ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

224 ಕ್ಷೇತ್ರಗಳಲ್ಲಿ ಆರ್‌ಪಿಐ ಸ್ಪರ್ಧೆ: ವೆಂಕಟಸ್ವಾಮಿ

Last Updated 17 ಡಿಸೆಂಬರ್ 2017, 7:12 IST
ಅಕ್ಷರ ಗಾತ್ರ

ಬೀದರ್‌: ‘ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ ಸ್ವತಂತ್ರವಾಗಿ ಸ್ಪರ್ಧಿಸಲಿದೆ. ಯಾವುದೇ ಕಾರಣಕ್ಕೂ ಯಾವುದೇ ಪಕ್ಷದೊಂದಿಗೆ ಚುನಾವಣೆ ಪೂರ್ವ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ’ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಡಾ. ಎಂ. ವೆಂಕಟಸ್ವಾಮಿ ಹೇಳಿದರು.

ನಗರದ ಹೋಟೆಲ್‌ ಮಯೂರ ಬರೀದ್‌ಶಾಹಿಯಲ್ಲಿ ಶನಿವಾರ ನಡೆದ ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ (ಆರ್‌ಪಿಐ)ದ ಕಲಬುರ್ಗಿ ವಿಭಾಗ ಮಟ್ಟದ ಸಭೆ ಹಾಗೂ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಪಕ್ಷದಿಂದ ಕೋಲಾರ ಜಿಲ್ಲೆಯ ಮೂಡಲಬಾಗದಿಂದ ಡಿಸೆಂಬರ್ 28ರಿಂದ ಜನಾಧಿಕಾರಕ್ಕಾಗಿ ಸಂಕಲ್ಪ ಜಾಥಾ  ಆರಂಭಿಸಲಾಗುವುದು. ಜಾಥಾ ರಾಜ್ಯದ 224 ಕ್ಷೇತ್ರಗಳಲ್ಲಿ ಸಂಚರಿಸಿ ಬೆಂಗಳೂರಲ್ಲಿ ಫೆಬ್ರವರಿ 15 ರಂದು ಸಮಾರೋಪಗೊಳ್ಳಲಿದೆ. ಅದೇ ದಿನ ಚುನಾವಣಾ ಪ್ರಚಾರ ಸಭೆ ನಡೆಯಲಿದೆ’ ಎಂದು ತಿಳಿಸಿದರು.

‘ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ರಾಜ್ಯದ ಜನತೆಗೆ ಸಂವಿಧಾನದ ಆಶಯದ ಅಡಿಯಲ್ಲಿ ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿವೆ. ಈವರೆಗಿನ ಯಾವುದೇ ಸರ್ಕಾರ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿಲ್ಲ’ ಎಂದು ದೂರಿದರು.

‘ಹಲವು ವರ್ಷಗಳಿಂದ ಕಳಂಕಿತ ಶಾಸಕರು ಹಾಗೂ ಸಚಿವರ ವಿರುದ್ಧ ಆರ್‌ಪಿಐ ಹೋರಾಟ ಮಾಡುತ್ತ ಬಂದಿದೆ. ಕಾಂಗ್ರೆಸ್‌ ಮುಕ್ತ ಕರ್ನಾಟಕಕ್ಕಾಗಿ ಹೋರಾಟ ನಡೆಸಲಿದೆ. ಅನ್ಯ ರಾಜಕೀಯ ಪಕ್ಷಗಳು ದಲಿತ ಜನಾಂಗವನ್ನು ಹತ್ತಿಕ್ಕಿವೆ. ಅಲ್ಪಸಂಖ್ಯಾತರನ್ನು ಮತ ಬ್ಯಾಂಕ್‌ ಆಗಿ ಬಳಸಿಕೊಂಡಿವೆ’ ಎಂದು ಆರೋಪಿಸಿದರು.

‘ಬಡವರ, ದಲಿತರ, ಕಾರ್ಮಿಕರ, ಮಹಿಳೆಯರ, ಶೋಷಿತರ ಅಭಿವೃದ್ಧಿ ಬಗೆಗೆ ಪೊಳ್ಳು ಘೋಷಣೆಗಳನ್ನು ಮಾಡುತ್ತ ಬಂದಿವೆ. ರಾಜಕೀಯ ಪಕ್ಷಗಳ ಮುಖಂಡರು ರಾಜ್ಯದ ಸಂಪತ್ತನ್ನು ಕೊಳ್ಳೆ ಹೊಡೆದಿದ್ದಾರೆ. ಜನಾಧಿಕಾರಕ್ಕಾಗಿ ಜನ ಸಂಕಲ್ಪ ಜಾಥಾದ ಮೂಲಕ ಮತದಾರರಿಗೆ ತಿಳಿವಳಿಕೆ ನೀಡಲಾಗುವುದು’ ಎಂದು ಹೇಳಿದರು.

‘ಆರ್‌ಪಿಐ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆದಿದೆ. ಈಗಾಗಲೇ ಏಳು ಜಿಲ್ಲೆಗಳ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದೆ. ಫೆ.15ರ ವೇಳೆಗೆ ಎಲ್ಲ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗುವುದು’ ಎಂದು ತಿಳಿಸಿದರು.

‘ನ್ಯಾಯಮೂರ್ತಿ ಸದಾಶಿವ ಆಯೋಗದ ಆಶಯಕ್ಕೆ ನಮ್ಮ ವಿರೋಧ ಇಲ್ಲ. ಇನ್ನೂ ಸರಿಯಾಗಿ ಸಮೀಕ್ಷೆ ನಡೆಸಿ ತೀರ್ಮಾನ ಕೈಗೊಳ್ಳುವ ಅಗತ್ಯವಿದೆ. ಸರ್ಕಾರ ದಲಿತ ಮುಖಂಡರ ಅಭಿಪ್ರಾಯಗಳನ್ನೂ ಸಂಗ್ರಹಿಸಬೇಕಿದೆ’ ಎಂದು ಹೇಳಿದರು.

ಪಕ್ಷದ ಜಿಲ್ಲಾ ಘಟಕದ ಕಾರ್ಯದರ್ಶಿ ಮಡಿವಾಳಪ್ಪ ಫುಲೆ, ಕಲಬುರ್ಗಿ ಜಿಲ್ಲಾ ಘಟಕದ ಅಧ್ಯಕ್ಷ ಮಸ್ತಾನ್‌ ದಂಡೆ, ಚಿಂಚೋಳಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅನಂದ ಟೈಗರ್, ಚಂದ್ರಕಾಂತ ಸೋನಾರ್, ಭಾರತ ಸಿದ್ದಾ, ಎನ್‌.ಕೆ.ಪಾಂಡುರಂಗ, ಬಿ.ರಾಘವೇಂದ್ರ ಮೇನಕೆ, ಗುಂಡಪ್ಪ ದಂಡೆ, ಶಿವಕುಮಾರ ಮುತ್ತಂಗಿಕರ್, ಯೋಹನ್, ಓಂಕಾರ ಜಳಿಗೆ, ಅಡೆಪ್ಪ ಖಂಡಾರೆ ಇದ್ದರು.

ಆರ್‌ಪಿಐ ಅಭ್ಯರ್ಥಿಗಳು

ಬೀದರ್‌: ‘ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ (ಆರ್‌ಪಿಐ)ದ ಕಲಬುರ್ಗಿ ವಿಭಾಗ ಮಟ್ಟದ ಸಭೆಯಲ್ಲಿ ಜಿಲ್ಲೆಯ ಆರೂ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು.

ಬೀದರ್‌ ದಕ್ಷಿಣ: ಧರ್ಮರಾಯ ಜಯರಾಮ ಘಾಂಗ್ರೆ. ಬೀದರ್‌ ಉತ್ತರ: ಪ್ರವೀಣ ಶೇರಿಕಾರ್. ಔರಾದ್: ಬಿ.ರಾಘವೇಂದ್ರ ಮೀನಕೇರಾ. ಬಸವಕಲ್ಯಾಣ: ಮಿಲಿಂದ ಗುರೂಜಿ. ಹುಮನಾಬಾದ್: ತಾಜುದ್ದೀನ್ ಪಟೇಲ್. ಭಾಲ್ಕಿ ವಿಧಾನಸಭಾ ಕ್ಷೇತ್ರಕ್ಕೆ ಸಿದ್ಧಾರ್ಥ ಡಾಂಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT