ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸನ್ನಿ ನೈಟ್ಸ್‌’ಗೆ ₹1.5 ಕೋಟಿ!

Last Updated 16 ಡಿಸೆಂಬರ್ 2017, 19:39 IST
ಅಕ್ಷರ ಗಾತ್ರ

ಬೆಂಗಳೂರು: ಹೊಸ ವರ್ಷಾಚರಣೆ ನಿಮಿತ್ತ ನಟಿ ಸನ್ನಿ ಲಿಯೋನ್ ನಗರದ ಮಾನ್ಯತಾ ಟೆಕ್‌ಪಾರ್ಕ್‌ನಲ್ಲಿ ಡಿ. 31ರಂದು ರಾತ್ರಿ ನಡೆಸಿಕೊಡಲಿರುವ 'ಸನ್ನಿ ನೈಟ್ಸ್‌' ಕಾರ್ಯಕ್ರಮಕ್ಕೆ ₹1.5 ಕೋಟಿ ಖರ್ಚು ಮಾಡಲಾಗುತ್ತಿದೆ. ಇದಕ್ಕೆ ಪೊಲೀಸರಿಂದ ಅನುಮತಿ ಸಿಗದಿದ್ದರಿಂದ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿಯಾಗಲು ಆಯೋಜಕರು ತೀರ್ಮಾನಿಸಿದ್ದಾರೆ.

‘ಟೈಮ್ಸ್‌ ಕ್ರಿಯೆಷನ್ಸ್‌ ಸೇರಿ ಹಲವು ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. ಸಭಾಭವನ, ವಿಮಾನದ ಟಿಕೆಟ್‌, ಹೋಟೆಲ್‌ ಕೊಠಡಿ
ಗಳನ್ನು ಈಗಾಗಲೇ ಕಾಯ್ದಿರಿಸಿದ್ದೇವೆ. ಅಂದು ರಾತ್ರಿ 10 ಗಂಟೆಯಿಂದಲೇ ಸಂಗೀತ ಕಾರ್ಯಕ್ರಮಗಳು ಆರಂಭವಾಗಲಿದ್ದು, ಸ್ಥಳೀಯ ಕಲಾವಿದರು ಪ್ರದರ್ಶನ ನೀಡಲಿದ್ದಾರೆ. 11ಗಂಟೆಯಿಂದ 12ರವರೆಗೆ ಸನ್ನಿ ಲಿಯೋನ್‌ ಅವರ ವಿಶೇಷ ಕಾರ್ಯಕ್ರಮವಿರಲಿದೆ’ ಎಂದು ಟೈಮ್ಸ್‌ ಕ್ರಿಯೆಷನ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಹರೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಕಾರ್ಯಕ್ರಮದ ಪ್ರವೇಶಕ್ಕೆ ಟಿಕೆಟ್‌ ಇದ್ದು, ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ವಿವಿಧ ಬಗೆಯ ಆಹಾರವೂ ಲಭ್ಯವಿರಲಿದೆ. ಭದ್ರತೆಗಾಗಿ 60 ಬೌನ್ಸರ್‌, 60 ಖಾಸಗಿ ಭದ್ರತಾ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತಿದೆ. ಆನ್‌ಲೈನ್‌ ಮೂಲಕ ಟಿಕೆಟ್‌ ಕಾಯ್ದಿರಿಸುವ ಪ್ರಕ್ರಿಯೆಯೂ ಆರಂಭವಾಗಿದೆ’ ಎಂದು ಹೇಳಿದರು.

ಅನುಮತಿ ಕೋರಿ ಮನವಿ: ‘ಅನುಮತಿ ಕೋರಿ ಸಂಪಿಗೆಹಳ್ಳಿ ಠಾಣೆಯ ಪೊಲೀಸರಿಗೆ ಈಗಾಗಲೇ ಮನವಿ ಸಲ್ಲಿಸಿದ್ದೇವೆ. ಆದರೆ, ಅವರು ಇದುವರೆಗೂ ಅನುಮತಿ ಕೊಟ್ಟಿಲ್ಲ. ವಿಳಂಬಕ್ಕೆ ಕಾರಣವನ್ನು ತಿಳಿಸುತ್ತಿಲ್ಲ. ಮುಂಗಡವಾಗಿ ಎಲ್ಲರಿಗೂ ಹಣ ನೀಡಿದ್ದೇವೆ. ಕಾರ್ಯಕ್ರಮವೇನಾದರೂ ರದ್ದಾದರೆ ನಷ್ಟವಾಗಲಿದೆ’ ಎಂದು ಹರೀಶ್‌ ತಿಳಿಸಿದರು.

‘ಆದಷ್ಟು ಬೇಗ ಅನುಮತಿ ನೀಡುವಂತೆ ಗೃಹ ಸಚಿವರನ್ನು ಕೋರಲಿದ್ದೇವೆ. ಕಾರ್ಯಕ್ರಮದ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳದ ಕೆಲವರು, ಪ್ರತಿಭಟನೆ ಮಾಡುತ್ತಿದ್ದಾರೆ. ಸಂಸ್ಕೃತಿಗೆ ಧಕ್ಕೆಯಾಗುವಂಥದ್ದು ಏನು ಇಲ್ಲ. ಈ ಕಾರ್ಯಕ್ರಮದ ರೂಪುರೇಷೆಯನ್ನು ಸಚಿವರಿಗೆ ತೋರಿಸಲಿದ್ದೇವೆ’ ಎಂದರು.

ಯಾರೊಬ್ಬರೂ ಅನುಮತಿ ಕೋರಿಲ್ಲ: ‘ಸನ್ನಿ ನೈಟ್ಸ್‌ ಕಾರ್ಯಕ್ರಮವನ್ನು ಯಾರು ಆಯೋಜಿಸುತ್ತಿದ್ದಾರೆ ಎಂಬುದೇ ಗೊತ್ತಿಲ್ಲ. ಅನುಮತಿ ಕೋರಿ ಯಾರೊಬ್ಬರೂ ನನ್ನ ಬಳಿ ಬಂದಿಲ್ಲ’ ಎಂದು ನಗರ ಪೊಲೀಸ್‌ ಕಮಿಷನರ್‌ ಟಿ.ಸುನೀಲ್‌ಕುಮಾರ್‌ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕೇರಳದಲ್ಲಿ ನಡೆದಿದ್ದ ಸನ್ನಿ ಲಿಯೋನ್‌ ಕಾರ್ಯಕ್ರಮದ ವೇಳೆ ಗಲಾಟೆ ಆಗಿತ್ತು. ಇಲ್ಲಿಯೂ ಆ ರೀತಿಯಾದರೆ ಆಯೋಜಕರನ್ನೇ ಹೊಣೆಯನ್ನಾಗಿಸುತ್ತೇವೆ. ಪೊಲೀಸರ ಅನುಮತಿ ಇಲ್ಲದೆ ಕಾರ್ಯಕ್ರಮ ನಡೆಸಿದರೆ ಆಯೋಜಕರ ವಿರುದ್ಧ ಕಠಿಣ ಕ್ರಮ
ಕೈಗೊಳ್ಳಲಿದ್ದೇವೆ’ ಎಂದರು.

ಸಂಭಾವನೆ ₹50 ಲಕ್ಷ?
ಸನ್ನಿ ಲಿಯೋನ್‌ ಒಂದು ಗಂಟೆಯ ಕಾರ್ಯಕ್ರಮ ನಡೆಸಿಕೊಡಲಿದ್ದು, ಅದಕ್ಕೆ ₹50 ಲಕ್ಷ ಸಂಭಾವನೆ ಪಡೆದಿದ್ದಾರೆ. ಅವರ ವಾಸ್ತವ್ಯ ಹಾಗೂ ಹಿಂಬಾಲಕರಿಗೆ ಪ್ರತ್ಯೇಕವಾಗಿ ₹10 ಲಕ್ಷ ಖರ್ಚು ಮಾಡಲಾಗುತ್ತಿದೆ ಎಂದು ಗೊತ್ತಾಗಿದೆ. ಡಿ. 31ರಂದು ರಾತ್ರಿ 11ಕ್ಕೆ ಸನ್ನಿ ನೃತ್ಯಪ್ರದರ್ಶಿಸಲಿದ್ದಾರೆ. 12 ಗಂಟೆಗೆ ಕೇಕ್‌ ಕತ್ತರಿಸುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ಮುಗಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT