ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್ಕಾರದ್ದು ಒಡೆದು ಆಳುವ ನೀತಿ’

Last Updated 16 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

* ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಲು ಯಾರು ಕಾರಣ?

ಗೃಹ ಸಚಿವ ರಾಮಲಿಂಗಾರೆಡ್ಡಿಗೆ ಇಲಾಖೆ ಮೇಲೆ ನಿಯಂತ್ರಣ ಇಲ್ಲ. ಅವರು ಸಲಹೆಗಾರನ ನಿಯಂತ್ರಣದಲ್ಲಿದ್ದಾರೆ. ಸಲಹೆಗಾರ ತಮ್ಮ ಹಿಂದಿನ ಕೋಪ, ಇಷ್ಟಾನಿಷ್ಟಗಳನ್ನು ತೀರಿಸಿಕೊಳ್ಳಲು ಇಡೀ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಿದ್ದಾರೆ. ರಾಜಕೀಯ ವಿರೋಧಿಗಳ ಚಟುವಟಿಕೆ ಮೇಲೆ ನಿಗಾ ಇಡುವುದರಲ್ಲಿ ಗುಪ್ತಚರ ವ್ಯವಸ್ಥೆ ನಿರತವಾಗಿದೆ. ವ್ಯಕ್ತಿಯೊಬ್ಬನ ಹತ್ಯೆಯಾದರೆ, ಸತ್ತವನು ನಮ್ಮ ಪಕ್ಷದವನೇ, ನಮ್ಮ ಸಮರ್ಥಕನೇ ಎಂದು ನೋಡುವುದರಿಂದ ಹೀಗಾಗಿದೆ.

* ಕೆಎಫ್‌ಡಿ, ಪಿಎಫ್ಐ ಸಂಘಟನೆಗಳನ್ನು ಯಾಕೆ ನಿಷೇಧಿಸಬೇಕು?

ಈ ಬೇಡಿಕೆ ಹಿಂದೆ ಗುಪ್ತ ಕಾರ್ಯಸೂಚಿಯೇನೂ ಇಲ್ಲ. ಹಿಂದೆ ಸಿಮಿ ಸಂಘಟನೆ ಇತ್ತು. ಹಿಂಸಾಚಾರದ ಮೇಲೆ ನಂಬಿಕೆ ಇಟ್ಟಿರುವ ಈ ಸಂಘಟನೆಗಳ ವಿಚಾರಧಾರೆ ಭಿನ್ನವಾಗಿವೆ. ತತ್ವ, ಸಿದ್ಧಾಂತಗಳ ಹಿಂದೆ ಇನ್ನೊಬ್ಬರನ್ನು ದೈಹಿಕವಾಗಿ ಮುಗಿಸುವ ಹುನ್ನಾರವಿದೆ. ಆರ್‌ಎಸ್‌ಎಸ್‌ ಮುಖಂಡ ರುದ್ರೇಶ ಹತ್ಯೆ ಪ್ರಕರಣದಲ್ಲಿ ಉಗ್ರವಾದಿ ಸಂಘಟನೆಯ ಕೈವಾಡವಿರುವುದನ್ನು ಎನ್‌ಐಎ ಬಹಿರಂಗಪಡಿಸಿದೆ. ಕೊಡಗಿನ ಕುಟ್ಟಪ್ಪ ಹತ್ಯೆಯಲ್ಲಿ ಕೇರಳದಿಂದ ಬಂದವರು ಭಾಗಿಯಾಗಿದ್ದರು ಎಂಬ ಅಂಶ ಬಯಲಾಗಿದೆ. ಸರ್ಕಾರ ಕೂಡಾ ಈ ಸಂಘಟನೆಗಳ ನಿಷೇಧಿಸುವ ಪರವಾಗಿದೆ, ಬಹಿರಂಗವಾಗಿ ಆಗ್ರಹಿಸುತ್ತಿಲ್ಲ ಅಷ್ಟೆ.

* ಹಾಗಿದ್ದರೆ ಬಜರಂಗದಳ, ಶ್ರೀರಾಮ ಸೇನೆಯನ್ನೂ ನಿಷೇಧಿಸಬೇಕಲ್ಲವೇ?

ಬಜರಂಗದಳ, ಶ್ರೀರಾಮ ಸೇನೆ ಎಂದೂ ದೇಶದ್ರೋಹಿ ಕೆಲಸ ಮಾಡಿಲ್ಲ. ಹಿಂಸಾಚಾರಗಳಲ್ಲಿ ತೊಡಗಿದ ನಿದರ್ಶನಗಳಿಲ್ಲ. ಶ್ರೀರಾಮ ಸೇನೆ ವಿರುದ್ಧ ಸರ್ಕಾರವೇ ಸುಳ್ಳು ವದಂತಿಗಳನ್ನು ಹಬ್ಬಿಸಿದೆ. ನಿಜ, ಆ ಸಂಘಟನೆ ಒರಟು ವರ್ತನೆ ತೋರಿಸಿರಬಹುದು. ಹಾಗೆಂದು, ಕಾನೂನು ವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಎಂದೂ ಮಾಡಿಲ್ಲ.

* ನಿಷೇಧಾಜ್ಞೆ (ಸೆಕ್ಷನ್‌ 144) ಸಂದರ್ಭದಲ್ಲೂ ಮೆರವಣಿಗೆಗೆ ಅವಕಾಶ ನೀಡಬೇಕು ಎನ್ನುವುದು ಎಷ್ಟು ಸರಿ?

ಸೆಕ್ಷನ್‌ 144ಗೆ ಗೌರವ ಕೊಡಬೇಕು ನಿಜ. ಆದರೆ, ಅದು ಪಕ್ಷಾಧಾರಿತ ಆಗಬಾರದು, ವಿಷಯಾಧಾರಿತ ಆಗಬೇಕು. ಮುಖ್ಯಮಂತ್ರಿ ಹೋಗುವಾಗ ನಿಷೇಧಾಜ್ಞೆಗೆ ವಿನಾಯತಿ ನೀಡಿದ ನಿದರ್ಶನವಿದೆ. ವಿರೋಧ ಪಕ್ಷ ಕಾರ್ಯಕ್ರಮ ಆಯೋಜಿಸಿದಾಗ ನಿಷೇಧಾಜ್ಞೆ ಹೇರುವುದು ಎಷ್ಟು ಸರಿ?

* ‘ಹುಣಸೂರಿನಲ್ಲಿ ನಡೆದ ಘಟನೆ ಉತ್ತರ ಕನ್ನಡದಲ್ಲಿ ನಡೆದರೆ ಜಿಲ್ಲೆ ಹೊತ್ತಿ ಉರಿಯುತ್ತಿತ್ತು’ ಎಂದು ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಹೇಳಿದ್ದಾರಲ್ಲ?

ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ, ಅದನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎಂಬುದನ್ನು ನಾವು ಗಮನಿಸಬೇಕು. ಹನುಮ ಜಯಂತಿ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಅದರಲ್ಲಿ ಸಂಸದ ಭಾಗವಹಿಸಬಾರದು, ಮೆರವಣಿಗೆಯ ಮಾರ್ಗ ಹೀಗೇ ಇರಬೇಕು ಎಂದು ನಿಯಂತ್ರಿಸುವುದು ಸರಿಯಲ್ಲ.

* ‘ಕೋಮುಗಲಭೆಗೆ ಬಿಜೆಪಿ ಪ್ರಚೋದನೆ ನೀಡುತ್ತಿದೆ’ ಎಂದು ಮುಖ್ಯಮಂತ್ರಿ ಆರೋಪಿಸುತ್ತಾರಲ್ಲ?

ಅವರ ಆರೋಪ  ಸಹಜ. ಕಾಂಗ್ರೆಸ್‌ ಜಾಯಮಾನವೇ ಅಂಥದ್ದು. ಇತ್ತೀಚಿನ ದಿನಗಳಲ್ಲಿ ಸಂಘ ಪರಿವಾರದ 20 ಜನ ಕೊಲೆಯಾಗಿದ್ದಾರೆ. ಗೋವು ಕಳ್ಳ ಸಾಗಣೆ ಮಾಡುತ್ತಿದ್ದವನನ್ನು ‌ಎನ್‌ಕೌಂಟರ್‌ನಲ್ಲಿ ಸಾಯಿಸಿದ ತಕ್ಷಣ ಸರ್ಕಾರದ ಅಂತಃಕರಣವೇ ಕರಗಿ ಹೋಗುತ್ತದೆ. ಆದರೆ, ಹಿಂದೂಗಳ ಜೀವಗಳಿಗೆ ಈ ಸರ್ಕಾರದಲ್ಲಿ ಬೆಲೆ ಇಲ್ಲವೇ? ಅದೇ 20 ಜನರು ಬೇರೆ ಕೋಮಿಗೆ ಸೇರಿದವರಾಗಿದ್ದರೆ ಸರ್ಕಾರ ಕಳವಳಕ್ಕೆ ಒಳಗಾಗುತ್ತಿರಲಿಲ್ಲವೇ?

* ಕಾನೂನು ಉಲ್ಲಂಘನೆ ಬಿಜೆಪಿಯ ಚುನಾವಣಾ ರಾಜಕಾರಣವೇ?

ಹಿಂಸಾ ರಾಜಕಾರಣದಲ್ಲಿ ನಮಗೆ ವಿಶ್ವಾಸ ಇಲ್ಲ. ಆ ಕೆಲಸವನ್ನು ಯಾರೂ ಮಾಡಬಾರದು. ರಾಜಕೀಯಕ್ಕಾಗಿ ಕಾಂಗ್ರೆಸ್‌ನವರು ಇಂಥ ಆರೋಪ ಮಾಡುತ್ತಿದ್ದಾರೆ. ಕುಟ್ಟಪ್ಪ, ರುದ್ರೇಶ್‌ ಹತ್ಯೆಗೆ ಪ್ರತಿಭಟನೆ, ಟಿಪ್ಪು ಸುಲ್ತಾನ್‌ ಜಯಂತಿಗೆ ವಿರೋಧ ಇವೆಲ್ಲ ಚುನಾವಣೆ ಗಮನದಲ್ಲಿಟ್ಟು ಮಾಡಿದ್ದೇವೆಯೇ? ಯಾರೇ ಸತ್ತರೂ ಸಮಾಜ ಅಳಬೇಕು. ಸರ್ಕಾರ ಕಳವಳ ವ್ಯಕ್ತಪಡಿಸಬೇಕು. ಅದರ ಬದಲು ಚುನಾವಣೆ, ಪಕ್ಷ ಎಂದು ಪ್ರತ್ಯೇಕಿಸಿ, ಕೋಮು ಆಧಾರದಲ್ಲಿ ಯೋಚನೆ ಮಾಡುವುದು ಬಿಡಬೇಕು. ಹಿಂಸೆಯನ್ನೂ ಯಾರೂ ರಾಜಕೀಯ ದಾಳವಾಗಿ ಬಳಸಿಕೊಳ್ಳಬಾರದು.

* ಹುಡುಗ– ಹುಡುಗಿ ಜೊತೆಯಾಗಿ ಓಡಾಡಿದರೆ ಅಟ್ಟಾಡಿಸಿ ಹೊಡೆಯುವುದು ಯಾಕೆ. ಅನೈತಿಕ ಪೊಲೀಸ್‌ಗಿರಿ ಸರಿಯೇ?

ನಾನು ಅನೈತಿಕ ಪೊಲೀಸ್‌ಗಿರಿ ಪರ ಅಲ್ಲ. ವಯಸ್ಸಿಗೆ ಬಂದವರು ತಮ್ಮ ವಿವೇಚನೆಯಂತೆ ಇರುತ್ತಾರೆ. ಹಾಗೆಂದು, ಅನೈತಿಕ ಪೊಲೀಸ್‌ಗಿರಿ ಮಾಡುವವರೆಲ್ಲ ಸಂಘ ಪರಿವಾರದವರು ಎಂದು ಬಿಂಬಿಸುವುದು ಸರಿಯಲ್ಲ. ಸಂಘ ಪರಿವಾರಕ್ಕೂ ಇಂಥ ವಿಷಯಗಳಿಗೂ ಸಂಬಂಧ ಇಲ್ಲ. ಕೇರಳದ ಹಾದಿಯಾ ಪ್ರಕರಣದಲ್ಲಿ ತಂದೆಯ ಹೊಯ್ದಾಟವನ್ನು ನೋಡಿಲ್ಲವೇ? ಈ ವಿಷಯದಲ್ಲಿ ಮನೆಗಳಲ್ಲೇ ಜಾಗೃತಿ ಉಂಟಾಗಬೇಕು.

* ಪ್ರತಾಪ್‌ ಸಿಂಹ, ಈಶ್ವರಪ್ಪ ಇತ್ತೀಚೆಗೆ ನೀಡಿದ ಹೇಳಿಕೆಗಳು ಸರಿಯೇ?

ಯಾರೇ ಆಗಲಿ ಭಾವೋದ್ವೇಗಕ್ಕೆ ಒಳಗಾಗಿ ಮಾತನಾಡುವಾಗ ಎಚ್ಚರ ವಹಿಸಬೇಕು. ಮಾತುಗಳಿಂದಲೇ ವಿಶ್ವಾಸಾರ್ಹತೆ ಗಳಿಸಬೇಕು. ಹಿರಿಯ ಮುತ್ಸದ್ದಿ ವಾಜಪೇಯಿ ಇಂದಿಗೂ ಆ ಕಾರಣಕ್ಕೆ ನೆನಪಾಗುತ್ತಾರೆ. ವಿರೋಧಿಗಳನ್ನು ಮಾತುಗಳಿಂದಲೇ ಅವರು ಚುಚ್ಚುತ್ತಿದ್ದರು. ಅವರ ವ್ಯಕ್ತಿತ್ವದಂತೆ, ಮಾತುಗಳೂ ಮಾದರಿ.

* ಅಮಿತ್‌ ಷಾ ಬಂದ ಬಳಿಕ ಪ್ರತಿಭಟನೆಗಳು ಹೆಚ್ಚಾದವು ಎಂಬ ಆರೋಪ ಇದೆಯಲ್ಲ?

ಅದು ಕಾಕತಾಳೀಯ. ಅಮಿತ್‌ ಷಾ, ರಾಜ್ಯದಲ್ಲಿದ್ದ ಮೂರು ದಿನ 21 ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಯಾವುದೇ ವಿಷಯದಲ್ಲಿ ಹೋರಾಟ ನಡೆಸಿದರೆ ತಾರ್ಕಿಕ ಅಂತ್ಯ ಕಾಣಬೇಕು ಎಂದು  ಬಯಸುವ ಅವರು ಪಕ್ಷದಲ್ಲಿ ಚುರುಕು ಮುಟ್ಟಿಸಿದ್ದಾರೆ. ಓಡಾಟ, ಹೋರಾಟ ಹೇಗಿರಬೇಕು ಎಂದು ಸಲಹೆ ನೀಡಿದ್ದಾರೆ. ಇತರ ಆರೋಪಗಳಲ್ಲಿ ಸತ್ಯಾಂಶ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT