ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಕ್ಕೆ ಬರುವವರೆಗೂ ವಿರಮಿಸುವುದಿಲ್ಲ– ಕುಮಾರಸ್ವಾಮಿ

ಸಂಭ್ರಮದಿಂದ 59ನೇ ಹುಟ್ಟುಹಬ್ಬ ಆಚರಿಸಿಕೊಂಡ ಎಚ್‌ಡಿಕೆ
Last Updated 16 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಹೃದಯ ಶಸ್ತ್ರ ಚಿಕಿತ್ಸೆ ಬಳಿಕ ನನಗೆ ಪುನರ್ಜನ್ಮ ಸಿಕ್ಕಿದೆ. ಅಧಿಕಾರಕ್ಕೆ ಬರುವವರೆಗೂ ವಿರಮಿಸುವುದಿಲ್ಲ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಮಾಗಡಿ ರಸ್ತೆಯ ಗೊಲ್ಲರಹಟ್ಟಿಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿನಯದ ‘ಕುರುಕ್ಷೇತ್ರ’ ಚಿತ್ರದ ಟೀಸರ್ ಬಿಡುಗಡೆ ಮಾಡಿ ಮಾತನಾಡಿದರು.

‘ಬಿಜೆಪಿ ಹಾಗೂ  ಕಾಂಗ್ರೆಸ್ ಪಕ್ಷಕ್ಕೆ ಅವಕಾಶ ನೀಡಿದ್ದೀರಿ. ಅದೇ ರೀತಿ ನಮಗೂ ಒಂದು ಅವಕಾಶ ಕೊಡಿ. ರಾಜ್ಯದಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಸಂಘಟಿಸುತ್ತೇನೆ’ ಎಂದರು.

‘ನಮ್ಮ ಸರಕಾರ ಬಂದರೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಹಾಕಿಕೊಳ್ಳಲಿದ್ದೇವೆ. ಯುವಕರಿಗೆ ಉದ್ಯೋಗ ಸೃಷ್ಟಿ
ಸುವ ಯೋಜನೆಗಳನ್ನು ರೂಪಿಸಲಾಗುವುದು’ ಎಂದು ಭರವಸೆ ನೀಡಿದರು.

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಮಾತನಾಡಿ, ‘ಮುಂದಿನ ದಿನಗಳಲ್ಲಿ ಕುಮಾರಣ್ಣನ ಸರ್ಕಾರ ಬರಲಿದ್ದು, ಎಲ್ಲರ ಸಂಕಷ್ಟ ಬಗೆಹರಿಯಲಿದೆ. ರೈತರ ಸಾಲ ಮನ್ನಾ, 70 ವರ್ಷ ಮೇಲ್ಪಟ್ಟವರಿಗೆ ಪ್ರತಿ ತಿಂಗಳು ₹ 5,000 ಪಿಂಚಣಿ, ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ನೀಡುವುದು ಸೇರಿದಂತೆ ಜನಪರ ಕಾರ್ಯಕ್ರಮಗಳು ಜಾರಿಯಾಗಬೇಕಾದರೆ ಜೆಡಿಎಸ್‌ಗೆ ಪೂರ್ಣ ಬಹುಮತ ಸಿಗಬೇಕು’ ಎಂದರು.

‘ಎಐಸಿಸಿ ಅಧ್ಯಕ್ಷರಾಗಿ ರಾಹುಲ್‌ ಗಾಂಧಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ನಾನು ಟೀಕೆ ಮಾಡುವುದಿಲ್ಲ, ಕಾಂಗ್ರೆಸ್ ಬಗ್ಗೆ ವಿಶ್ಲೇಷಣೆಯನ್ನೂ ಮಾಡುವುದಿಲ್ಲ. ಸಂದರ್ಭ ಬಂದಾಗ ಎಲ್ಲವನ್ನೂ ಎಳೆ ಎಳೆಯಾಗಿ ಬಿಡಿಸಿಡುತ್ತೇನೆ. ಎರಡು ರಾಷ್ಟ್ರೀಯ ಪಕ್ಷಗಳು ಈ ನಾಡಿಗೆ ಏನು ಕೊಟ್ಟಿವೆ ಎಂಬುದು ಎಲ್ಲರಿಗೂ ಗೊತ್ತಿದೆ. ಅದಕ್ಕೆ ಕಾವೇರಿ ವಿಚಾರವೇ ಸಾಕ್ಷಿ’ ಎಂದು ಹೇಳಿದರು.

‘ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಪಕ್ಷದ ಮುಂಖಡರಾದ ಜವರೇಗೌಡ ಪಣ ತೊಟ್ಟಿದ್ದಾರೆ. ಯಶವಂತಪುರ ಕ್ಷೇತ್ರದಲ್ಲಿ ಅವರ ಗೆಲುವೂ ಖಚಿತ’ ಎಂದು ದೇವೇಗೌಡ ಹೇಳಿದರು.

ಅಪ್ಪಾಜಿ ಕ್ಯಾಂಟೀನ್ ಉದ್ಘಾಟನೆ: ಶೇಷಾದ್ರಿಪುರದಲ್ಲಿರುವ ಜೆಡಿಎಸ್ ಕಚೇರಿ ಸಮೀಪದಲ್ಲಿ ನಿರ್ಮಿಸಿರುವ ‘ನಮ್ಮ ಅಪ್ಪಾಜಿ ಕ್ಯಾಂಟೀನ್‌’ ಅನ್ನು ಕುಮಾರಸ್ವಾಮಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿ, ‘ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಅವರು ಹಸಿದವರಿಗೆ ಕಡಿಮೆ ದರದಲ್ಲಿ ಊಟ ನೀಡುವುದಕ್ಕಾಗಿ ನಗರದ ಹಲವೆಡೆ ನಮ್ಮ ಅಪ್ಪಾಜಿ ಕ್ಯಾಂಟೀನ್‌ಗಳನ್ನು ಪ್ರಾರಂಭಿಸಿದ್ದಾರೆ. ಇದು ಒಳ್ಳೆಯ ಕೆಲಸ. ಪಕ್ಷದ ಕಚೇರಿಗೂ ಹಲವು ಭಾಗಗಳಿಂದ ಜನರು ಬರುತ್ತಾರೆ. ಅವರಿಗೂ ಸಹ ಈ ಕ್ಯಾಂಟೀನ್‌ ಸಹಕಾರಿಯಾಗುತ್ತದೆ’ ಎಂದರು.

ಇದಕ್ಕೂ ಮುನ್ನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಬೆಳಿಗ್ಗೆ ಭೇಟಿ ನೀಡಿ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಾದ ಪಡೆದರು.

‘ಕುರುಕ್ಷೇತ್ರ’ ಟೀಸರ್ ಬಿಡುಗಡೆ

ನಿಖಿಲ್ ಕುಮಾರಸ್ವಾಮಿ ಅಭಿನಯದ, ಎಂ.ಮುನಿರತ್ನ ನಿರ್ದೇಶಕದ ‘ಕುರುಕ್ಷೇತ್ರ’ ಚಿತ್ರದ ಟೀಸರ್‌ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಬಳಿಕ ಮಾತನಾಡಿದ ನಿಖಿಲ್, ‘ನಮ್ಮ ತಂದೆಯ ಹುಟ್ಟುಹಬ್ಬದಂತು ಟೀಸರ್ ಬಿಡುಗಡೆ ಮಾಡಿರುವುದಕ್ಕೆ ಸಂತಸವಾಗುತ್ತಿದೆ. ಪ್ರತಿಯೊಂದು ಗ್ರಾಮದಲ್ಲಿ ಮಹಾಭಾರತ ನಾಟಕ ಪ್ರದರ್ಶನ ಮಾಡಲಾಗುತ್ತದೆ. ಅದೇ ಕಥಾವಸ್ತು ಇರುವ ಐತಿಹಾಸಿಕ ಚಿತ್ರದಲ್ಲಿ ಪಾತ್ರ ಮಾಡಿರುವುದು ಹೆಮ್ಮೆ ಎನಿಸುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT