ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದಸ್ಯೆ ಸಂಬಂಧಿ ಅಧ್ಯಕ್ಷತೆಯಲ್ಲಿ ಸಭೆ!

ದೊಡ್ಡ ನಲ್ಲಾಳ ಗ್ರಾಮ ಪಂಚಾಯಿತಿ: ‘ನಾದಿನಿ’ ಹೆಸರಿಗಷ್ಟೇ ಸದಸ್ಯೆ
Last Updated 16 ಡಿಸೆಂಬರ್ 2017, 19:42 IST
ಅಕ್ಷರ ಗಾತ್ರ

ಹೊಸಕೋಟೆ: ಗ್ರಾಮ ಪಂಚಾಯಿತಿ ಸದಸ್ಯನೇ ಅಲ್ಲದ ವ್ಯಕ್ತಿಯ ಅಧ್ಯಕ್ಷತೆಯಲ್ಲಿ ಪಂಚಾಯಿತಿಯ ಸಾಮಾನ್ಯ ಸಭೆ ನಡೆಯಲು ಸಾಧ್ಯವೇ?

ತಾಲ್ಲೂಕಿನ ದೊಡ್ಡ ನಲ್ಲಾಳ ಗ್ರಾಮ ಪಂಚಾಯಿತಿಯಲ್ಲಿ ಇದು ಸಾಧ್ಯ. ಇಲ್ಲಿನ ಗ್ರಾಮ ಪಂಚಾಯಿತಿ ಸಭೆಗಳಲ್ಲಿ ನಾದಿನಿ ಪರವಾಗಿ ಆಕೆಯ ಭಾವ ಹಾಜರಾಗುತ್ತಿದ್ದಾರೆ. ಅಷ್ಟೇ ಅಲ್ಲ, ಅವರೇ ಸಭೆಯ ಅಧ್ಯಕ್ಷತೆಯನ್ನೂ ವಹಿಸುತ್ತಿದ್ದಾರೆ. ಈ ವಿಚಾರವನ್ನು ಪಂಚಾಯಿತಿಯ ಸದಸ್ಯರೇ ಬಹಿರಂಗಪಡಿಸಿದ್ದಾರೆ.

‘ಸವಲತ್ತುಗಳಿಗೆ ಫಲಾನುಭವಿಗಳ ಆಯ್ಕೆ, ಪಂಚಾಯಿತಿ ಸಭೆಯ ನಡಾವಳಿಗಳು ಎರಡೂವರೆ ವರ್ಷಗಳಿಂದ ಅಪ್ಪಸಂದ್ರ ಗ್ರಾಮದ ನಾರಾಯಣಸ್ವಾಮಿ ಎಂಬುವರ ಆದೇಶದಂತೆಯೇ ನಡೆಯುತ್ತಿವೆ. ಅವರು ಸಭೆಗಳಿಗೆ ಹಾಜರಾಗುತ್ತಿದ್ದರೂ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯಾಗಲಿ ಕಾರ್ಯದರ್ಶಿಯವರಾಗಲಿ ಚಕಾರವೆತ್ತುತ್ತಿಲ್ಲ. ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡು ಆ ವ್ಯಕ್ತಿಯು ಅಧಿಕಾರಿಗಳನ್ನು ಹಿಡಿತದಲ್ಲಿಟ್ಟುಕೊಂಡಿದ್ದಾರೆ. ಸಭೆಯಲ್ಲಿ ಭಾಗವಹಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುವಲ್ಲಿಯೂ ಸಫಲರಾಗಿದ್ದಾರೆ’ ಲ’ ಎಂದು ಸದಸ್ಯರೊಬ್ಬರು ತಿಳಿಸಿದರು.

‘ಪಂಚಾಯಿತಿಯ ಅನುದಾನ ದುರುಪಯೋಗವಾಗುತ್ತಿರುವ ಬಗ್ಗೆ ‍ಪ್ರಶ್ನಿಸಿದ ಸದಸ್ಯರಿಗೂ ಗೂಂಡಾಗಳಿಂದ ಬೆದರಿಕೆ ಹಾಕಿಸಲಾಗಿದೆ. ಹೀಗಾಗಿ ಸದಸ್ಯರೂ ಮೌನವಾಗಿದ್ದಾರೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಎ.ಸಿ.ಸುಬ್ರಹ್ಮಣ್ಯ ದೂರಿದರು.

‘ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆ ಸಭೆ ನಾರಾಯಣಸ್ವಾಮಿ ಅಣತಿಯಂತೆಯೇ ನಡೆಯಿತು. ಈ ಸಭೆಯಲ್ಲಿ ನಿರ್ದಿಷ್ಟ ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದಕ್ಕೆ ಕೆಲವು ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಆ ಸದಸ್ಯರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಗೊಂದಲ ನಿರ್ಮಿಸಲಾಯಿತು. ಇಷ್ಟಾದರೂ ಸಭೆಗೆ ಬಂದ ಅಧಿಕಾರಿಗಳು ಚಕಾರವೆತ್ತಲಿಲ್ಲ’ ಎಂದು ಅವರು ಬೇಸರ ತೋಡಿಕೊಂಡರು.

‘ಪಂಚಾಯಿತಿ ಆಡಳಿತ ದುರ್ಬಳಕೆ ಬಗ್ಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ಸದಸ್ಯರು ದೂರಿದರು.

ಈ ಬಗ್ಗೆ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಮಂಜುನಾಥ್ ಅವರನ್ನು ಸಂಪರ್ಕಿಸಿದಾಗ, ‘ಈ ವಿಚಾರ ಗಮನಕ್ಕೆ ಬಂದಿಲ್ಲ. ಪಂಚಾಯಿತಿ ಸಭೆಗಳಲ್ಲಿ ಸದಸ್ಯರಲ್ಲದವರು ಪ್ರವೇಶಿಸದಂತೆ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸುತ್ತೇನೆ’ ಎಂದು ತಿಳಿಸಿದರು.

ಸದಸ್ಯರಲ್ಲ ವ್ಯಕ್ತಿ ಅಕ್ರಮವಾಗಿ ಗ್ರಾಮ ಪಂಚಾಯಿತಿ ಸಭೆಗೆ ಹಾಜರಾದರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ದೊಡ್ಡನಲ್ಲಾಳ ಗ್ರಾಮ ಪಂಚಾಯಿತಿ ಸದಸ್ಯರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಶುಕ್ರವಾರ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT