ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನಾವರದಲ್ಲಿ ಶಾಲಾ ಬಾಲಕಿ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿಲ್ಲ; ಅನ್ಯಕೋಮಿನವರು ಹಲ್ಲೆ ನಡೆಸಿದ್ದಾರೆ ಎಂಬುದು 'ಸುಳ್ಳು ಸುದ್ದಿ'

Last Updated 17 ಡಿಸೆಂಬರ್ 2017, 13:42 IST
ಅಕ್ಷರ ಗಾತ್ರ

ಹೊನ್ನಾವರ: ಡಿಸೆಂಬರ್ 14ರಂದು ಶಾಲೆಗೆ ಹೋಗುತ್ತಿದ್ದ ಬಾಲಕಿಯ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಪ್ರಕರಣ ಸುದ್ದಿಯಾಗಿತ್ತು.ಇಲ್ಲಿನ ಕೊಡ್ಲಗದ್ದೆ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿಗೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕುತ್ತಿಗೆಗೆ ಚೂರಿ ಹಾಕಲು ಯತ್ನಿಸಿದ್ದಾರೆ. ಈ ವೇಳೆ ವಿದ್ಯಾರ್ಥಿನಿ ಕೈಗೆ ಗಾಯವಾಗಿತ್ತು.

ಆದಾಗ್ಯೂ, ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ್ದು ಅನ್ಯಕೋಮಿನ ಯುವಕರು ಎಂದು ಸುದ್ದಿ ಹಬ್ಬಿತ್ತು. ಈ ಘಟನೆಯ ಹಿನ್ನೆಲೆಯಲ್ಲಿ ಮಾಗೋಡು ಭಾಗದಲ್ಲಿ ಕೆಲವು ಕಿಡಿಗೇಡಿಗಳು ಅನ್ಯಕೋಮಿನವರ ಬಗ್ಗೆ ಸುಳ್ಳು ಸುದ್ದಿ ಹಾಗೂ ಸಂದೇಶಗಳನ್ನು ಹಬ್ಬಿಸಿ, ಅನ್ಯಕೋಮಿನವರ ಸಾರ್ವಜನಿಕ ಆಸ್ತಿ ಪಾಸ್ತಿಗಳನ್ನು ನಾಶ ಮಾಡಿದ್ದರು. ಹೊನ್ನಾವರದಲ್ಲಿ ಪ್ರಕ್ಷುಬ್ದ ವಾತಾವರಣ ಸಹಜ ಸ್ಥಿತಿಗೆ ಮರಳುವ ಹೊತ್ತಲ್ಲೇ ಈ ಪ್ರಕರಣ ಸುದ್ದಿಯಾಗಿದ್ದು, ಇದರಿಂದ ಪ್ರಸ್ತುತ ಪ್ರದೇಶದಲ್ಲಿ ಮತ್ತೊಮ್ಮೆ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ವಿದ್ಯಾರ್ಥಿನಿ ಮೇಲೆ ನಡೆದ ಹಲ್ಲೆ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ತಿಳಿದು ಬಂದ ವಿಷಯ ಏನೆಂದರೆ ಆಕೆಯ ಮೇಲೆ ಯಾರೂ ಹಲ್ಲೆ ನಡೆಸಿಲ್ಲ. ಬಾಲಕಿಯ ಗ್ರಾಮದವನೇ ಆದ ಗಣೇಶ ಈಶ್ವರ ನಾಯ್ಕ ಎಂಬಾತ ಆಕೆಗೆ ತೊಂದರೆ ಕೊಡುತ್ತಿದ್ದ. ಈತನ ಕಿರುಕುಳದಿಂದ ಮಾನಸಿಕ ಆಘಾತಕ್ಕೊಳಗಾಗಿದ್ದ ಬಾಲಕಿ ತನ್ನ ಕೈಗಳಿಗೆ ತಾನೇ ಗಾಯ ಮಾಡಿಕೊಂಡಿದ್ದಾಳೆ. ಆಕೆಯ ಮೇಲೆ ಹಲ್ಲೆ ನಡೆದಿದೆ ಎಂಬುದು ಅಲ್ಲಿನ ಗ್ರಾಮಸ್ಥರು ಹೇಳಿದ ಸುಳ್ಳು. ಬಾಲಕಿಯ ಕೈಯ ಮೇಲಿನ ಗಾಯ ಪರಿಶೀಲಿಸಿದ ವೈದ್ಯರು ಇದು ಹೆದರಿಕೆಯಿಂದ ಸ್ವಯಂ ಮಾಡಿಕೊಂಡ ಗಾಯಗಳ ಲಕ್ಷಣವನ್ನು ಹೊಂದಿರುತ್ತದೆ ಎಂದು  ದೃಢಪಡಿಸಿದ್ದಾರೆ. ಆಪ್ತ ಸಮಾಲೋಚನೆಯ ಕಾಲದಲ್ಲಿ ಬಾಲಕಿ ಸಹ ಈ ಬಗ್ಗೆ ಒಪ್ಪಿಕೊಂಡಿದ್ದು. ನ್ಯಾಯಾಲಯದ ಮುಂದೆ ಬಾಲಕಿಯ ಹೇಳಿಕೆ ದಾಖಲಿಸಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT