ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೊರಾಂಗಣ ಜಿಮ್‌’ಗೆ ನಿರ್ವಹಣೆ ಕೊರತೆ

Last Updated 17 ಡಿಸೆಂಬರ್ 2017, 9:14 IST
ಅಕ್ಷರ ಗಾತ್ರ

ಕಲಬುರ್ಗಿ: ಇಲ್ಲಿನ ಶರಣಬಸವೇಶ್ವರ ಕೆರೆ ಆವರಣದ ಉದ್ಯಾನದಲ್ಲಿ ಸ್ಥಾಪಿಸಲಾಗಿರುವ ‘ಹೊರಾಂಗಣ ವ್ಯಾಯಾಮ ಶಾಲೆ’ಯು ನಿರ್ವಹಣೆ ಕೊರತೆಯಿಂದಾಗಿ ಸಾರ್ವಜನಿಕರ ಉಪಯೋಗಕ್ಕೆ ಬಾರದಂತಾಗಿದೆ.

ಕೆರೆ ಪಕ್ಕದಲ್ಲಿರುವ ಸುಂದರ ಉದ್ಯಾನದಲ್ಲಿ ಪ್ರತಿ ನಿತ್ಯ ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರಕ್ಕೆ ಬರುವ ಸಾರ್ವಜನಿಕರು, ಹಿರಿಯ ನಾಗರಿಕರು ಮತ್ತು ಯುವಕರಿಗೆ ವ್ಯಾಯಾಮ ಮಾಡಲು ಅಲುಕೂಲವಾಗುವಂತೆ ಶರಣಬಸವೇಶ್ವರ ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ)ಯ ಅನುದಾನದಿಂದ ಹೊರಾಂಗಣ ವ್ಯಾಯಾಮ ಶಾಲೆ (ಔಟ್‌ಡೋರ್ ಜಿಮ್)ಯನ್ನು ಸ್ಥಾಪಿಸಲಾಗಿತ್ತು. ಇದು ಹೈದರಾಬಾದ್ ಕರ್ನಾಟಕ ಪ್ರದೇಶದ ಮೊದಲ ಹೊರಾಂಗಣ ಜಿಮ್ ಎಂಬ ಅಗ್ಗಳಿಕೆಗೂ ಪಾತ್ರವಾಗಿತ್ತು. ಆದರೆ ನಿರ್ವಹಣೆ ಕೊರತೆಯಿಂದ ಕೆಲವು ಸಲಕರಣೆಗಳು ಮುರಿದುಹೋಗಿವೆ. ಕೆಲವು ತುಕ್ಕು ಹಿಡಿದಿವೆ. ಹೀಗಾಗಿ ವ್ಯಾಯಾಮ ಪ್ರಿಯರು ಇದರಿಂದ ದೂರ ಉಳಿಯುವಂತಾಗಿದೆ.

ಹೊರಾಂಗಣ ವ್ಯಾಯಾಮ ಶಾಲೆಯಲ್ಲಿ ₹5.77 ಲಕ್ಷ ವೆಚ್ಚದಲ್ಲಿ ದೈಹಿಕ ಕಸರತ್ತು ಮಾಡಲು ಬೇಕಾಗುವ ಸ್ಪಿನ್ ಸೈಕಲ್, ಸಿಂಗಲ್ ಬಾರ್, ಡಬಲ್ ಬಾರ್, ಪೆಡ್ಲಿಂಗ್, ಸ್ಕೈ ವಾಕರ್, ಡ್ಯುಯೆಲ್ ವಾಕಿಂಗ್ ಸೇರಿ ಹಲವು ಬಗೆಯ ಸಲಕರಣೆಗಳನ್ನು ಅಳವಡಿಸಲಾಗಿತ್ತು. ಬೆಳಗಾವಿಯ ಕಂಪೆನಿಯೊಂದು ಈ ಕೆಲಸದ ಹೊಣೆ ಹೊತ್ತಿತ್ತು. ಆರಂಭದಲ್ಲಿ ಎಲ್ಲ ಸಲಕರಣೆಗಳು ಚೆನ್ನಾಗಿದ್ದವು. ಹೀಗಾಗಿ ವಾಯುವಿಹಾರಿಗಳ ಸಂಖ್ಯೆಯೂ ಹೆಚ್ಚಾಗಿತ್ತು. ಆದರೆ ವ್ಯಾಯಾಮ ಸಲಕರಣೆಗಳು ಮುರಿದು ಹೋಗಿರುವುದರಿಂದ ಯುವಕರು ಬೇಸರಪಡುವಂತಾಗಿದೆ.

‘ನಗರದಲ್ಲಿರುವ ಜಿಮ್‌ಗಳು ಬಹಳ ದುಬಾರಿ ಶುಲ್ಕ ವಿಧಿಸುತ್ತವೆ. ಹೀಗಾಗಿ ನಾವು ಇಲ್ಲಿಗೆ ಬರುತ್ತಿದ್ದೆವು. ಬೆಳಿಗ್ಗೆ ವಾಯುವಿಹಾರದ ಜತೆಗೆ ವ್ಯಾಯಾಮ ಮಾಡಲು ಬಹಳಷ್ಟು ಅನುಕೂಲವಾಗಿತ್ತು. ಆದರೆ ಈಗ ವ್ಯಾಯಾಮ ಸಾಧನಗಳು ಹಾಳಾಗಿವೆ. ಇದರಿಂದ ದೈಹಿಕ ಕಸರತ್ತು ಮಾಡಲು ತಂದರೆಯಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು’ ಎಂದು ಯುವಕರು ಒತ್ತಾಯಿಸುತ್ತಾರೆ.

‘ಆರಂಭದಲ್ಲಿ ಹೊರಾಂಗಣ ಜಿಮ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಯುವಕರು ಸಾಕಷ್ಟು ಸಂಖ್ಯೆಯಲ್ಲಿ ಇವುಗಳನ್ನು ಬಳಸುತ್ತಿದ್ದರು. ಆದರೆ ಇಲ್ಲಿಗೆ ಬಂದವರು ಇವುಗಳನ್ನು ಸರಿಯಾಗಿ ಬಳಕೆ ಮಾಡದ್ದರಿಂದ ಕೆಲವು ಸಲಕರಣೆಗಳು ಹಾಳಾಗಿವೆ. ಉಚಿತವಾಗಿ ಈ ಸೌಲಭ್ಯ ಕಲ್ಪಿಸಿದ್ದೇ ತೊಂದರೆಗೆ ಕಾರಣ ಎನ್ನುವಂತಾಗಿದೆ. ಯುವಕರು ಮತ್ತು ಸಾರ್ವಜನಿಕರು ಈ ಬಗ್ಗೆ ಕಾಳಜಿ ವಹಿಸಬೇಕು. ಶೀಘ್ರವೇ ಎಲ್ಲ ಸಲಕರಣೆಗಳನ್ನು ದುರಸ್ತಿಗೊಳಿಸಲಾಗುವುದು’ ಎಂದು ಶರಣಬಸವೇಶ್ವರ ಕೆರೆ ಅಭಿವೃದ್ಧಿ ಪ್ರಾಧಿಕಾರದ ಮೂಲಗಳು ಹೇಳುತ್ತವೆ.

* * 

ಕೆರೆ ಉದ್ಯಾನ ನವೀಕರಣ, ಔಟ್‌ಡೋರ್ ಜಿಮ್ ದುರಸ್ತಿ, ಮಕ್ಕಳ ಆಟಿಕೆಗಳು, ಬೋಟಿಂಗ್, ಫುಡ್‌ ಕೋರ್ಟ್‌ ಸೇರಿ ಎಲ್ಲವನ್ನೂ ಶೀಘ್ರವೇ ಅಭಿವೃದ್ಧಿ ಪಡಿಸಲಾಗುವುದು.
ಹರ್ಷ ಗುಪ್ತ
ಅಧ್ಯಕ್ಷ, ಶರಣಬಸವೇಶ್ವರ ಕೆರೆ ಅಭಿವೃದ್ಧಿ ಪ್ರಾಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT