ಶಹಾಪುರ

ಧರ್ಮ ಯುದ್ಧದಲ್ಲಿ ಕಾಂಗ್ರೆಸ್‌ ಬೆಂಬಲಿಸಿ: ಸಿದ್ದರಾಮಯ್ಯ

ಶಹಾಪುರ ಹಾಗೂ ಸುರಪುರದ ಕ್ಷೇತ್ರ ವ್ಯಾಪ್ತಿಯ 22 ಹಳ್ಳಿಗಳನ್ನು ಪಿರಾಪುರ ಬೂದಿಹಾಳ ಏತ ನೀರಾವರಿ ಯೋಜನೆಗೆ ಸೇರ್ಪಡೆ ಮಾಡಿ ಆಡಳಿತಾತ್ಮಕ ಮಂಜೂರಾತಿಗೆ ಒಪ್ಪಿಗೆ ನೀಡಲಾಗುವುದು.

ಶಹಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಿದರು

ಶಹಾಪುರ:‘ ಜನರ ಭಾವನೆಗಳನ್ನು ಕೆರಳಿಸಿ ಕೋಮುವಾದವನ್ನು ಸೃಷ್ಟಿ ಮಾಡಿ ಮನೆ , ಮನಗಳಿಗೆ ಬೆಂಕಿ ಹಚ್ಚುತ್ತಿರುವ ಪಕ್ಷಕ್ಕೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು. ಈ ಧರ್ಮ ಯುದ್ಧದಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಶರಣಬಸಪ್ಪ ದರ್ಶನಾಪುರ ಅವರನ್ನು ಗೆಲ್ಲಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಭಾನುವಾರ ಕಾಂಗ್ರೆಸ್ ಪಕ್ಷದ ‘ಸಾಧನಾ ಸಂಭ್ರಮ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣೆ ಮುನ್ನ ನೀಡಿದ 165 ಭರವಸೆಗಳಲ್ಲಿ 155 ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆಯಲಾಗಿದೆ. ಸಾಮಾಜಿಕ ನ್ಯಾಯ ಹಾಗೂ ಶೋಷಿತ ವರ್ಗಗಳ ಬವಣೆಗಳಿಗೆ ಸ್ಪಂದಿಸಲಾಗಿದೆ. ಪರಿಶಿಷ್ಟರ ಅಭಿವೃದ್ಧಿಗಾಗಿ ಗುತ್ತಿಗೆದಾರ ಕೆಲಸಕ್ಕೆ ಮೀಸಲಾತಿ ಕಲ್ಪಿಸಲಾಗಿದೆ. ₹ 1.20 ಕೋಟಿ ಕುಟುಂಬಗಳಿಗೆ ಅನ್ನಭಾಗ್ಯದ ಯೋಜನೆ ಜಾರಿ ಮಾಡಿದ ಶ್ರೇಯಸ್ಸು ನಮ್ಮ ಪಕ್ಷಕ್ಕೆ ಸಲ್ಲುತ್ತದೆ ಎಂದು ನುಡಿದರು.

ನೀರಾವರಿ ಸಚಿವ ಎಂ.ಬಿ. ಪಾಟೀಲ್ ಮಾತನಾಡಿ, ಶಹಾಪುರ ಹಾಗೂ ಸುರಪುರದ ಕ್ಷೇತ್ರ ವ್ಯಾಪ್ತಿಯ 22 ಹಳ್ಳಿಗಳನ್ನು ಪಿರಾಪುರ ಬೂದಿಹಾಳ ಏತ ನೀರಾವರಿ ಯೋಜನೆಗೆ ಸೇರ್ಪಡೆ ಮಾಡಿ ಆಡಳಿತಾತ್ಮಕ ಮಂಜೂರಾತಿಗೆ ಒಪ್ಪಿಗೆ ನೀಡಲಾಗುವುದು. ಅಲ್ಲದೆ ಮಲ್ಲಾಬಾದಿ ಮೂರನೇಯ ಹಂತದ ಕಾಮಗಾರಿ ತ್ವರಿತವಾಗಿ ಅನುಷ್ಠಾನಗೊಳಿಸಲಾಗುವುದು ಎಂದರು.

ಅಲ್ಲದೆ, ಶಹಾಪುರ ತಾಲ್ಲೂಕಿನ ಖಾನಾಪುರ ಹಾಗೂ ನಡಿಹಾಳ ಕೆರೆಗೆ ನೀರು ತುಂಬಿಸುವ ಯೋಜನೆಗೆ ಮಂಜೂರಾತಿ ನೀಡಿರುವೆ . ಇನ್ನು 15 ದಿನದಲ್ಲಿ ಟೆಂಡರ್ ಕರೆಯಲಾಗುವುದು. ನೀರಾವರಿ ಯೋಜನೆಗೆ ಸಾಕಷ್ಟು ಅನುದಾನವನ್ನು ಬಿಡುಗಡೆಗೊಳಿಸಿ ಕಾಮಗಾರಿಯನ್ನು ಅನುಷ್ಠಾನಗೊಳಿಸಲಾಗಿದೆ ಎಂದರು.

ಬಿಜೆಪಿ ಪಕ್ಷದ ಕೆಲ ಮುಖಂಡರು ಏಕವಚನದಲ್ಲಿ ಟೀಕಿಸುತ್ತಿರುವುದು ಸರಿಯಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಮ್ಮನ್ನು ಕತ್ತೆ ಕಾಯಲು ಹೋಗಿ ಎನ್ನುತ್ತಾರೆ. ಇದು ಹತಾಶೆಯ ಸೋಲಿನ ಭೀತಿಯಿಂದ ಆಡಿದ ಮಾತುಗಳು ಆಗಿವೆ. ಮತ್ತೊಮ್ಮೆ ಏಕವಚನದಲ್ಲಿ ಮಾತನಾಡಿದರೆ ನಾನು ಅನಿವಾರ್ಯವಾಗಿ ನಮ್ಮ ಬಿಜಾಪುರ ಕೆಟ್ಟ ಭಾಷೆಯಲ್ಲಿ ಉತ್ತರಿಸಬೇಕಾಗುತ್ತದೆ ಎಂದು ತಿರುಗೇಟು ನೀಡಿದರು.

ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿ, ಶಹಾಪುರ ಮತಕ್ಷೇತ್ರದ ಪ್ರಮುಖ ಯೋಜನೆಗಳನ್ನು ಕಾಂಗ್ರೆಸ್ ಪಕ್ಷ ಜಾರಿಗೆ ತರುವುದರ ಜತೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಪೀರಾಪೂರ ಏತ ನೀರಾವರಿ ಯೋಜನೆ, ಕೆರೆಗೆ ನೀರು ತುಂಬಿಸುವುದು ಇನ್ನು ಹಲವು ಬೇಡಿಕೆಗಳ ಪಟ್ಟಿಯನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಂದರು.

ರಾಯಚೂರು ಸಂಸದ ಬಿ.ವಿ.ನಾಯಕ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಶರಣಪ್ಪ ಮಟ್ಟೂರು, ಅಲಂ ಪ್ರಭು ಪಾಟೀಲ್, ಉಮೇಶ ಜಾಧವ, ಬಸವರಾಜಪ್ಪಗೌಡ ದರ್ಶನಾಪುರ, ಕಾಂಗ್ರೆಸ್ಸಿನ ಜಿಲ್ಲಾ ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ್ ಹುಲಕಲ್, ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಆರಬೋಳ, ಗುರುನಾಥರಡ್ಡಿ ಪಾಟೀಲ್ ಹಳಿಸಗರ, ನೀಲಕಂಠ ಬಡಿಗೇರ, ಚೆನ್ನಾರಡ್ಡಿ ಪಾಟೀಲ್, ತಿಪ್ಪಣ್ಣ ಕಮಕನೂರ, ಭಾಗಣ್ಣಗೌಡ ಸಂಕೂರ, ಬಸವರಾಜ ಹಿರೇಮಠ, ಗುಂಡಪ್ಪ ತುಂಬಿಗಿ, ಡಾ.ಬಸವರಾಜ ಇಜೇರಿ, ಸಲಿಂ ಸಂಗ್ರಾಮ, ಭೀಮರಾಯ ಹೊಸ್ಮನಿ,ಸಿದ್ದಲಿಂಗಪ್ಪ ಆನೇಗುಂದಿ, ಸುರೇಂದ್ರ ಪಾಟೀಲ್, ಶರಣಗೌಡ ಗುಂಡಗುರ್ತಿ, ಬಸಣ್ಣಗೌಡ ಮರಕಲ್, ಬಸವರಾಜ ಹೇರುಂಡಿ, ಮಲ್ಲಿಕಾರ್ಜುನ ಪೂಜಾರಿ ಇದ್ದರು.

**

ಸಂಚಾರ ದಟ್ಟಣೆ

ಬೀದರ–ಶ್ರೀರಂಗಪಟ್ಟಣ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಿರೀಕ್ಷೆಗೂ ಮೀರಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶಕ್ಕೆ ಕಾರ್ಯಕರ್ತರು ಬಂದಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿ ಕೆಲ ಹೊತ್ತು ಸಂಚಾರದ ವ್ಯತ್ಯಯ ಉಂಟಾಯಿತು. ಸಮಾವೇಶಕ್ಕೆ ಬಂದ ಕಾರ್ಯಕರ್ತರು ವಾಹನ ಸವಾರರು ಪರದಾಡಿದರು. ಸಂಚಾರ ಸುಗುಮಗೊಳಿಸಲು ಪೊಲೀಸರು ಹರ ಸಾಹಸಪಟ್ಟರು.

ಡಾ.ಎ.ಬಿ, ಮಾಲಕರಡ್ಡಿ ಗೈರು ಹಾಜರಿ
ಶಹಾಪುರದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಯಾದಗಿರಿ ಮತಕ್ಷೇತ್ರದ ಕಾಂಗ್ರೆಸ್‌ ಶಾಸಕ ಡಾ.ಎ.ಬಿ, ಮಾಲಕರಡ್ಡಿ ಗೈರು ಹಾಜರಾಗಿದ್ದರು.

ಕೆಂಭಾವಿ ತಾಲ್ಲೂಕು ಘೋಷಣೆಗೆ ಆಗ್ರಹ
ಜನರ ಬಹು ದಿನದ ಬೇಡಿಕೆ ಹಾಗೂ ನಿರೀಕ್ಷೆಯಾದ ಕೆಂಭಾವಿಯನ್ನು ತಾಲ್ಲೂಕು ಕೇಂದ್ರವೆಂದು ಘೋಷಣೆ ಮಾಡಬೇಕು ಎಂದು ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವೇದಿಕೆ ಮೇಲೆ ಒತ್ತಡ ಹಾಕಿದರು.

ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಭಾಷಣದಲ್ಲಿ ಕೆಂಭಾವಿ ತಾಲ್ಲೂಕು ರಚನೆ ಬಗ್ಗೆ ಪರಿಶೀಲಿಸಲಾಗುವುದು ಇದನ್ನು ಗಂಭೀರವಾಗಿ ತೆಗೆದುಕೊಳ್ಳಲಾಗುವುದು ಎಂದು ಹೇಳುವ ಮೂಲಕ ಹಾರಿಕೆ ಉತ್ತರ ನೀಡಿದರು.

* * 

ಕೋಮು ಭಾವನೆಗಳನ್ನು ಬಿತ್ತನೆ ಮಾಡಿ ಜಾತಿಯ ಹೆಸರಿನಲ್ಲಿ ರಾಜಕೀಯ ಮಾಡುವ ಪಕ್ಷಗಳಿಗೆ ತಕ್ಕ ಪಾಠವನ್ನು ಕಲಿಸಬೇಕು
ಸಿದ್ದರಾಮಯ್ಯ
ಮುಖ್ಯಮಂತ್ರಿ

Comments
ಈ ವಿಭಾಗದಿಂದ ಇನ್ನಷ್ಟು
ಅರ್ಹರಿಗೆ ಸಿಗದ ಸರ್ಕಾರದ ಸೂರು

ಯಾದಗಿರಿ
ಅರ್ಹರಿಗೆ ಸಿಗದ ಸರ್ಕಾರದ ಸೂರು

20 Mar, 2018

ಮಹಿಳೆಯರಿಗೆ ಒಂದೇ ಸೂರಿನಡಿ ವಿವಿಧ ಸೌಲಭ್ಯ
‘ಗೆಳತಿ’ ವಿಶೇಷ ಚಿಕಿತ್ಸಾ ಘಟಕ ಆರಂಭ

‘ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವಿವಿಧ ಸೌಲಭ್ಯಗಳನ್ನು ಒದಗಿಸಲು ‘ಗೆಳತಿ’ ವಿಶೇಷ ಚಿಕಿತ್ಸಾ ಘಟಕವನ್ನು ತಾಲ್ಲೂಕು ಕೇಂದ್ರದಲ್ಲಿ ಪ್ರಾರಂಭಿಸಲಾಗಿದೆ’ ಎಂದು ಶಿಶು ಅಭಿವೃದ್ಧಿ ಅಧಿಕಾರಿ...

20 Mar, 2018

ಯಾದಗಿರಿ
ಪ್ರತ್ಯೇಕ ಧರ್ಮಕ್ಕೆ ಶಿಫಾರಸು ಷಡ್ಯಂತ್ರ

‘ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾನಮಾನ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕೇಂದ್ರಕ್ಕೆ ಶಿಫಾರಸು ಮಾಡಲು ಸಚಿವ ಸಂಪುಟ ನಿರ್ಧರಿಸಿರುವುದು ಕಾಂಗ್ರೆಸ್‌ ಸರ್ಕಾರದ ಷಡ್ಯಂತ್ರವಾಗಿದೆ’ ಎಂದು ಜಿಲ್ಲೆಯ ಅಬ್ಬೆತುಮಕೂರು...

20 Mar, 2018
ಯಾದಗಿರಿ ನಗರಸಭೆಯಿಂದ ನಿತ್ಯ ನೀರು ಪೂರೈಕೆ

ಯಾದಗಿರಿ
ಯಾದಗಿರಿ ನಗರಸಭೆಯಿಂದ ನಿತ್ಯ ನೀರು ಪೂರೈಕೆ

19 Mar, 2018
ಕಾಂಗ್ರೆಸ್ ಮುಕ್ತ ಭಾರತ ಸನ್ನಿಹಿತ

ಯಾದಗಿರಿ
ಕಾಂಗ್ರೆಸ್ ಮುಕ್ತ ಭಾರತ ಸನ್ನಿಹಿತ

17 Mar, 2018