ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಕನ್ನಡ ವಿಶ್ವವಿದ್ಯಾಲಯ ಹಿಂದಣ ಹೆಜ್ಜೆ ಮುಂದಿನ ದಾರಿ

Last Updated 16 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ತಿದ್ದುಪಡಿ ಮಸೂದೆ -2017ರ  ಕಾಯ್ದೆ ಸ್ವತಃ ವಿವಿಗಳ ಸ್ವಾಯತ್ತತೆಯನ್ನು ಕಸಿದುಕೊಳ್ಳುವ, ಅದರ ಆಡಳಿತದ ಮೇಲೆ ಅಧಿಕಾರಶಾಹಿ ಅಂಕುಶ ಹೇರುವ ಪ್ರತಿಗಾಮಿ ಅಂಶಗಳನ್ನು ಒಳಗೊಂಡಿದೆ. ಬೋಧನೆ ಪ್ರಧಾನವಾಗಿರುವ ಸಾಮಾನ್ಯ ವಿವಿಗಳನ್ನು ದೃಷ್ಟಿಯಲ್ಲಿರಿಸಿಕೊಂಡ ಈ ಮಸೂದೆಯಲ್ಲಿ ಸಂಶೋಧನೆ ಮತ್ತು ಅಧ್ಯಯನ ಪ್ರಧಾನವಾಗಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯವನ್ನು ಸೇರಿಸಿದ್ದು ಪ್ರಜ್ಞಾವಂತರ ಆತಂಕಕ್ಕೆ ಕಾರಣವಾಗಿತ್ತು. ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ಈ ನಿರಂಕುಶ ವರ್ತನೆಯ ವಿರುದ್ಧ ಪ್ರತಿಭಟನೆಗಳು ನಡೆದಾಗ, ಕಡೆಗೂ ಎಚ್ಚೆತ್ತುಕೊಂಡ ಸರ್ಕಾರ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯವನ್ನು ಈ ಮಸೂದೆಯಿಂದ ಹೊರಗಿಡಲಾಗಿದೆ ಎಂದು ಘೋಷಿಸಿದೆ.

ಇದು ಸದ್ಯಕ್ಕೆ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಂತೆ ಮಾತ್ರ. ಏಕೆಂದರೆ ಆಳುವ ಸರ್ಕಾರದ ಆಲೋಚನಾ ಕ್ರಮವೇ ಈ ಪ್ರಜಾತಾಂತ್ರಿಕ ಆಶಯಗಳಿಗೆ ವಿರುದ್ಧವಾಗಿದ್ದಾಗ ಶೈಕ್ಷಣಿಕ ಸಂಸ್ಥೆಗಳ ಮೇಲಿನ ನಿಯಂತ್ರಣವೆನ್ನುವ ಕಂಟಕದ ತೂಗುಗತ್ತಿ ಕನ್ನಡ ವಿವಿಯ ನೆತ್ತಿಯ ಮೇಲೆ ಸದಾ ನೇತಾಡುತ್ತಲೇ ಇರುತ್ತದೆ.

  25 ವರ್ಷಗಳ ಹಿಂದೆ ಕನ್ನಡ ವಿಶ್ವವಿದ್ಯಾಲಯ ಕಾಯ್ದೆ-1991ರ ಅಡಿಯಲ್ಲಿ ಕನ್ನಡ ವಿವಿ ಸ್ಥಾಪನೆಗೊಂಡಿತು. ಇದು ಕನ್ನಡ ಭಾಷೆಯಲ್ಲಿ ಸಾಹಿತ್ಯ, ಸಂಗೀತ, ನಾಟಕ, ಚಿತ್ರಕಲೆ, ಜನಪದ, ಅಭಿವೃದ್ಧಿ, ವಿಜ್ಞಾನ, ಪ್ರಾಚೀನ, ಆಧುನಿಕ ಮುಂತಾದ ಕ್ಷೇತ್ರಗಳಲ್ಲಿ ಅಧ್ಯಯನ, ಸಂಶೋಧನೆ, ಪುಸ್ತಕ ಪ್ರಕಟಣೆಗಳ ಉದ್ದೇಶದಿಂದ ಸ್ಥಾಪಿತವಾದ ಒಂದು ಸ್ವಾಯತ್ತ ವಿಶ್ವವಿದ್ಯಾಲಯ. ಇಂದು ವಿಶ್ವವಿದ್ಯಾಲಯದ ಧನ ಸಹಾಯ ಆಯೋಗ (ಯು.ಜಿ.ಸಿ) ಆರ್ಥಿಕ ನೆರವು ನೀಡುತ್ತಿದೆ. 1992ರಲ್ಲಿ ಹಂಪಿ ಕನ್ನಡ ವಿವಿ ಪ್ರಾರಂಭವಾದಾಗ ಕುವೆಂಪು ಬಯಸಿದಂತೆ ಶಿಕ್ಷಣವು ಧಾನ್ಯವನ್ನು ತುಂಬುವ ಗೋಣಿಚೀಲವಲ್ಲ, ಬದಲಾಗಿ ಧಾನ್ಯವನ್ನು ಉತ್ಪಾದಿಸುವ ಗದ್ದೆಯಾಗಬೇಕು ಎನ್ನುವ ಆಶಯವೇ ಅದರ ಮುಖ್ಯ ಧ್ಯೇಯವಾಗಿತ್ತು.

ಇಲ್ಲಿ ಶೈಕ್ಷಣಿಕವಾಗಿ ಅಧ್ಯಯನಕ್ಕೆ ಆದ್ಯತೆ ನೀಡುವ ಅಧ್ಯಯನಾಂಗ, ಸಂಶೋಧನಾತ್ಮಕ ಬರಹ– ಲೇಖನಗಳ ಪ್ರಕಟಣೆ, ಶೈಕ್ಷಣಿಕ ಚಟುವಟಿಕೆಗಳ ಪ್ರಸಾರ ಮಾಡಲು ಆದ್ಯತೆ ನೀಡುವ ಪ್ರಸಾರಾಂಗ ಮತ್ತು ಆಡಳಿತಾಂಗ ಎನ್ನುವ ಮೂರು ಮುಖ್ಯ ಅಂಗಗಳಿವೆ. ಕನ್ನಡ ವಿವಿಯಲ್ಲಿ ಕಲಿಯಲು, ಸಂಶೋಧನೆ ನಡೆಸಲು ಬರುವ ವಿದ್ಯಾರ್ಥಿಗಳ ಪೈಕಿ ಶೇಕಡಾ 90ರಷ್ಟು ಗ್ರಾಮೀಣ, ದಲಿತ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ, ಅಲೆಮಾರಿ, ಬುಡಕಟ್ಟಿನ ವರ್ಗದವರಿದ್ದಾರೆ. ಕಳೆದ 25 ವರ್ಷಗಳಲ್ಲಿ ಕನ್ನಡ ವಿವಿಯು ಶೋಷಿತ ಜನಸಮುದಾಯದ ಅನೇಕ ಹದಿಹರೆಯದವರ ಸಂಶೋಧನೆಗೆ ಅಧ್ಯಯನಕ್ಕೆ ಸೂಕ್ತವಾದ ವೇದಿಕೆ ಸೃಷ್ಟಿಸಿದೆ. ತಮ್ಮ ಶೋಷಿತ ಬದುಕಿನ ಅನುಭವಗಳ ಜೊತೆಗೆ ಪರ್ಯಾಯ ಚಿಂತನೆಗಳನ್ನು ಒರೆ ಹಚ್ಚುವ, ನಿರ್ವಚಿಸುವ ಆತ್ಮವಿಶ್ವಾಸವನ್ನು, ಸಾಮರ್ಥ್ಯವನ್ನು ತಳ ಸಮುದಾಯದ ವಿದ್ಯಾರ್ಥಿಗಳಲ್ಲಿ ಮೂಡಿಸಿದೆ. ಹದಿಹರೆಯದ ವಿದ್ಯಾರ್ಥಿಗಳಲ್ಲಿ ತಿಳಿವಿನ ಅರಿವನ್ನು ರೂಪಿಸಿದೆ. ಜೀವಪರವಾದ ಕನ್ನಡ ಚಿಂತನೆಯ ಕ್ರಮವನ್ನು ಕಟ್ಟಿಕೊಡುವಲ್ಲಿ ಕನ್ನಡ ವಿವಿ ಮಹತ್ತರ ಪಾತ್ರವಹಿಸಿದೆ.

25 ವರ್ಷಗಳ ನಂತರ ಕನ್ನಡ ವಿವಿ ಅದರ ಉದ್ದೇಶಗಳು, ಆದ್ಯತೆಗಳಲ್ಲಿ ಎಷ್ಟರ ಮಟ್ಟಿಗೆ ತನ್ನ ಗುರಿಯನ್ನು ಸಾಧಿಸಿದೆ, ಯಾವ ಹಂತಗಳನ್ನು ದಾಟಿ ಬಂದಿದೆ, ಸಾಧಿಸಲಾಗದೇ ಉಳಿದ ಶೈಕ್ಷಣಿಕ ಯೋಜನೆಗಳೇನು, ವೈಫಲ್ಯಗಳೇನು ಎನ್ನುವುದು ಮುಕ್ತ ಚರ್ಚೆಗೆ ಸಂಬಂಧಪಟ್ಟಂತಹ ಸಂಗತಿ. ಕನ್ನಡ ವಿವಿಯ ಸದ್ಯದ ಅದರ ಆಡಳಿತ ಮತ್ತು ಶೈಕ್ಷಣಿಕ ಬಿಕ್ಕಟ್ಟುಗಳನ್ನು ಆದ್ಯತೆಯ ಮೇರೆಗೆ ಗುರುತಿಸಿ ಅದಕ್ಕೆ ಈಗಿರುವ ಸ್ವಾಯತ್ತ ವ್ಯವಸ್ಥೆಯಡಿಯಲ್ಲಿಯೇ ಪರಿಹಾರ ಕಂಡುಕೊಳ್ಳಬೇಕಾಗಿರುವುದೂ ಇಂದಿನ ತುರ್ತಾಗಿದೆ.

ಇಂದು ಸ್ವಾಯತ್ತತೆಯನ್ನು ಉಳಿಸಿಕೊಳ್ಳುವಲ್ಲಿ ಬಹಿರಂಗವಾಗಿ ಹೋರಾಡುತ್ತಿರುವ ಕನ್ನಡ ವಿಶ್ವವಿದ್ಯಾಲಯವು ತಾತ್ಕಾಲಿಕವಾಗಿ ಯಶಸ್ವಿಯಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಆಂತರಿಕವಾಗಿ ಇಂದಿನ ದಿನಗಳ ಅಗತ್ಯಕ್ಕೆ ಪೂರಕವಾದ ಹೊಸ ಸಂಚಲನೆಯನ್ನು, ಸಂವೇದನೆಯನ್ನು, ಕಂಡುಕೊಳ್ಳಬೇಕಾಗಿದೆ. ಒಂದರ್ಥದಲ್ಲಿ ತನ್ನ ಉಳಿವಿಗಾಗಿ ಒಳಗಣ ಹೋರಾಟ ಶುರುವಾಗಬೇಕಿದೆ. ಇಂದು ಅಧ್ಯಯನ ಮತ್ತು ಸಂಶೋಧನೆಯಲ್ಲಿ ಒಂದು ಹಂತವನ್ನು ತಲುಪಿರುವ ಕನ್ನಡ ವಿವಿ ಇಂದಿನ ತಲ್ಲಣ, ಬಿಕ್ಕಟ್ಟುಗಳ ಹಿನ್ನೆಲೆಯಲ್ಲಿ ಹೊಸ ಆಲೋಚನೆ ಮತ್ತು ಚಲನಶೀಲತೆಯನ್ನು ಕಟ್ಟಿಕೊಳ್ಳುವುದಕ್ಕಾಗಿ ಹೊಸ ಜಿಗಿತಕ್ಕೆ ಅಣಿಯಾಗಬೇಕಾಗಿದೆ. ಹೊಸ ಗೋಚರಗಳಿಗೆ ತನ್ನನ್ನು ತೆರೆದುಕೊಳ್ಳಬೇಕಾಗಿದೆ. ಹೊಸ ಆಕರಗಳನ್ನು ಸೃಷ್ಟಿಸಬೇಕಾಗಿದೆ.

ಇಲ್ಲಿ ದಶಕಗಳಿಂದ ನಿರಂತರವಾಗಿ ಅಧ್ಯಯನ, ಸಂಶೋಧನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ, ಕ್ರಿಯಾಶೀಲವಾಗಿರುವ, ವೈಚಾರಿಕವಾಗಿ, ಜನಪರವಾದ ತಲೆಮಾರುಗಳನ್ನು ರೂಪಿಸುತ್ತಿರುವ ಅಧ್ಯಾಪಕರಿದ್ದಾರೆ. ಅದೇ ಸಂದರ್ಭದಲ್ಲಿ ತನ್ನೊಳಗಿನ ಸರೀಕ ಅಧ್ಯಾಪಕರೊಂದಿಗೆ ತುಲನೆ ಮಾಡಿದಾಗ ನಿಷ್ಕ್ರಿಯಗೊಂಡ, ಅಲಂಕಾರಿಕವಾಗಿ ತಮ್ಮ ಹುದ್ದೆಗಳಿಗೆ ಅಂಟಿಕೊಂಡು ಕಾಲಹರಣ ಮಾಡಿದ ಮತ್ತು ಮಾಡುವ ಅಧ್ಯಾಪಕರ ಮತ್ತೊಂದು ವರ್ಗವೂ ಇದೆ. ಉದಾಹರಣೆಗೆ ಇಲ್ಲಿನ ಪ್ರತಿಯೊಬ್ಬ ಅಧ್ಯಾಪಕರು ತಮ್ಮ ವಿಭಾಗದಿಂದ ಒಂದು ಯೋಜನೆ ಮತ್ತು ವೈಯುಕ್ತಿಕವಾಗಿ ಒಂದು ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು ಮತ್ತು ಇದರ ಕುರಿತಾದ ಅಧ್ಯಯನ ವರದಿಗಳನ್ನು ಮತ್ತು ಪುಸ್ತಕಗಳನ್ನು ಪ್ರಕಟಿಸಬೇಕು. ಅಂತೆಯೇ ಪ್ರತಿ ವರ್ಷವೂ ಇದರ ಕುರಿತಾಗಿ ಮೌಲ್ಯಮಾಪನ ನಡೆಯಬೇಕು. ಆದರೆ ಕನ್ನಡ ವಿವಿಯಲ್ಲಿ ಈ ಯೋಜನೆಗಳನ್ನು ಕೈಗೆತ್ತಿಕೊಳ್ಳದ, ಯಾವುದೇ ಪುಸ್ತಕಗಳನ್ನು ಬರೆಯದ ಕೆಲ ಅಧ್ಯಾಪಕರಿದ್ದಾರೆ ಅಥವಾ ದಶಕಗಳಲ್ಲಿ ಒಂದೆರಡು ಪುಸ್ತಕಗಳನ್ನು ಮಾತ್ರ ಪ್ರಕಟಿಸಿದ ಅಧ್ಯಾಪಕರೂ ಇದ್ದಾರೆ. ಈ ಬಗ್ಗೆ ಗಂಭೀರ ಪರಾಮರ್ಶೆಯ ಅಗತ್ಯವಿದೆ. ಈ ಮಾದರಿಯ ಅಸೂಕ್ಷ್ಮತೆ, ಜಡತ್ವವು ವಿಶ್ವವಿದ್ಯಾಲಯದ ಚೈತನ್ಯವನ್ನು, ಬೌದ್ಧಿಕವಾದ ಜೀವಂತಿಕೆಯನ್ನು ನಾಶ ಮಾಡುತ್ತದೆ.

ಅಲ್ಲದೆ ಮುಂದಿನ ಐದು ವರ್ಷಗಳಲ್ಲಿ ನಿಸ್ವಾರ್ಥದಿಂದ ಕನ್ನಡ ವಿವಿಯನ್ನು ರೂಪಿಸಿದ, ಅರ್ಥಪೂರ್ಣವಾಗಿ ಕಟ್ಟಿದ ಅಧ್ಯಾಪಕರ ದೊಡ್ಡ ವಲಯವೊಂದು ನಿವೃತ್ತಿ ಹೊಂದಲಿದೆ. ಇವರ ಸ್ಥಾನದಲ್ಲಿ ಹೊಸ ಚಿಂತನೆಗಳ, ಕ್ರಿಯಾಶೀಲ, ವೈಚಾರಿಕ ಪ್ರಜ್ಞೆಯುಳ್ಳ, ಸಂಶೋಧನೆಯ ಅನುಭವವಿರುವ, ಬಹುತ್ವದ, ಬಹುಸಂಸ್ಕೃತಿಯ ನೆಲೆಯಲ್ಲಿ ಅಧ್ಯಯನ ಮಾಡಿದಂತಹವರನ್ನು ಸಾಮಾಜಿಕ ನ್ಯಾಯದ ಆಶಯಗಳಿಗೆ ಅನುಗುಣವಾಗಿ ನೇಮಕ ಮಾಡಿಕೊಳ್ಳಬೇಕಾಗಿದೆ. ಹೋರಾಟ ಮಾಡಿ ಸ್ವಾಯತ್ತತೆಯನ್ನು ಉಳಿಸಿಕೊಂಡ ಕನ್ನಡ ವಿಶ್ವವಿದ್ಯಾಲಯಕ್ಕೆ ಈ ಹೊಸ ತಲೆಮಾರಿನ ಸೃಜನಶೀಲ ಮನಸ್ಸುಗಳು ಭವಿಷ್ಯದಲ್ಲಿ ಕಾಯಕಲ್ಪ ಕೊಡಬಲ್ಲ ಸಾಮರ್ಥ್ಯ ಉಳ್ಳಂತವರಾಗಿರಬೇಕು. ಮತ್ತು ವಿವಿಯ ಸ್ವಾಯತ್ತತೆಗೆ ಅರ್ಥಪೂರ್ಣತೆಯನ್ನು ತಂದುಕೊಡಬಲ್ಲ, ಕನ್ನಡ ವಿವಿಯ ಚಟುವಟಿಕೆಗಳನ್ನು, ಕಾರ್ಯಯೋಜನೆಗಳನ್ನು ನಿರ್ಧರಿಸುವ, ಹೊಸ ದಿಕ್ಕಿಗೆ ಹೊರಳುವಲ್ಲಿ ನಿರ್ಣಾಯಕ ಪಾತ್ರವಹಿಸುವಲ್ಲಿ ಈ ಹೊಸ ಅಧ್ಯಾಪಕರ ನೇಮಕಾತಿಗಳು ಬಹು ಮುಖ್ಯವಾಗುತ್ತವೆ. ಇಂತಹದ್ದೊಂದು ನಿಷ್ಠುರ ಮೌಲ್ಯಾಧಾರಿತ ಹೊಸ ಅಧ್ಯಾಪಕರ ಆಯ್ಕೆ ಮಾಡುವ ಕುಲಪತಿಗಳು ಮಾತ್ರ ಕನ್ನಡ ವಿವಿಯನ್ನು ಹೊಸ ಜಿಗಿತಕ್ಕೆ ಸಿದ್ಧಗೊಳಿಸಬಲ್ಲರು. ಈ ದಿಕ್ಕಿನಲ್ಲಿ ಕನ್ನಡ ವಿಶ್ವವಿದ್ಯಾಲಯವು ಯಾವ ಬಗೆಯ ಸಿದ್ಧತೆ ಮಾಡಿಕೊಂಡಿದೆ ಎನ್ನುವ ಪ್ರಶ್ನೆ, ಆತಂಕ ಪ್ರಜ್ಞಾವಂತರನ್ನು ಕಾಡುತ್ತಿದೆ.

ಇಲ್ಲಿನ ಪ್ರಸಾರಾಂಗವು ಕನ್ನಡ ವಿವಿಯ ಅತ್ಯಂತ ಮುಖ್ಯವಾದ ಅಂಗವಾಗಿದೆ. ವಿವಿಯ ಎಲ್ಲಾ ಕಾರ್ಯಯೋಜನೆಗಳನ್ನು, ವರ್ತಮಾನದಲ್ಲಿನ ಚಟುವಟಿಕೆಗಳನ್ನು, ಸಂಶೋಧನೆಗಳನ್ನು ಹೊರಜಗತ್ತಿಗೆ ಪರಿಚಯಿಸುವ ಹೊಣೆಗಾರಿಕೆ ಇದರ ಮೇಲಿದೆ. ಹಿಂದಿನ ದಶಕಗಳಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿದ ಪ್ರಸಾರಾಂಗವು ಕೆಲ ವರ್ಷಗಳಿಂದ ಜಡಗೊಂಡಂತಿದೆ. ದೊಡ್ಡ ಚರ್ಚೆಯನ್ನು ಹುಟ್ಟುಹಾಕಬಲ್ಲ, ಹುಡುಕಿ ಓದುವ ಆಸಕ್ತಿ ಕೆರಳಿಸಬಲ್ಲ ಪುಸ್ತಕಗಳ ಪ್ರಕಟಣೆ ಕುಸಿದಂತೆ ಕಾಣುತ್ತಿದೆ.

ಅಂತೆಯೇ ತಾಂತ್ರಿಕವಾಗಿ ಬದಲಾದ ಜಗತ್ತಿನೊಂದಿಗೆ ಕೈಜೋಡಿಸುವಲ್ಲಿಯೂ ಪ್ರಸಾರಾಂಗ ಹಿಂದಿದೆ. ಉದಾಹರಣೆಗೆ ಎಲ್ಲವೂ ಅಂತರ್ಜಾಲದಲ್ಲಿ ಕೈಗೆಟುಕಬೇಕಾದ ಇಂದಿನ ದಿನಗಳಲ್ಲಿ ಪ್ರಸಾರಾಂಗದ ಪುಸ್ತಕಗಳನ್ನು ಆನ್‌ಲೈನ್‌ನಲ್ಲಿ ಕೊಳ್ಳುವ ವ್ಯವಸ್ಥೆಯನ್ನು ವಿವಿ ಮಾಡಿಲ್ಲ. ಯು.ಜಿ.ಸಿಯ ಶೋಧಗಂಗಾ ವೆಬ್ ತಾಣದಲ್ಲಿ ಸಂಶೋಧನ ಪ್ರಬಂಧಗಳು ಕ್ಷಣಮಾತ್ರದಲ್ಲಿ ಕೈಗೆಟುಕುವಂತಿವೆ, ಆದರೆ ಕನ್ನಡ ವಿವಿಯ ಒಂದೇ ಒಂದು ಸಂಶೋಧನಾ ಪ್ರಬಂಧವೂ ಶೋಧಗಂಗಾದಲ್ಲಿ ಲಭ್ಯವಿಲ್ಲ. ಇದರ ಜೊತೆಗೆ ಜಾಗತೀಕರಣದ ಇಂದಿನ ಜಗತ್ತಿನಲ್ಲಿ ಹೊರ ಜಗತ್ತಿನ ಚಿಂತನೆಗಳನ್ನು, ಅಗತ್ಯ ಆಕರಗಳನ್ನು ತನ್ನೊಳಗೆ ಬರಮಾಡಿಕೊಳ್ಳುವಲ್ಲಿ ಸೋತಿದೆ ಎಂದೆನಿಸುತ್ತದೆ. ಸಂಶೋದನೆ ಮತ್ತು ಅಧ್ಯಯನ ಕೇಂದ್ರವಾಗಿರುವಂತಹ ಕನ್ನಡ ವಿಶ್ವವಿದ್ಯಾಲಯವು ಸಿದ್ಧ ಮಾದರಿಗಳನ್ನು, ಚೌಕಟ್ಟುಗಳನ್ನು ಒಡೆದು ತನ್ನನ್ನು ಕಟ್ಟಿಕೊಳ್ಳಬೇಕಾಗಿದೆ. ಹೊರ ಜಗತ್ತಿನ ಜ್ಞಾನ, ಅನುಭವ, ಜನಪರ ಹೋರಾಟಗಳನ್ನು ವಿಶ್ವವಿದ್ಯಾಲಯದ ಒಳಗಿನ ಅಧ್ಯಯನಾಂಗಕ್ಕೆ ಹೆಣೆಯುವ ಜವಾಬ್ದಾರಿ ಪ್ರಸಾರಾಂಗದ ಮೇಲಿದೆ.

ಇಂದು ಕರ್ನಾಟಕದಲ್ಲಿ ಶಿಕ್ಷಣದ ಕುರಿತಂತೆ, ಕೃಷಿ ಕುರಿತಾಗಿ ಪ್ರಖರ ಒಳನೋಟಗಳನ್ನು, ಆಳವಾದ ಅನುಭವವನ್ನು ಹೊಂದಿದಂತಹ ಲೇಖಕ, ಹೋರಾಟಗಾರರಿದ್ದಾರೆ. ತಳಸಮುದಾಯದ ಸಮಾಜೋ- ರಾಜಕೀಯ- ಸಾಂಸ್ಕೃತಿಕ ಅಧ್ಯಯನಗಳನ್ನು ಮಾಡಿದಂತಹ ವಿಶಿಷ್ಟ ಸಂಸ್ಕೃತಿ ಚಿಂತಕರಿದ್ದಾರೆ. ಕಿರು ಝರಿಯಂತೆ ಸಂಶೋಧನಾ ವಿದ್ಯಾರ್ಥಿಗಳನ್ನು ಪೊರೆಯಬಲ್ಲಷ್ಟು ಸಾಮರ್ಥ್ಯ ಹೊಂದಿರುವ ಇವರ ಹೋರಾಟದ ಅನುಭವ ಮತ್ತು ಬೌದ್ಧಿಕತೆಯ ಅಂತಕರಣವು ಕನ್ನಡ ವಿವಿಯೊಳಗೆ ಪ್ರಜ್ಞಾ ಸಂಚಲನವಾಗಿ ಹರಿಯಬೇಕಿತ್ತು. ಸಂವಾದ, ಚರ್ಚೆಯ ಮೂಲಕ ಹುಟ್ಟಿಕೊಂಡ ಅವರ ಆಲೋಚನೆಗಳು ಸಂಶೋಧನಾ ವಿದ್ಯಾರ್ಥಿಗಳಿಗೆ ಕಲಿಕೆಯರಿಮೆಯಾಗಬೇಕಿತ್ತು. ಆದರೆ ಪ್ರಸಾರಾಂಗವು ಹೊರಜಗತ್ತಿನ ಹೊಸ ಚಿಂತನೆಗಳಿಂದ ವಿಮುಖಗೊಂಡಿರುವ ಕಾರಣದಿಂದ ಈ ಒಳಗೊಳ್ಳುವ ಪ್ರಕ್ರಿಯೆಯು ನಿಷ್ಕ್ರಿಯವಾಗಿದೆ. ಇನ್ನು ಮುಂದೆ ತನ್ನ ಜಡತ್ವವನ್ನು ಕಳಚಿಕೊಂಡು ಮುಕ್ತವಾಗಿ ತೆರೆದುಕೊಳ್ಳುವುದರ ಮೂಲಕ ತನ್ನನ್ನು ಪ್ರಸ್ತುತಗೊಳಿಸಿಕೊಳ್ಳಬೇಕಾದಂತಹ ತುರ್ತು ಪ್ರಸಾರಾಂಗದ ಮೇಲಿದೆ. 

ತನ್ನ ಈಗಿನ ಎಲ್ಲ ಮಿತಿಗಳನ್ನು ಮೀರಿ ಮತ್ತೊಂದು ಸ್ತರಕ್ಕೆ ಜಿಗಿಯುವಷ್ಟು ಸಾಮರ್ಥ್ಯ ಕನ್ನಡ ವಿಶ್ವವಿದ್ಯಾಲಯಕ್ಕೆ ಇದೆ. ಈ ಜಿಗಿತಕ್ಕೆ ಅಗತ್ಯವಾದ ದೂರದೃಷ್ಟಿ ಮತ್ತು ಒಳನೋಟಗಳೂ ಕನ್ನಡ ವಿವಿಗಿದೆ. ಅಲ್ಲಿನ ಆಡಳಿತಾಂಗವು ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕಾಗಿದೆ. ಮತ್ತು ದೂರಗಾಮಿ ಯೋಜನೆಗಳನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಂಡು ಬದ್ಧತೆಯಿಂದ ರೂಪಿಸಬೇಕಾಗಿದೆ. ಸಾವಿರ ನೇಗಿಲು ಗುಳಗಳು ಬಗೆದರೂ ಚಿಗುರುವ ಗರಿಕೆಯ ಬೇರುಗಳು ಎನ್ನುವ ರಾಮಯ್ಯನವರ ಸಾಲುಗಳು ಮತ್ತೆ ಮತ್ತೆ ನೆನಪಾಗುತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT