ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಿಷ್ಠ ಮೂಲವೇತನ ₹16,350ಕ್ಕೆ ಹೆಚ್ಚಳ?

Last Updated 16 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ರಚಿಸಿರುವ ಆರನೇ ವೇತನ ಆಯೋಗವು ಆರಂಭಿಕ ವೇತನ ಶ್ರೇಣಿಯ ಕನಿಷ್ಠ ಮೂಲವೇತನವನ್ನು ₹ 9,600 ರಿಂದ ₹16,350ಕ್ಕೆ ಹೆಚ್ಚಿಸಲು ಶಿಫಾರಸು ಮಾಡಲಿದೆ.

1ರಿಂದ 90ರವರೆಗಿನ ವಿವಿಧ ವೇತನ ಶ್ರೇಣಿಗಳ (ಪ್ರತಿವರ್ಷ ನೀಡುವ ವೇತನ ಬಡ್ತಿಯ ಅನುಸಾರ) ಈಗಿರುವ ಮೂಲವೇತನ ಹಾಗೂ ಸರ್ಕಾರಕ್ಕೆ ಶಿಫಾರಸು ಮಾಡಲಿರುವ ಪರಿಷ್ಕೃತ ವೇತನದ ಸಂಭಾವ್ಯ ಪಟ್ಟಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ನೌಕರರ ಆರಂಭಿಕ ವೇತನ ಶ್ರೇಣಿ ಅಂದರೆ ‘ಡಿ’ ಗ್ರೂಪ್‌ ನೌಕರರಿಗೆ ಮೂಲವೇತನ ₹9,600 ಇದ್ದು, ತುಟ್ಟಿಭತ್ಯೆ ಈಗ ಶೇ 45.25ರಷ್ಟಿದೆ. ಬೆಂಗಳೂರಿನಲ್ಲಿ ಮನೆಬಾಡಿಗೆ ಭತ್ಯೆ ಮೂಲವೇತನದ ಶೇ 30ರಷ್ಟಿದೆ.

ಶೇ 45.25ರಷ್ಟು ತುಟ್ಟಿಭತ್ಯೆಯನ್ನು ಮೂಲವೇತನದಲ್ಲಿ ವಿಲೀನ ಮಾಡಲು ಹಾಗೂ ಅಕ್ಕಪಕ್ಕದ ರಾಜ್ಯಗಳ ವೇತನ ಶ್ರೇಣಿಗೆ ಹೋಲಿಸಿದರೆ ರಾಜ್ಯ ಸರ್ಕಾರಿ ನೌಕರರಿಗೆ ಇರುವ ವೇತನ ವ್ಯತ್ಯಾಸ ಹೋಗಲಾಡಿಸಲು ಶೇ 2ರಿಂದ ಶೇ 4.75ರವರೆಗೆ ವೇಟೇಜ್‌ ನೀಡಲು ಆಯೋಗ ಶಿಫಾರಸು ಮಾಡಲಿದೆ.

ಹೀಗೆ ಮಾಡಿದಾಗ ಆರಂಭಿಕ ಮೂಲವೇತನ ₹9,600ರಿಂದ ₹16,350ಕ್ಕೆ ಹೆಚ್ಚಳವಾಗಲಿದೆ. ತುಟ್ಟಿಭತ್ಯೆ ಸೊನ್ನೆಗೆ ಇಳಿಯಲಿದೆ. ಶೇ 30ರವರೆಗೆ ಇರುವ ಮನೆಬಾಡಿಗೆ ಭತ್ಯೆಯನ್ನು ಸೇರಿಸಿದರೆ ಸರಿಸುಮಾರು ₹3,918 ವೇತನ ಹೆಚ್ಚಳವಾಗಲಿದೆ. ಆದರೆ ಮೂಲವೇತನದಲ್ಲಿ ₹6,750 ಹೆಚ್ಚಳವಾಗಲಿದೆ.

ರಾಜ್ಯ ಸರ್ಕಾರದಲ್ಲಿ ಗರಿಷ್ಠ ಸಂಬಳ ಪಡೆಯುವ ಅಂದರೆ ಐಎಎಸ್‌ ಅಲ್ಲದ ಸೂಪರ್ ಟೈಮ್ ಸ್ಕೇಲ್‌ನ ಅಧಿಕಾರಿ(ಆಯುಕ್ತರು, ನಿರ್ದೇಶಕರು, ಕಾರ್ಯದರ್ಶಿ) ಆರಂಭಿಕ ಮೂಲವೇತನ ಈಗ ₹56,550 ಇದೆ. ಈ ಮೊತ್ತವನ್ನು ₹95,325ಕ್ಕೆ ಹೆಚ್ಚಿಸಲು ಆಯೋಗ ಶಿಫಾರಸು ಮಾಡಲಿದೆ. ಮನೆಬಾಡಿಗೆ ಭತ್ಯೆ ಸೇರಿದರೆ ಒಟ್ಟು ಸಿಗುವ ವೇತನ ₹20,452 ಹೆಚ್ಚಳವಾಗಲಿದೆ. ಈ ಶ್ರೇಣಿಯ ವೇತನ ಪಡೆಯುವ ಅಧಿಕಾರಿಗಳಿಗೆ ಮೂಲವೇತನದ ಪ್ರಮಾಣದ ಸರಿಸುಮಾರು ₹38,775 ಹೆಚ್ಚಳವಾಗಲಿದೆ.

ವೇತನ ಬಡ್ತಿ ಮೊತ್ತ ಹೆಚ್ಚಳ

ನೌಕರರಿಗೆ ಪ್ರತಿ ವರ್ಷ ನೀಡುವ ವೇತನ ಬಡ್ತಿ ಮೊತ್ತವನ್ನು ಹೆಚ್ಚಿಸಲು ಆಯೋಗ ಶಿಫಾರಸು ಮಾಡಿದೆ. 17 ವಿವಿಧ ವೇತನ ಶ್ರೇಣಿಗಳನ್ನು ಪಟ್ಟಿ ಮಾಡಿದೆ.

ಆರಂಭಿಕ ಮೂಲವೇತನ ₹16,350 ಆಗುವ ನೌಕರರು ವಾರ್ಷಿಕ ವೇತನ ಬಡ್ತಿ ಪಡೆದರೆ ಮೂಲವೇತನಕ್ಕೆ ₹350 ಸೇರ್ಪಡೆಯಾಗಲಿದೆ. ಗ್ರೂಪ್ ‘ಎ’ ಶ್ರೇಣಿಯ ನೌಕರರಿಗೆ ವಾರ್ಷಿಕ ₹1,400 ಹೆಚ್ಚಳವಾಗಲಿದೆ.

ವಿವಿಧ ರಾಜ್ಯಗಳ ಹಾಗೂ ಕೇಂದ್ರ ಸರ್ಕಾರದ ವೇತನ ಶ್ರೇಣಿಗಳ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್. ಶ್ರೀನಿವಾಸಮೂರ್ತಿ ಅಧ್ಯಕ್ಷತೆಯಲ್ಲಿ ಇದೇ ವರ್ಷದ ಜೂನ್ ತಿಂಗಳಿನಲ್ಲಿ ವೇತನ ಆಯೋಗ ರಚಿಸಲಾಗಿದೆ. ವರದಿ ಸಲ್ಲಿಸಲು 2018ರ ಜನವರಿ 31 ರವರೆಗೆ ಅವಕಾಶ ಇದೆ.

‘ಇದೇ ತಿಂಗಳ ಅಂತ್ಯದೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲು ಸಿದ್ಧತೆ ನಡೆಸಲಾಗಿದೆ’ ಎಂದು ಆಯೋಗದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

* ಆಯೋಗವು ವರದಿಯನ್ನು ಸಿದ್ಧಪಡಿಸುತ್ತಿದೆ. ಈವರೆಗೆ ಯಾವುದೇ ಶಿಫಾರಸುಗಳನ್ನು  ಮಾಡಿಲ್ಲ. ನಿಮಗೆ ಸಿಕ್ಕಿರುವ ಪಟ್ಟಿಯ ಬಗ್ಗೆ ನನಗೆ ಗೊತ್ತಿಲ್ಲ

–ಎಂ.ಆರ್. ಶ್ರೀನಿವಾಸ ಮೂರ್ತಿ,
ಆರನೇ ವೇತನ ಆಯೋಗದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT