ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಮಾರಾವ್ ಸಾಧನೆಯ ಹಾದಿ

Last Updated 17 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಮೂರನೇ ವಯಸ್ಸಿನಲ್ಲಿಯೇ ಪೋಲಿಯೊ ಚುಚ್ಚುಮದ್ದಿನ ಅಡ್ಡಪರಿಣಾಮದಿಂದ ಬಲಗಾಲು ಕಳೆದುಕೊಂಡ ಪ್ರತಿಮಾ ರಾವ್ ಇಂದು ಗಾಲಿಕುರ್ಚಿ (ವ್ಹೀಲ್‌ಚೇರ್) ಟೆನಿಸ್‌ನಲ್ಲಿ ಎಐಟಿಎ ಅಗ್ರ ರ‍್ಯಾಂಕಿಂಗ್ ಆಟಗಾರ್ತಿಯಾಗಿ ಬೆಳೆದಿದ್ದಾರೆ. ‌

ಉಡುಪಿ ಬಳಿಯ ಸಾಲಿಗ್ರಾಮದ ಪ್ರತಿಮಾ ಅವರು ಕಂಪ್ಯೂಟರ್ ಡಿಪ್ಲೊಮಾ ಮಾಡಿ ಜಿವಿಕೆಇಎಮ್‌ಆರ್‌ಐ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಪ್ಪ ಬೀಡಾ ವ್ಯಾಪಾರಿಯಾಗಿದ್ದಾರೆ.

‘ಮನೆಯಲ್ಲಿ ನನ್ನನ್ನು ಮುದ್ದಾಗಿ ಸಾಕಿದ್ದರು. ಶಾಲೆಯಲ್ಲಿ ಕೂಡ ನಾನು ಆಟ ಆಡುತ್ತಿರಲಿಲ್ಲ. ಟೀಚರ್ ಪಕ್ಕದಲ್ಲಿ ಕೂತು ಬೇರೆಯವರ ಆಟ ನೋಡುತ್ತಿದ್ದೆ. ಆದರೆ ಬೆಂಗಳೂರಿಗೆ ಬಂದ ಮೇಲೆ ನನಗೆ ಟೆನಿಸ್‌ನಲ್ಲಿ ಆಸಕ್ತಿ ಮೂಡಿತು. ವ್ಹೀಲ್‌ಚೇರ್‌ನಲ್ಲಿ ಟೆನಿಸ್ ಆಡುವುದನ್ನು ನೋಡಿ ನನಗೂ ಉತ್ಸಾಹ ಮೂಡಿತು’ ಎಂದು ಪ್ರತಿಮಾ ತಮ್ಮ ಆಸಕ್ತಿಯ ಬಗ್ಗೆ ಹೇಳಿದರು.

‘ಅಪ್ಪ ಅಮ್ಮನಿಗೆ ನಾನು ಕಷ್ಟಪಡುವುದು ಇಷ್ಟ ಇರಲಿಲ್ಲ. ಆರಾಮಾಗಿ ಇರಲಿ ಎಂಬುದು ಅವರ ಆಸೆ. ಆದರೆ ನನಗೆ ಏನಾದರೂ ಸಾಧಿಸುವ ಹಂಬಲ ಇತ್ತು. ವ್ಹೀಲ್‌ಚೇರ್ ಬಳಸದೇ ನಾನು ನಡೆಯಬಹುದು. ಹೆಚ್ಚು ದೂರ ನಡೆಯುವಾಗ ಮಾತ್ರ ಕ್ಯಾಲಿಫರ್ ಬಳಸುತ್ತೇನೆ. ಆದರೆ ಟೆನಿಸ್ ಆಡುವ ಉದ್ದೇಶದಿಂದ ಮೊದಲ ಬಾರಿಗೆ ವ್ಹೀಲ್‌ಚೇರ್‌ನಲ್ಲಿ ಸಂಚರಿಸುವುದನ್ನು ಕಲಿತೆ. 2012ರಲ್ಲಿ ಕರ್ನಾಟಕ ವ್ಹೀಲ್‌ಚೇರ್ ಟೆನಿಸ್ ಅಸೋಸಿಯೇಷನ್‌ನಿಂದ (ಕೆಡಬ್ಲ್ಯುಟಿ) ಆಡುವ ಅವಕಾಶ ಸಿಕ್ಕಿತು. ಇದರಿಂದ ಕರ್ನಾಟಕ ರಾಜ್ಯ ಲಾನ್ ಟೆನಿಸ್

ಸಂಸ್ಥೆ (ಕೆಎಸ್‌ಎಲ್‌ಟಿಎ) ಯಲ್ಲಿ ವಾರಾಂತ್ಯದಲ್ಲಿ ಆಡಲು ಸಾಧ್ಯವಾಯಿತು. ಗೂಗಲ್ ಹಾಗೂ ಯೂ ಟ್ಯೂಬ್ ನೋಡಿ ಆಡುವುದನ್ನು ಕಲಿತುಕೊಂಡೆ’ ಎಂದು ಪ್ರತಿಮಾ ತಮ್ಮ ವೃತ್ತಿಬದುಕಿನ ಆರಂಭದ ದಿನಗಳನ್ನು ಮೆಲುಕು ಹಾಕಿದರು.

‘2013ರಲ್ಲಿ ರಾಷ್ಟ್ರೀಯ ವ್ಹೀಲ್‌ಚೇರ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್ ತಲುಪಿದ್ದೆ.  ಆ ಬಳಿಕ ಕೋಚ್ ನಿರಂಜನ್ ರಮೇಶ್ ಅವರಿಂದ ತರಬೇತಿ ಸಿಕ್ಕಿತು. ಅವರು ನನಗೆ ಗುರುಗಳು. ಸಮಯ ನಿರ್ವಹಣೆಯಿಂದ ಹಿಡಿದು ವೃತ್ತಿಜೀವನದ ಬಹುತೇಕ ಶಿಸ್ತುಗಳನ್ನು ನನಗೆ ಕಲಿಸಿಕೊಟ್ಟರು. ನಂತರ ಎಐಟಿಎ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಪಡೆದುಕೊಂಡೆ. ಐಟಿಎಫ್‌ ರ‍್ಯಾಂಕಿಂಗ್‌ನಲ್ಲಿ ಸದ್ಯಕ್ಕೆ ಯಾವುದೇ ಸ್ಥಾನ ಹೊಂದಿಲ್ಲ.   ರ‍್ಯಾಂಕಿಂಗ್ ಪಡೆದುಕೊಳ್ಳುವುದು ನನ್ನ ಗುರಿ’ ಎಂದು ಹೇಳುತ್ತಾರೆ.

ಪ್ರತಿಮಾ ರಾವ್ ಅವರು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯಲ್ಲಿ ನಡೆಯುತ್ತಿರುವ ಟೆಬೆಬುಯಿಯಾ ಓಪನ್ ವ್ಹೀಲ್‌ಚೇರ್‌ ಟೆನಿಸ್ ಟೂರ್ನಿಯಲ್ಲಿ ಅಗ್ರಶ್ರೇಯಾಂಕದೊಂದಿಗೆ ಆಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT