ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನ್‌ 1 ರಿಂದ ಇ–ವೇ ಬಿಲ್‌

Last Updated 16 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಜಿಎಸ್‌ಟಿ ವರಮಾನ ಸಂಗ್ರಹ ಕಡಿಮೆಯಾಗುತ್ತಿರುವುದರಿಂದ ಜೂನ್‌ 1ರಿಂದಲೇ ದೇಶವ್ಯಾಪಿ ಇ–ವೇ ಬಿಲ್‌ ವ್ಯವಸ್ಥೆ ಜಾರಿಗೆ ತರಲು ಜಿಎಸ್‌ಟಿ ಮಂಡಳಿ ಒಪ್ಪಿಗೆ ನೀಡಿದೆ.

ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ನೇತೃತ್ವದಲ್ಲಿ ಶನಿವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆಸಿದ 24ನೇ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ತೆರಿಗೆ ವರಮಾನ ಸಂಗ್ರಹದಲ್ಲಿ ಇಳಿಕೆ ಕಾಣುತ್ತಿದೆ. ಇದು ಆತಂಕ ಸೃಷ್ಟಿಸಿದ್ದು, ತೆರಿಗೆ ತಪ್ಪಿಸುವುದನ್ನು ತಡೆಯಲು ಶೀಘ್ರವೇ ಇ–ವೇ ಬಿಲ್ ಜಾರಿಗೊಳಿಸಲು ಜಿಎಸ್‌ಟಿ ಮಂಡಳಿ ನಿರ್ಧರಿಸಿದೆ.

ಜುಲೈನಿಂದ ಸೆಪ್ಟೆಂಬರ್‌ ತಿಂಗಳವರೆಗೆ ಸಂಗ್ರಹವಾಗಿರುವ ತೆರಿಗೆಗೆ ಹೋಲಿಸಿದರೆ ಅಕ್ಟೋಬರ್‌ನಲ್ಲಿ ತೆರಿಗೆ ಸಂಗ್ರಹ ಇಳಿಕೆ ಕಂಡಿದೆ. ಸೆಪ್ಟೆಂಬರ್‌ನಲ್ಲಿ
₹ 95,131 ಕೋಟಿ ಸಂಗ್ರಹವಾಗಿತ್ತು. ಅಕ್ಟೋಬರ್‌ನಲ್ಲಿ ₹ 83, 346 ಕೋಟಿಗೆ ಅಂದರೆ ₹ 11,785 ಕೋಟಿ ಕಡಿಮೆ ಆಗಿದೆ.

ದೇಶದಾದ್ಯಂತ ಅನ್ವಯಿಸುವ ಏಕರೂಪದ ಇ–ವೇ ಬಿಲ್‌ ವ್ಯವಸ್ಥೆಯ ಪರಿಶೀಲನೆ ನಡೆಯುತ್ತಿದೆ. ಹೀಗಾಗಿ ಸದ್ಯದ ಮಟ್ಟಿಗೆ ರಾಜ್ಯಗಳು ಈಗಾಗಲೇ ಬಳಸುತ್ತಿರುವ ಇ–ವೇ ಬಿಲ್ ವ್ಯವಸ್ಥೆಯನ್ನೇ ಮುಂದುವರಿಸಬಹುದು ಎಂದು ಮಂಡಳಿ ಹೇಳಿದೆ.

ದೇಶದಾದ್ಯಂತ ಪರೀಕ್ಷಾರ್ಥವಾಗಿ ಜನವರಿ 16 ರಿಂದ ಈ ವ್ಯವಸ್ಥೆ ಜಾರಿಗೆ ಬರಲಿದೆ. ವರ್ತಕರು ಮತ್ತು ಸರಕು ಸಾಗಣೆದಾರರು ಸ್ವಯಂ ಪ್ರೇರಿತರಾಗಿ ಬಳಕೆ ಮಾಡಲು ಆರಂಭಿಸಬಹುದು ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ರಾಜ್ಯ ಸರ್ಕಾರಗಳು ಜೂನ್‌ 1 ಕ್ಕೂ ಮೊದಲೇ ಯಾವಾಗ ಬೇಕಿದ್ದರೂ ಈ ಸೌಲಭ್ಯ ಜಾರಿಗೊಳಿಸಬಹುದು ಎಂದು ತಿಳಿಸಿದೆ.

ಕರ್ನಾಟಕ ಸೇರಿದಂತೆ ಈಗಾಗಲೇ ಕೆಲವು ರಾಜ್ಯಗಳು ಈ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ. ಇನ್ನೂ ಕೆಲವು ರಾಜ್ಯಗಳು ಶೀಘ್ರವೇ ಜಾರಿಗೊಳಿಸಲಿವೆ.

ಏನಿದು ವ್ಯವಸ್ಥೆ?
ಜಿಎಸ್‌ಟಿ ವ್ಯವಸ್ಥೆಯಲ್ಲಿ, ಸರಕುಗಳನ್ನು ರಾಜ್ಯದ ಒಳಗೆ ಮತ್ತು ರಾಜ್ಯದಿಂದ ರಾಜ್ಯಕ್ಕೆ ಸಾಗಿಸಲು ಇ–ವೇ ಬಿಲ್ ವ್ಯವಸ್ಥೆ ರೂಪಿಸಲಾಗಿದೆ. ₹50 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಸರಕುಗಳನ್ನು 10 ಕಿ.ಮೀ ಆಚೆಗೆ ಸಾಗಿಸುವ ಮುಂಚೆಯೇ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ.

ಸರಕು ಸಾಗಿಸುವ ದೂರ ಆಧರಿಸಿ ಬಿಲ್‌ನ ಸಿಂಧುತ್ವ ಜಾರಿಯಲ್ಲಿ ಇರುತ್ತದೆ. ಸರಕು ಸಾಗಿಸುವ ದೂರ ಆಧರಿಸಿ 1ರಿಂದ 20 ದಿನಗಳವರೆಗೆ ಸಿಂಧುತ್ವ ಹೊಂದಿರುವ ಇ–ವೇ ಬಿಲ್‌ಗಳನ್ನು ಜಿಎಸ್‌ಟಿಎನ್‌ ವಿತರಿಸಲಿದೆ.

ಸರಕುಗಳನ್ನು ಸಾಗಿಸುವವರು ತಮ್ಮ ಜತೆ ಸರಕುಪಟ್ಟಿ ಪೂರೈಕೆ ಬಿಲ್‌ ಅಥವಾ ಇ–ವೇ ಬಿಲ್‌ ಹೊಂದಿರಬೇಕು. ತೆರಿಗೆ ಅಧಿಕಾರಿಗಳು ಮಾರ್ಗಮಧ್ಯೆ ತಪಾಸಣೆ ನಡೆಸುವ ಅಧಿಕಾರ ಹೊಂದಿರುತ್ತಾರೆ.

ಅಂತರ್‌ ರಾಜ್ಯ ಸರಕುಗಳ ಸಾಗಾಣಿಕೆ ಮೇಲೆ ನಿಗಾ ಇಡಲು ನೆರವಾಗಲಿದೆ. ತೆರಿಗೆ ತಪ್ಪಿಸುವ ಪ್ರವೃತ್ತಿಗೂ ಕಡಿವಾಣ ಹಾಕಲು ಇದರಿಂದ ಸಾಧ್ಯವಾಗಲಿದೆ.

ವರಮಾನದಲ್ಲಿ ಇಳಿಕೆ
ಜಿಎಸ್‌ಟಿ ಜಾರಿಯಾದ ನಾಲ್ಕು ತಿಂಗಳಿನಲ್ಲಿ ವರಮಾನದಲ್ಲಿ ಇಳಿಕೆ ಕಂಡುಬಂದಿದೆ. ಇದರಿಂದ ರಾಜ್ಯಗಳಿಗೆ ನೀಡುವ ವರಮಾನ ನಷ್ಟ ಪರಿಹಾರದಲ್ಲಿಯೂ ಕಡಿಮೆ ಆಗುವ ಸಾಧ್ಯತೆ ಇದೆ ಎಂದು ಪಶ್ಚಿಮ ಬಂಗಾಳದ ಹಣಕಾಸು ಸಚಿವ ಅಮಿತ್‌ ಮಿತ್ರಾ ಹೇಳಿದ್ದಾರೆ.

ನಾಲ್ಕು ತಿಂಗಳಿನಲ್ಲಿ 1.72 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗುವ ಅಂದಾಜು ಮಾಡಲಾಗಿತ್ತು. ಆದರೆ ಸಂಗ್ರಹವಾಗಿರುವುದು ಮಾತ್ರ  ₹ 1.36 ಲಕ್ಷ ಕೋಟಿ. ಅಂದರೆ ನಿರೀಕ್ಷೆಗಿಂತಲೂ ₹ 36,000 ಕೋಟಿ ಕಡಿಮೆ ಆಗಿದೆ.

ರಾಜ್ಯಗಳಿಗೆ ಪರಿಹಾರವಾಗಿ ₹ 55,000 ಕೋಟಿ ನೀಡಬೇಕು. ವರಮಾನ ಸಂಗ್ರಹ ಹೆಚ್ಚಾಗದಿದ್ದರೆ ಪರಿಹಾರ ಮೊತ್ತ ನೀಡಲು ಕಷ್ಟವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳು (ಎಂಎಸ್‌ಎಂಇ) ಹೆಚ್ಚಿನ ಸಂಖ್ಯೆಯಲ್ಲಿ ಜಿಎಸ್‌ಟಿಎನ್‌ಗೆ ನೋಂದಣಿ ಆಗದೇ ಇರುವುದರಿಂದ ವರಮಾನದಲ್ಲಿ ಕೊರತೆಯಾಗಿದೆ ಎಂದು ಹೇಳಿದ್ದಾರೆ.

ಎನ್‌ಐಸಿಗೆ ₹ 40 ಕೋಟಿ
ಬೆಂಗಳೂರು ವರದಿ: ‘ಇ–ವೇ ಬಿಲ್ ವ್ಯಸ್ಥೆ ಅಭಿವೃದ್ಧಿಪಡಿಸಿ ಜಾರಿಗೊಳಿಸುವ ಹೊಣೆಗಾರಿಕೆಯನ್ನು ರಾಷ್ಟ್ರೀಯ ಮಾಹಿತಿ ಕೇಂದ್ರಕ್ಕೆ (ಎನ್‌ಐಸಿ) ನೀಡಲಾಗಿದೆ. ಮುಂಗಡವಾಗಿ ₹  40 ಕೋಟಿ ಪಾವತಿಸಲಾಗಿದೆ’  ಎಂದು ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ತಿಳಿಸಿದರು.

ಪ್ರಾಯೋಗಿಕವಾಗಿ ಸೆಪ್ಟೆಂಬರ್‌ 12ರಂದು ಕರ್ನಾಟಕ ದಲ್ಲಿ ಇ–ವೇ ಬಿಲ್ ಜಾರಿಗೊಳಿಸಲಾಗಿದ್ದು, ಪ್ರತಿ ದಿನ 1.20 ಲಕ್ಷ ಬಿಲ್‌ ಸೃಷ್ಟಿಯಾಗಿದೆ ಎಂದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT