ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಣ ಮೇಳಕ್ಕೆ ಶೃಂಗಾರಗೊಂಡ ಶರಣಲೋಕ

Last Updated 17 ಡಿಸೆಂಬರ್ 2017, 6:57 IST
ಅಕ್ಷರ ಗಾತ್ರ

ಅಂದಿಗೂ, ಇಂದಿಗೂ, ಇನ್ನೂ ಹಲವು ಶತಮಾನಗಳು ಉರುಳಿದರೂ ಅಸ್ತಿತ್ವದಲ್ಲಿರುವ ಹಲವು ಸಾರ್ವಕಾಲಿಕ ಸಂದೇಶಗಳನ್ನು ತಮ್ಮ ವಚನಗಳ ಮೂಲಕ ಬಿತ್ತಿದ ಬಸವಣ್ಣ ಹಾಗೂ ಸಮಕಾಲೀನ ಶರಣ–ಶರಣಿಯರ ಆದರ್ಶ ಕಾಯಕ ಬದುಕಿನ ದರ್ಶನ ಮಾಡಿಸುವುದೇ ಕೂಡಲಸಂಗಮದ ಶರಣಲೋಕ.

ಬಸವ ಧರ್ಮ ಪೀಠದ ಆವರಣದಲ್ಲಿರುವ ಶರಣಲೋಕದ 30 ಶರಣರ ಮಂಟಪಗಳು ಜನವರಿ 11ರಿಂದ 14ರವರೆಗೆ ನಡೆಯುವ 31ನೇ ಶರಣ ಮೇಳಕ್ಕೆ ರಂಗು ರಂಗಿನ ಬಣ್ಣದಿಂದ ಶೃಂಗಾರಗೊಳ್ಳುತ್ತಿದೆ. ಜೊತೆಗೆ ನಿತ್ಯ ಸುಕ್ಷೇತ್ರಕ್ಕೆ ಬರುವ ಪ್ರವಾಸಿಗರಿಗೆ 12ನೇ ಶತಮಾನದ ಶರಣ ಸಮಾಜದ ದರ್ಶನ ಮಾಡಿಸುತ್ತಿವೆ.

ದೋಣಿಯ ಮೂಲಕ ಭಕ್ತರನ್ನೆಲ್ಲ ಶಿವಪಥದತ್ತ ಸಾಗಿಸಿದ ಅಂಬಿಗರ ಚೌಡಯ್ಯ, ಜ್ಞಾನದ ಪ್ರತೀಕವಾದ ಚನ್ನಬಸಣ್ಣ, ವೈರಾಗ್ಯದ ಪ್ರತೀಕವಾದ ಅಲ್ಲಮಪ್ರಭುದೇವರು, ವಾಮಾಚಾರದಲ್ಲಿ ನಿರತರಾಗಿದ್ದ ಜನರ ಮನಪರಿವರ್ತನೆ ಮಾಡಿ ಲಿಂಗದೀಕ್ಷೆ ಕೊಟ್ಟ ಮರುಳಸಿದ್ದರು, ನೊಂದವರನ್ನು ಸಂತೈಸಿ , ಶರಣ ಸಂಸ್ಕೃತಿಯನ್ನು ಬೆಳೆಸಿದ ತೋಂಟದ ಸಿದ್ದಲಿಂಗೇಶ್ವರ, ಕೀಳು ಜಾತಿಯಲ್ಲಿ ಜನಿಸಿ ಶರಣರ ಸಂಗದಿಂದ ಜಗತ್ತಿಗೆ ದಿವ್ಯಪ್ರಭೆ ಭಿತ್ತಿದ ಡೋಹಾರ ಕಕ್ಕಯ್ಯ, ದನ ಮೇಯಿಸುವ ಕಾಯಕದ ಮೂಲಕ ವಚನ ರಚಿಸಿದ ತುರುಗಾಹಿ ರಾಮಣ್ಣ, ಮಲೆ ಮಹದೇಶ್ವರರು, ಹಡಪದ ಅಪ್ಪಣ್ಣ, ಪಾಲ್ಕುರಿಕೆ ಸೋಮನಾಥ, ಮಡಿವಾಳ ಮಾಚಿದೇವ, ಅಕ್ಕಮಹಾದೇವಿ, ಅಕ್ಕನಾಂಗಲಾಂಬಿಕೆ,ಮನ್ಮಥ ಸ್ವಾಮಿ,ಜೇಡರ ದಾಸಿಮಯ್ಯ ಮುಂತಾದ ಶರಣರ ಮಂಟಪಗಳು ಶರಣ ಶರಣಿಯರ ಬದುಕು ಕಾಯಕದ ದರ್ಶನವನ್ನು ಇಲ್ಲಿದೆ.

ಶರಣ–ಶರಣಿಯರ ಮಂಟಪದ ಜೊತೆಗೆ ಬಸವಣ್ಣನ ಬಾಲ್ಯದಿಂದ ಲಿಂಗೈಕ್ಯದವರೆಗಿನ ಚಿತ್ರಗಳ ಸಂಗ್ರಹಾಲಯ ಬಸವ ದರ್ಶನ ಮಾಡಿಸುವುದು. ಸಮಗಾರ ಹರಳಯ್ಯನ ಮಗ ಶೀಲವಂತನಿಗೂ, ಮಧುವರಸನ ಮಗಳು ಲಾವಣ್ಯಳಿಗೂ ಬಸವಣ್ಣ ವಿವಾಹ ಮಾಡಿಸಿದ ದೃಶ್ಯ ಪ್ರವಾಸಿಗರಲ್ಲಿ ಜಾತಿ ಭೇದಭಾವ ಮರೆಸುವುದು. ನಂತರ ಹರಳಯ್ಯ,ಮಧುವರಸ, ಶೀಲವಂತರಿಗೆ ಏಳೆಹೂಟೆ ಶಿಕ್ಷೆಯ ಚಿತ್ರ ಅಂದಿನ ಜಾತಿ ವ್ಯವಸ್ಥೆಯ ದರ್ಶನ ಮಾಡಿಸುವುದು.

ಶರಣ ಲೋಕದ ಮಧ್ಯದಲ್ಲಿ ಸಮಾನತೆ, ಧಾರ್ಮಿಕ ಭ್ರಾತೃತ್ವದ ಪ್ರತಿಕವಾದ ಗಣಲಿಂಗ ಮಂಟಪ ಎಲ್ಲರ ಆಕರ್ಷಣೀಯ ತಾಣ. ಅಷ್ಟಬಂಧದ ಕಂತೆಯಿಂದ ನಿರ್ಮಾಣವಾದ ಇದು 6 ಅಡಿ ಎತ್ತರ,ಮಧ್ಯದಲ್ಲಿ 19 ಅಡಿ, ಕೆಳ ಭಾಗದಲ್ಲಿ 15 ಅಡಿ ಅಗಲವಾಗಿದೆ.

‘1998ರಲ್ಲಿ ಶರಣ ಲೋಕ ಅನಾವರಣಗೊಂಡಿದೆ. ಐದು ವರ್ಷಗಳ ಹಿಂದೆ ಶರಣ ಮಂಟಪಗಳಿಗೆ ಬಣ್ಣ ಲೇಪನ ಮಾಡಲಾಗಿತ್ತು.  ಒಂದು ತಿಂಗಳಿಂದ ಶರಣ ಲೋಕದ ಬಣ್ಣದ ಲೇಪನ ಕಾರ್ಯ ನಡೆದಿದ್ದು, ಶರಣ ಶರಣಿಯರ ಮಂಟಪ ನೂತನ ಬಣ್ಣದಿಂದ ಶೃಂಗಾರಗೊಂಡಿವೆ. ನಿತ್ಯ ಸಾವಿರಕ್ಕೂ ಅಧಿಕ ಭಕ್ತರು, ಪ್ರವಾಸಿಗರು ಶರಣ ಲೋಕದ ದರ್ಶನ ಪಡೆಯುವರು’ ಎಂದು ಬಸವ ಧರ್ಮ ಪೀಠದ ಮಹದೇಶ್ವರ ಸ್ವಾಮೀಜಿ ಹೇಳಿದರು. ಬೆಳಗ್ಗೆ 6ರಿಂದ ರಾತ್ರಿ 8 ಗಂಟೆಯವರೆಗೆ ಕಾರ್ಯನಿರ್ವಹಿಸುವ ಶರಣಲೋಕಕ್ಕೆ 5 ರೂ ಪ್ರವೇಶ ಶುಲ್ಕ ಇರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT