ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸ್ತುಪ್ರದರ್ಶನ 10 ದಿನ ವಿಸ್ತರಣೆ ಸಾಧ್ಯತೆ

Last Updated 17 ಡಿಸೆಂಬರ್ 2017, 6:18 IST
ಅಕ್ಷರ ಗಾತ್ರ

ಮೈಸೂರು: ಸೆಪ್ಟೆಂಬರ್‌ನಲ್ಲಿ ಸುರಿದ ಭಾರಿ ಮಳೆಯಿಂದ ಉಂಟಾಗಿರುವ ನಷ್ಟ ಭರಿಸಲು ದಸರಾ ವಸ್ತುಪ್ರದರ್ಶನವನ್ನು ಮತ್ತೆ 10 ದಿನ ವಿಸ್ತರಿಸುವ ಸಾಧ್ಯತೆ ಇದೆ. ಈ ಸಂಬಂಧ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರವು ಪ್ರವಾಸೋದ್ಯಮ ಇಲಾಖೆಗೆ ಪತ್ರ ಬರೆದಿದೆ. ದೊಡ್ಡಕೆರೆ ಮೈದಾನದಲ್ಲಿರುವ ಪ್ರಾಧಿಕಾರದ ಆವರಣದಲ್ಲಿ ಸೆ.20ರಂದು ಆರಂಭವಾದ 90 ದಿನಗಳ ವಸ್ತುಪ್ರದರ್ಶನ ಡಿ.19ಕ್ಕೆ ತೆರೆ ಬೀಳಬೇಕಿತ್ತು.

‘ನಿರೀಕ್ಷೆಗೂ ಮೀರಿ ಮಳೆ ಬಂದಿದ್ದರಿಂದ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಭೇಟಿ ನೀಡಿದವರ ಸಂಖ್ಯೆಯೂ ತಗ್ಗಿದೆ. ಹೀಗಾಗಿ, ‍ನಿರೀಕ್ಷಿಸಿದಷ್ಟು ಪ್ರವೇಶ ಶುಲ್ಕ ಸಂಗ್ರಹವಾಗಿಲ್ಲ. ಸುಮಾರು ₹ 80 ಲಕ್ಷ ನಷ್ಟ ಉಂಟಾಗಿದೆ ಎಂದು ಗುತ್ತಿಗೆದಾರರು ದೂರು ನೀಡಿದ್ದಾರೆ. ಈ ಕಾರಣದಿಂದ ವಸ್ತುಪ್ರದರ್ಶನವನ್ನು ಮತ್ತಷ್ಟು ದಿನ ವಿಸ್ತರಿಸಲು ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ’ ಎಂದು ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ವಸ್ತುಪ್ರದರ್ಶನದಲ್ಲಿ ಮಕ್ಕಳ ಮನರಂಜನೆಗಾಗಿ ನಿರ್ಮಿಸಿರುವ ಅಮ್ಯೂಸ್‌ಮೆಂಟ್‌ ಪಾರ್ಕ್‌ ಸೆಪ್ಟೆಂಬರ್‌–ಅಕ್ಟೋಬರ್‌ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜಲಾವೃತವಾಗಿತ್ತು. ಪ್ರವಾಸಿಗರನ್ನು ಆಕರ್ಷಿಸಲು ನಿರ್ಮಿಸಿದ್ದ ವೈಟ್‌ಹೌಸ್‌ ಮಾದರಿಯೊಳಗೂ ನೀರು ನುಗ್ಗಿತ್ತು. ಅಲ್ಲದೆ, ಕೆಲ ಮಳಿಗೆಗಳ ನಿರ್ಮಾಣವೇ ವಿಳಂಬವಾಗಿತ್ತು.

ಈ ಬಾರಿ ₹ 6.52 ಕೋಟಿಗೆ ಬೆಂಗಳೂರಿನ ಫನ್‌ವರ್ಲ್ಡ್‌ಗೆ ಟೆಂಡರ್‌ ಆಗಿತ್ತು. ಪಾರ್ಕಿಂಗ್‌ ಹಾಗೂ ಪ್ರವೇಶ ಶುಲ್ಕ ಸಂಗ್ರಹಕ್ಕೂ ಟೆಂಡರ್‌ ನೀಡಲಾಗಿತ್ತು. ದೊಡ್ಡವರಿಗೆ ₹ 20, ಮಕ್ಕಳು, ಅಂಗವಿಕಲರಿಗೆ ₹ 10 ಪ್ರವೇಶ ಶುಲ್ಕ ನಿಗದಿಪಡಿಸಲಾಗಿತ್ತು.

‘ಇದುವರೆಗೆ ಸುಮಾರು 8 ಲಕ್ಷ ಜನ ವಸ್ತುಪ್ರದರ್ಶನಕ್ಕೆ ಭೇಟಿ ನೀಡಿದ್ದಾರೆ. ಪ‍್ರವೇಶ ಶುಲ್ಕದಿಂದ ಇದುವರೆಗೆ ₹ 1.70 ಕೋಟಿ ಸಂಗ್ರಹವಾಗಿದೆ. ಪಾರ್ಕಿಂಗ್‌ ಶುಲ್ಕವನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗಿದೆ. ಮಳೆ ಸುರಿದ ಕಾರಣ ನಮ್ಮ ವಹಿವಾಟಿಗೆ ದೊಡ್ಡ ಹೊಡೆತ ಬಿದ್ದಿದೆ’ ಎಂದು ಗುತ್ತಿಗೆದಾರರು ಅಲವತ್ತುಕೊಂಡರು.

2016ರಲ್ಲಿ ₹ 4.40 ಕೋಟಿಗೆ ಟೆಂಡರ್‌ ನೀಡಲಾಗಿತ್ತು. ಪಾರ್ಕಿಂಗ್‌ನಿಂದ ₹ 30 ಲಕ್ಷ ಹಾಗೂ ಪ್ರವೇಶದ್ವಾರ ಶುಲ್ಕದಿಂದ ₹ 2.32 ಕೋಟಿ ಆದಾಯ ಬಂದಿತ್ತು. 100 ದಿನ ನಡೆದ ವಸ್ತುಪ್ರದರ್ಶನ ವೀಕ್ಷಣೆಗೆ 11 ಲಕ್ಷ ಜನ ಭೇಟಿ ನೀಡಿದ್ದರು. 2015ರಲ್ಲಿ 90 ದಿನ ನಡೆದ ವಸ್ತುಪ್ರದರ್ಶನವನ್ನು 10 ಲಕ್ಷ ಜನ ವೀಕ್ಷಿಸಿದ್ದರು.

* * 

10 ದಿನಗಳ ಮಟ್ಟಿಗೆ ವಸ್ತುಪ್ರದರ್ಶನ ವಿಸ್ತರಿಸಲು ಅನುಮತಿ ಲಭಿಸುವ ನಿರೀಕ್ಷೆ ಇದೆ. ಕ್ರಿಸ್‌ಮಸ್‌ ರಜೆ ಇರುವುದರಿಂದ ಪ್ರವಾಸಿಗರು ಭೇಟಿ ನೀಡಲಿದ್ದಾರೆ
ಶಶಿಕುಮಾರ್‌
ಸಿಇಒ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT