ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆಂದೂ ಚಲಿಸುವ ರೈಲು ಹತ್ತಲಿಲ್ಲ

Last Updated 17 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

‘ರಾಜ್ಯರಾಣಿ ಎಕ್ಸ್‌ಪ್ರೆಸ್‌ ಗಾಡಿಯು ಮೈಸೂರಿಗೆ ಕೆಲವೇ ಕ್ಷಣಗಳಲ್ಲಿ ಹೊರಡಲಿದೆ...’

ಬೆಂಗಳೂರು ಸಿಟಿ ರೈಲು ನಿಲ್ದಾಣದ ಧ್ವನಿವರ್ಧಕದಲ್ಲಿ ಈ ಉದ್ಘೋಷಣೆ ಮೊಳಗಿದಾಗ ನಾನಿನ್ನೂ ಸ್ಕೈವಾಕ್ ಮೆಟ್ಟಿಲು ಹತ್ತುತ್ತಿದ್ದೆ. ಎದ್ದೆನೋ, ಬಿದ್ದೆನೋ ಎಂದು ಓಡಿ ಪ್ಲಾಟ್‌ಫಾರಂಗೆ ಬರುವಹೊತ್ತಿಗೆ ರೈಲು ಚಲಿಸುತ್ತಿತ್ತು. ಕೊನೆಯ ಬೋಗಿಯ ಹಿಡಿಕೆ ಹಿಡಿದು ದೇಹವನ್ನು ಒಳಗೆ ತೂರಿಸಿ ಉಸ್ಸಪ್ಪಾ ಎಂದು ಕುಳಿತುಬಿಟ್ಟೆ. ಓಡಿ ದಣಿದಿದ್ದ ದೇಹಕ್ಕೆ ಕಿಟಕಿಯಿಂದ ಮೆಲುವಾಗಿ ಬರುತ್ತಿದ್ದ ತಂಗಾಳಿ ಮುದ ನೀಡಿತ್ತು.

ಕೃಷ್ಣದೇವರಾಯ ಹಾಲ್ಟ್‌ ದಾಟುವ ಹೊತ್ತಿಗೆ ‘ಸ್ವಲ್ಪ ನೀರು ಕುಡೀತೀರಾ ಸಾರ್?’ ಎನ್ನುವ ಧ್ವನಿ ಕೇಳಿಸಿತು. ನೋಡಿದರೆ ಅಚ್ಚ ಬಿಳುಪು ಉಡುಪು ಧರಿಸಿದ್ದ ಗಾರ್ಡ್‌. ‘ಗಾಡಿ ತಪ್ಪಿ ಹೋಗುವ ಆತುರದಲ್ಲಿ ಗಾರ್ಡ್‌ ಡಬ್ಬಿಗೇ ಹತ್ತಿಬಿಟ್ಟಿದ್ದೇನೆ. ಇನ್ನು ಇವರು ಫೈನ್ ಹಾಕ್ತಾರೆ, ಮುಂದಿನ ಸ್ಟೇಷನ್‌ನಲ್ಲಿ ಇಳಿಸಿ ಬಿಡ್ತಾರೆ, ಪೊಲೀಸರಿಗೆ ಹಿಡಿದುಕೊಡ್ತಾರೆ’ ನನ್ನ ತಲೆ ಬಿಸಿಯಾಗುತ್ತಿತ್ತು.

ನೀರು ಕುಡಿದೆ. ‘ದಯವಿಟ್ಟು ಕ್ಷಮಿಸಿ ಸಾರ್. ಇದು ಗಾರ್ಡ್‌ ಡಬ್ಬಿ ಅಂತ ಗೊತ್ತಾಗಲಿಲ್ಲ, ಹತ್ತಿಬಿಟ್ಟೆ. ಕೆಂಗೇರಿಯಲ್ಲಿ ಇಳಿದು ಬೇರೆ ಡಬ್ಬಿಗೆ ಹೋಗ್ತೀನಿ. ಬಡವ ಸಾರ್, ಫೈನ್ ಹಾಕ್ಬೇಡಿ ಸಾರ್’ ಅನ್ನುತ್ತಾ ಗೋಗರೆದೆ.

ಆ ಗಾರ್ಡ್‌ ನನಗೆ ಬೈಯಲಿಲ್ಲ. ‘ರನ್ನಿಂಗ್ ಟ್ರೇನ್ ಹತ್ತೋದು ಅಪರಾಧ ಗೊತ್ತೇನಯ್ಯಾ? ರೈಲು ಬೋಗಿ ಮೆಟ್ಟಿಲಿನ ಡಿಸೈನ್ ನೋಡಿದ್ದೀಯಾ ಹೇಗಿದೆ ಅಂತ? ತುಸು ಸ್ಲಿಪ್ ಆದರೂ ನಿನ್ನ ತಲೆ ರೈಲಿನ ಚಕ್ರಕ್ಕೆ ಸಿಕ್ಕಿಕೊಳ್ಳುತ್ತೆ. ನೀನು ವಾಪಸ್ ಬರ್ತೀ ಅಂತ ಮನೆಯಲ್ಲಿ ಯಾರೆಲ್ಲಾ ಕಾಯ್ತಾ ಇರ್ತಾರೆ ನೆನಪು ಮಾಡ್ಕೋ. ನಾನು ನಿನಗೆ ಫೈನೂ ಹಾಕಲ್ಲ, ಪೊಲೀಸರಿಗೂ ಹಿಡಿದುಕೊಡಲ್ಲ. ಆದ್ರೆ ಇನ್ಯಾವತ್ತೂ ರನ್ನಿಂಗ್ ಟ್ರೇನ್ ಹತ್ತಲ್ಲ ಅಂತ ಭಾಷೆ ಕೊಡಬೇಕು’ ಎಂದು ಪ್ರಮಾಣ ಮಾಡಿಸಿಕೊಂಡರು.

ನಾನು ಖುಷಿಯಾಗಿ ಪ್ರಮಾಣ ಮಾಡಿದೆ. ಬಹುಶಃ ಅವರು ದಂಡ ಹಾಕಿದ್ದರೆ, ಪೊಲೀಸರ ಕೈಲಿ ಹೊಡೆಸಿದ್ದರೆ ನಾನು ಬುದ್ದಿ ಕಲಿಯುತ್ತಿರಲಿಲ್ಲ. ನಗುತ್ತಾ ಮಾತನಾಡಿ ನನ್ನ ಮನಸು ಪರಿವರ್ತಿಸಿದರು. ಅಲ್ಲಿಯವರೆಗೂ ನಾನು ಚಲಿಸುವ ರೈಲು ಹತ್ತುವುದನ್ನು ಸಾಹಸ ಎಂದೇ ಅಂದುಕೊಂಡಿದ್ದೆ. ಆದರೆ ಅವತ್ತು ಆಡಿದ ಮಾತುಗಳಿಂದ ಬುದ್ಧಿ ಕಲಿತೆ. ಅವತ್ತಿನಿಂದ ಇವತ್ತಿನವರೆಗೂ ಚಲಿಸುವ ರೈಲು ಹತ್ತಿಲ್ಲ.

--ರಾಜಕುಮಾರ್, ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT