ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಎನ್ನುವ ಕಾರಣದಿಂದಲೇ ಪರೇಶ ಹತ್ಯೆ

Last Updated 17 ಡಿಸೆಂಬರ್ 2017, 7:03 IST
ಅಕ್ಷರ ಗಾತ್ರ

ಬೆಳಗಾವಿ: ಹಿಂದೂ ಧರ್ಮಕ್ಕೆ ಸೇರಿದವ ಎನ್ನುವ ಕಾರಣಕ್ಕಾಗಿ ಹೊನ್ನಾವರದ ಪರೇಶ ಮೇಸ್ತ ಅವರನ್ನು ಹತ್ಯೆ ಮಾಡಲಾಗಿದೆ. ಇದೇ ರೀತಿ ಹಿಂದೂಗಳು ಮಾತೆ ಎಂದು ಪೂಜಿಸುವ ಗೋವನ್ನು ಹತ್ಯೆ ಮಾಡಲಾಗುತ್ತಿದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮಿಜಿ ಹೇಳಿದರು.

ಗೋ ಯಾತ್ರೆಯ ಜಾಗೃತಿ ರ‍್ಯಾಲಿ ನಗರದ ಚನ್ನಮ್ಮ ವೃತ್ತಕ್ಕೆ ಶನಿವಾರ ಆಗಮಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಪರೇಶ ಮೇಸ್ತ ಮಾಡಿದ ತಪ್ಪೇನು? ಹಿಂದುಳಿದ ವರ್ಗಕ್ಕೆ ಸೇರಿದ ಹಾಗೂ ಹಿಂದೂ ಧರ್ಮದವ ಎನ್ನುವ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದರು.

ಒಂದು ವೇಳೆ ದೇಶದಲ್ಲಿ ಗೋವು ಮುಸ್ಲಿಂ, ಕ್ರೈಸ್ತರ ಪೂಜ್ಯನೀಯ ಮಾತೆಯಾಗಿದ್ದರೇ ಹತ್ಯೆ ಮಾಡುತ್ತಿದ್ದರೇ ಎಂದು ಪ್ರಶ್ನಿಸಿದ ಅವರು, ಬೆಳಗಾವಿಯಲ್ಲಿಯೂ ಗೋ ಹತ್ಯೆ ನಡೆಯುತ್ತಿದೆ. ಇದನ್ನು ಸಂಪೂರ್ಣವಾಗಿ ಕೊನೆಗಾಣಿಸಬೇಕಿದೆ ಎಂದು ಕರೆ ನೀಡಿದರು.

ಆರ್ಷ ವಿದ್ಯಾಕೇಂದ್ರದ ಚಿತ್‌ಪ್ರಕಾಶಾನಂದ ಸ್ವಾಮೀಜಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ವಿಶೇಷ ಮಹತ್ವವಿದೆ. ಅಂತೆಯೇ ಗೋವಿನ ಪ್ರತಿಯೊಂದು ಉತ್ಪನ್ನಕ್ಕೂ ವಿಶೇಷ ಮಹತ್ವವಿದೆ. ಗೋಹತ್ಯೆ ತಡೆಯುವುದು ಸಮಾಜದ ಎಲ್ಲರ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.

ಇಸ್ಕಾನ್ ಗೋಕುಲಧಾಮದ ಹರೇರಾಮ ಪ್ರಭು ಮಾತನಾಡಿ, ಗೋವು, ವಾಣಿಜ್ಯ ಮತ್ತು ಕೃಷಿಯ ರಕ್ಷಣೆಯು ಆಡಳಿತ ನಡೆಸುವವರ ಕರ್ತವ್ಯ. ಆದರೆ ಇಂದಿನ ರಾಜಕಾರಣದಲ್ಲಿ ಇದಾವುದಕ್ಕೂ ಬೆಲೆ ಇಲ್ಲವಾಗಿದೆ. ಇದರಿಂದಾಗಿ ದೇಶ ಅಧಃಪತನದತ್ತ ಸಾಗಿದೆ. ದೇಶೀಯ ಕೃಷಿ ಹಾಗೂ ವಾಣಿಜ್ಯ ಚಟುವಟಿಕೆಗಳು ನಿಂತಿರುವುದೇ ಗೋವಿನ ಮೇಲೆ. ಸುಸ್ಥಿರ ಸಮಾಜದ ನಿರ್ಮಾಣಕ್ಕೆ ಗೋವು ಅನಿವಾರ್ಯ. ಗೋ ಸಂತತಿಯ ರಕ್ಷಣೆ ಹಾಗೂ ಸಂವರ್ಧನೆಗೆ ಗಮನ ಹರಿಸಬೇಕು ಎಂದು ಸೂಚಿಸಿದರು.

ದೇಸಿ ಹಸುವಿನ ಹಾಲು ಅಮೃತ ಸಮಾನ. ಗೋಮೂತ್ರ, ಗೋಮಯದಲ್ಲಿ ಪರ್ಯಾಯ ರೋಗ ತಡೆ ವ್ಯವಸ್ಥೆ ಇದೆ. ಗೋಮಾಳ ರಕ್ಷಣೆ ಮತ್ತು ಗೋಜನ್ಯ ವಸ್ತುಗಳ ಬಳಕೆ ಹೆಚ್ಚಳದ ಮೂಲಕ ಗೋ ಸಂತತಿ ಉಳಿಸಲು ಮುಂದಾಗಬೇಕು ಎಂದು ಸುತಗಟ್ಟಿ ಸ್ವಾಮೀಜಿ ಸಲಹೆ ನೀಡಿದರು.

ಚನ್ನಮ್ಮ ವೃತ್ತದಿಂದ ಪ್ರಾರಂಭವಾದ ಗೋ ಯಾತ್ರೆಯು ಮಾರುತಿಗಲ್ಲಿಯ ಮಾರುತಿ ದೇವಸ್ಥಾನ, ರಾಮದೇವಗಲ್ಲಿಯ ಶ್ರೀರಾಮ ದೇವಸ್ಥಾನ, ಖಡೇ ಬಜಾರ್ ಮಾರ್ಗವಾಗಿ ತೆರಳಿತು.

ಗೋ ಪರಿವಾರ ಸಂಸ್ಥೆಯ ಜಿಲ್ಲಾಧ್ಯಕ್ಷ ರಾಜೇಂದ್ರ ಜೈನ್, ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ರಮಾಕಾಂತ ಕೊಂಡುಸ್ಕರ, ಬಿಜೆಪಿ ನಗರ ಘಟಕದ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಟೋಪಣ್ಣವರ, ಬಿಜೆಪಿ ಮುಖಂಡರಾದ ಅನಿಲ ಬೆನಕೆ, ಪಾಂಡುರಂಗ ದೋತ್ರೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT