ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಯಾಮರಣ: ತಪ್ಪು ಮಾಹಿತಿಗೆ ಭಾರಿ ದಂಡ, ಜೈಲು ಶಿಕ್ಷೆ

Last Updated 17 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ವಾಸಿಯಾಗದ ಕಾಯಿಲೆಗಳಿಂದ ಮರಣಶಯ್ಯೆಯಲ್ಲಿರುವ ರೋಗಿಗಳ ಇಚ್ಛಾಮರಣ ಅಥವಾ ದಯಾಮರಣಕ್ಕೆ ಒಪ್ಪಿಗೆ ನೀಡಲು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳು ‘ಮಂಜೂರಾತಿ ಸಮಿತಿ’ ರಚಿಸುವಂತೆ ದಯಾಮರಣ ಪರಿಷ್ಕೃತ ಕರಡು ಮಸೂದೆ ಸಲಹೆ ಮಾಡಿದೆ.

ಸಮಿತಿಗೆ ತಪ್ಪು ಮಾಹಿತಿ ನೀಡಿ ದಯಾ ಮರಣಕ್ಕೆ ಅನುಮತಿ ಪಡೆದಿರುವುದು ಸಾಬೀತಾದರೆ 5–10 ವರ್ಷ ಜೈಲು ಶಿಕ್ಷೆ ಮತ್ತು ₹20 ಲಕ್ಷದಿಂದ ₹1 ಕೋಟಿ ದಂಡ ವಿಧಿಸಲು ಪರಿಷ್ಕೃತ ಕರಡು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಸಾವಿನ ದವಡೆಯಲ್ಲಿರುವ ಮತ್ತು ಬದುಕುವ ಭರವಸೆ ಕ್ಷೀಣವಾಗಿರುವ ವ್ಯಕ್ತಿಗೆ ಸ್ವ ಇಚ್ಛೆಯ ದಯಾಮರಣ ಕರುಣಿಸುವ ನಿರ್ಧಾರವನ್ನು ಆಸ್ಪತ್ರೆಗಳ ದಯಾಮರಣ ಮಂಜೂರಾತಿ ಸಮಿತಿಗಳು ತೆಗೆದುಕೊಳ್ಳುತ್ತವೆ. ಈ ಕುರಿತು ರೋಗಿಗಳ ಸಂಬಂಧಿಗಳು ಸಮಿತಿಗೆ ಸೂಕ್ತ ದಾಖಲೆಗಳ ಸಮೇತ ಅರ್ಜಿ ಸಲ್ಲಿಸಬೇಕಾಗುತ್ತದೆ.

ರೋಗಿಗೆ ಜೀವ ರಕ್ಷಕ ವೈದ್ಯಕೀಯ ಸವಲತ್ತು ನಿರಾಕರಿಸುವ ಹಕ್ಕನ್ನು ನೀಡುವಂತೆ ‘ಕಾಮನ್ ಕಾಸ್’ ಸರ್ಕಾರೇತರ ಸಂಸ್ಥೆ 2008ರಲ್ಲಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.

ಇಂಜೆಕ್ಷನ್‌ ಮೂಲಕ ಮರಣಕ್ಕಿಲ್ಲ ಅವಕಾಶ
ಭೀಕರ ಕಾಯಿಲೆಗೆ ತುತ್ತಾಗಿ ಚೇತರಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎಂಬ ಸ್ಥಿತಿಗೆ ತಲುಪಿದ ರೋಗಿಗೆ ಕೃತಕ ಜೀವ ರಕ್ಷಕ ವೈದ್ಯಕೀಯ ನೆರವು ನಿರಾಕರಿಸುವುದಕ್ಕೆ ಅವಕಾಶ ಇದೆ.

ಆದರೆ, ಇಂಜೆಕ್ಷನ್‌ ಇಲ್ಲವೇ ಮಿತಿ ಮೀರಿದ ಪ್ರಮಾಣದ ಔಷಧ ನೀಡುವ ಮೂಲಕ ರೋಗಿಗಳಿಗೆ ಮುಕ್ತಿ ನೀಡಲು ಪರಿಷ್ಕೃತ ಕರುಡು ಮಸೂದೆಯಲ್ಲಿ ಅವಕಾಶ ಇಲ್ಲ.

ಭಾರತೀಯ ಕಾನೂನು ಆಯೋಗದ ವರದಿಯ ಶಿಫಾರಸುಗಳ ಆಧಾರದ ಮೇಲೆ ಕೇಂದ್ರ ಆರೋಗ್ಯ ಸಚಿವಾಲಯ ಈ ಪರಿಷ್ಕೃತ ಕರಡು ಮಸೂದೆ ಸಿದ್ಧಪಡಿಸಿದೆ.

ಇದೇ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ದಯಾಮರಣ ಕರಡು ಮಸೂದೆ ಪರಿಶೀಲಿಸಿದ ಸುಪ್ರೀಂ ಕೋರ್ಟ್‌, ವೈದ್ಯಕೀಯ ಪ್ರಮಾಣ ಪತ್ರ ಅಗತ್ಯ ಎಂದು ಹೇಳಿತ್ತು.

ರೋಗಿಯ ಆರೋಗ್ಯ ಸ್ಥಿತಿಯ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರ ಅಥವಾ ಶಿಫಾರಸು ಅಗತ್ಯ ಎಂಬ ಅಂಶವನ್ನು ಪರಿಷ್ಕೃತ ಕರಡು ಮಸೂದೆಯಲ್ಲಿ ಸೇರಿಸುವಂತೆ ಸಲಹೆ ನೀಡಿತ್ತು.

ದಶಕಗಳ ಕಾಲ ಮರಣಶಯ್ಯೆಯಲ್ಲಿದ್ದ ಕರ್ನಾಟಕ ಮೂಲದ ಶುಶ್ರೂಷಕಿ ಮತ್ತು ಮುಂಬೈ ನಿವಾಸಿ ಅರುಣಾ ಶಾನುಭಾಗ್‌ ಅವರು ಮೊದಲ ಬಾರಿಗೆ 2011ರಲ್ಲಿ ದಯಾಮರಣ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. 2015ರಲ್ಲಿ ಅವರು ಕೊನೆಯುಸಿರೆಳೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT