ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಘಾಟನೆಗೆ ಸಜ್ಜಾದ ಅಮರಶಿಲ್ಪಿಯ ಭವನ

Last Updated 18 ಡಿಸೆಂಬರ್ 2017, 5:18 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯ ಪ್ರಸಿದ್ಧ ಮತ್ತು ಐತಿಹಾಸಿಕ ಕೈದಾಳ ಚನ್ನಕೇಶವ ಸ್ವಾಮಿಯ ಮೂರ್ತಿಯನ್ನು ಕೆತ್ತಿದ್ದು ಅಮರಶಿಲ್ಪಿ ಜಕಣಾಚಾರಿ. ಗ್ರಾಮದವರೇ ಆದ ಜಕಣಾಚಾರಿ ಪ್ರಸಿದ್ಧ ಶಿಲ್ಪಿ ಎನ್ನುವ ಹಿರಿಮೆಗೆ ಪಾತ್ರವಾಗಿರುವುದು ಜನ ಜನಿತ. ಜಕಣಾಚಾರಿ ಅವರ ಕೊಡುಗೆಗಳನ್ನು ಸ್ಮರಿಸುವಾಗ ಕೈದಾಳವೂ ನೆನಪಾಗುತ್ತದೆ.

ಇಂತಿಪ್ಪ ಅಮರಶಿಲ್ಪಿಯನ್ನು ಸ್ಮರಿಸುವ ಉದ್ದೇಶದಿಂದ ಗೂಳೂರು ಸಮೀಪದ ಕೈದಾಳದಲ್ಲಿ ನಿರ್ಮಿಸಿರುವ ಅಮರ ಶಿಲ್ಪಿ ಜಕಣಾಚಾರಿ ಸ್ಮಾರಕ ಭವನ ಉದ್ಘಾಟನೆಗೆ ಸಜ್ಜಾಗಿದೆ.

₹ 5.5 ಕೋಟಿ ವೆಚ್ಚದಲ್ಲಿ ಭವ್ಯ ಭವನ ನಿರ್ಮಾಣ ಮಾಡಲಾಗಿದೆ. ಚನ್ನಕೇಶವ ದೇವಸ್ಥಾನದ ಎದುರಿನಿಂದ ನೋಡಿದರೆ ’ಅರಮನೆ’ಯಂತೆ ಭವನ ಭಾಸವಾಗುತ್ತದೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಜಕಣಾಚಾರಿ ಅವರ ನೆನಪಿನ ಭವನ ನಿರ್ಮಾಣವಾಗಿದೆ. ಹೀಗಾಗಿ ಭವನವನ್ನು ವಿಶೇಷ ಮುತುವರ್ಜಿಯಿಂದ ನಿರ್ಮಿಸಲಾಗಿದೆ.

ಸಾವಿರ ಜನರು ಕುಳಿತುಕೊಳ್ಳಬಹುದಾದ ವಿಶಾಲವಾದ ಸಭಾಂಗಣ, ಹನ್ನೆರಡು ಕೊಠಡಿಗಳು, ಐದು ನೂರಕ್ಕೂ ಹೆಚ್ಚು ಜನರು ಊಟ ಮಾಡಬಹುದಾದಷ್ಟು ದೊಡ್ಡ ಸಭಾಂಗಣ ಇದೆ. ಝಗಮಗಿಸುವ ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿದೆ. ಭವನದ ಮುಂಭಾಗ ವಿಧಾನಸೌಧ ಮಾದರಿಯ ಗ್ರಿಲ್ ಹಾಕಲು ಉದ್ದೇಶಿಸಲಾಗಿದೆ.

’ಸುಂದರವಾಗಿ ಕಾಣಲು ಭವನದ ಮುಂಭಾಗ ಲಾನ್‌ ಮಾಡುವ ಯೋಜನೆ ರೂಪಿಸಲಾಗಿದೆ. ಜಿಲ್ಲೆಯಲ್ಲಿ ಎಲ್ಲೂ ಇಂತಹ ಸುಂದರ ಭವನ ಇಲ್ಲ. ಭವನ ಕಟ್ಟಿರುವುದಕ್ಕೆ ‌ಊರಿನ ಜನರು ಹೆಮ್ಮೆ ಪಡುತ್ತಿದ್ದಾರೆ. ನಮ್ಮೂರಿನವರೇ ಆದ ಜಕಣಾಚಾರಿ ಅವರಿಗೂ ಗೌರವ ನೀಡಿದಂತಾಯಿತು. ಇಂಥ ಭವನವನ್ನು ಕನಸಿನಲ್ಲೂ ಕಂಡಿರಲಿಲ್ಲ. ಇನ್ನೂ ಊರಿನ ಚರಿತ್ರೆಯೇ ಬದಲಾಗಲಿದೆ’ ಎಂದು ಸಂಭ್ರಮಪಡುವರು ಗ್ರಾಮದ ಟಿ.ಸಿ. ರಂಗಸ್ವಾಮಿ.

‘ಭವನ ನಿರ್ಮಾಣದ ಹಿಂದೆ ಶಾಸಕ ಬಿ.ಸುರೇಶ್‌ಗೌಡ ಅವರ ಶ್ರಮವಿದೆ. ಎಲ್ಲರೂ ಇಂತಹ ‌ಕೆಲಸ ಮಾಡಲು ಸಾಧ್ಯವಿಲ್ಲ. ಐತಿಹಾಸಿಕವಾಗಿ ಉಳಿಯುವ ಕೆಲಸ ಮಾಡಿದ್ದಾರೆ. ದೇವಸ್ಥಾನಕ್ಕೆ ಬಂದವರೆಲ್ಲರೂ ಇದೊಂದು ಮಿನಿ ವಿಧಾನಸೌಧ ಎಂದು ಬಣ್ಣಿಸುತ್ತಾರೆ’ ಎಂದು ತಿಳಿಸಿದರು.

‘2007ರಲ್ಲಿ ದೇವರ ಮೂರ್ತಿಯ ಕೈಯನ್ನು ಕಿಡಿಗೇಡಿಯೊಬ್ಬ ಮುರಿದು ಹಾಕಿದ್ದ. ಆ ಸಲ ನಾನು ಚುನಾವಣೆಯಲ್ಲಿ ಪರಾಭವಗೊಂಡಿದ್ದೆ. ಆದರೂ ದೇವಸ್ಥಾನ ಅಭಿವೃದ್ಧಿಪಡಿಸುವ ನಿರ್ಧಾರ ಮಾಡಿದೆ. ಶಾಸಕನಾದ ಬಳಿಕ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ ನೆರವಿನಿಂದ ದೇವಸ್ಥಾನ ಅಭಿವೃದ್ಧಿಪಡಿಸಿದೆ’ ಎಂದು ಶಾಸಕ ಸುರೇಶ್‌ ಗೌಡ ತಿಳಿಸಿದರು.

ದೇವಸ್ಥಾನ ನಿರ್ವಹಣೆ ಇಲ್ಲದೇ ಪಾಳು ಬಿದ್ದಿತ್ತು. ಭೂಮಿ ಅತಿಕ್ರಮ ಮಾಡಿಕೊಳ್ಳಲಾಗಿತ್ತು. ಜನರ ಮನವೊಲಿಸಿ ತೆರವುಗೊಳಿಸಿ ಸುತ್ತಲೂ ಬೇಲಿ ಹಾಕಿಸಲಾಗಿದೆ. ನಂತರ ದೇವಸ್ಥಾನಕ್ಕೆ ಸೇರಿದ 2.5 ಎಕರೆ ಭೂಮಿ ಸದುಪಯೋಗಪಡಿಸಿಕೊಳ್ಳಲು ಚಿಂತಿಸಿದೆ. ಆಗ ಹೊಳೆದಿದ್ದೆ ಜಕಣಚಾರಿ ಹೆಸರು. ಇದು ಭವನ ನಿರ್ಮಾಣಕ್ಕೆ ಕಾರಣವಾಯಿತು’ ಎಂದರು.

2011ರಲ್ಲಿ ಭವನ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಲಾಯಿತು. ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರದಿಂದ ₹1.5 ಕೋಟಿ ಬಿಡುಗಡೆ ಮಾಡಿದ್ದರು. ಟೂಡಾದಿಂದ ₹ 2 ಕೋಟಿ ಪಡೆಯಲಾಗಿದೆ. ಉಳಿದ ಹಣವನ್ನು ಬೇರೆ ಬೇರೆ ಮೂಲಗಳಿಂದ ಭರಿಸಲಾಗಿದೆ ಎಂದು ವಿವರಿಸಿದರು.

ದೇವಸ್ಥಾನದ ವಿಶೇಷತೆ

ಸುಮಾರು ಕ್ರಿ.ಶ. 1150ರಲ್ಲಿ ದ್ರಾವಿಡ ಹಾಗೂ ಹೊಯ್ಸಳ ಶೈಲಿಯಲ್ಲಿ ಚೆನ್ನಕೇಶವ ಸ್ವಾಮಿ ದೇವಸ್ಥಾನ ಕಟ್ಟಲಾಗಿದೆ ಎಂದು ನಂಬಲಾಗಿದೆ. ಜಕಣಾಚಾರಿ ಕೆತ್ತಿದ ಎಂದು ನಂಬಲಾಗಿರುವ 6 ಅಡಿ ಎತ್ತರದ ಚನ್ನಕೇಶವ ಮೂರ್ತಿ ವಿಶೇಷ ಆಕರ್ಷಣೆಯಾಗಿದೆ. ಎಲ್ಲ ದೇವಸ್ಥಾನಗಳಲ್ಲೂ ದೇವರ ಮೂರ್ತಿಗಳು ಪೂರ್ವಾಭಿಮುಖವಾಗಿದ್ದರೆ  ಇಲ್ಲಿ ಮಾತ್ರ ಪಶ್ಚಿಮಾಭಿಮುಖವಾಗಿರುವುದು ವಿಶೇಷವಾಗಿದೆ.

ತುಂಬಾ ಸೂಕ್ಷ್ಮ ಕೆತ್ತನೆಯನ್ನು ಶಿಲ್ಪ ಒಳಗೊಂಡಿದೆ. ದೇವರ ಕೈಯಲ್ಲಿರುವ ಕಲ್ಲಿನ ಅತಿ ಸಣ್ಣ ಗಾತ್ರದ  ಉಂಗುರಗಳನ್ನು ಬೆರಳಿನ ಸುತ್ತಲೂ ತಿರುಗಿಸಬಹುದು. ಪ್ರಭಾವಳಿಯಲ್ಲಿ ವಿಷ್ಣುವಿನ ದಶ ಅವತಾರದ ಕೆತ್ತನೆ ಮನೋಜ್ಞವಾಗಿದೆ. 12ನೇ ಶತಮಾನದ ಒಂದು ಶಾಸನವೂ ದೇವಾಲಯದಲ್ಲಿದೆ.

ಊರಿನವರಿಗೆ ಕರಗದ ನಂಬಿಕೆ

ಜಕಣಚಾರಿ ಅವರ ಹುಟ್ಟೂರು. ಅವರ ಬಗೆಗೆ ಹೆಚ್ಚಿನ ಇತಿಹಾಸದ ದಾಖಲೆಗಳು ಲಭ್ಯವಿಲ್ಲ. ಆದರೂ ಊರಿನವರೂ ಜಕಣಚಾರಿ ಇಲ್ಲಿಯೇ ನೆಲೆಸಿದ್ದು ಎಂದು ಇಂದಿಗೂ ನಂಬುತ್ತಾರೆ.

’ಗ್ರಾಮದಲ್ಲಿ ಆಚಾರಿಯವರ ಬೀದಿ ಇತ್ತು. ಒಂದು ಮನೆಯೂ ಇತ್ತು ಎಂಬುದನ್ನು ನಮ್ಮ ತಾತಂದಿರ ಕಾಲದಿಂದಲೂ ಕೇಳುತ್ತಾ ಬಂದಿದ್ದೇವೆ. ಗ್ರಾಮದಲ್ಲಿ ಈಚೆನವರೆಗೂ ಆ ಬೀದಿಯನ್ನು ಆಚಾರಿ ಬೀದಿ ಎಂದೇ ಕರೆಯುತ್ತಿದ್ದರು’ ಎಂದು ಗ್ರಾಮದ ಮೀಸೆ ರಂಗಸ್ವಾಮಿ ಹೇಳಿದರು.

’ಗ್ರಾಮದ ಶನಿ ಮಹಾತ್ಮ ದೇವಸ್ಥಾನದ ಬಳಿ ಚೌಡಿ ಕಾವಲು ಪಕ್ಕ ಜಕಣಚಾರಿಯವರ ಸಮಾಧಿ ಇದೆ. ಪ್ರತಿ ವರ್ಷ ದೇವರ ಜಾತ್ರೆ ಮೆರವಣಿಗೆಯ ದಿನ ದೇವರು ಈ ಸಮಾಧಿ ಬಳಿ ಪೂಜೆ ತೆಗೆದುಕೊಂಡ ಬಳಿಕವೇ ಮೆರವಣಿಗೆ ಹೋಗುತ್ತದೆ’ ಎಂದರು.

ಜಕಣಚಾರಿ ಒಂದು ನೆನಪು

ಕೈದಾಳದಲ್ಲಿ ಜಕಣಾಚಾರಿ ಜನಿಸಿದರು ಎಂದು ಹೇಳಲಾಗುತ್ತಿದೆ. ಕೈದಾಳವನ್ನು ಈ ಹಿಂದೆ ಕ್ರೀಡಾಪುರ ಎಂದು ಕರೆಯಲಾಗುತ್ತಿತ್ತು. ಬೇಲೂರು , ಹಳೆಬೀಡಿನಲ್ಲಿ ಕಲ್ಯಾಣ ಚಾಲುಕ್ಯರು, ಹೊಯ್ಸಳ ಶೈಲಿಯನ್ನು ದೇವಾಲಯಗಳನ್ನು ನಿರ್ಮಿಸಿದ್ದಾರೆ ಎಂದು ಹೇಳಲಾಗುತ್ತದೆ.‌

ಕಲೆಯನ್ನು ಜೀವನಕ್ಕಾಗಿ ಮುಡಿಪಿಟ್ಟ ಜಕಣಾಚಾರರು ಗರ್ಭಿಣಿ ಹೆಂಡತಿಯನ್ನು ಬಿಟ್ಟು ದೇವಾಲಯಗಳನ್ನು ನಿರ್ಮಿಸಲು ಹೊರಡುತ್ತಾರೆ. ದೇವಾಲಯಗಳ ನಿರ್ಮಾಣ, ಕೆತ್ತನೆಯಲ್ಲಿ ಹೆಂಡತಿಯನ್ನು ಮರೆಯುತ್ತಾರೆ.

ತಂದೆಯನ್ನು ತಾಯಿಯನ್ನು ಬಿಟ್ಟು ಹೋಗಿದ್ದನ್ನು ಅರಿತ ಮಗ ಡಂಕಣಚಾರಿ ತಂದೆಯನ್ನು ಮೀರಿಸುವಂತೆ ಬೆಳೆಯಬೇಕೆಂದು ಖ್ಯಾತ ಶಿಲ್ಪಿಯಾಗುತ್ತಾರೆ. ಜಕಣಾಚಾರಿಯು ಹಳೆಬೀಡಿನಲ್ಲಿ ಕೆತ್ತಿದ ಕಪ್ಪೆ ಚೆನ್ನಿಗರಾಯಸ್ವಾಮಿ ಶಿಲ್ಪದಲ್ಲಿ ದೋಷವಿದೆ. ಅದರಲ್ಲಿ ಕಪ್ಪೆ ಇದೆ ಎಂದು ಡಂಕಣಾಚಾರಿ ಹೇಳುತ್ತಾರೆ. ಒಂದು ವೇಳೆ ದೋಷ ವಿದ್ದಲ್ಲಿ ತನ್ನ ಬಲಗೈ ಕತ್ತರಿಸಿಕೊಳ್ಳುವುದಾಗಿ ಜಕಣಾಚಾರಿ ಪ್ರಮಾಣ ಮಾಡುತ್ತಾರೆ. ಶಿಲ್ಪದಲ್ಲಿ ದೋಷ ಕಂಡು ಬಂದಿದ್ದರಿಂದ ಬಲಕೈಯನ್ನು ಕತ್ತರಿಸಿಕೊಳ್ಳುತ್ತಾರೆ. ನಂತರ ತಂದೆ, ಮಗನ ನಂಟು ಬಹಿರಂಗವಾಗುತ್ತದೆ ಎಂಬುದು ಐತಿಹ್ಯವಾಗಿದೆ.

ಹಳೆಬೀಡಿನಿಂದ ಕ್ರೀಡಾಪುರಕ್ಕೆ ಬಂದ ಜಕಣಾಚಾರಿ ಇಲ್ಲಿ ಪ್ರಸಿದ್ಧ ಚನ್ನಕೇಶವ ಮೂರ್ತಿಯನ್ನು ತನ್ನ ಎಡಕೈ ಬಳಸಿ ಕೆತ್ತುತ್ತಾನೆ. ಮೂರ್ತಿಯನ್ನು ಕೆತ್ತನೆ ಮುಗಿಯುತ್ತಿದ್ದಂತೆ ಜಕಣಾಚಾರಿಗೆ ಬಲಗೈ ಮತ್ತೆ ಬಂದಿತು ಎಂಬುದು ಐತಿಹಾಸಿಕ ನಂಬಿಕೆ. ಇದಾದ ಬಳಿಕ ಕ್ರೀಡಾಪುರ ಹೆಸರು ಕೈದಾಳ ಎಂದು ಹೆಸರು ಬಂದಿತು  ಹೇಳಲಾಗುತ್ತದೆ.

ಕನಸು ನನಸಾಗಿದೆ

ಅಮರಶಿಲ್ಪಿ ಜಕಣಾಚಾರಿ ಭವನ ನಿರ್ಮಾಣ ಆರು ವರ್ಷಗಳ ಕನಸು. ಈಗ ಇದು ನಸನಾಗಿದೆ. ಜಗತ್ತೇ ನಿಬ್ಬೆರಗಾಗಿ ನೋಡುವಂತ ಶಿಲ್ಪಗಳನ್ನು ಕಟ್ಟಿದ ಜಕಣಾಚಾರಿ ನನ್ನ ಕ್ಷೇತ್ರದ ಕೈದಾಳದಲ್ಲಿ ಜನಿಸಿದ್ದು ಎಂಬ ಐತಿಹ್ಯವಿದೆ. ಇಂಥ ಮಹಾನ್ ವ್ಯಕ್ತಿಯನ್ನು ನೆನಪು ಮಾಡಿಕೊಳ್ಳುವ ರೀತಿಯಲ್ಲಿ ಭವನ ನಿರ್ಮಾಣ ಮಾಡಲಾಗಿದೆ ಎಂದು ಶಾಸಕ ಸುರೇಶ್‌ಗೌಡ ತಿಳಿಸಿದರು.

’ಭವನದ ನಿರ್ವಹಣೆಗೆ ಸಮಿತಿಯನ್ನು ರಚಿಸಲಾಗುವುದು. ಸಮಿತಿ ಎಲ್ಲವನ್ನೂ ನೋಡಿಕೊಳ್ಳುತ್ತದೆ. ಸಭೆ, ಶುಭ ಸಮಾರಂಭಗಳನ್ನು ನಡೆಸಲು ಅತ್ಯಂತ ಕಡಿಮೆ ದರದಲ್ಲಿ  ಬಾಡಿಗೆ ನೀಡಲಾಗುವುದು. ಇದರಿಂದ ಗ್ರಾಮದ ಅಭಿವೃದ್ಧಿಯೂ ಸಾಧ್ಯವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT