ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೊಚ್ಚಲ ಪ್ರಶಸ್ತಿಗೆ ಇನ್ನೊಂದೇ ಹೆಜ್ಜೆ

Last Updated 16 ಡಿಸೆಂಬರ್ 2017, 20:02 IST
ಅಕ್ಷರ ಗಾತ್ರ

ದುಬೈ: ದುಬೈ ವಿಶ್ವ ಸೂಪರ್‌ ಸೀರಿಸ್‌ ಫೈನಲ್ಸ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿಯ ಕನವರಿಕೆಯಲ್ಲಿರುವ ಭಾರತದ ಪಿ.ವಿ.ಸಿಂಧು, ಈ ಹಾದಿಯಲ್ಲಿ ಇನ್ನೊಂದೆ ಹೆಜ್ಜೆ ಸಾಗಬೇಕಿದೆ.

ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಸಿಂಧು ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಶೇಖ್‌ ಹಮ್‌ದಾನ್‌ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಸಿಂಧು 21–15, 21–18ರ ನೇರ ಗೇಮ್‌ಗಳಿಂದ ಚೀನಾದ ಚೆನ್‌ ಯೂಫಿ ಅವರನ್ನು ಸೋಲಿಸಿದರು. ಈ ಹೋರಾಟ 58 ನಿಮಿಷ ನಡೆಯಿತು.

ಪ್ರಶಸ್ತಿಗಾಗಿ ಸಿಂಧು, ಜಪಾನ್‌ನ ಆಟಗಾರ್ತಿ, ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಅಕಾನೆ ಯಮಗುಚಿ ವಿರುದ್ಧ ಆಡಲಿದ್ದಾರೆ. ಈ ಪಂದ್ಯ ಭಾನುವಾರ ನಡೆಯಲಿದೆ. ಗುಂಪು ಹಂತದ ಪಂದ್ಯದಲ್ಲಿ ಸಿಂಧು, ಯಮಗುಚಿ ಸವಾಲು ಮೀರಿದ್ದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ಭಾರತದ ಆಟಗಾರ್ತಿ ಆರಂಭದಿಂದಲೇ ಆಕ್ರಮಣಕಾರಿ ಆಟ ಆಡಿದರು. ಒಲಿಂ‍ಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ಸಿಂಧು ಬಾರಿಸುತ್ತಿದ್ದ ಷಟಲ್‌ ಹಿಂತಿರುಗಿಸಲು ಎಂಟನೇ ಶ್ರೇಯಾಂಕಿತೆ ಚೆನ್‌ ಪ್ರಯಾಸಪಟ್ಟರು.

ಎದುರಾಳಿ ಆಟಗಾರ್ತಿ ಒತ್ತಡಕ್ಕೆ ಒಳಗಾಗಿರುವುದನ್ನು ಮನಗಂಡ ಸಿಂಧು, ಚುರುಕಿನ ಡ್ರಾಪ್‌ಗಳ ಮೂಲಕ ಪಾಯಿಂಟ್ಸ್‌ ಹೆಕ್ಕಿ ಗೆಲುವಿನ ತೋರಣ ಕಟ್ಟಿದರು.

ಎರಡನೇ ಗೇಮ್‌ನಲ್ಲಿ ಉಭಯ ಆಟಗಾರ್ತಿಯರು ಜಿದ್ದಾಜಿದ್ದಿನ ಪೈಪೋಟಿ ನಡೆಸಿದರು. ಹೀಗಾಗಿ ಪಂದ್ಯ ಸಮಬಲದಲ್ಲಿ ಸಾಗಿತು. ಇದರ ನಡುವೆಯೂ ಸಿಂಧು ಮುನ್ನಡೆ ಗಳಿಸಿ ವಿರಾಮಕ್ಕೆ ಹೋದರು.

ದ್ವಿತೀಯಾರ್ಧದಲ್ಲಿ ಯೂಫಿ ಆಟ ಕಳೆಗಟ್ಟಿತು. ಅವರು ಬಲಿಷ್ಠ ಹಿಂಗೈ ಮತ್ತು ಮುಂಗೈ ಹೊಡೆತಗಳ ಮೂಲಕ ಪಾಯಿಂಟ್ಸ್‌ ಕಲೆಹಾಕಿದ್ದರಿಂದ ಭಾರತದ ಆಟಗಾರ್ತಿಗೆ ತಿರುಗೇಟು ನೀಡಬಹುದೆಂದು ಅಂದಾಜಿಸಲಾಗಿತ್ತು. ಆದರೆ ಸಿಂಧು ಇದಕ್ಕೆ ಅವಕಾಶ ನೀಡಲಿಲ್ಲ. ಗುಂಪು ಹಂತದ ಎಲ್ಲಾ ಪಂದ್ಯಗಳಲ್ಲೂ ಗೆದ್ದು ವಿಶ್ವಾಸ ಹೆಚ್ಚಿಸಿಕೊಂಡಿದ್ದ ಸಿಂಧು, ಮನಮೋಹಕ ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ಗಳನ್ನು ಬಾರಿಸಿ ಯೂಫಿ ಸವಾಲು ಮೀರಿದರು.

ಇಂಟನಾನ್‌ ಎದುರು ಗೆದ್ದ ಅಕಾನೆ: ನಾಲ್ಕರ ಘಟ್ಟದ ಇನ್ನೊಂದು ಪಂದ್ಯದಲ್ಲಿ ಜಪಾನ್‌ನ ಆಟಗಾರ್ತಿ ಅಕಾನೆ ಯಮಗುಚಿ ಗೆಲುವಿನ ಸಿಹಿ ಸವಿದರು.

ಯಮಗುಚಿ 17–21, 21–12, 21–19ರಲ್ಲಿ ಥಾಯ್ಲೆಂಡ್‌ನ ರಚನೊಕ್‌ ಇಂಟನಾನ್‌ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT