ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯದತ್ತ ವಿನಯ್ ಬಳಗದ ಚಿತ್ತ

Last Updated 16 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಕೋಲ್ಕತ್ತ: ಸಂಭ್ರಮಾಚರಣೆಗೆ ಸದಾ ತುಡಿಯುವ ‘ಸಿಟಿ ಆಫ್ ಜಾಯ್’  ಕೋಲ್ಕತ್ತದಲ್ಲಿ  ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ನಾಲ್ಕರ ಘಟ್ಟದ ಪಂದ್ಯದಲ್ಲಿ ವಿಜಯೋತ್ಸವ ಆಚರಿಸುವ ಕನಸಿನೊಂದಿಗೆ ಕರ್ನಾಟಕ ತಂಡ ಬಂದಿಳಿದಿದೆ.

ಈಡನ್ ಗಾರ್ಡನ್ ನಲ್ಲಿ ಭಾನುವಾರ ಆರಂಭವಾಗಲಿರುವ ಸೆಮಿಫೈನಲ್ ಪಂದ್ಯದಲ್ಲಿ ಆರ್. ವಿನಯಕುಮಾರ್ ಬಳಗವು ವಿದರ್ಭ ತಂಡವನ್ನು ಎದು ರಿಸಲಿದೆ. ಟೂರ್ನಿಯ ಮೊದಲ ಪಂದ್ಯದಿಂದಲೂ ‘ಆಲ್‌ರೌಂಡ್ ಆಟ’ ಆಡುತ್ತ ಎದುರಾಳಿಗಳನ್ನು ಸೋಲಿಸುತ್ತ ಸೆಮಿಫೈನಲ್ ತಲುಪಿರುವ ಕರ್ನಾಟಕ  ಇಲ್ಲಿಯೂ  ಗೆಲ್ಲುವ ನೆಚ್ಚಿನ ತಂಡವಾಗಿದೆ.  ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ, ಕರ್ನಾಟಕ ತಂಡವು ವಿದರ್ಭ ಎದುರು  ಇದುವರೆಗೆ ಆಡಿರುವ ಐದು ಪಂದ್ಯಗಳಲ್ಲಿ  ಒಮ್ಮೆಯೂ ಸೋತಿಲ್ಲ.

ಅಲ್ಲದೇ ಈ ಋತುವಿನ ಲೀಗ್ ಹಂತದ ‘ಎ’ ಗುಂಪಿನಲ್ಲಿ ಒಂದೂ ಸೋಲು ಕಾಣದ ವಿನಯ್ ಬಳಗವು ಆತ್ಮವಿಶ್ವಾಸದ ಆಗಸದಲ್ಲಿದೆ. ಶನಿವಾರ ಈಡನ್ ಅಂಗಳದಲ್ಲಿ ಅಭ್ಯಾಸ ಮಾಡುತ್ತಿದ್ದ ಆಟಗಾರರ ಹಾವಭಾವದಲ್ಲಿ ಅದು ಎದ್ದು ಕಾಣುತ್ತಿತ್ತು. ಟೂರ್ನಿಯಲ್ಲಿಯೇ ಅತಿ ಹೆಚ್ಚು ರನ್ ಗಳಿಸಿರುವ ಮಯಂಕ್ ಅಗರವಾಲ್, ಭರವಸೆಯ ಆಟಗಾರ ಅರ್. ಸಮರ್ಥ್, 34 ವಿಕೆಟ್ ಗಳಿಸಿರುವ ಆಫ್ ಸ್ಪಿನ್ನರ್ ಕೃಷ್ಣಪ್ಪ ಗೌತಮ್, ಮುಂಬೈ ಎದುರು ಹ್ಯಾಟ್ರಿಕ್ ಗಳಿಸಿ ಗೆಲುವಿನ ರೂವಾರಿಯಾಗಿದ್ದ ನಾಯಕ ವಿನಯ್, ಅದೇ ಪಂದ್ಯದಲ್ಲಿ ಫಾರ್ಮ್‌ಗೆ ಮರಳಿದ್ದ ಸಿ.ಎಂ. ಗೌತಮ್ , ಕೊನೆಯ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಅರ್ಧಶತಕ ಗಳಿಸಿದ್ದ ಎಸ್. ಅರವಿಂದ್, ಶತಕ ಹೊಡೆದಿದ್ದ ಶ್ರೇಯಸ್ ಗೋಪಾಲ್ ಮತ್ತೆ ಮಿಂಚಲು ಸಿದ್ಧರಾಗಿದ್ದಾರೆ.

ನಾಗಪುರದ ಪಂದಕ್ಕೆ ಅಲಭ್ಯರಾಗಿದ್ದ  ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ ಮತ್ತು ಬ್ಯಾಟ್ಸ್‌ಮನ್ ಡಿ. ನಿಶ್ಚಲ್ ಗಾಯದಿಂದ ಚೇತರಿಸಿಕೊಂಡಿದ್ದಾರೆ. ಅವರು ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು. ಆದ್ದರಿಂದ ಮೀರ್ ಕೌನೇನ್ ಅಬ್ಯಾಸ್ ಮತ್ತು ಪವನ್ ದೇಶಪಾಂಡೆ ಬೆಂಚ್ ಹಾಯಿಸಬೇಕಾಗಬಹುದು. ಈ ಪಂದ್ಯದಲ್ಲಿಯೂ ಕೆ.ಎಲ್. ರಾಹುಲ್ ಮತ್ತು ಮನೀಷ್ ಪಾಂಡೆ ಆಡುವುದಿಲ್ಲ. ಇಬ್ಬರೂ ಭಾರತ ತಂಡದಲ್ಲಿದ್ದಾರೆ.

ವಿದರ್ಭ ತಂಡದ ತವರಿನ ಅಂಗಳ ನಾಗಪುರದಲ್ಲಿ ಹೋದ ವಾರ ಕರ್ನಾಟಕ ತಂಡವು ಬಲಿಷ್ಠ ಮುಂಬೈ  ಎದುರು ಗೆದ್ದು ಸೆಮಿಫೈನಲ್ ಪ್ರವೇಶಿಸಿತ್ತು. ಫಯಾಜ್ ಫಜಲ್ ನಾಯಕತ್ವದ ವಿದರ್ಭ ತಂಡವು ಸೂರತ್ ನಲ್ಲಿ ನಡೆದ್ದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೇರಳ ತಂಡವನ್ನು ಸೋಲಿಸಿತ್ತು.

ಲೀಗ್ ಹಂತದಲ್ಲಿ ತಂಡವು ಆರು ಪಂದ್ಯಗಳಲ್ಲಿ ಆಡಿ ನಾಲ್ಕರಲ್ಲಿ ಗೆದ್ದಿತ್ತು. ಬಲಾಢ್ಯ ಪಂಜಾಬ್ ಮತ್ತು ಬಂಗಾಳ ತಂಡವನ್ನು ಸದೆಬಡಿಯುವಲ್ಲಿ ನಾಯಕ ಫಯಾಜ್ , ಕನ್ನಡಿಗ ಗಣೇಶ್ ಸತೀಶ್ ಅವರ ಬ್ಯಾಟಿಂಗ್ ಪ್ರಮುಖ ಪಾತ್ರ ವಹಿಸಿತ್ತು. ಮಧ್ಯಮವೇಗಿ ಅಕ್ಷಯ್ ವಾಖರೆ, ಲಲಿತ್ ಯಾದವ್ ಕೂಡ ಕೈಚಳಕ ತೋರಿದ್ದರು.

ಆದರೆ, ಈ ಪಂದ್ಯದಲ್ಲಿ  ಬೌಲರ್ ಲಲಿತ್ ಯಾದವ್  ಕಣಕ್ಕಿಳಿಯುವುದು ಖಚಿತವಾಗಿಲ್ಲ. ಹೋದ ಪಂದ್ಯದಲ್ಲಿ ಗಾಯಗೊಂಡಿದ್ದ ಅವರು ಇನ್ನೂ ಚೇತರಿಸಿಕೊಂಡಿಲ್ಲ. ಭಾರತ ತಂಡದ ಬೌಲರ್ ಉಮೇಶ್ ಯಾದವ್  ಶ್ರೀಲಂಕಾ ಎದುರಿನ ಏಕದಿನ ಮತ್ತು ಟ್ವೆಂಟಿ–20 ಸರಣಿಯಲ್ಲಿ ಆಡುತ್ತಿಲ್ಲ. ಆದರೆ ತವರಿನ ತಂಡ ವಿದರ್ಭಕ್ಕೆ ಮರಳುವ ಬಗ್ಗೆಯೂ ಇನ್ನೂ ಖಚಿತವಾಗಿಲ್ಲ. ಒಂದೊಮ್ಮೆ ಅವರು ಕಣಕ್ಕಿಳಿದರೆ ಕರ್ನಾಟಕದ ಬ್ಯಾಟ್ಸ್ ಮನ್ ಗಳಿಗೆ ಅಗ್ನಿಪರೀಕ್ಷೆ ಎದುರಾಗುವುದು ಖಚಿತ.

ಹಸಿರು ಗರಿಕೆಗಳು ನಳನಳಿಸುತ್ತಿರುವ ಪಿಚ್ ಮಧ್ಯಮವೇಗಿಗಳಿಗೆ ನೆರವು ನೀಡುವುದು ಖಚಿತ. ಆದ್ದರಿಂದ ಟಾಸ್ ಗೆಲ್ಲುವ ನಾಯಕನ ನಿರ್ಧಾರವೂ ಇಲ್ಲಿ ಪ್ರಮುಖ ಪಾತ್ರವಹಿಸಲಿದೆ.

ತಂಡಗಳು ಇಂತಿವೆ

ಕರ್ನಾಟಕ: ಆರ್. ವಿನಯಕುಮಾರ್ (ನಾಯಕ), ಮಯಂಕ್ ಅಗರವಾಲ್, ಆರ್. ಸಮರ್ಥ್, ಡಿ. ನಿಶ್ಚಲ್, ಕರುಣ್ ನಾಯರ್, ಸ್ಟುವರ್ಟ್ ಬಿನ್ನಿ, ಸಿ.ಎಂ. ಗೌತಮ್, ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್, ಅಭಿಮನ್ಯು ಮಿಥುನ್, ಎಸ್. ಅರವಿಂದ್, ರೋನಿತ್ ಮೋರೆ, ಮೀರ್ ಕೌನೇನ್ ಅಬ್ಬಾಸ್, ಶರತ್ ಶ್ರೀನಿವಾಸ್, ಪಿ.ವಿ. ಶಶಿಕಾಂತ್ (ಮುಖ್ಯ ಕೋಚ್), ಜಿ.ಕೆ. ಅನಿಲಕುಮಾರ್ (ಬೌಲಿಂಗ್ ಕೋಚ್), ಸಿದ್ಧರಾಮು (ವ್ಯವಸ್ಥಾಪಕರು).

ವಿದರ್ಭ: ಫಯಾಜ್ ಫಜಲ್ (ನಾಯಕ), ಗಣೇಶ್ ಸತೀಶ್ (ಉಪನಾಯಕ), ರವಿ ಜಂಗೀದ್, ರಜನೀಶ್ ಗುರುಬಾನಿ, ಅಕ್ಷಯ್ ವಾಖರೆ, ವಸೀಂ ಜಾಫರ್, ಅಕ್ಷಯ್ ಕರ್ಣೇಕರ್, ಉಮೇಶ್ ಯಾದವ್, ಸಿದ್ಧೇಶ್ ನೇರಲ್, ಲಲಿತ್ ಯಾದವ್, ಸಂಜಯ್ ರಾಮಸ್ವಾಮಿ, ಆದಿತ್ಯ ಸರವಟೆ, ಜಿತೇಶ್ ಶರ್ಮಾ (ವಿಕೆಟ್ ಕೀಪರ್). ಶುಭಂ ಕಾಪಸೆ, ಸುನಿಕೇತ್ ಬಿಂಗೆವಾರ್, ಕೋಚ್: ಚಂದ್ರಕಾಂತ್ ಪಂಡಿತ್.
ಅಂಪೈರ್: ಪಶ್ಚಿಮ್ ಪಾಠಕ್, ವಿನೀತ್ ಕುಲಕರ್ಣಿ,  ಪಂದ್ಯ ರೆಫರಿ: ಮನು ನಾಯರ್.
ಪಂದ್ಯ ಆರಂಭ: ಬೆಳಿಗ್ಗೆ 9ರಿಂದ

ಈಡನ್‌ನಲ್ಲಿ ‘ಅಮೃತ ಗಳಿಗೆ‘ಯ ನೆನಪು
ಕರ್ನಾಟಕ ತಂಡಕ್ಕೆ ಈಡನ್ ಅಂಗಳದಲ್ಲಿ ಹಲವು ಸಮಧುರ ನೆನಪುಗಳಿವೆ. 1941–42ರಲ್ಲಿ ಇಲ್ಲಿ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಬಂಗಾಳ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದು ಅದರಲ್ಲಿ ಪ್ರಮುಖವಾದದ್ದು. ಆ ನೆನಪಿಗೆ ಈಗ 75 ವರ್ಷ ತುಂಬಿದೆ.

ಆ ಪಂದ್ಯದಲ್ಲಿ ಕರ್ನಾಟಕ ತಂಡವು 17 ರನ್ ಗಳಿಂದ ಗೆದ್ದಿತ್ತು. ನಂತರ ಫೈನಲ್ ನಲ್ಲಿ  ಶಫಿ ದಾರಾಶಾ ನಾಯಕತ್ವದ ತಂಡವು ಮುಂಬೈ ಎದುರು ರನ್ನರ್ ಅಪ್ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT