ಫುಟ್‌ಬಾಲ್

ಮಿಕು–ಬಿಎಫ್‌ಸಿಯ ಮಿಂಚು

ವೆನೆಜುವೆಲಾ ರಾಷ್ಟ್ರೀಯ ತಂಡ ಮತ್ತು ಸ್ಪೇನ್‌ನ ವಿವಿಧ ಲೀಗ್‌ಗಳಲ್ಲಿ ಮಿಂಚು ಹರಿಸಿದ ‘ಮಿಕು’ ಇದೇ ಮೊದಲ ಬಾರಿ ಭಾರತದ ಲೀಗ್‌ ಒಂದರಲ್ಲಿ ಆಡುತ್ತಿದ್ದಾರೆ. ಬೆಂಗಳೂರು ಫುಟ್‌ಬಾಲ್ ಕ್ಲಬ್‌ನ (ಬಿಎಫ್‌ಸಿ) ಸ್ಟ್ರೈಕರ್‌ ವಿಭಾಗಕ್ಕೆ ಬಲ ತುಂಬಿರುವ ಅವರು ತಂಡದ ಗೆಲುವಿನ ನಾಗಾಲೋಟಕ್ಕೆ ಪ್ರಮುಖ ಕಾಣಿಕೆ ನೀಡಿದ್ದಾರೆ. ಅವರನ್ನು ವಿಕ್ರಂ ಕಾಂತಿಕೆರೆ ಪರಿಚಯಿಸಿದ್ದಾರೆ

ಗೋಲು ಗಳಿಸಿದ ನಂತರ ಮಿಕು (ಬಿಳಿ ಪೋಷಾಕು) ಸಂಭ್ರಮ

ಅದು 2010ರಿಂದ 2013ರ ಅವಧಿ. ಸ್ಪೇನ್‌ನ ಲಾ ಲೀಗಾ ಫುಟ್‌ಬಾಲ್‌ ಟೂರ್ನಿಯಲ್ಲಿ ಗೆಟಾಫೆ ತಂಡ ಪ್ರತಿನಿಧಿಸಿದ್ದ ನಿಕೋಲಾಸ್‌ ಲಾಡಿಸ್ಲಾವ್‌ ಫೆಡಾರ್‌ ಫ್ಲೋರ್ಸ್‌ ಎಂಬ ಯುವ ಆಟಗಾರ ಒಟ್ಟು 92 ಪಂದ್ಯಗಳನ್ನು ಆಡಿದ.

ಆದರೆ ಗಳಿಸಿದ್ದು ಕೇವಲ 26 ಗೋಲು. ಒಟ್ಟು 12 ವರ್ಷ ಸ್ಪೇನ್‌ನ ವಿವಿಧ ತಂಡಗಳನ್ನು ಪ್ರತಿನಿಧಿಸಿದ ಅವರ ಖಾತೆ ಸೇರಿದ್ದು 94 ಗೋಲುಗಳು ಮಾತ್ರ. ಆಡಿದ ಒಟ್ಟು ಪಂದ್ಯಗಳು 328. ವೆನೆಜುವೆಲಾ ರಾಷ್ಟ್ರೀಯ ತಂಡದ ಪರ 51 ಪಂದ್ಯಗಳನ್ನು ಆಡಿದ ಅವರು 11 ಗೋಲು ಗಳಿಸಿದ್ದರು. ಫುಟ್‌ಬಾಲ್ ಆಟಗಾರನೊಬ್ಬನ ಪಾಲಿಗೆ ಇದು ವೈಯಕ್ತಿಕವಾಗಿ ತೃಪ್ತಿ ನೀಡುವಂಥ ಸಾಧನೆಯಲ್ಲ. ಆದರೆ ಅಂಗಣದಲ್ಲಿ ಮಿಂಚು ಹರಿಸಬಲ್ಲ ಈ ಆಟಗಾರನ ಮೇಲೆ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ಇರಿಸಿದ ವಿಶ್ವಾಸ ಸುಳ್ಳಾಗಲಿಲ್ಲ.

ಈ ವರ್ಷ ಇದೇ ಮೊದಲ ಬಾರಿ ಬೆಂಗಳೂರು ಫುಟ್‌ಬಾಲ್ ಕ್ಲಬ್‌ ಸೇರಿದ ಅವರು ಇಂಡಿಯನ್ ಸೂಪರ್ ಲೀಗ್‌ನಲ್ಲಿ (ಐಎಸ್‌ಎಲ್‌) ಮಿಂಚುತ್ತಿದ್ದಾರೆ. ಐಎಸ್‌ಎಲ್‌ನಲ್ಲಿ ನಿಕೋಲಾಸ್‌ ಲಾಡಿಸ್ಲಾವ್‌ ಫೆಡಾರ್‌ ಫ್ಲೋರ್ಸ್‌ ಎಂಬ ಆಟಗಾರ ಇದ್ದಾನೆಯೇ ಎಂಬ ಪ್ರಶ್ನೆ ಉದ್ಭವಿಸಿದರೆ ಅಚ್ಚರಿ ಇಲ್ಲ. ಯಾಕೆಂದರೆ ಇಲ್ಲಿ ಅವರು ‘ಮಿಕು’ ಎಂಬ ಅಡ್ಡ ಹೆಸರಿನಿಂದ ಫುಟ್‌ಬಾಲ್ ಪ್ರಿಯರ ಮನೆ–ಮನದ ಮಾತಾಗಿದ್ದಾರೆ.

ಲೀಗ್‌ನ ಪಾಯಿಂಟ್‌ ಪಟ್ಟಿಯಲ್ಲಿ ಬಿಎಫ್‌ಸಿಯನ್ನು ಅಗ್ರ ಸ್ಥಾನಕ್ಕೇರಿಸುವಲ್ಲಿ ಮಿಕು ವಹಿಸಿದ ಪಾತ್ರ ಮಹತ್ವದ್ದು. ಡಿಸೆಂಬರ್‌ 14ರ ಪುಣೆ ಎಫ್‌ಸಿ ತಂಡದ ಎದುರಿನ ಪಂದ್ಯದ ವರೆಗೆ ಒಟ್ಟು ಐದು ಪಂದ್ಯಗಳಲ್ಲಿ ಆರು ಗೋಲು ಗಳಿಸಿದ್ದರು. ಲೀಗ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.

ನಿಖರ ಪಾಸ್‌ ನೀಡಿ ಸಹ ಆಟಗಾರರು ಚೆಂಡನ್ನು ಗುರಿ ಸೇರಿಸಲು ಸಹಾಯ ಮಾಡುವ ಅವರು ತಮಗೆ ಲಭಿಸಿದ ಅವಕಾಶಗಳನ್ನು ಕೈ ಚೆಲ್ಲುವುದೂ ಇಲ್ಲ. ಲೀಗ್‌ನ ಅಂಕಿ–ಅಂಶಗಳೇ ಅವರ ಸಾಮರ್ಥ್ಯಕ್ಕೆ ಕನ್ನಡಿ ಹಿಡಿಯುತ್ತವೆ. ಅವಕಾಶಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ಅವರು ಶೇ 62ರಷ್ಟು ಯಶಸ್ಸು ಕಂಡಿದ್ದಾರೆ. ಅವರು ನೀಡಿದ ಪಾಸ್‌ಗಳು ಶೇ 60ರಷ್ಟು ನಿಖರವಾಗಿ ಗುರಿ ತಲುಪಿವೆ.

ಯೂತ್‌ ವಿಭಾಗದಲ್ಲಿ ಬೆಳಗಿದ ಮಿಕು
ಮಿಕು ಅವರಿಗೆ ಈಗ 32 ವರ್ಷ. ಯೂತ್‌ ವಿಭಾಗದಲ್ಲಿ ಅವರು ಮೊದಲು ಅಂಗಣಕ್ಕೆ ಇಳಿದದ್ದು ಸ್ಪೇನ್‌ನ ವೆಲೆನ್ಸಿಯಾ ತಂಡದ ಪರ. ಅಲ್ಲಿ ಸಾಕಷ್ಟು ಹೆಸರು ಮಾಡಿದ ನಂತರ ವೆಲೆನ್ಸಿಯಾ ‘ಬಿ’ ತಂಡದಲ್ಲಿ ಸ್ಥಾನ ಗಳಿಸಿದರು. ಕೆಲವೇ ತಿಂಗಳಲ್ಲಿ ವೆಲೆನ್ಸಿಯಾ ತಂಡವನ್ನೂ ಪ್ರತಿನಿಧಿಸಿದರು. ಆದರೆ ಆಡಿದ ಎರಡು ಪಂದ್ಯಗಳಲ್ಲಿ ಗೋಲು ಗಳಿಸಲು ಆಗಲಿಲ್ಲ. ನಂತರ ಅವರನ್ನು ಅಲ್ಕೊಯಾನೊ ತಂಡ ಕರೆಸಿಕೊಂಡಿತು. ಅಲ್ಲಿ ಆಡಿದ 21 ಪಂದ್ಯಗಳಲ್ಲಿ ಗಳಿಸಿದ್ದು ಐದು ಗೋಲು ಮಾತ್ರ. ನಂತರ ಸಲಮಂಕಾ, ಸ್ಯುಡಾಡ್ ಮ್ಯೂರಿಕಾ, ಜಿಮ್ನಾಸ್ಟಿಕ್ ಡಿ ಟರಗೋನ ಮುಂತಾದ ತಂಡಗಳಲ್ಲೂ ಆಡಿದರು. ಆದರೆ ಎಲ್ಲೂ ನಿರೀಕ್ಷಿತ ಸಾಮರ್ಥ್ಯ ಮೂಡಿ ಬರಲಿಲ್ಲ. 2010ರಲ್ಲಿ ಗೆಟಾಫೆ ಸೇರಿದ ನಂತರವೂ ಸಾಧನೆ ತೃಪ್ತಿಕರ ಎನಿಸಲಿಲ್ಲ.

ಹೆಸರು ಗಳಿಸಿಕೊಟ್ಟ ವಿಶ್ವಕಪ್
2010ರ ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯಗಳು ಮಿಕು ಅವರಿಗೆ ಹೆಸರು ತಂದುಕೊಟ್ಟವು. ಎರಡು ಪಂದ್ಯಗಳಲ್ಲಿ ಅವರು ವೆನೆಜುವೆಲಾ ಪರವಾಗಿ ಮಿಂಚಿದರು. ಕೊಲಂಬಿಯಾ ಎದುರಿನ ಪಂದ್ಯದಲ್ಲಿ 2–0 ಗೋಲುಗಳ ಜಯ ಗಳಿಸಲು ಅವರೇ ಕಾರಣರಾದರು. ಪೆರು ವಿರುದ್ಧದ ಪಂದ್ಯದಲ್ಲಿ ತಂಡ 3–1 ಅಂತರದ ಗೆಲುವು ಸಾಧಿಸಿತು. ಈ ಮೂರು ಗೋಲುಗಳನ್ನೂ ಮಿಕು ಗಳಿಸಿದ್ದರು. ಈ ಜಯದ ಮೂಲಕ ವೆನೆಜುವೆಲಾ ತಂಡಕ್ಕೆ ಮೊದಲ ಬಾರಿ ವಿಶ್ವಕಪ್‌ ಮುಖ್ಯ ಸುತ್ತು ಪ್ರವೇಶಿಸುವ ಅವಕಾಶದ ಬಾಗಿಲು ತೆರೆದಿತ್ತು. ಆದರೆ ನಂತರ ತಂಡ ನಿರಾಸೆಗೆ ಒಳಗಾಗಿತ್ತು. ಕೋಪಾ ಅಮೆರಿಕ ಟೂರ್ನಿಯಲ್ಲೂ ಮಿಕು ಉತ್ತಮ ಸಾಧನೆ ಮಾಡಿದ್ದಾರೆ. ಇದು ಬಿಎಫ್‌ಸಿ ತಂಡದ ಗಮನ ಸೆಳೆಯಲು ಕಾರಣವಾಯಿತು.

 

Comments
ಈ ವಿಭಾಗದಿಂದ ಇನ್ನಷ್ಟು
ಹದಿನಾರರ ಪೋರಿಯ ಚಿನ್ನದ ಬೇಟೆ

ಶೂಟಿಂಗ್‌
ಹದಿನಾರರ ಪೋರಿಯ ಚಿನ್ನದ ಬೇಟೆ

12 Mar, 2018
ಕರ್ನಾಟಕದ ಕೀರ್ತಿ

ರೋಯಿಂಗ್‌
ಕರ್ನಾಟಕದ ಕೀರ್ತಿ

12 Mar, 2018
ಚಿನ್ನದ ಕನಸಿನಲ್ಲಿ...

ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌
ಚಿನ್ನದ ಕನಸಿನಲ್ಲಿ...

12 Mar, 2018
ಆಟ ಮುನ್ನೋಟ

ಆಟ-ಅಂಕ
ಆಟ ಮುನ್ನೋಟ

12 Mar, 2018
ಜಾವೆಲಿನ್‌: ಭರವಸೆಯ ಮಿಂಚು

ಆಟ-ಅಂಕ
ಜಾವೆಲಿನ್‌: ಭರವಸೆಯ ಮಿಂಚು

12 Mar, 2018