ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ವೇಶ್ಯಾವಾಟಿಕೆ ಅಡ್ಡೆಯಲ್ಲಿ ನಗರದ ಹುಡುಗಿ!

Last Updated 16 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆರು ತಿಂಗಳ ಹಿಂದೆ ಮಾರತ್ತಹಳ್ಳಿಯಿಂದ ನಾಪತ್ತೆಯಾಗಿದ್ದ 16 ವರ್ಷದ ಹುಡುಗಿ, ದೆಹಲಿಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದ ಮನೆಯೊಂದರಲ್ಲಿ ಪತ್ತೆಯಾಗಿದ್ದಾಳೆ.

ಕೆಲಸ ಕೊಡಿಸುವುದಾಗಿ ಆಕೆಯನ್ನು ದೆಹಲಿಗೆ ಕರೆದೊಯ್ದು, ಕಾಜಲ್ ಎಂಬಾಕೆಗೆ ₹ 70 ಸಾವಿರಕ್ಕೆ ಮಾರಾಟ ಮಾಡಿದ್ದ ಶಿವಶಂಕರ್ ಎಂಬಾತನನ್ನು ಮಾರತ್ತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಆಕೆಯನ್ನು ದೆಹಲಿಯ ಜೆ.ಬಿ.ರಸ್ತೆಯ ಮನೆಯೊಂದರಲ್ಲಿ ಕೂಡಿಟ್ಟಿದ್ದ ರಾಜೇಶ್‌ ಕುಮಾರ್ ಹಾಗೂ ಛೋಟು ರಾಮ್‌ದೇನ್‌ ಎಂಬುವರನ್ನೂ ವಶಕ್ಕೆ ಪಡೆದಿದ್ದಾರೆ.

7ನೇ ತರಗತಿವರೆಗೆ ಓದಿರುವ ಸಂತ್ರಸ್ತೆ, ಪೋಷಕರ ಜತೆ ಕೂಲಿ ಕೆಲಸ ಮಾಡಿಕೊಂಡಿದ್ದಳು. ಇದೇ ಜೂನ್‌ನಲ್ಲಿ ಆಕೆಯನ್ನು ಮನೆ ಹತ್ತಿರ ಭೇಟಿಯಾಗಿದ್ದ ಶಿವಶಂಕರ್, ‘ದೆಹಲಿಯ ಅಪಾರ್ಟ್‌ಮೆಂಟ್‌ನಲ್ಲಿ ನಿನಗೆ ಸ್ವಚ್ಛತಾ ಕೆಲಸ ಕೊಡಿಸುತ್ತೇನೆ. ಕೈತುಂಬ ಹಣ ಸಿಗುತ್ತದೆ. ಪೋಷಕರಿಗೆ ತಿಳಿಸದೆ ನನ್ನ ಜತೆ ಬಂದುಬಿಡು’ ಎಂದು ಹೇಳಿದ್ದ. ಆತನ ಮಾತನ್ನು ನಂಬಿದ ಸಂತ್ರಸ್ತೆ, ಜೂನ್ 7ರಂದು ಶಿವಶಂಕರ್‌ನ ಜತೆ ಹೊರಟು ಹೋಗಿದ್ದಳು.

ಮಗಳು ಏಕಾಏಕಿ ನಾಪತ್ತೆಯಾಗಿದ್ದರಿಂದ ಕಂಗಾಲಾದ ಪೋಷಕರು, ಪರಿಚಿತರ ಮನೆಗಳಲ್ಲೆಲ್ಲ ಶೋಧ ನಡೆಸಿದ್ದರು. ಒಂದು ತಿಂಗಳು ಆಂಧ್ರಪ್ರದೇಶಕ್ಕೂ ಹೋಗಿ ಸಂಬಂಧಿಕರ ಮನೆಗಳಲೆಲ್ಲ ಹುಡುಕಾಟ ನಡೆಸಿದ್ದರು. ಯಾವುದೇ ಪ್ರಯೋಜನವಾಗದಿದ್ದಾಗ ನಗರಕ್ಕೆ ವಾಪಸಾಗಿ ಆ.8ರಂದು ಮಾರತ್ತಹಳ್ಳಿ ಠಾಣೆಗೆ ದೂರು ಕೊಟ್ಟಿದ್ದರು. ಅಲ್ಲದೆ, ‘ಮಗಳು ಸ್ಥಳೀಯ ಯುವಕನೊಬ್ಬನನ್ನು ಪ್ರೀತಿ ಮಾಡುತ್ತಿದ್ದಳು. ಆತನೇ ಆಕೆಯನ್ನು ಕರೆದುಕೊಂಡು ಹೋಗಿರಬಹುದು’ ಎಂಬ ಅನುಮಾನವನ್ನೂ ವ್ಯಕ್ತಪಡಿಸಿದ್ದರು.

ಅ‍ಪ‍ಹರಣ (ಐಪಿಸಿ 363) ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ ಪೊಲೀಸರು, ಸಂತ್ರಸ್ತೆ ಪ್ರೀತಿಸುತ್ತಿದ್ದ ಹುಡುಗನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದರು. ಆಗ ಆತ, ‘ನಾನು ಆಕೆಯನ್ನು ಅಪಹರಿಸಿಲ್ಲ. ಎಲ್ಲಿಗೆ ಹೋಗಿದ್ದಾಳೆ ಎಂಬುದೂ ಗೊತ್ತಿಲ್ಲ. ಹಲವು ದಿನಗಳಿಂದ ಆಕೆಯ ಮೊಬೈಲ್ ಸ್ವಿಚ್ಡ್‌ಆಫ್ ಆಗಿದೆ’ ಎಂದು ಹೇಳಿದ್ದ.

ಮಗಳ ಬಳಿ ಮೊಬೈಲ್ ಇರುವ ವಿಚಾರ ಪೋಷಕರಿಗೂ ಗೊತ್ತಿರಲಿಲ್ಲ. ಆಕೆಯ ಪ್ರಿಯಕರನಿಂದ ಮೊಬೈಲ್ ಸಂಖ್ಯೆ ಪಡೆದುಕೊಂಡ ಪೊಲೀಸರು, ಕರೆ ವಿವರ (ಸಿಡಿಆರ್) ಪರಿಶೀಲಿಸಿದ್ದರು. ಆಗ, ಜೂನ್ 9ರಂದೇ ಮೊಬೈಲ್ ಸ್ವಿಚ್ಡ್‌ಆಫ್ ಆಗಿರುವುದು ಗೊತ್ತಾಗಿತ್ತು. ಕಡೆಯದಾಗಿ ಆಕೆಗೆ ಕರೆ ಬಂದಿದ್ದ ಸಂಖ್ಯೆಗಳನ್ನು ಪೊಲೀಸರು ಪರಿಶೀಲಿಸಿದಾಗ, ಶಿವಶಂಕರ್ ಸಿಕ್ಕಿಬಿದ್ದ. ಆತನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಹುಡುಗಿಯನ್ನು ದೆಹಲಿಯಲ್ಲಿ ಮಾರಾಟ ಮಾಡಿ ಬಂದಿದ್ದಾಗಿ ಹೇಳಿದ್ದ.

ಈ ಮಾಹಿತಿ ಆಧರಿಸಿ ಇನ್‌ಸ್ಪೆಕ್ಟರ್ ವಿಕ್ಟರ್‌ ಸೈಮನ್‌ ನೇತೃತ್ವದ ತಂಡ ಇತ್ತೀಚೆಗೆ ದೆಹಲಿಗೆ ತೆರಳಿತ್ತು. ಸ್ಥಳೀಯ ಪೊಲೀಸರ ನೆರವಿನಿಂದ ಜಿ.ಬಿ.ರಸ್ತೆಯ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದಾಗ ಸಂತ್ರಸ್ತೆ ಸಿಕ್ಕಿದ್ದಾಳೆ. ಅಲ್ಲಿದ್ದ ಬೇರೆ ರಾಜ್ಯಗಳ ಹುಡುಗಿಯರನ್ನು ದೆಹಲಿ ಪೊಲೀಸರ ವಶಕ್ಕೆ ಒಪ್ಪಿಸಿ ಸಂತ್ರಸ್ತೆ ಹಾಗೂ ಆರೋಪಿಗಳಿಬ್ಬರನ್ನು ನಗರಕ್ಕೆ ಕರೆತಂದಿದ್ದಾರೆ.

ಪರಿಶೀಲನೆ
‘ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿರುವ ಸಂಬಂಧ ರಾಜೇಶ್ ಹಾಗೂ ಛೋಟು ವಿರುದ್ಧ ದೆಹಲಿಯ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಶಿವಶಂಕರ್‌ನ ಪೂರ್ವಾಪರ ಪರಿಶೀಲಿಸಲಾಗುತ್ತಿದೆ. ಹಿಂದೆಯೂ ಈ ರೀತಿ ಹುಡುಗಿಯರನ್ನು ಮಾರಾಟ ಮಾಡಿದ್ದನೇ ಎಂಬ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ’ ಎಂದು ವೈಟ್‌ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದರು.

ಮರ್ಯಾದೆಗೆ ಅಂಜಿದೆವು
‘ಕಾಣೆಯಾದ ದಿನವೇ ದೂರು ಕೊಟ್ಟಿದ್ದರೆ ಮಗಳು ಇನ್ನೂ ಬೇಗ ಪತ್ತೆಯಾಗುತ್ತಿದ್ದಳು. ಮರ್ಯಾದೆಗೆ ಅಂಜಿ ನಾವೇ ಹುಡುಕಲು ಮುಂದಾದೆವು. ಅದರಲ್ಲಿ ಸೋತು ಎರಡು ತಿಂಗಳ ಬಳಿಕ ಠಾಣೆ ಮೆಟ್ಟಿಲೇರಿದೆವು. ಮಗಳನ್ನು ಸುರಕ್ಷಿತವಾಗಿ ಕರೆತಂದ ಪೊಲೀಸರಿಗೆ ಕೃತಜ್ಞತೆ ಸ‌ಲ್ಲಿಸುತ್ತೇನೆ’ ಎಂದು ಸಂತ್ರಸ್ತೆಯ ತಂದೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT