ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಮಾಧ್ಯಮಕ್ಕೆ ಶೇ 30ರಷ್ಟು ಉದ್ಯೋಗ

Last Updated 18 ಡಿಸೆಂಬರ್ 2017, 5:04 IST
ಅಕ್ಷರ ಗಾತ್ರ

ಶಿವಮೊಗ್ಗ: ಕನ್ನಡ ಮಾಧ್ಯಮದಲ್ಲಿ ಎಸ್ಸೆಸ್ಸೆಲ್ಸಿವರೆಗೆ ಓದಿದವರಿಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 30ರಷ್ಟು ಮೀಸಲಾತಿ ನೀಡಿದರೆ ಕನ್ನಡ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಪೋಷಕರು ಮನಸ್ಸು ಮಾಡುತ್ತಾರೆ.

ಇದು ಸೋಮವಾರ (ಡಿ.18) ಆರಂಭವಾಗುವ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ಶ್ರೀಕಂಠ ಕೂಡಿಗೆ ಅವರ ಮನದಾಳ.

ಕನ್ನಡ ಶಾಲೆಗಳ ಉಳಿವು, ಗಡಿ, ನೆಲ. ಜಲ, ಆಡಳಿತದಲ್ಲಿ ಕನ್ನಡ ಬಳಕೆ ವಿಷಯಗಳು ಬಹುಕಾಲದ, ಬಹು ಚರ್ಚಿತ ವಿಷಯಗಳು. ಎಲ್ಲ ಸಾಹಿತ್ಯ ಸಮ್ಮೇಳನಗಳಲ್ಲೂ ಎಲ್ಲ ಅಧ್ಯಕ್ಷರೂ ಈ ವಿಷಯಗಳ ಕುರಿತು ಪ್ರಸ್ತಾಪಿಸುತ್ತಲೇ ಬಂದಿದ್ದಾರೆ. ಆದರೆ, ಫಲಿತಾಂಶ ಮಾತ್ರ ಶೂನ್ಯ. ಅದಕ್ಕೆ ಕಾರಣ ಪೋಷಕರ ಮನೋಭಾವ, ನಮ್ಮನ್ನು ಆಳುವ ಸರ್ಕಾರದ ಯಡವಟ್ಟುಗಳು ಹಾಗೂ ಅಧಿಕಾರಿಗಳ ಉದಾಸೀನತೆ ಎಂದು ಅಸಮಾಧಾನ ಹೊರಹಾಕಿದರು.

ಮಕ್ಕಳು ಇಂಗ್ಲಿಷ್‌ ಮಾಧ್ಯಮದಲ್ಲಿ ಓದಿದರೆ ವಿಫುಲ ಉದ್ಯೋಗಾವಕಾಶ ದೊರಕುತ್ತವೆ. ಭವಿಷ್ಯ ರೂಪಿಸಿಕೊಳ್ಳಲು ನೆರವಾಗುತ್ತದೆ ಎನ್ನುವ ಮನೋಭಾವ ಬಹುತೇಕ ಪೋಷಕರು ಹೊಂದಿದ್ದಾರೆ. ಹಾಗಾಗಿ, ಸರ್ಕಾರ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಉದ್ಯೋಗ ಮೀಸಲಾತಿ ನೀಡಬೇಕು. ಕನ್ನಡ ಮಾಧ್ಯಮ ಅನ್ನದ ಮಾರ್ಗವಾದಾಗ ಸಹಜವಾಗಿ ಅತ್ತ ಚಿತ್ತ ಹರಿಯುತ್ತದೆ ಎಂದು ವಿಶ್ಲೇಷಿಸುತ್ತಾರೆ ಕೂಡಿಗೆ.

ಕನ್ನಡ ಶಾಲೆಗಳು ಗುಣಮಟ್ಟದಲ್ಲಿ ಖಾಸಗಿ ಶಾಲೆಗಳ ಮಟ್ಟಕ್ಕೆ ಏರಬೇಕು. ಎಷ್ಟೋ ಶಾಲೆಗಳಲ್ಲಿ ಇಂದಿಗೂ ಶೌಚಾಲಯ, ಕುಡಿಯುವ ನೀರು ಮತ್ತಿತರ ಮೂಲ ಸೌಲಭ್ಯಗಳಿಂದ ವಂಚಿತವಾಗಿವೆ. ಇಂತಹ ನ್ಯೂನತೆ ಸರಿಪಡಿಸಬೇಕು. ಒಂದರಿಂದ ಏಳನೇ ತರಗತಿಯವರೆಗೆ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿಸಬೇಕು. ಅದಕ್ಕಾಗಿ ನುರಿತ ಇಂಗ್ಲಿಷ್‌ ಶಿಕ್ಷಕರನ್ನು ನೇಮಿಸಬೇಕು ಎಂದು ಅಭಿಪ್ರಾಯಪಟ್ಟರು.

‘ಪ್ರಜಾವಾಣಿ’ ಜತೆ ಅವರು ಹಂಚಿಕೊಂಡ ಇನ್ನಷ್ಟು ಮಾತುಕತೆ ಹೀಗಿದೆ.

* ಸಾಹಿತ್ಯ ಪರಿಷತ್ತಿನಲ್ಲಿ ವೋಟ್‌ ಬ್ಯಾಂಕ್ ಸದಸ್ಯತ್ವ ಹೆಚ್ಚಾಗುತ್ತಿದೆಯಲ್ಲ?

ಹೌದು. ಜಿಲ್ಲಾ ಸಾಹಿತ್ಯ ಪರಿಷತ್ ಚುಕ್ಕಾಣಿ ಹಿಡಿಯಲು ತಮಗೆ ಬೇಕಾದವರನ್ನು ಸದಸ್ಯರನ್ನಾಗಿ ಮಾಡುವ ಪ್ರವೃತ್ತಿ ಈಚೆಗೆ ಹೆಚ್ಚಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ, ಕನ್ನಡ ಭಾಷೆಯ ಮೇಲೆ ಪ್ರೀತಿ ಇರುವ ಕ್ರಿಯಾಶೀಲರ ಸಹಭಾಗಿತ್ವ ಹೆಚ್ಚಾಗಿ ಆಗಬೇಕು. ಸಾಹಿತ್ಯ ಕ್ಷೇತ್ರವೂ ಇಂದು ರಾಜಕಾರಣದಂತೆ ಆಗಿದೆ. ಈ ಪರಿಸ್ಥಿತಿ ಬದಲಾಗದಿದ್ದರೆ ಮುಂದೊಂದು ದಿನ ಸಾಹಿತ್ಯ ಪರಿಷತ್ ಚುನಾವಣೆಯೂ ಮತ್ತೊಂದು ರಾಜಕೀಯ ಚುನಾವಣಾ ಕಣವಾಗಿ ಮಾರ್ಪಾಡಾಗುತ್ತದೆ.

* ಸಾಹಿತ್ಯ ಸಮ್ಮೇಳನಗಳು ಈಚೆಗೆ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳಾಗುತ್ತಿವೆಯಲ್ಲ?

– ಇಲ್ಲ. ಸಮ್ಮೇಳನಗಳಿಗೆ ಸರ್ಕಾರದ ನೆರವು ಬೇಕಿದೆ. ಹಿಂದೆ ಅನುದಾನ ನಿರಾಕರಿಸಿ ಅಮೃತ ನಿಧಿ ಸ್ಥಾಪಿಸುವ ಪ್ರಯತ್ನ ನಡೆದಿತ್ತು. ಅದು ಯಶಸ್ವಿಯಾಗಲಿಲ್ಲ. ಆದರೆ, ಅದು ಸರ್ಕಾರಿ ಕಾರ್ಯಕ್ರಮವಾಗಲು ಅವಕಾಶ ನೀಡಬಾರದು.

* ಸಮ್ಮೇಳನಗಳು ಜನಸಾಮಾನ್ಯರನ್ನು ಒಳಗೊಳ್ಳುತ್ತಿಲ್ಲವಲ್ಲ?

ಜನಸಾಮಾನ್ಯರು ಸಾಹಿತ್ಯದತ್ತ ಮುಖಮಾಡದಿರಲು ಆರ್ಥಿಕತೆಯೂ ಕಾರಣ. ನಿತ್ಯವೂ ದುಡಿದು ತಿನ್ನುವವರಿಗೆ ಅವರ ಬದುಕೇ ಬವಣೆಯಾಗಿರುತ್ತದೆ. ಅವರ ಸ್ಥಿತಿ ಸುಧಾರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಕೃಷಿಕರು, ಕೃಷಿ ಕಾರ್ಮಿಕರು, ಶ್ರಮಿಕರಲ್ಲೂ ಕನ್ನಡ ಭಾಷೆ, ಸಾಹಿತ್ಯದಲ್ಲಿ ಆಸಕ್ತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಬೇಕು. ಅವರ ಒಳಗೊಳ್ಳುವಿಕೆಗೆ ಅಗತ್ಯ ವಾತಾವರಣ ಮೂಡಿಸಬೇಕು. ಆಗ ಮಾತ್ರ ಶಿಷ್ಟರಿಗಾಗಿಯೇ ಶಿಷ್ಟರು ನಡೆಸುವ ಸಮ್ಮೇಳನದ ಪರಿಕಲ್ಪನೆ ಬದಲಾಯಿಸಬಹುದು.

* ಸಮ್ಮೇಳನಗಳಿಗೆ ಸಾಹಿತಿಗಳಲ್ಲದವರು ಅಧ್ಯಕ್ಷರಾಗಬಾರದೇ?

ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಸಾಹಿತಿಗಳ ಜತೆಗೆ, ಚಳವಳಿಗಾರರ ಪಾತ್ರವೂ ಇದೆ. ಅವರು ಸೃಜನಶೀಲ ಬರಹಗಾರರಲ್ಲದಿದ್ದರೂ ಕನ್ನಡದ ನೆಲೆ, ಜಲ ವಿಷಯಗಳಲ್ಲಿ ಹೋರಾಟ ಮಾಡುತ್ತಾರೆ. ಎಲ್ಲರೂ ಸಾಹಿತ್ಯ ಬರೆಯುತ್ತಾ ಕುಳಿತರೆ ಚಳವಳಿ ರೂಪಿಸುವವರು ಯಾರು? ಹಾಗಾಗಿ, ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಹೊರತುಪಡಿಸಿ ಇತರೆ ಸಮ್ಮೇಳನಗಳಲ್ಲಾದರೂ ಚಳವಳಿಗಾರರಿಗೆ ಅವಕಾಶ ಕಲ್ಪಿಸಬೇಕು.

ಮೈಸೂರು ಸಮ್ಮೇಳನದಲ್ಲಿ ಚಂಪಾ ರಾಜಕೀಯ ಹೇಳಿಕೆ ಸರಿಯೇ?

ಸಾಹಿತ್ಯ ಹೆಸರಲ್ಲಿ ‘ಸಹಿತ’ ಇದೆ. ಅಂದರೆ ಸಾಹಿತ್ಯ ಧರ್ಮ, ದೇವರು, ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರವನ್ನೂ ಒಳಗೊಂಡ ಭೂಮಿಕೆ. ಅವರ ಹೇಳಿಕೆಯಲ್ಲಿ ರಾಜಕೀಯ ಇದೆ ಎಂದು ಆರೋಪಿಸುವುದರ ಹಿಂದೆಯೂ ಮತ್ತೊಂದು ಪಕ್ಷದ ರಾಜಕೀಯ ಹಿತಾಸಕ್ತಿ ಅಡಗಿದೆ.

ಸಮ್ಮೇಳನಾಧ್ಯಕ್ಷರ ಬದುಕು– ಸಾಧನೆ

ಸಮ್ಮೇಳನಾಧ್ಯಕ್ಷ ಶ್ರೀಕಂಠ ಕೂಡಿಗೆ ಅವರದು ತೀರ್ಥಹಳ್ಳಿ ತಾಲ್ಲೂಕಿನ ಕೂಡಿಗೆ ಗ್ರಾಮ. ಅವರು ಮೈಸೂರು ವಿಶ್ವ ವಿದ್ಯಾಲಯದ ಕನ್ನಡ ಎಂಎ ಪದವೀಧರರು. ಅದೇ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ ಪಡೆದಿದ್ದಾರೆ.

ಶ್ರೇಷ್ಠ ಜಾನಪದ ತಜ್ಞರಾದ ಅವರು ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರು. ಕನ್ನಡ ಅಧ್ಯಯನ ಸಂಸ್ಥೆ, ಪ್ರಸಾರಾಂಗದ ನಿರ್ದೇಶಕರಾಗಿ, ಸೆನೆಟ್, ಸಿಂಡಿಕೇಟ್, ಶಿಕ್ಷಣ ಮಂಡಳಿ, ಕಲಾನಿಕಾಯದ ಡೀನ್, ಪರೀಕ್ಷಾಂಗ ಕುಲಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ, ಜಾನಪದ ಯಕ್ಷಗಾನ ಅಕಾಡೆಮಿ, ಕನ್ನಡ ವಿಶ್ವ ವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಸಾಹಿತ್ಯ, ಜಾನಪದ, ಸಂಶೋಧನೆ, ಸಂಪಾದನಾ ಕ್ಷೇತ್ರದಲ್ಲಿ 40ಕ್ಕೂ ಹೆಚ್ಚು ಕೃತಿ ಪ್ರಕಟಿಸಿದ್ದಾರೆ. 25 ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ.

ಬಹುಮುಖ ಪ್ರತಿಭೆಯ ಅವರಿಗೆ ಜಾನಪದ ತಜ್ಞ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿ, ಕುವೆಂಪು ವಿವಿ ಸಾಧನಾ ಪ್ರಶಸ್ತಿ ಸೇರಿದಂತೆ ಹತ್ತುಹಲವು ಪ್ರಶಸ್ತಿಗಳು ಸಂದಿವೆ. ತೀರ್ಥಹಳ್ಳಿ ತಾಲ್ಲೂಕು 6ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕಳೆದ ವರ್ಷ ಆಯ್ಕೆಯಾಗಿದ್ದರು. ಪ್ರಸ್ತುತ ಅವರು ಪುಸ್ತಕ ಆಯ್ಕೆ ಸಮಿತಿ ಅಧ್ಯಕ್ಷರಾಗಿ, ವಿಟಿಯು ಪ್ರಸಾರಾಂಗ ಸಲಹಾ ಮಂಡಳಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT