆಡಿಎಸ್‌ನಿಂದ ಬೊಮ್ಮಣ್ಣ ಸ್ಪರ್ಧಿಸಿದರೆ ಪೈಪೋಟಿ ಹೇಗಿರಬಹುದು, ಯಾರು ಗೆಲ್ಲಬಹುದು, ಸೋಲಬಹುದು’ ಎಂಬ ಲೆಕ್ಕಾಚಾರದ ಚರ್ಚೆಯೂ ಕ್ಷೇತ್ರದಲ್ಲಿ ನಡೆದಿದೆ.

ಇಂಥ ಚರ್ಚೆಯ ನಡುವೆಯೇ, ಜೆಡಿಎಸ್‌ನಿಂದ ತಾಲ್ಲೂಕು ಘಟಕದ ಅಧ್ಯಕ್ಷ ಗುಪ್ಪಲ ಕಾರಪ್ಪ ಅವರೂ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಜಿ.ನಾಗಮಣಿ ಮತ್ತು ಸೋಮಪ್ಪ ನಾಯ್ಕ ಅವರೂ ಆಕಾಂಕ್ಷಿಯಾಗಿದ್ದಾರೆ ಎನ್ನಲಾಗಿದೆ.

‘ಟಿಕೆಟ್‌: ಹೈಕಮಾಂಡ್‌ ನಿರ್ಧಾರ’
ಬಳ್ಳಾರಿ: ‘ಟಿಕೆಟ್‌ ಯಾರಿಗೆ ದೊರಕುತ್ತದೆ ಅಥವಾ ನೀಡಲಾಗುತ್ತದೆ ಎಂಬ ಬಗ್ಗೆ ಪಕ್ಷದ ಹೈಕಮಾಂಡ್‌ ನಿರ್ಧರಿಸಲಿದೆ’ ಎಂದು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಬಿ.ವಿ.ಶಿವಯೋಗಿ ಅಭಿಪ್ರಾಯಪಟ್ಟರು.

‘ಸಾಮಾನ್ಯ ಕಾರ್ಯಕರ್ತರಾಗಿದ್ದ ವೆಂಕಟೇಶ್‌ ಅಂಥವರಿಗೇ ಟಿಕೆಟ್‌ ನೀಡಿದ್ದ ಪಕ್ಷ ನಮ್ಮದು. ಬ್ಲಾಕ್‌ ಕಾಂಗ್ರೆಸ್‌ ಸಮಿತಿಗಳ ವರದಿ, ಉಸ್ತುವಾರಿ ಸಚಿವರ ವರದಿಗಳನ್ನು ಆಧರಿಸಿ ಅಭ್ಯರ್ಥಿ ಆಯ್ಕೆ ನಡೆಯುತ್ತದೆ. ಈ ನಡುವೆ ಊಹಾಪೋಹಗಳು ಬರುತ್ತಲೇ ಇರುತ್ತವೆ. ಅವುಗಳನ್ನು ನಿಯಂತ್ರಿಸಲು ಆಗುವುದಿಲ್ಲ’ ಎಂದರು.

* * 

ನಾಗೇಂದ್ರ ಅವರನ್ನು ಹೊರತುಪಡಿಸಿದರೆ ಬೇರೆ ಯಾವ ಆಕಾಂಕ್ಷಿಯೂ ಸದ್ಯಕ್ಕೆ ಕಂಡುಬಂದಿಲ್ಲ
ಪಿ.ಚನ್ನಬಸವನಗೌಡ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT