ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಅಂಗೈಯಲ್ಲೇ ಸ್ವರ್ಗ ಕಾಣಬೇಕೆ?

Last Updated 16 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಕೂತಲ್ಲಿಯೇ ಕೈಲಾಸ ಸಿಗುವುದಿದ್ದರೆ ಮನಸೇನು ಒಲ್ಲೆ ಎನ್ನುವುದೆ? ಖಂಡಿತವಾಗಿಯೂ ಇಲ್ಲ ಎನ್ನುವ ಅನಿಸಿಕೆ ಸಾಮಾನ್ಯ. ಸುಖದ ಅಪೇಕ್ಷೆ ಇರದ ಮನಗಳು ಅಪರೂಪ. ಇಂತಹದೊಂದು ಸ್ಥಿತಿ ಮಕ್ಕಳಿಗೆ ಸಿಕ್ಕಿದರಂತೂ ಜಗವನೇ ಮರೆಯಬಲ್ಲರು. ಇಂದಿನ ತಂತ್ರಜ್ಞಾನ ಇಂತಹದೊಂದು ಸನ್ನಿವೇಶ ಸೃಷ್ಟಿಸಿದೆ. ಬೆರಳತುದಿಯಿಂದ, ಅದೂ  ನಾಜೂಕಾಗಿ, ಸಣ್ಣದೊಂದು ತೆರೆಯ ಮೇಲೆ ಅತ್ತಿತ್ತ ಸರಿಸಿದರೆ ಸಾಕು ಜಗತ್ತೇ ಕಣ್ಣೆದುರಿಗೆ ಬಂದು ನಿಲ್ಲುತ್ತದೆ. ಕಂಪ್ಯೂಟರ್‌ ಗೇಮ್‌, ಮನರಂಜನೆಯಲ್ಲಿ ಅಡಗಿರುವ ಸತ್ವವೇ ಇದು. ಆದರೆ, ನಾಳೆಯ ಪ್ರಜೆಗಳು ಇಂತಹದೊಂದು ಕನಸಿನ ಕೈಲಾಸವನ್ನು ನೆಚ್ಚಿ ಬದುಕಲು ಸಾಧ್ಯವೇ? ಎನ್ನುವುದು ಪೋಷಕರ ಕಳವಳ.

ಯುವ ಮನಸ್ಸುಗಳ ಉತ್ಸಾಹ, ನವೋನ್ಮಾದಗಳನ್ನು ವೃದ್ಧಿಸುತ್ತಿರುವ ಕಾಲಘಟ್ಟದ ಆರಂಭದ ದಿನಗಳಲ್ಲಿ ನಾವಿದ್ದೇವೆ. ಇಂದಿನ ಹದಿಹರೆಯ, ಯುವಜನರ ಭಾವೋದ್ರೇಕದ ವರ್ತನೆಗಳು ನವೀನ ರೀತಿಯದ್ದಾಗಿದ್ದು ‘ಅದರಿಂದ ಕೆಡಕು’ ಎನ್ನುವ ಭಾವನೆ ವ್ಯಾಪಕ. ಮನೆ, ಸಮುದಾಯದ ಅಸಹನೆ ಹೆಚ್ಚುತ್ತಿರುವುದಕ್ಕೆ ತಂತ್ರಜ್ಞಾನ ಒದಗಿಸಿರುವ ಸಲಕರಣೆಗಳ ಪ್ರಭಾವವಿದೆ ಎನ್ನುವುದು ನಿಜವಿರಲೂಬಹುದು. ಆದರೆ, ಕಾಲಕ್ಕನುಗುಣವಾಗಿ ಮೂಡಿಬರುವ ಹೊಸತನದ ವರ್ತನೆಗಳು ವ್ಯಕ್ತಿ ಹೊಂದಾಣಿಕೆಗೆ ಅಗತ್ಯವೆನ್ನುತ್ತಾರೆ ಮನೋತಜ್ಞರು. ಆಧುನಿಕ ತಂತ್ರಜ್ಞಾನ ಒದಗಿಸುತ್ತಿರುವ ಸಲಕರಣೆ, ಸೌಲಭ್ಯಗಳು ವ್ಯಕ್ತಿಯ ಬದುಕಿನ ಎಲ್ಲಾ ಆಯಾಮಗಳಿಗೂ ಬೆಂಬಲ ನೀಡುತ್ತಿರುವುದನ್ನು ನಿರಾಕರಿಸಲಾಗದು. ವ್ಯಕ್ತಿಯ ನಡೆನುಡಿಗಳಲ್ಲಿ, ಸಾಮಾಜಿಕ, ವೈಯಕ್ತಿಕ ವರ್ತನೆಗಳಲ್ಲಿ ಇದರ ಪ್ರಾಬಲ್ಯ ಹೆಚ್ಚುತ್ತಿರುವುದಂತೂ ಸ್ಪಷ್ಟ. ಇದರಿಂದಲೇ ಪ್ರಸರಣಗೊಳ್ಳುವ ಅನೇಕ ವರ್ತನೆಗಳು ಮನೆ, ಸಾಮಾಜಿಕ ಪರಿಸರದೊಂದಿಗೆ ಬೆರೆತು ನೂತನ ವ್ಯಕ್ತಿತ್ವಗಳನ್ನು ಸೃಷ್ಟಿಸುತ್ತಿರಲೂಬಹುದು.

ಹೀಗೆ ಅನಿಸುವುದಕ್ಕೆ ಮುಖ್ಯ ಕಾರಣ ತಂತ್ರಜ್ಞಾನದ ಆಯಾಮಗಳೊಂದಿಗೆ ಮಕ್ಕಳ ಮನೋಪಕ್ವತೆ ಮತ್ತು ವಿಕಾಸ ಆಗುತ್ತಿರುವುದು. ಸಲೀಸಾಗಿ ಮೊಬೈಲ್‌, ಕಂಪ್ಯೂಟರ್‌ಗಳೊಂದಿಗೆ ಬೆರೆತು ಬಲಶಾಲಿಗಳಂತೆ ವರ್ತಿಸುವ ಮಕ್ಕಳ ಸಂಖ್ಯೆ ದಿನೇ ದಿನೇ ಏರುತ್ತಿದೆ. ಅದರ ಮೂಲಕವೇ ಆಟ– ಪಾಠ– ಊಟ ಸಾಧ್ಯವೆನ್ನುವ ನಂಬಿಕೆ ಮಕ್ಕಳ  ಮನಸ್ಸಿಗೆ ಬಂದಿಲ್ಲವೆನ್ನುವುದು ಕಷ್ಟ. ಜಾಲತಾಣಗಳ ಆಟ– ನೋಟಗಳನ್ನೇ ಅವಲಂಬಿಸುತ್ತಿರುವ ಸಾಲಿನಲ್ಲೀಗ ಹಸುಳೆಗಳೂ ಇವೆ. ಮನರಂಜನೆ, ಮಾಹಿತಿಗಳೆರಡೂ ಒಟ್ಟಿಗೆ ಸಿಗುವಂತೆ ಮಾಡುವ ನೂತನ ತಂತ್ರಜ್ಞಾನ ಮಿದುಳಿಗೂ ಹಿತ ಕೊಡುವಂತಹದ್ದಿದ್ದರೂ ಇರಬಹುದು.

ಕಿರಿಯರಿರುವ ಮನೆಗಳಲ್ಲಿ ಇದು ಸದಾ ಕಿರಿಕಿರಿ ಉಂಟುಮಾಡುವ ವಿಷಯ. ಕಂಪ್ಯೂಟರ್ ಆಟ ಆಡುತ್ತಾ ‘ಸಮಾಧಿ’ ಸ್ಥಿತಿ ತಲುಪುವ ಮಕ್ಕಳು... ಅಂತಹ ಮಕ್ಕಳ ಪೋಷಕರು ಎದುರಿಸುವ ಸಮಸ್ಯೆಗಳು ಅಷ್ಟಿಷ್ಟಲ್ಲ. ಇದರಿಂದಾಗಿಯೇ ಅಸಮಾಧಾನ, ಅಸಹಾಯಕತೆ, ಬೇಸರಪಡುವ ಪೋಷಕರಿಗೆ ತಾವು ನೆಚ್ಚಿ ನಂಬಿದ ಜಗತ್ತು ಅಷ್ಟು ಬೇಗ ಕಣ್ಮರೆಯಾಗಿದೆಯೇ ಎನ್ನುವ ಸಂದೇಹವೂ ಇದೆ. ಅಂತರ್ಜಾಲ, ಮೊಬೈಲ್‌ಗಳಲ್ಲಿ ಗಮನ ಸೆಳೆಯುವ ಶಕ್ತಿ ಬಲವಾಗಿದೆಯೆನ್ನುವುದು ಬಲ್ಲ ಸಂಗತಿ. ಅದರಲ್ಲಿಯೂ, ಮಕ್ಕಳ, ಹದಿಹರೆಯರ ಮಿದುಳಿನ ಚುರುಕುತನಕ್ಕೂ ಮೊಬೈಲ್‌ ಸಲಕರಣೆಯ ಸೆಳೆತಕ್ಕೂ ನಿಕಟ ಸಂಬಂಧ. ‘ಲವ್ ಅಟ್ ಫಸ್ಟ್ ಸೈಟ್’ ಇದ್ದ ಹಾಗೆ. ವೇಗ- ಆವೇಗ, ವರ್ಣರಂಜಿತ ದೃಶ್ಯಾವಳಿ, ಧ್ವನಿಯ ಏರಿಳಿತಗಳ ಮೂಲಕ ಯಾವ ವಿಷಯಕ್ಕಾದರೂ ಜೀವ ತುಂಬಿಸುವ ಗುಣ ಇದರದ್ದು. ಸದಾಕಾಲ ಮುಷ್ಟಿಯಲ್ಲಿರಿಸಿಕೊಳ್ಳಬಹುದಾದ ಸರಳ ಸಂವಹನದ ಸಲಕರಣೆಯೇ ಆತ್ಮೀಯ ಆಟಿಕೆಯಾಗಿರುವುದೂ ಹೌದು. ಇನ್ನೂ ತೆವಳಲು ಕೂಡ ಬಾರದ ಕಂದಮ್ಮಗಳ ಅಳು, ನಗು, ಸಮಾಧಾನದಂತಹ ಭಾವನಾತ್ಮಕ ಸ್ಥಿತಿಗಳನ್ನು ಮೊಬೈಲ್‌ ಉಪಕರಣಗಳು ನಿರ್ದೇಶಿಸಬಲ್ಲವು ಎನ್ನುವುದು ಇದರ ನೇರ ನಿದರ್ಶನ.

ಹಾಗೆಯೇ ಮನ ರಂಜಿಸುವ ‘ಆ್ಯಪ್’ಗಳು  ಹಸುಳೆಗಳ ಮನಸ್ಸನ್ನು ವಶಪಡಿಸಿಕೊಳ್ಳುವಷ್ಟು ಶಕ್ತಿಶಾಲಿ. ನೋಡಬಾರದ, ಕೇಳಬಾರದ ಅದೆಷ್ಟೋ ಸಂಗತಿಗಳು ಮೊಬೈಲ್‌ ಪರಿಕರಗಳಲ್ಲಿ ಹರಿದು ಬಂದಾಗ ಗಮನ ಶಕ್ತಿ ತಕ್ಷಣದಲ್ಲಿ ಚುರುಕುಗೊಳ್ಳದಿರುವುದು ಅಸಾಧ್ಯ. ವ್ಯಕ್ತಿ ವಿದುಳಿನ ಅಲೆಗಳಲ್ಲಿ ಕಂಪನ ಉಂಟು ಮಾಡಿಯೇ ಹಿಡಿತ ಸಾಧಿಸಬಲ್ಲ ಮೊಬೈಲ್‌ ಉಪಕರಣಗಳು ಕೊಂಡಾಡುವಂತಹದ್ದೇ. ಆದರೆ, ಅದರ ವಶೀಕರಣಕ್ಕೆ ಒಳಗಾದಾಗ ಹೊಸ ವಿಧದ ತವಕ, ತಲ್ಲಣಗಳು, ವಿಶೇಷವಾಗಿ ಮಕ್ಕಳು, ಹದಿಹರೆಯ ದವರಲ್ಲಿ ಮೂಡಬಲ್ಲದು. ಈ ಸಲಕರಣೆಯ ದುರ್ಬಳಕೆಗೆ ಬಳಕೆದಾರನ ಮನಸೇ ಕಾರಣವೆಂದು ದೂಷಿಸಬಹುದಾದರೂ ಸಲಕರಣೆಯಲ್ಲಿರುವ ಶಕ್ತಿಯನ್ನು ಕಡೆಗಾಣಿಸುವಂತಿಲ್ಲ. ಸಾಮಾಜಿಕ, ಕೌಟುಂಬಿಕ ಹೊಂದಾಣಿಕೆಗಳನ್ನು ಸಡಿಲಗೊಳಿಸಿ ವ್ಯಕ್ತಿಯ ಮಾನಸಿಕ ನೆಲೆ, ನಿಯಂತ್ರಣದ ಮೇಲೆ ಇದರ ಪ್ರಭಾವ ಗಾಢವಾಗುತ್ತಿದೆ ಎನಿಸುತ್ತದೆ. ಮುಖಾಮುಖಿ ಸಂಪರ್ಕ, ಸಂಬಂಧಗಳಿಂದ ತಪ್ಪಿಸಿಕೊಳ್ಳುವಂತಹ ಮನಸ್ಸನ್ನು ಇದು ಸೃಷ್ಟಿಸುತ್ತಿರುವುದಂತೂ ನಿಜ.

ಮನೆಯ ಸಂಬಂಧ, ಸಂಭ್ರಮ, ಆಚರಣೆಗಳತ್ತ ನಿರಾಸಕ್ತಿ; ಸೋಮಾರಿತನವು ಸಲಕರಣೆಯತ್ತ ಇರದು ಎಂದು ಸಿಟ್ಟಾಗುವ, ಕಳವಳಪಡುವ ಪೋಷಕರು ಈಗ ಸಾಮಾನ್ಯ. ಅನೇಕ ಹೊಸ ವರ್ತನೆಗಳು ಪರಂಪರಾನುಗತವಾದ ನಡೆನುಡಿಗಳನ್ನು ಬದಲಾಯಿಸುತ್ತಿರುವುದರ ಪರಿಣಾಮವಾಗಿ ‘ಪೀಳಿಗೆ ಅಂತರ’ವನ್ನು ದೊಡ್ಡದಾಗಿಸುತ್ತಿರುವುದು ಸ್ಪಷ್ಟ.  ಮೊಬೈಲ್ ಅವಲಂಬನೆಯಿಂದಾಗಿ ಏಕಾಂಗಿತನ, ಗೋಪ್ಯತೆಯ ಸ್ವಭಾವಗಳಿಗೂ ಕಾರಣ ಎನ್ನುತ್ತವೆ ಅಧ್ಯಯನಗಳು. ಇದರಿಂದಾಗಿಯೇ ವಾತ್ಸಲ್ಯದ ಸಂಬಂಧಗಳು, ಅದರಲ್ಲಿಯೂ ಮಕ್ಕಳ- ಪೋಷಕರ ನಡುವೆ ಇರಲೇಬೇಕಾದಂತಹದ್ದು, ಸವಕಲುಗೊಳ್ಳುತ್ತಿವೆ. ಮಕ್ಕಳ ವರ್ತನೆಗಳ ಬಗ್ಗೆ ಆಗೊಮ್ಮೆ ಈಗೊಮ್ಮೆ ಬರುತ್ತಿದ್ದ ಅಸಮಾಧಾನ, ಆತಂಕದ ಭಾವಗಳೀಗ ನಿತ್ಯವೂ ಇರುವಂತಹದ್ದಾಗಿ ಮಧ್ಯವಯಸ್ಕತನ ತುಂಬಾ ಕಠಿಣವೆನ್ನುವವರ ಸಂಖ್ಯೆ ಏರುತ್ತಿದೆ.

ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸಿ ಚಿಂತಿಸಿ ಪರಿಹಾರ ಸಿಗದೆ ಹತಾಶೆ, ಆಕ್ರೋಶ, ಅಪನಂಬಿಕೆಯಂತಹ ನಕಾರಾತ್ಮಕ ಮನಸ್ಸು ಅನೇಕ ಪೋಷಕರನ್ನು ಕಾಡಿಸುತ್ತಿರುವುದಂತೂ ನಿಜ. ಇಂತಹ ಮನಸ್ಥಿತಿಯಲ್ಲಿ ಮಕ್ಕಳ  ಪಾಲನೆ, ಪೋಷಣೆ ಸರಾಗವಾಗಿ ಸಾಗದು. ಇದಕ್ಕೆ ಪ್ರತಿಕ್ರಿಯೆ ಎನ್ನುವಂತೆ ಮಕ್ಕಳಲ್ಲಿ ದಿಢೀರನೆ ಕಾಣಿಸಿಕೊಳ್ಳುವ ಒರಟುತನ, ಬಿಡಿ– ಪುಡಿ ವಂಚನೆಯ ವರ್ತನೆಗಳೇ ಕ್ರಮೇಣ ತಂತ್ರಜ್ಞಾನದ ಸಲಕರಣೆಗಳ ದುರ್ಬಳಕೆಯತ್ತ ವಾಲುವುದು ಸಹಜ.

ಮನುಷ್ಯ ಸಹಜ ಗುಣಗಳು ಎಂದಾಗ ಸಹಕಾರ, ಸಹನೆಯ ವರ್ತನೆಗಳು ನೆನಪಿಗೆ ಬರುತ್ತದೆ. ಅಚ್ಚರಿಯೆನ್ನುವಂತೆ, ತಂತ್ರಜ್ಞಾನದ ಹಿಡಿತಕ್ಕೆ ಮೊದಲು ಸಿಕ್ಕಿಕೊಳ್ಳುವ ಗುಣಗಳೂ ಇವುಗಳೇ. ಎಳೆಯ ಮಿದುಳಿನಲ್ಲಿ ಮನುಷ್ಯ ಸಂಬಂಧಗಳ ಮೂಲ ನಕಾಶೆಯನ್ನು ಮೊಬೈಲ್‌, ಟ್ಯಾಬ್ಲೆಟ್‌ಗಳು ರೂಪಿಸುತ್ತಿರುವ ರೀತಿ ಹೊಸ ಪೋಷಕರಿಗೊಂದು ರೀತಿಯ ಸವಾಲಾದರೆ ಎಳೆಯರಿಗದು ಯಂತ್ರ ಬಲಪಡಿಸುತ್ತಿರುವ ಆದರ್ಶಗಳು. ಅಂತರ್ಜಾಲದ ಸವಾಲಿನ ಆಟಗಳು ಚಾಲಾಕಿತನ ಮೂಡಿಸುವ ನೆಪದಲ್ಲಿ ಜೀವ ಕಸಿದುಕೊಳ್ಳುತ್ತಿರುವುದು ಇತ್ತೀಚಿನ ವಿದ್ಯಮಾನ. ಮಾನಹಾನಿ, ಆತ್ಮಹತ್ಯೆ, ಹಿಂಸೆಯ ಮನಸ್ಸು ಅನಾಯಾಸವಾಗಿ ಮಕ್ಕಳ ಮನಸ್ಸಿಗೆ ಒಪ್ಪಿಬಿಡುವುದಲ್ಲ! ಅದಕ್ಕೇನು ಕಾರಣ? ಅದನ್ನು ತಪ್ಪಿಸುವುದು ಅಥವಾ ತಡೆಗಟ್ಟುವ ಪರಿಣಾಮಕಾರಿ ಕ್ರಮಗಳು ಇಲ್ಲವೆ? ಎಂದು ಕೇಳುವ ಪೋಷಕರ ಸಂಖ್ಯೆ ಕಡಿಮೆ ಇಲ್ಲ.

ಇವೆಲ್ಲದರ ಒಟ್ಟು ಪರಿಣಾಮವೆಂದರೆ ಪೋಷಕರ ಮಾನಸಿಕ, ಆರ್ಥಿಕ ಸಮತೋಲನ ಕೆಡಿಸುವ ಸಮಸ್ಯೆ ಮತ್ತು ಸವಾಲುಗಳು. ‘ಹೊಸ ಮೊಬೈಲ್‌ ಕೊಡಿಸಬೇಕೆ? ಬೇಡವೆ? ಅಂತರ್ಜಾಲ ಸಂಪರ್ಕ ಇರಬೇಕೆ? ಇರಬಾರದೆ?’ ಎನ್ನುವಂತಹ ಪ್ರಶ್ನೆಗಳು ಪೋಷಕರ ಮಾನಸಿಕ ಸ್ಥಿತಿ ಹದಗೆಡಿಸುತ್ತಿರುವುದು ಅಪರೂಪವಲ್ಲ.

ತಂತ್ರಜ್ಞಾನದ ಮಾಧ್ಯಮಗಳಾದ ಮೊಬೈಲ್‌, ಅಂತರ್ಜಾಲದ ರೀತಿಗಳು ವೈಯಕ್ತಿಕ ಸಂವೇದನೆ, ಸ್ಪಂದನೆಗಳ ಮೇಲೆ ಹತೋಟಿ ಸಾಧಿಸುತ್ತಿರುವ ವೇಗವು ಅಚ್ಚರಿ, ಆತಂಕ ಮೂಡಿಸುವಂತಹದ್ದು. ದೂರ, ಹತ್ತಿರವೆನ್ನುವುದರ ಅರ್ಥವನ್ನೇ ಬುಡಮೇಲು ಮಾಡಿರುವ ತಂತ್ರಜ್ಞಾನಾಧಾರಿತ ಸಂಪರ್ಕ ವಿಧಗಳು ಕ್ಷಣದಲ್ಲಿ ಮನಸ್ಸಿನೊಳಗೆ ನುಗ್ಗಿ ಅವಲಂಬನೆಯನ್ನು ಹೆಚ್ಚಿಸಬಲ್ಲವು. ಇದು ಕೇವಲ ಮಕ್ಕಳು, ಯುವಜನರ ಮನಸ್ಸಿಗೆ ಸೀಮಿತ ಎನ್ನುವಂತಿಲ್ಲ.

ತಡವಾಗಿ ಅಥವಾ ನಿಯಂತ್ರಣವೆಲ್ಲವೂ ಕ್ಷೀಣಿಸಿದಾಗ ಕಾಣಿಸಿಕೊಳ್ಳುತ್ತಿದ್ದ ಕೋಪ– ತಾಪದ ವರ್ತನೆಗಳು ತಕ್ಷಣದಲ್ಲಿಯೇ ಹೊರಬರುವಂತೆ ಮಾಡಬಲ್ಲದ್ದಾಗಿವೆ ಇಂದಿನ ಸಲಕರಣೆಯಾಧಾರಿತ ಸಂಪರ್ಕಗಳು. ಸಂವೇದನಾಶೀಲತೆ ಮತ್ತು ಸಹನೆಯಂತಹ ಭಾವನಾತ್ಮಕ ಸ್ಥಿತಿಗಳ ಕಂಪಿಸುವ ರೀತಿಯಲ್ಲಿಯೇ ಬದಲಾವಣೆಗಳನ್ನು ತರುವ ಶಕ್ತಿ ಇದರಲ್ಲಿ ಅಡಗಿದೆ. ಇಂತಹುದರ ಒಂದು ಸಾಮಾನ್ಯ ನಿದರ್ಶನವೆಂದರೆ: ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವ ಕೆಲ ಮಾಹಿತಿ, ಸುದ್ದಿಗಳು ಕೋಲಾಹಲ, ಕ್ರೋಧದ ವರ್ತನೆಗಳನ್ನು ಮೂಡಿಸಿರುವುದು. ಮನೋವಿಕಾಸದ ಹಂತದಲ್ಲಿ ರೂಪುಗೊಳ್ಳುವ ಸಹನೆ, ಸಂಯಮದ ಮನಸ್ಥಿತಿಗಳು ಮನೋಪಕ್ವತೆಯನ್ನು ಉತ್ತಮಗೊಳಿಸುವುದಕ್ಕೆ ಬೇಕೇಬೇಕು. ಆದರೆ, ಇಂದಿನ ಪೀಳಿಗೆಯ ಮಕ್ಕಳಲ್ಲಿ ಮೊಬೈಲ್‌ ಯಂತ್ರಗಳೇ ಇವುಗಳನ್ನು ನಿರ್ಧರಿಸುತ್ತಿರುವಂತಿದೆ. ಯಾವುದೇ ವಿಧದ ವಯಸ್ಕ ಮನುಷ್ಯ ಸಂಬಂಧಗಳು ಗಟ್ಟಿ—ಟೊಳ್ಳು ಆಗುವುದಕ್ಕೂ ವಿಶ್ವಾಸ, ವಾತ್ಸಲ್ಯದ ಭಾವಗಳ ಪಕ್ವತೆ- ಅಪಕ್ವತೆಯ ಪರಿಣಾಮವಿರುತ್ತದೆ.

ಗೆಳೆತನ, ದಾಂಪತ್ಯ ಮತ್ತು ವೃತ್ತಿಸಂಬಂಧಗಳೂ ಈ ಸಲಕರಣೆಯ ಚಾಲಾಕಿಗೆ ಸಿಕ್ಕಿಕೊಳ್ಳುತ್ತಿರುವುದು ಈಗ ಸಾಮಾನ್ಯ. ಅತ್ಯಗತ್ಯವಾಗಿರುವ ಈ ವರ್ತನೆಗಳು ಇಂದು ಅಸಮರ್ಪಕವೆನಿಸುತ್ತಿವೆ. ಸರಳ ಭಾವಗಳಿಗೂ ಬಹುಬಲ ತುಂಬಿಸಿ ಮನಸ್ಸಿನ ಹತೋಟಿಗೆ ನಿಲುಕದಂತೆ ಮಾಡುವ ಶಕ್ತಿ ಅಂತರ್ಜಾಲದಲ್ಲಿ ಹರಿದಾಡುವ ಕೆಲ ಚಟುವಟಿಕೆಗಳಲ್ಲಿದೆ. ಈ ಸಂವಹನ ಶಕ್ತಿಯನ್ನು ಸದುಪಯೋಗಕ್ಕೆ ಒಳಪಡಿಸುವುದಕ್ಕೆ ಇರುವ ಅವಕಾಶ, ಮಾದರಿಗಳು  ಹೇರಳವಾಗಿದ್ದರೂ ಸಂವಹನದ ಪ್ರಕ್ರಿಯೆಯ ವೇಗ ಮನದಾಳದಲ್ಲಿರುವ ಆಕ್ರೋಶವನ್ನು ಕ್ಷಣದಲ್ಲಿ ಹೊರತರಿಸಬಲ್ಲದು.

ಆದುದರಿಂದ ಸಹಜ ರೀತಿಯ ಆವೇಗದ ವರ್ತನೆಗಳು ವ್ಯಕ್ತವಾಗುವ ರೀತಿಗೂ ಯಂತ್ರಗಳ ಪ್ರಚೋದನೆಗಳಿಂದ ಹೊರಬರುವ ಕ್ರಿಯೆಗಳಿಗೂ ಇರುವ ಅಂತರ ಸಾಮಾನ್ಯದ್ದಲ್ಲ. ಇಂತಹ ಆವೇಗದ ಗುರಿ ಆಕ್ರಮಣದ ವರ್ತನೆಯೇ ಆಗಿದ್ದು ಸಾಮಾಜಿಕ ಸನ್ನಿವೇಶಗಳಿಗೆ ಅತ್ಯಗತ್ಯವಾದ ಹೊಣೆಗಾರಿಕೆ, ಸಂಬಂಧಗಳನ್ನೂ ತಡೆಗಟ್ಟುತ್ತದೆ. ಸಭೆ, ಸದನ, ಕೆಲಸದ ಸಮಯದಲ್ಲಿ ಮೊಬೈಲ್ ಬಳಕೆ, ಮನೆಯಲ್ಲಿ ಕುಟುಂಬದವರೊಂದಿಗೆ ಆರಾಮವಾಗಿರುವ ಸಮಯದಲ್ಲಿ ಕಚೇರಿ ಸಮಸ್ಯೆಗಳನ್ನು ಚರ್ಚಿಸುವ ಅಭ್ಯಾಸದಿಂದಾಗಿ ಅದೆಷ್ಟು ಆತ್ಮೀಯ ಸಂಬಂಧಗಳು ಹಾಳಾಗಿವೆ, ಹಾಳಾಗುತ್ತಿವೆ ಎನ್ನುವುದು ಎಲ್ಲರಿಗೂ ತಿಳಿದಿರುವುದಾದರೂ ತಡೆಗಟ್ಟುವುದರತ್ತ ಪ್ರಯತ್ನಗಳು ಕಡಿಮೆಯೇ!

ಹಳೆಯ  ಸಂಪ್ರದಾಯಗಳು, ದೊಡ್ಡ ಕುಟುಂಬಗಳು ಮತ್ತು ಸಮುದಾಯ ಒಟ್ಟಾರೆ ಆಚರಿಸುತ್ತಿದ್ದ, ಅನುಸರಿಸುತ್ತಿದ್ದಂತಹ ಮನಸೆಳೆಯುವ ಚಟುವಟಿಕೆಗಳು ಕಾಣೆಯಾಗುತ್ತಿವೆ. ಚಲನಚಿತ್ರದ ದೃಶ್ಯಾವಳಿಗಳನ್ನು ಅನುಕರಿಸುವಂತೆ ಮಾಡುವ ಚಟುವಟಿಕೆಗಳು ಶಾಲಾ, ಕಾಲೇಜುಗಳಲ್ಲಿ ಜರುಗುವ ಪ್ರತಿಯೊಂದು ಸಮಾರಂಭದಲ್ಲಿಯೂ ಕಾಣಬಹುದು. ಸೃಜನಶೀಲತೆ ಮೊಳಕೆಯೊಡೆದು ಮಕ್ಕಳ ಮನೋಭಾವ ಪಕ್ವಗೊಳ್ಳಬೇಕೆನ್ನುವ ಭಾವನೆ ಶಿಕ್ಷಕರಲ್ಲಿ ಕಡಿಮೆ ಇದ್ದಂತೆ ಪೋಷಕರಲ್ಲಿಯೂ ಕಡಿಮೆಯಾಗುತ್ತಿದೆ. ಯುವ ಪೋಷಕರ ಉತ್ಸಾಹದ ಗತಿ ಎಷ್ಟಿರುವುದೆಂದರೆ ಕ್ರಿಕೆಟ್ ಬ್ಯಾಟು ಹಿಡಿದ ತಕ್ಷಣ ತೆಂಡೂಲ್ಕರ್ ಆಗಿಬಿಡಬೇಕು.ಹಾಡಿದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲೋ, ಟಿ.ವಿ.ಯಲ್ಲೋ ರಾರಾಜಿಸಿಬಿಡಬೇಕೆನ್ನುವ ಅತಿಯೊತ್ತಡದ ಬಯಕೆ ಎಳೆಯರಿರುವ ಮನೆಗಳಲ್ಲಿ ಸಾಮಾನ್ಯ.

ಮಕ್ಕಳ ‘ಮಿಮಿಕ್’ ಮಾಡುವುದನ್ನು ಉತ್ತೇಜಿಸುವ ‘ರಿಯಾಲಿಟಿ ಷೋ’ಗಳು ಈಗ ‘ಕ್ರೂಯಲ್ಟಿ ಷೋ’ಗಳಾಗುತ್ತಿರುವುದು ದುರದೃಷ್ಟಕರ. ಈ ತರಹದ ಅನುಕರಣೆಯೇ ಇತ್ತೀಚೆಗೆ ಬಾಲಕಿಯೊಬ್ಬಳ ದಾರುಣ ಸಾವಿಗೂ ಕಾರಣ ಎನ್ನುವುದು ಹುಸಿಯಲ್ಲವೆನಿಸುತ್ತದೆ. ಮಕ್ಕಳ ಮನೋಭಾವ ಮನೆಯ ಮಟ್ಟದಲ್ಲಿಯೇ ಸದೃಢಗೊಂಡಷ್ಟೂ ಉತ್ತಮ. ಮಕ್ಕಳ ಮನಸ್ಸನ್ನು ಸೆರೆ ಹಿಡಿಯಲು ಮಾತು, ಭಾವಗಳಲ್ಲಿಯೇ ನಿಜ ಬಲವಿರುವುದು. ಅದೇ ಆತ್ಮೀಯ ಸಂಬಂಧಗಳನ್ನು ಬೆಸೆಯುವುದು. ಅದನ್ನೇ ಮಕ್ಕಳು ಅನುಸರಿಸುವುದಕ್ಕೆ ಇಷ್ಟಪಡುವುದು. ಅಂತಃಕರಣ ಗಟ್ಟಿಯಾಗುವುದಕ್ಕೆ ಮನೆಯ ಭಾಷೆ ಬೇಕು. ಆದರೆ, ಶಾಲೆಯಲ್ಲಿ ಕಲಿತ ಭಾಷೆಯೇ ಎಲ್ಲದಕ್ಕೂ ಸೂಕ್ತವೆಂದು ನಂಬಿ ಅನುಸರಿಸುವುದರ ಪರಿಣಾಮ ವ್ಯಕ್ತಿತ್ವದ ಸಮಸ್ಯೆಗಳಿಗೂ ಕಾರಣವಾಗಬಲ್ಲದು.

***
ಚಿಣ್ಣರ ಮನಸ್ಸು
ಕಿರಿಯರ ಮಾನಸಿಕ ಆವರಣವನ್ನು ತಂತ್ರಜ್ಞಾನ ಆವರಿಸುತ್ತಿದೆಯಲ್ಲ; ಮೊಬೈಲ್‌, ಕಂಪ್ಯೂಟರ್, ಅಂತರ್ಜಾಲದ ಮಾಧ್ಯಮಗಳ ವಶಕ್ಕೆ ಮಕ್ಕಳು ಸಿಕ್ಕಿಕೊಳ್ಳುತ್ತಿದ್ದಾರಲ್ಲ ಎಂದು ಮರುಗುವುದರಿಂದ ಪ್ರಯೋಜನವಿಲ್ಲ. ಮಕ್ಕಳ ಮನಸ್ಸನ್ನು ಒಲಿಸಿಕೊಳ್ಳುವ ಬಲ ಹೆತ್ತವರಲ್ಲಿ ಸಹಜವಾಗಿರುತ್ತದೆ. ಅದರ ಸದುಪಯೋಗ ಆಗಬೇಕಷ್ಟೇ. ಮಕ್ಕಳ ಮನಸ್ಸು ಅತ್ತಿತ್ತ ಸರಿಯುವುದು ಸಹಜ ಕ್ರಿಯೆಗಳಲ್ಲಿ ಒಂದು. ಇಂದು ತಂತ್ರಜ್ಞಾನದ ಸಲಕರಣೆಗಳತ್ತ ಹೆಚ್ಚಾಗಿ ವಾಲುತ್ತಿರುವುದು ನಿಜವೇ. ಅದನ್ನು ಒತ್ತಡ, ಭಯದ ಮೂಲಕ ಅರ್ಥ ಮಾಡಿಕೊಳ್ಳಲಾಗದು. ಹಾಗೆಯೇ ಅವುಗಳನ್ನು ತಡೆಗಟ್ಟುವಂತಹ ಸಿದ್ಧೌಷಧ ಇರದಿದ್ದರೂ ಪೋಷಕರ ಮನೋಬಲ, ಮನೋಭಾವಗಳು ಮಕ್ಕಳು ತಂತ್ರಜ್ಞಾನದ ವ್ಯಸನಿಗಳಾಗುವುದನ್ನು ತಡೆಗಟ್ಟಲು ಸಾಧ್ಯವಿದೆ.
ಅವುಗಳೆಂದರೆ:
* ಪೋಷಕರ ಸಂಯಮದ ವರ್ತನೆಗಳು ಮಕ್ಕಳ ಮನಸ್ಸನ್ನು ಸೆಳೆಯುವ ಅತ್ಯಂತ ಸಹಜ ಶಕ್ತಿ. ಸಾಮಾನ್ಯವಾಗಿ ಇದು ಪ್ರತಿಯೊಬ್ಬ ಆರೋಗ್ಯವಂತ ಪೋಷಕರಲ್ಲಿ ಹೇರಳವಾಗಿರುತ್ತದೆ
* ಮಕ್ಕಳೊಂದಿಗೆ ದೈಹಿಕ ಸಾಮೀಪ್ಯಕ್ಕಿಂತ ಮಾನಸಿಕ ಸಾಮೀಪ್ಯ ಹೆಚ್ಚು ಪರಿಣಾಮಕಾರಿ. ಭಾಷೆ, ಭಾವಗಳಿಂದ ಇದು ಕೂಡ ಸರಾಗ
* ಮಕ್ಕಳ ತಪ್ಪು–ಒಪ್ಪು ವರ್ತನೆಗಳ ಬಗ್ಗೆ ಪೋಷಕರಲ್ಲಿ ಪೂರ್ವಗ್ರಹ ಸಹಜ. ಇದರಿಂದಲೇ ಮಕ್ಕಳ ವರ್ತನೆಗಳು ಸರಿಯಾಗಿ ಅರ್ಥವಾಗದಿರುವುದು. ಪೂರ್ವಗ್ರಹಗಳ ಬಗ್ಗೆ ಅರಿವಿರಲಿ
* ನಿಂದನೆ, ಟೀಕೆ ಮತ್ತು ಶ್ಲಾಘನೆಯು ಸಮಯೋಚಿತವಾಗಿದ್ದರೆ ಪರಿಣಾಮಕಾರಿ
* ತಂತ್ರಜ್ಞಾನದ ಸಲಕರಣೆಗಳ ಬಳಕೆ, ಅಗತ್ಯದ ಬಗ್ಗೆ ಭಯ, ಆತಂಕದ ಮಾತುಗಳ ಬದಲು ತಂತ್ರಜ್ಞಾನದ ಇತಿಮಿತಿ ತಿಳಿಸುವುದು ಮುಖ್ಯ
* ಎಳೆಯತನದಿಂದಲೇ ಹೊರಾಂಗಣ ಚಟುವಟಿಕೆಗಳ ಕಡೆ ಗಮನ ಹರಿಸುವುದನ್ನು ಉತ್ತೇಜಿಸುವುದು ಮುಖ್ಯ. ಮನೆಯಿಂದ ಮಕ್ಕಳು ಹೊರಗಡೆ ಹೋಗುತ್ತಾರೆ ಎಂದರೆ ಗಾಬರಿಪಡುವ, ದಿಗಿಲುಗೊಳ್ಳುವ ಪರಿಸರ ನಮ್ಮದು. ಆದರೂ, ಮಕ್ಕಳ ಮನೋವಿಕಾಸದ ದೃಷ್ಟಿಯಿಂದ ಎಡರು– ತೊಡರು ನಿರ್ವಹಿಸುವುದು ಹೆಚ್ಚು ಲಾಭದಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT