ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮದ ಹೆಸರಲ್ಲಿ ರಾಜಕೀಯ ಬೇಡ

Last Updated 17 ಡಿಸೆಂಬರ್ 2017, 6:44 IST
ಅಕ್ಷರ ಗಾತ್ರ

ಉಡುಪಿ: ‘ಧರ್ಮದ ಹೆಸರಿನಲ್ಲಿ ನಡೆಯುವ ರಾಜಕಾರಣವನ್ನು ನಾವು ವಿರೋಧಿಸುತ್ತೇವೆ. ಎಲ್ಲರೂ ನಮ್ಮವರು ಎಂದು ಭಾವಿಸುವುದು ಹಿಂದೂವಾದವೇ ಹೊರತು, ನಾವು ಮಾತ್ರ ಶ್ರೇಷ್ಠ ಎನ್ನುವುದು ಅಲ್ಲ’ ಎಂದು ಚಿಂತಕ ಶಿವಸುಂದರ್ ಹೇಳಿದರು. ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಷನ್ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ‘ಹಲವು ಧರ್ಮಗಳು– ಒಂದು ಭಾರತ’ ಸೌಹಾರ್ದ ಸಮಾವೇಶದಲ್ಲಿ ಅವರು ಮಾತನಾಡಿದರು.

ಹಿಂದುತ್ವ ಎಲ್ಲರೂ ನಮ್ಮವರು ಎಂದು ಭಾವಿಸುವ ಪರಂಪರೆಗೆ ವಿರುದ್ಧವಾದದು. ಜೈ ಶ್ರೀರಾಮ್ ಅಂದರೆ ತಪ್ಪಿಲ್ಲ, ಅಲ್ಲಾಹು ಅಕ್ವರ್ ಹಾಗೂ ಎಲ್ಲ ಮಹಿಮೆ ಕ್ರಿಸ್ತನಿಗೆ ಸೇರಲಿ ಎಂದರೂ ಅದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಭಾರತದಲ್ಲಿ ಇರಬೇಕಾದರೆ ಜೈ ಶ್ರೀರಾಮ್ ಅನ್ನಲೇಬೇಕು ಎಂದು ಹೇಳುವುದು ಕೋಮುವಾದ ಎಂದು ಅವರು ಹೇಳಿದರು.

ನಾವು ಯಾವುದೇ ಧರ್ಮದ ವಿರುದ್ಧ ಇಲ್ಲ, ಆದರೆ ಕಡ್ಡಾಯವಾಗಿ ಜೈ ಎಂದು ಹೇಳು ಎನ್ನುವ ಅಧರ್ಮದ ವಿರುದ್ಧ ಇದ್ದೇವೆ. ಹೀಗೆ ಹೇಳುವವರನ್ನು ಹಿಂದೂ ವಿರೋಧಿಗಳು ಎಂದು ಬಿಂಬಿಸಲಾಗುತ್ತಿದೆ ಎಂದರು.

‘ಬಾಬರಿ ಮಸೀದಿ ಧ್ವಂಸ ಮಾಡಿದಾಗ ‘ನನ್ನ ಹೃದಯದ ಒಳಗಿರುವ ರಾಮನ ಕೊಂದಂಗಾಯ್ತು’ ಎಂದು ಸಾಹಿತಿ ಪು.ತಿ. ನರಸಿಂಹಚಾರ್ ಹೇಳಿದ್ದರು. ನಾನೊಬ್ಬ ಒಳ್ಳೆಯ ಹಿಂದೂ ಆಗಿದ್ದರೆ ಒಳ್ಳೆಯ ಮುಸ್ಲಿಂ, ಕ್ರೈಸ್ತ ಸಹ ಆಗಿರುತ್ತೇನೆ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು’ ಎಂದು ಹೇಳಿದರು. ಇನ್ನೊಬ್ಬರ ನೋವನ್ನು ನಮ್ಮ ನೋವು ಎಂದು ಭಾವಿಸೋದೇ ನಿಜವಾದ ಧರ್ಮ ಎಂದು ಅವರು ಹೇಳಿದರು.

ಎಸ್‌ಐಒ ರಾಷ್ಟ್ರ ಘಟಕದ ಅಧ್ಯಕ್ಷ ನಹಾಸ್ ಮಾಳ ಉದ್ಘಾಟಿಸಿದರು. ರಾಜ್ಯ ಘಟಕದ ಅಧ್ಯಕ್ಷ ಮಹಮ್ಮದ್ ರಫೀಕ್ ಬೀದರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹಮ್ಮದ್ ಕುಂಞ ಅಧ್ಯಕ್ಷತೆ ವಹಿಸಿದ್ದರು. ಎಸ್‌ಐಒ ಜಿಲ್ಲಾಧ್ಯಕ್ಷ ಶುಐಬ್ ಮಲ್ಪೆ, ಯುಬಿಎಂಇ ಚರ್ಚ್‌ನ ಧರ್ಮಗುರು ಡೇವಿಡ್‌ ನಿರ್ಮಾನಿಕ್ ಇದ್ದರು. ಯಾಸಿನ್ ಕೋಡಿಬೆಂಗ್ರೆ ಕಾರ್ಯಕ್ರಮ ನಿರೂಪಿಸಿದರು.

‘ರಾಜಕೀಯಕ್ಕಾಗಿ ಸೌಹಾರ್ದತೆ ಕೆಡಿಸಲಾಗುತ್ತಿದೆ’

ರಾಜಕೀಯ ಉದ್ದೇಶಕ್ಕಾಗಿ ದೇಶದ ಸೌಹಾರ್ದತೆ ಕೆಡಿಸಲಾಗುತ್ತಿದೆ. ಆಳುವವರು ಕೇವಲ ಒಂದು ಧರ್ಮದ ಕನ್ನಡಿಯಾಗಬಾರದು. ದೇಶದ ಎಲ್ಲ ಜನರನ್ನು ಸಮಾನತೆ ದೃಷ್ಟಿಯಿಂದ ನೋಡಬೇಕು. ಸಾಮಾಜಿಕ ಸಮಾನತೆ ಇದ್ದಾಗ ಮಾತ್ರ ದೇಶ ಏಳಿಗೆಯಾಗುತ್ತದೆ. ಸೌಹಾರ್ದತೆ ಭಾವದಿಂ ಮಾತ್ರ ದೇಶ ಬೆಳೆಯುತ್ತದೆ ಎಂದು ಎಸ್‌ಐಒ ರಾಷ್ಟ್ರ ಘಟಕದ ಅಧ್ಯಕ್ಷ ನಹಾಸ್ ಮಾಳ ಹೇಳಿದರು.

* * 

ಹಿಂದುತ್ವ ಎಂಬುದು ನಿಜವಾದ ಹಿಂದೂಗಳಿಗೆ ಶತ್ರು. ನಕಲಿ ಹಿಂದೂವಾದಿಗಳು ಹಿಂದುತ್ವವಾದಿಗಳಾಗಿದ್ದಾರೆ.
ಶಿವಸುಂದರ್, ಚಿಂತಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT