ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರ ಫಲಿತಾಂಶ: ಗುಜರಾತ್‌ ಚುನಾವಣೆ ವೇಳೆ ಸುದ್ದಿಯಾದ ಪ್ರಮುಖ ಹತ್ತು ವಿವಾದಗಳು

Last Updated 17 ಡಿಸೆಂಬರ್ 2017, 12:41 IST
ಅಕ್ಷರ ಗಾತ್ರ

ಅಹ್ಮದಾಬಾದ್‌: ಭಾರಿ ನಿರೀಕ್ಷೆ ಮೂಡಿಸಿರುವ ಗುಜರಾತ್‌ ಹಾಗೂ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ ಸೋಮವಾರ ಹೊರಬೀಳಲಿದೆ. ಈ ಚುನಾವಣೆಗಳ ಫಲಿತಾಂಶ 2018ರಲ್ಲಿ ನಡೆಯಲಿರುವ ವಿವಿಧ ರಾಜ್ಯಗಳ ಚುನಾವಣೆಗಳ ಮೇಲೆ ಪರಿಣಾಮ ಉಂಟುಮಾಡಲಿದೆ ಎಂದು ವಿಶ್ಲೇಷಿಸಲಾಗಿದೆ.

ಹಾಗಾಗಿ ಗೆದ್ದೇ ತೀರುವ ಜಿದ್ದಿಗೆ ಬಿದ್ದ ರಾಜಕೀಯ ಪಕ್ಷಗಳು ರಾಜಕೀಯದ ಹೊರತಾಗಿ ವೈಯಕ್ತಿಕ ಮಟ್ಟಕ್ಕಿಳಿದು ಟೀಕೆ, ನಿಂದನೆಗಳನ್ನು ಮಾಡಿದ್ದು ಚುನಾವಣೆಯ ಕಾವೇರಿಸಿತ್ತು.

ಸತತ ಎರಡು ದಶಕಗಳಿಂದ ಬಿಜೆಪಿ ಆಡಳಿತಕ್ಕೊಳಪಟ್ಟಿರುವ ಗುಜರಾತ್‌, ತವರು ರಾಜ್ಯವೂ ಆಗಿರುವುದರಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಅಗ್ನಿ ಪರೀಕ್ಷೆಗೊಡ್ಡಿದ ಚುನಾವಣೆಯಿದು. ನಾಯಕತ್ವ ಬದಲಾವಣೆಯ ಕಾರಣದಿಂದ ಕಾಂಗ್ರೆಸ್‌ ಹಾಗೂ ರಾಹುಲ್‌ ಗಾಂಧಿ ಅವರಿಗೂ ಗುಜರಾತ್‌ ಪ್ರತಿಷ್ಠೆಯ ಕಣವೆನಿಸಿದೆ.

ಉಳಿದಂತೆ ಇಲ್ಲಿ ನಡೆದ ಮೀಸಲಾತಿ ಹೋರಾಟ, ಚುನಾವಣೆ ದಿನಾಂಕ ನಿಗದಿ ಸಂಬಂಧಿಸಿದ ಗೊಂದಲಗಳು, ಮತಯಂತ್ರ ವಿವಾದ ಸೇರಿಂದತೆ ಚುನಾವಣಾ ಕಣದಲ್ಲಿ ಭಾರೀ ಸುದ್ದಿಯಾದ ಪ್ರಮುಖ ಹತ್ತು ವಿವಾದಗಳ ಕುರಿತ ಮಾಹಿತಿ ಇಲ್ಲಿದೆ.

01. ಚುನಾವಣಾ ದಿನಾಂಕ ನಿಗದಿಯಲ್ಲಿ ಗೊಂದಲ

ಗುಜರಾತ್‌ ಹಾಗೂ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಿಗದಿ ಮಾಡದಿರಲು ಕಳೆದ ಅಕ್ಟೋಬರ್‌ನಲ್ಲಿ ಚುನಾವಣಾ ಆಯೋಗ ನಿರ್ಧರಿಸಿತ್ತು. ಹಿಮಾಚಲ ಚುನಾವಣೆಯನ್ನು ನವೆಂಬರ್‌ 09 ರಂದು ಹಾಗೂ ಗುಜರಾತ್‌ ಚುನಾವಣೆಯನ್ನು ಡಿಸೆಂಬರ್‌ 9, 14ರಂದು ಎರಡು ಹಂತದಲ್ಲಿ ನಡೆಸುವುದಾಗಿ ಘೋಷಿಸಿತ್ತು.

2004–05ರಲ್ಲಿ ಚುನಾವಣಾ ಆಯೋಗದ ಆಯುಕ್ತರಾಗಿದ್ದ ಟಿ.ಎಸ್‌.ಕೃಷ್ಣಮೂರ್ತಿ ಹಾಗೂ 2011–12ರ ಅವಧಿಗೆ ಆಯುಕ್ತರಾಗಿದ್ದ ಎಸ್‌.ವೈ ಖುರೇಷಿ ಅವರು ಆಯೋಗದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.

ನರೇಂದ್ರ ಮೋದಿ ಅವರು ತವರಿನಲ್ಲಿ ಚುನಾವಣಾ ಸಿದ್ಧತೆ ಮಾಡಿಕೊಳ್ಳಲು ಆಯೋಗ ಸಹಕರಿಸುತ್ತಿದೆ ಎಂದು ಚುನಾವಣಾ ಆಯೋಗದ ಆಯುಕ್ತ ಎ.ಕೆ ಬಸು ಅವರ ವಿರುದ್ಧ ವಿರೋಧ ಪಕ್ಷಗಳು ಆರೋಪ ಮಾಡಿದ್ದವು.

ಆದರೆ, ಹಿಮಾಚಲ ಪ್ರದೇಶದಲ್ಲಿನ ಹಿಮಪಾತ ಹಾಗೂ ಗುಜರಾತ್‌ನಲ್ಲಿ ನಡೆಯುತ್ತಿರುವ ಪ್ರವಾಹ ಪರಿಹಾರ ಕಾರ್ಯಾಚರಣೆಗಳ ಕಾರಣ ನೀಡಿದ್ದ ಆಯೋಗ ತನ್ನ ನಿಲುವನ್ನು ಸಮರ್ಥಿಸಿಕೊಂಡಿತ್ತು.

02. ಬಿಜೆಪಿಯಿಂದ ಬೇಹುಗಾರಿಕೆ

ಪಾಟಿದಾರ್‌ ಸಮುದಾಯದ ಮೀಸಲಾತಿ ಹೋರಾಟಗಾರ ಹಾರ್ದಿಕ್‌ ಪಟೇಲ್‌ ಹಾಗೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅಹಮದಾಬಾದ್‌ನ ಹೋಟೆಲ್‌ ಒಂದರಲ್ಲಿ ರಹಸ್ಯವಾಗಿ ಭೇಟಿಯಾಗಿದ್ದರು. ಇದರ ದೃಶ್ಯಾವಳಿಗಳು ಮಾಧ್ಯಮಗಳಲ್ಲಿ ಹರಿದಾಡಿದ್ದವು. ಹೀಗಾಗಿ ಹಾರ್ದಿಕ್‌, ‘ಬಿಜೆಪಿ ತಮ್ಮ ಮೇಲೆ ನಿಗಾ ವಹಿಸಿದ್ದು, ಬೇಹುಕಾರಿಕೆ ನಡೆಸುತ್ತಿದೆ’ ಎಂದು ದೂರಿದ್ದರು.

ಜತೆಗೆ ಹಾರ್ದಿಕ್‌ ಅವರದ್ದು ಎನ್ನಲಾದ ಸೆಕ್ಸ್‌ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಹಾರ್ಡಿಕ್‌ ‘ಬಿಜೆಪಿಯ ಕೊಳಕು ರಾಜಕಾರಣ ಈಗ ಆರಂಭವಾಗಿದೆ. ನನ್ನನ್ನು ಕೀಳುಮಟ್ಟದಲ್ಲಿ ಬಿಂಬಿಸಲು ಯತ್ನಿಸಲಾಗುತ್ತಿದೆ. ಇದರಿಂದ ನನಗೇನೂ ಆಗುವುದಿಲ್ಲ, ಬದಲಾಗಿ ಗುಜರಾತ್‌ ಮಹಿಳೆಯರಿಗೆ ಬಿಜೆಪಿ ಅವಮಾನ ಮಾಡುತ್ತಿದೆ’ ಎಂದು ಆರೋಪಿಸಿದ್ದರು.

03. ಪಟೇಲ್‌ ನಾಯಕರ ಕೊಂಡುಕೊಳ್ಳುವ ಬಿಜೆಪಿ ಪ್ರಯತ್ನ

ಪಟೇಲ್‌ ಸಮುದಾಯದ ನಾಯಕರಿಗೆ ಹಣದ ಆಮಿಷ ತೋರಿ ಪಕ್ಷದತ್ತ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು.

ಸಮುದಾಯದ ನಾಯಕ ನರೇಂದ್ರ ಪಟೇಲ್‌ ಅವರು, ‘ಸದ್ಯ ಬಿಜೆಪಿ ಸೇರಿರುವ ಹಾರ್ದಿಕ್‌ ಅವರ ಮಾಜಿ ಸಹಾಯಕ ವರುಣ್‌ ಪಟೇಲ್‌ ಮೂಲಕ ನನಗೆ ಹಣ ಆಮಿಷ ಒಡ್ಡಿ ಸೆಳೆಯುವ ಪ್ರಯತ್ನ ನಡೆದಿತ್ತು’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಈ ಸುದ್ದಿ ಎನ್‌ಡಿಟಿವಿಯಲ್ಲಿ ಪ್ರಸಾರವಾಗಿತ್ತು.

‘ವರುಣ್‌ ಪಟೇಲ್‌ ಅವರು ಬಿಜೆಪಿ ಸೇರಲು ನನಗೆ ₹ 1 ಕೋಟಿ ನೀಡುವುದಾಗಿ ಹೇಳಿದ್ದರು. ಜತೆಗೆ ₹ 10 ಲಕ್ಷ ಮುಂಗಡ ಹಣ ನೀಡುವುದಾಗಿ ತಿಳಿಸಿ ಉಳಿದ ₹  90 ಲಕ್ಷವನ್ನು ನಾಳೆ ನೀಡುವುದಾಗಿ ಹೇಳಿದ್ದರು. ಒಂದು ವೇಳೆ ಅವರು ಸಂಪೂರ್ಣ ಆರ್‌ಬಿಐ ಅನ್ನು ನೀಡಿದರೂ ನನ್ನನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ’ ಎಂದು ಅವರು ಆರೋಪಿಸಿದ್ದರು. ಬಿಜೆಪಿ ಈ ಆರೋಪವನ್ನು ತಳ್ಳಿಹಾಕಿತ್ತು.

04. ರಾಹುಲ್‌ ಗಾಂಧಿ ಧರ್ಮದ ವಿವಾದ

ರಾಹುಲ್‌ ಕಳೆದ ನವೆಂಬರ್‌ 29 ರಂದು ಗುಜರಾತ್‌ನ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರು ಸಂದರ್ಶಕರ ಪುಸ್ತಕದಲ್ಲಿ ತಾವು ಹಿಂದೂಯೇತರ ಎಂದು ಬರೆದಿದ್ದರು. ಇದಕ್ಕೆ ಸಂಬಂಧಿಸಿದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.

ಈ ಕುರಿತು ಪ್ರತಿಕ್ರಿಸಿದ್ದ ಬಿಜೆಪಿ ‘ರಾಹುಲ್‌ ಹಿಂದೂ ಎಂದು ಕಾಂಗ್ರೆಸ್‌ ಬಿಂಬಿಸುತ್ತಾ ಬಂದಿದೆ. ಆದರೆ ವಾಸ್ತವದಲ್ಲಿ ಅವರು ಹಿಂದೂ ಅಲ್ಲ’ ಎಂದು ಹೇಳಿತ್ತು.

ರಾಹುಲ್‌ ಗಾಂಧಿ ಅವರು, ‘ನಮ್ಮದು ಶಿವ ಭಕ್ತ ಕುಟುಂಬ, ನಾವು ಧರ್ಮದ ದಲ್ಲಾಳಿಗಳಲ್ಲ’ ಎಂದು ಹೇಳುವ ಮೂಲಕ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿಗೆ ತಿರುಗೇಟು ನೀಡಿದ್ದರು.

05. ಗುಜರಾತ್‌ ಚುನಾವಣೆ ಬಗ್ಗೆ ಕಾಂಗ್ರೆಸ್‌–ಪಾಕ್‌ ನಾಯಕರ ಚರ್ಚೆ

‘ಕಾಂಗ್ರೆಸ್‌ನಿಂದ ಅಮಾನತುಗೊಂಡಿರುವ ಮುಖಂಡ ಮಣಿ ಶಂಕರ್‌ ಅಯ್ಯರ್‌ ದೆಹಲಿಯ ತಮ್ಮ ನಿವಾಸದಲ್ಲಿ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಖುರ್ಷಿದ್‌ ಮೊಹಮ್ಮದ್‌ ಕಸೂರಿ ಅವರಿಗೆ ಔತಣ ಕೂಟ ಏರ್ಪಡಿಸಿದ್ದರು. ಅದರಲ್ಲಿ ಗುಜರಾತ್‌ ಚುನಾವಣೆ ಬಗ್ಗೆ ಚರ್ಚೆ ನಡೆದಿತ್ತು. ಈ ಕೂಟದಲ್ಲಿ ಹಮೀದ್‌ ಅನ್ಸಾರಿ, ಮನಮೋಹನ್‌ ಸಿಂಗ್‌ ಮತ್ತು ಸೇನೆಯ ಮಾಜಿ ಮುಖ್ಯಸ್ಥ ದೀಪಕ್‌ ಕಪೂರ್‌ ಭಾಗವಹಿಸಿದ್ದರು’ ಎಂದು ಮೋದಿ ಅವರು ಆರೋಪಿಸಿದ್ದರು.

ಇದನ್ನು ಅಲ್ಲಗಳೆದಿದ್ದ ಕಾಂಗ್ರೆಸ್‌ನ ಹಿರಿಯ ಮುಖಂಡ ಪಿ. ಚಿದಂಬರಂ, ‘ಚುನಾವಣೆಯನ್ನು ಗೆಲ್ಲುವುದಕ್ಕಾಗಿ ರಾಜಕೀಯ ಪಕ್ಷವೊಂದು ಈ ಮಟ್ಟಕ್ಕೆ ಇಳಿಯಬಹುದೇ? ಮಾಜಿ ಪ್ರಧಾನಿ ಮತ್ತು ಉಪ ರಾಷ್ಟ್ರಪತಿ ವಿರುದ್ಧ ಇಂತಹ ಆರೋಪ ಮಾಡಿ ಚುನಾವಣೆ ಗೆಲ್ಲುವುದು ಅಷ್ಟು ಮುಖ್ಯವೇ?’ ಎಂದು ಪ್ರಶ್ನಿಸಿದ್ದರು.

‘ಪ್ರಧಾನಿ ಅವರು ಅಪಾಯಕಾರಿ ಮಾದರಿ ಸೃಷ್ಟಿಸುತ್ತಿದ್ದಾರೆ. ಅವರು ದೇಶದ ಜನರ ಕ್ಷಮೆ ಕೋರಬೇಕು’ ಎಂದು ಮನಮೋಹನ್‌ ಸಿಂಗ್‌ ಆಗ್ರಹಿಸಿದ್ದರು.

06 ‘ನೀಚ’ ಪದ ಸೃಷ್ಟಿಸಿದ ವಿವಾದ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಕುರಿತು ಕಾಂಗ್ರೆಸ್‌ ನಾಯಕ ಮಣಿ ಶಂಕರ್‌ ಅಯ್ಯರ್‌ ‘ನೀಚ’ ಪದ ಬಳಸಿದ್ದರು.‌ ಬಳಿಕ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಲಾಗಿತ್ತು.

ಅಯ್ಯರ್‌ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಮೋದಿ, ‘ಶ್ರೀಮಾನ್‌ ಮಣಿಶಂಕರ್‌ ಅಯ್ಯರ್ ಅವರು ಇಂದು ಮೋದಿ ‘ನೀಚ’(ಕೆಳ) ('neech' lower vile) ಜಾತಿಯವ ಮತ್ತು ‘ಅಷ್ಟೇ’ ಕೆಟ್ಟವ(vile) ಎಂದು ಹೇಳಿದ್ದಾರೆ. ಇದು ಗುಜರಾತ್‌ಗೆ ಮಾಡಿದ ಅಪಮಾನವೇ? ಎಂದು ಪ್ರಶ್ನಿಸಿದ್ದರು.

07. ಜಲವಿಮಾನದಲ್ಲಿ ಮೋದಿ ಪ್ರಯಾಣ

ಗುಜರಾತ್‌ ಚುನಾವಣಾ ಪ್ರಚಾರದ ಕೊನೆಯ ದಿನವಾದ ಡಿಸೆಂಬರ್‌ 12ರಂದು ಪ್ರಚಾರ ರ‍್ಯಾಲಿ ನಡೆಸಲು ಮೋದಿ ಹಾಗೂ ರಾಹುಲ್‌ ಗಾಂಧಿ ಅವರಿಗೆ ಚುನಾವಣಾ ಆಯೋಗ ಅವಕಾಶ ನಿರಾಕರಿಸಿತ್ತು.

ಹೀಗಾಗಿ ಮೋದಿ ಸಾಬರಮತಿ ನದಿಯಿಂದ ಮೆಹ್ಸಾನಾ ಜಿಲ್ಲೆಯಲ್ಲಿರುವ ಧರೋಯಿ ಜಲಾಶಯಕ್ಕೆ ತೆರಳಲು ಜಲ ವಿಮಾನ ಬಳಸಿದ್ದರು. ಜತೆಗೆ ‘ದೇಶದ ಹಲವೆಡೆ ಇಂತಹ ಜಲ ವಿಮಾನಗಳ ಸೇವೆಯನ್ನು ಆರಂಭಿಸಲು ನಮ್ಮ ಸರ್ಕಾರ ಉತ್ಸುಕವಾಗಿದೆ’ ಎಂದು ಮೋದಿ ಹೇಳಿದ್ದರು.

ಆದರೆ, ಪ್ರಧಾನಿ ಅವರ ರಕ್ಷಣಾ ವಿಚಾರ ಕುರಿತು ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಟ್ವೀಟರ್‌ನಲ್ಲಿ ಪ್ರಶ್ನಿಸಿದ್ದರು. ರಾಹುಲ್ ಗಾಂಧಿ, ‘ಇದು ಜನರ ಗಮನವನ್ನು ಬೇರೆಡೆಗೆ ಸೆಳೆಯುವ ರಾಜಕೀಯ ಗಿಮಿಕ್ ಅಷ್ಟೆ’ ಎಂದು ಕಿಡಿಕಾರಿದ್ದರು.

08. ಮತದಾನದ ದಿನ ಮೋದಿ ರೋಡ್‌ ಷೋ

ಎರಡನೇ ಹಂತದ ಮತದಾನದ ದಿನ ಪ್ರಧಾನಿ ಮೋದಿ ಅವರು ಮತದಾನದ ಬಳಿಕ ಅಹಮದಾಬಾದ್‌ನಲ್ಲಿ ರೋಡ್‌ ಷೋ ನಡೆಸಿದ್ದರು.

ಇದನ್ನು ವಿರೋಧಿಸಿದ ಕಾಂಗ್ರೆಸ್‌ ಮೋದಿ ರೋಡ್‌ ಷೋ ತಡೆಯಲು ವಿಫಲವಾದ, ಚುನಾವಣಾ ಆಯೋಗ ಬಿಜೆಪಿಯ ಮುಂಚೂಣಿ ಸಂಘಟನೆ ಎಂದು ದೂರಿತ್ತು. ಜತೆಗೆ ಮೋದಿ ಅವರು ಎಲ್ಲಾ ಸಾಂವಿಧಾನಿಕ ಸಂಸ್ಥೆಗಳನ್ನು ತಮಗೆ ಬೇಕಾದಂತೆ ಬದಲಿಸಿಕೊಂಡಿದ್ದಾರೆ ಎಂದು ಆರೋಪಿಸಿತ್ತು.

09. ಮತಯಂತ್ರಗಳಲ್ಲಿ ದೋಷ

ಎರಡು ಹಂತದ ಚುನಾವಣೆ ಸಂದರ್ಭದಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸದ ದೂರಿನ ಆಧಾರದ ಹಲವು ಮತಯಂತ್ರಗಳು ಬದಲಿಸಲಾಗಿತ್ತು. 89 ಸ್ಥಾನಗಳಿಗೆ ನಡೆದ ಮೊದಲ ಹಂತದ ಮತದಾನದ ದಿನ ಸುಮಾರು 40 ಮತಯಂತ್ರಗಳಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ವರದಿಯಾಗಿತ್ತು.

‘ಎಲ್ಲಾ ಮತಯಂತ್ರಗಳೂ ಮೊಬೈಲ್‌ ಫೋನ್‌ಗಳ ಬ್ಲೂಟೂತ್‌ನೊಂದಿಗೆ ಕನೆಕ್ಟ್‌ ಆಗಿವೆ’ ಎಂದು ಕಾಂಗ್ರೆಸ್‌ನ ಅಭ್ಯರ್ಥಿ ಅರ್ಜುನ್‌ ಮೊಧ್ವಾಡಿಯಾ ಆರೋಪಿಸಿದ್ದರು.

10. ಮೋದಿ ಮೈಬಣ್ಣ ಮತ್ತು ಅಣಬೆ ವಿವಾದ

ಮೋದಿ ಅವರು ತೈವಾನ್‌ನಿಂದ ಆಮದಾಗುವ ಅಣಬೆ ಸೇವಿಸುತ್ತಾರೆ. ಪ್ರತಿ ಅಣಬೆ ಬೆಲೆ ₹ 80 ಸಾವಿರ. ಪ್ರತಿ ತಿಂಗಳು ಸೇವಿಸುವ ಅಣಬೆ ಮೌಲ್ಯ ₹ 1.20 ಕೋಟಿ. ಗುಜರಾತ್‌ ಮುಖ್ಯಮಂತ್ರಿಯಾದಾಗಿನಿಂದಲೂ ಅಣಬೆ ತಿನ್ನುತ್ತಿರುವುದರಿಂದ ಮೋದಿ ಬೆಳ್ಳಗಿದ್ದಾರೆ ಎಂದು ಕಾಂಗ್ರೆಸ್‌ ಯುವ ನಾಯಕ ಅಲ್ಪೇಶ್‌ ಠಾಕೂರ್‌ ವ್ಯಂಗ್ಯವಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT