ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಶೇ 50 ಕೊಯ್ಲು ಪೂರ್ಣ

Last Updated 18 ಡಿಸೆಂಬರ್ 2017, 6:09 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಈಗ ಸುಗ್ಗಿಯ ಕಾಲ. ಹುತ್ತರಿ ಹಬ್ಬದ ಬಳಿಕ ಎಲ್ಲರೂ ಭತ್ತದ ಗದ್ದೆಗಳತ್ತ ಮುಖಮಾಡಿದ್ದು, ಭತ್ತದ ಕೊಯ್ಲು ಹಾಗೂ ಒಕ್ಕಣೆಯ ಸಂಭ್ರಮ ಮನೆಮಾಡಿದೆ.

ಜಿಲ್ಲೆಯಲ್ಲಿ ಶೇ 50ರಷ್ಟು ಭತ್ತದ ಕೊಯ್ಲು ಪೂರ್ಣವಾಗಿದ್ದು, ಈ ಬಾರಿ ಬಂಪರ್‌ ಫಸಲಿನ ನಿರೀಕ್ಷೆಯಲ್ಲಿ ಅನ್ನದಾತರಿದ್ದಾರೆ. ಕಳೆದೆರಡು ದಿನಗಳಿಂದ ಥಂಡಿ ಗಾಳಿ ಜೋರಾಗಿದ್ದು, ಕಾಫಿ ಕೊಯ್ಲು ಸಹ ಭರದಿಂದ ಸಾಗುತ್ತಿದೆ.

ಹಾರಂಗಿ, ಚಿಕ್ಲಿಹೊಳೆ ಜಲಾಶಯದ ವ್ಯಾಪ್ತಿಯಲ್ಲಿ ಅಂದಾಜು 2 ಸಾವಿರ ಹೆಕ್ಟೇರ್‌ನಷ್ಟು ನಾಟಿ ಮಾಡಲಾಗಿತ್ತು. ಅಲ್ಲಿಯೂ ಕೊಯ್ಲು ಕಾರ್ಯ ಚುರುಕಾಗಿದೆ. ಹೆಬ್ಬಾಲೆ, ಕೂಡಿಗೆ, ತೊರೆನೂರು, ಸಿದ್ದಾಪುರ ಗೇಟ್‌, ಶನಿವಾರಸಂತೆ, ಶಾಂತಳ್ಳಿ, ಸೋಮವಾರಪೇಟೆ ಭಾಗದಲ್ಲಿ ಭತ್ತದ ಕಟಾವು ಬಿರುಸಿನಿಂದ ಸಾಗುತ್ತಿದೆ. ಕಳೆದ ಬಾರಿಗೆ ಹೋಲಿಸಿದರೆ ದಕ್ಷಿಣ ಕೊಡಗಿನಲ್ಲಿ ನಾಟಿ ಪ್ರದೇಶ ಹೆಚ್ಚಾಗಿತ್ತು. ಪೊನ್ನಂಪೇಟೆ, ಗೋಣಿಕೊಪ್ಪಲು, ವಿರಾಜಪೇಟೆ ಸುತ್ತಮುತ್ತ ಭತ್ತವನ್ನು ಕೊಯ್ಲು ಮಾಡಿ ಮನೆಗೆ ತರುವ ದೃಶ್ಯ ಕಾಣಿಸುತ್ತಿದೆ.

ಭತ್ತದ ಕಣಜ ದಕ್ಷಿಣ ಕೊಡಗಿನ ವಿರಾಜಪೇಟೆ ತಾಲ್ಲೂಕಿನಲ್ಲಿ ಈ ಬಾರಿ ಹೆಚ್ಚಿನ ಭತ್ತದ ಬೆಳೆ ಮಾಡಲಾಗಿತ್ತು. ವಿರಾಜಪೇಟೆಯಲ್ಲಿ 11,922 ಹೆಕ್ಟೇರ್‌, ಸೋಮವಾರಪೇಟೆ ತಾಲ್ಲೂಕಿನಲ್ಲಿ 9,375 ಹೆಕ್ಟೇರ್‌, ಮಡಿಕೇರಿ ತಾಲ್ಲೂಕಿನಲ್ಲಿ 5,600 ಹೆಕ್ಟೇರ್‌ನಲ್ಲಿ ಭತ್ತ ನಾಟಿ ಮಾಡಲಾಗಿತ್ತು. 2016ಕ್ಕೆ ಹೋಲಿಸಿದರೆ ನಾಟಿ ಪ್ರದೇಶ ಹೆಚ್ಚಾಗಿತ್ತು.

ಕಳೆದ ವರ್ಷ ನಾಟಿ ಕಾರ್ಯದ ಬಳಿಕ ಮಳೆ ಕೈಕೊಟ್ಟು ಅಲ್ಲಲ್ಲಿ ಪೈರು ಒಣಗಿ ನಿಂತಿತ್ತು. ಜತೆಗೆ, ಕದಿರು ಸಹ ಇರಲಿಲ್ಲ. ಜಾನುವಾರು ಬಿಟ್ಟು ಬೆಳೆ ಮೇಯಿಸಲಾಗಿತ್ತು. ಆದರೆ, ಈ ಬಾರಿ ಪರಿಸ್ಥಿತಿ ಸ್ವಲ್ಪ ಸುಧಾರಣೆಯಾಗಿದೆ.

ಆರಂಭದಿಂದಲೂ ಉತ್ತಮ ಮಳೆಯಾದ ಕಾರಣ ಬೆಳೆ ಚೆನ್ನಾಗಿದೆ; ಡಿಸೆಂಬರ್‌ ಅಂತ್ಯಕ್ಕೆ ಜಿಲ್ಲೆಯಲ್ಲಿ ಕಟಾವು ಪೂರ್ಣಗೊಳ್ಳಲಿದೆ. ನಾಟಿ ಸಂದರ್ಭದಲ್ಲಿ ಸ್ವಲ್ಪ ಮಳೆಯ ಕೊರತೆ ಕಾಡಿತ್ತು. ಇಲ್ಲದಿದ್ದರೆ ನಿಗದಿತ ಗುರಿಗಿಂತ ಹೆಚ್ಚು ಪ್ರದೇಶದಲ್ಲಿ ನಾಟಿ ನಡೆಯುತ್ತಿತ್ತು ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.‌

ಯಂತ್ರಗಳ ಸದ್ದು: ಉತ್ತರ ಕರ್ನಾಟಕದ ಭಾಗದಲ್ಲಿ ಉತ್ತಮ ಮುಂಗಾರು ನಡೆಸಿದ್ದರ ಪರಿಣಾಮ ಈ ವರ್ಷ ಕೊಡಗು ಜಿಲ್ಲೆಗೆ ಕಾರ್ಮಿಕರು ಗುಳೆ ಬಂದಿಲ್ಲ. ಹೀಗಾಗಿ, ಜಿಲ್ಲೆಯಲ್ಲಿ ಕಾರ್ಮಿಕರ ಸಮಸ್ಯೆ ಉಂಟಾಗಿದ್ದು, ಕೊಯ್ಲು ಹಾಗೂ ಒಕ್ಕಣೆಗೆ ರೈತರು ಯಂತ್ರದ ಮೊರೆ ಹೋಗಿದ್ದಾರೆ. ತಮಿಳುನಾಡಿನಿಂದ ಬಂದಿರುವ ಕಟಾವು ಯಂತ್ರಗಳು ದಕ್ಷಿಣ ಕೊಡಗಿನಲ್ಲಿ ಬೀಡುಬಿಟ್ಟಿವೆ.

ಅಂಕಿಅಂಶಗಳು
ಕೃಷಿ ಆಶ್ರಯಿಸಿರುವ ಕೊಡಗು ಜಿಲ್ಲೆಯಲ್ಲಿ ಈ ಬಾರಿ ಭತ್ತದ ಉತ್ತಮ ಇಳುವರಿ ನಿರೀಕ್ಷೆಯಲ್ಲಿ ರೈತರಿದ್ದು, ಅದರ ವಿವರ ಈ ಕೆಳಗಿನಂತಿದೆ.

* 30,500 ಹೆಕ್ಟೇರ್‌ ಮುಂಗಾರು ಹಂಗಾಮಿನಲ್ಲಿ ಭತ್ತದ ನಾಟಿ ಗುರಿ

* 26,897 ಹೆಕ್ಟೇರ್‌ ಜಿಲ್ಲೆಯಲ್ಲಿ ನಾಟಿಯಾಗಿದ್ದ ಪ್ರದೇಶದ ವಿವರ

* 1.26 ಲಕ್ಷ ಟನ್‌ ಪ್ರಸಕ್ತ ವರ್ಷದಲ್ಲಿ ಭತ್ತದ ಇಳುವರಿಯ ನಿರೀಕ್ಷೆ

* 1.10 ಲಕ್ಷ ಟನ್‌ 2016ರಲ್ಲಿ ಭತ್ತದ ಇಳುವರಿ

* 4,000 ಹೆಕ್ಟೇರ್‌ ಮೆಕ್ಕೆಜೋಳ ಬೆಳೆದ ಪ್ರದೇಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT