ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಿಪ್ರ ಕಾರ್ಯಪಡೆ ಹದ್ದಿನ ಕಣ್ಣು

Last Updated 17 ಡಿಸೆಂಬರ್ 2017, 9:17 IST
ಅಕ್ಷರ ಗಾತ್ರ

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಶಾಂತಿ– ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಕೊಯಮತ್ತೂರಿನಿಂದ ಬಂದಿರುವ ಕ್ಷಿಪ್ರ ಕಾರ್ಯಪಡೆ ಸದಸ್ಯರು, ಶನಿವಾರ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ನಡೆಸಿ ಸಾರ್ವಜನಿಕರಲ್ಲಿ ಮನೆ ಮಾಡಿದ್ದ ಆತಂಕವನ್ನು ದೂರ ಮಾಡಿದರು.

ಶುಕ್ರವಾರ ಸಂಜೆ ಬಂದಿರುವ ಎಸ್ಪಿ ಸುಂದರಕುಮಾರ ನೇತೃತ್ವದ ತಂಡದಲ್ಲಿ ಮೂವರು ಡಿವೈಎಸ್ಪಿ, ಐವರು ಇನ್‌ಸ್ಪೆಕ್ಟರ್‌ಗಳು, 120ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. ತಂಡದಲ್ಲಿ ಮಹಿಳಾ ಸಿಬ್ಬಂದಿಯೂ ಇದ್ದು, ಇಲ್ಲಿನ ಜಿಲ್ಲಾ ತರಬೇತಿ ಕೇಂದ್ರದಲ್ಲಿ ವಾಸ್ತವ್ಯ ಮಾಡಿದ್ದಾರೆ.

ಶನಿವಾರ ಬೆಳಿಗ್ಗೆ ನಗರದಲ್ಲಿ ಹಳೆ ಬಸ್‌ ನಿಲ್ದಾಣ ವೃತ್ತ, ಸಿ.ಪಿ. ಬಜಾರ, ಝೂ ವೃತ್ತದ ಮಾರ್ಗವಾಗಿ ಎಲ್ಲರೂ ವಾಹನಗಳಲ್ಲಿ ಸಂಚಾರ ಮಾಡಿದರು. ‘ಜಿಲ್ಲೆಯ ಕೆಲವು ಕಡೆಗಳಲ್ಲಿ ಗಲಭೆ ನಡೆದಿರುವ ಕಾರಣ ಕ್ಷಿಪ್ರ ಕಾರ್ಯಾಚರಣೆ ಪಡೆ ಸಿಬ್ಬಂದಿ ಬಂದಿದ್ದಾರೆ. ಅಗತ್ಯವಿದ್ದಲ್ಲಿ ರಕ್ಷಣಾ ಕಾರ್ಯದಲ್ಲಿ ಅವರು ಭಾಗಿಯಾಗುತ್ತಾರೆ’ ಎಂದು ಸಿಪಿಐ ಗಿರೀಶ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಹೊನ್ನಾವರ ಶಾಂತ: ಅಂಗಡಿಬಂದ್|

ಹೊನ್ನಾವರ: ಕೋಮು ಸಂಘರ್ಷ, ಪರೇಶ ಮೇಸ್ತ ಸಾವು ಹಾಗೂ ಬಾಲಕಿಯೊಬ್ಬಳ ಮೇಲೆ ನಡೆದ ಹಲ್ಲೆಯ ವಿಚಾರದಿಂದ ಪ್ರಕ್ಷುಬ್ಧಗೊಂಡಿದ್ದ ಪಟ್ಟಣ ಕಳೆದೆರಡು ದಿನಗಳಿಂದ ಸಹಜ ಸ್ಥಿತಿಗೆ ಮರಳಿದ್ದು, ಶನಿವಾರ ಕೂಡ ಜನಜೀವನ ಎಂದಿನಂತೆ ಮುಂದುವರಿದಿತ್ತು.

‘ಹಿಂದೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ’ ಎಂದು ಪಟ್ಟಣದ ಕೆಲ ವರ್ತಕರು ಶನಿವಾರ ಬೆಳಿಗ್ಗೆ ಅಂಗಡಿಗಳನ್ನು ಬಂದ್ ಮಾಡಿದ್ದರು. ಆದರೆ ಮಧ್ಯಾಹ್ನದ ವೇಳೆ ಹಣ್ಣು– ತರಕಾರಿ, ಔಷಧಿ ಮಳಿಗೆಗಳು ತೆರೆದಿದ್ದವು. ಬಂದರ್‌ನ ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರಿಗಳ ಸಂಖ್ಯೆಯಲ್ಲಿ ಇಳಿಮುಖವಾಗಿದ್ದು, ಸಂಜೆ ಹೊತ್ತಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಗತ್ಯ ವಸ್ತುಗಳನ್ನು ಖರೀದಿಸಿದರು. ಬಸ್, ಟೆಂಪೊ, ರಿಕ್ಷಾ ಹಾಗೂ ಇತರ ವಾಹನಗಳ ಓಡಾಟ ಎಂದಿನಂತಿತ್ತು. ಶಾಲಾ– ಕಾಲೇಜುಗಳು ಕಾರ್ಯ ನಿರ್ವಹಿಸಿದವು.

‘ಬಂಧಿಸಿರುವ ಹಿಂದೂ ಯುವಕರನ್ನು ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿ ತಹಶೀಲ್ದಾರ ಕಚೇರಿ ಎದುರು ಕೆಲವರು ಧರಣಿ ಕೂರಲು ಮುಂದಾದಾಗ ಕೆಲ ಕಾಲ ಆತಂಕದ ಸ್ಥಿತಿ ನಿರ್ಮಾಣವಾಯಿತು. ಪರೇಶ ಮೇಸ್ತನ ತಂದೆ ಕಮಲಾಕರ ಮೇಸ್ತ ಕೂಡ ಈ ಗುಂಪಿನಲ್ಲಿದ್ದರು. ‘ಜಿಲ್ಲೆಯಲ್ಲಿ ಸಭೆ, ಪ್ರತಿಭಟನೆ ನಡೆಸದಂತೆ ಜಿಲ್ಲಾಧಿಕಾರಿ ಆದೇಶವಿದೆ. ಪ್ರತಿಭಟನೆಗೆ ಮುಂದಾಗಬೇಡಿ. ಎಲ್ಲರಿಗೂ ನ್ಯಾಯ ಕೊಡಿಸಲು ಪ್ರಯತ್ನಿಸುತ್ತೇವೆ’ ಎಂದು ಉಪವಿಭಾಗಾಧಿಕಾರಿ ಎಂ.ಎನ್.ಮಂಜುನಾಥ ಪ್ರತಿಭಟನಾಕಾರಿಗೆ ತಿಳಿಸಿದರು. ತಹಶೀಲ್ದಾರ ವಿ.ಆರ್.ಗೌಡ, ಪಿಎಸ್‌ಐ ಆನಂದಮೂರ್ತಿ ಕೂಡ ಪ್ರತಿಭಟನೆ ಕೈಬಿಡುವಂತೆ ವಿನಂತಿ ಸಿದರು. ಬಳಿಕ ಪ್ರತಿಭಟನೆ ನಿಲ್ಲಿಸಿ, ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

150 ಪೊಲೀಸರ ನಿಯೋಜನೆ

ಅಂಕೋಲಾ: ಸಾರ್ವಜನಿಕರಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಹೊರ ಜಿಲ್ಲೆ ಹೆಚ್ಚುವರಿ ಪೊಲೀಸರನ್ನು ಕರೆಯಿಸಿಕೊಳ್ಳಲಾಗಿದ್ದು, ಪಟ್ಟಣದಲ್ಲಿ ಸುಮಾರು 150ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಹೊನ್ನಾವರ, ಕುಮಟಾ, ಭಟ್ಕಳ, ಶಿರಸಿಯಲ್ಲಿಯೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ ರನ್ನು ನೇಮಿಸಲಾಗಿದೆ. ಅದರಂತೆ ಹೊರಗಿನಿಂದ ಬಂದ ಪೊಲೀಸರಿಗೆ ಕಳೆದ ಒಂದು ವಾರದಿಂದ ಚಹಾ-ತಿಂಡಿ, ಊಟದ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT