ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲಭೈರವ ದೇವರ ಉತ್ಸವಕ್ಕೆ ತೆರೆ

Last Updated 18 ಡಿಸೆಂಬರ್ 2017, 6:06 IST
ಅಕ್ಷರ ಗಾತ್ರ

ವಿರಾಜಪೇಟೆ: ಸಮೀಪದ ಕಾಕೋಟುಪರಂಬುವಿನಲ್ಲಿ ಮೂರು ದಿನಗಳಿಂದ ನಡೆದ ಕಾಲಭೈರವ ದೇವರ ಉತ್ಸವ ಭಾನುವಾರ ಕೊನೆಗೊಂಡಿತು. ಕಾಲಭೈರವ ಉತ್ಸವದ ಕೊನೆಯ ದಿನವಾದ ಭಾನುವಾರ ಸಮೀಪದ ಭೇತ್ರಿಯ ಕಾವೇರಿ ನದಿಯಲ್ಲಿ ಸಂಜೆ ದೇವರ ಜಳಕ ಮುಂತಾದ ಧಾರ್ಮಿಕ ಕಾರ್ಯಗಳು ನಡೆದವು. ದೇವಾಲಯದಲ್ಲಿ ನಡೆದ ಪೀಲಿಯಾಟುವಿನೊಂದಿಗೆ ಕಾಕೋಟುಪರಂಬುವಿನ ಹಬ್ಬಕ್ಕೆ ತೆರೆ ಎಳೆಯಲಾಯಿತು.

ಮೊದಲ ದಿನ ಮರತ ತೆರೆ ಹಾಗೂ ಮುಡಿತೆರೆ ನಡೆಯಿತು. ನಂತರ ರಾತ್ರಿ ದೇವಾಲಯದ ತಕ್ಕ ಮುಖ್ಯಸ್ಥರಾದ ತೋಣೂರು ಕೇರಿಯ ಅಮ್ಮಂಡಿರ ಕುಟುಂಬದಿಂದ ಭಂಡಾರ ಬಂದ ಮೇಲೆ ದೇವರಿಗೆ ಶೃಂಗಾರ ಮಾಡಲಾಯಿತು.

ಎರಡನೆ ದಿನವಾದ ಶನಿವಾರ ದೊಡ್ಡ ಹಬ್ಬ ನಡೆಯಿತು. ಬೆಳಗ್ಗಿನಿಂದಲೇ ದೇವಾಲಯದಲ್ಲಿ ಇರುಳ್ ಬೆಳಕು, ಬೊಳ್ಕಾಟ್, ಚಂಡೆವಾದ್ಯ ವಿಧಿವತ್ತಾಗಿ ನಡೆದವು. ಬಳಿಕ ಮೂಗೂರು ಕೇರಿಯಿಂದ ದೇವರ ಕೊಡೆ, ಪಾಂಡಿಮಾಡು ಕೇರಿಯಿಂದ ದೇವರ ಚೌರಿ ಹಾಗೂ ಪೆಮ್ಮಾಡು ಕೇರಿಯಿಂದ ದೇವರ ಬೆತ್ತದ ಕುದುರೆಯನ್ನು ತಂದು ದೇವಾಲಯಕ್ಕೆ ಒಪ್ಪಿಸಿ ದೇವರ ದರ್ಶನ ಪಡೆಯಲಾಯಿತು.ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಮುಂಜಾನೆಯೇ ಹೆಮ್ಮಾಡು, ಪಾಂಡಿಮಾಡು, ಮುಗೂರು ಹಾಗೂ ತೋಣೂರು ಕೇರಿಯ ಮಂದಿ ಅಧಿಕ ಸಂಖ್ಯೆಯಲ್ಲಿ ಬಂದಿದ್ದರು.

ಸಂಜೆ ದೇವರ ಉತ್ಸವ ಮೂರ್ತಿಯನ್ನು ಹೊತ್ತು ದೇವಾಲಯದ ಪಕ್ಕದಲ್ಲಿಯೇ ಇರುವ ಅಶ್ವಥ ಮರದ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ದೇವರ ತಡುಂಬನ್ನು ದೇವಾಲಯದ ಅನತಿ ದೂರದಲ್ಲಿಯೇ ವೀಕ್ಷಿಸುತ್ತಿದ್ದ ಚಾಮುಂಡಿ ದೇವರ 2 ಕೋಲಗಳು ಪ್ರತಿ ವರ್ಷದಂತೆ ಓಡಿ ಬಂದು ದೇವರನ್ನು ಕತ್ತಿಯಿಂದ ಹೊಡೆದು ಸಂಹಾರ ಮಾಡಲು ಪ್ರಯತ್ನಿಸಿದರೂ, ಅದಕ್ಕೆ ಅವಕಾಶ ದೊರೆಯಲಿಲ್ಲ.

ಪ್ರತಿ ವರ್ಷದಂತೆ ಈ ಬಾರಿಯೂ ಹಬ್ಬಕ್ಕೆ 15 ದಿನಗಳ ಮೊದಲೆ ದೇವರ ಕಟ್ಟು ಹಾಕಲಾಗಿತ್ತು. ಬಹಳಷ್ಟು ಭಕ್ತರು ಕೊಡವ ಸಾಂಪ್ರದಾಯಿಕ ಉಡುಪಿನೊಂದಿಗೆ ಬಂದದ್ದು ವಿಶೇಷವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT