ಹನುಮಸಾಗರ

ಚರಗದ ಸಂಭ್ರಮಕ್ಕೆ ಹಿಂಗಾರು ಬೆಳೆ ಕಾಣಿಕೆ

‘ಯರೆ ಭೂಮಿ ಹೊಂದಿದಾಂವ. ದೊರೆ ಮಗ ಇದ್ದಾಂಗ ಅನ್ನೋ ಗಾದೆ ಮಾತು ಈ ಬಾರಿ ಖರೆ ಆಗೈತಿ ನೋಡ್ರಿ. ಹಗಲು ಬಿಸಲು ರಾತ್ರಿ ಚಳಿ ಇರುವುದರಿಂದ ಬೆಳೆಗಳಿಗೆ ರೋಗ ರುಜಿನಗಳ ಕಾಟವೂ ಇಲ್ಲ.

ಹನುಮಸಾಗರ ಭಾಗದ ಎರೆ ಭೂಮಿಯಲ್ಲಿ ಹಿಂಗಾರು ಕಡಲೆ ಬೆಳೆ ಹುಲುಸಾಗಿ ಬೆಳೆದಿರುವುದು

ಹನುಮಸಾಗರ: ಉತ್ತರ ಕರ್ನಾಟಕ ಭಾಗದಲ್ಲಿ ಹಿಂದಿನಿಂದಲೂ ರೈತರು ಎಳ್ಳು ಅಮಾವಾಸ್ಯೆಯಂದು ಆಚರಿಸಿಕೊಂಡು ಬರುತ್ತಿರುವ ಚರಗ ಹಬ್ಬದ ಸಂಭ್ರಮ ಈ ಬಾರಿ ಇನ್ನೂ ಹೆಚ್ಚಾಗಿದೆ.

ಹಿಂದಿನ ಮೂರು ವರ್ಷಗಳಿಂದ ಉತ್ತಮ ಮಳೆ, ಬೆಳೆ ಇಲ್ಲದ ಕಾರಣ ಸರಿಯಾಗಿ ಹಬ್ಬ ಮಾಡಿರಲಿಲ್ಲ. ಹಬ್ಬ ನಿಲ್ಲಬಾರದು ಎಂಬ ಕಾರಣಕ್ಕಾಗಿ ಹಸಿರೇ ಕಾಣದ ಬೋಳು ಭೂಮಿಯಲ್ಲಿಯೇ ರೈತರು ಚರಗ ಚೆಲ್ಲಿ ಹಬ್ಬ ಮಾಡಿದ್ದರು.

ಆದರೆ, ಈ ಬಾರಿ ಉತ್ತಮವಾಗಿ ಹಿಂಗಾರು ಮಳೆ ಸುರಿದ ಕಾರಣ ಬೆಳೆಗಳು ಹುಲುಸಾಗಿ ಬೆಳೆದಿವೆ. ಕೊಳವೆ ಬಾವಿಗಳಿಗೆ ನೀರು ಬಂದಿವೆ, ಕೆರೆಗಳು ತುಂಬಿದ್ದು ರೈತರಲ್ಲಿ ಸಂಭ್ರಮ ಮನೆ ಮಾಡಿದೆ.

‘ಯರೆ ಭೂಮಿ ಹೊಂದಿದಾಂವ. ದೊರೆ ಮಗ ಇದ್ದಾಂಗ ಅನ್ನೋ ಗಾದೆ ಮಾತು ಈ ಬಾರಿ ಖರೆ ಆಗೈತಿ ನೋಡ್ರಿ. ಹಗಲು ಬಿಸಲು ರಾತ್ರಿ ಚಳಿ ಇರುವುದರಿಂದ ಬೆಳೆಗಳಿಗೆ ರೋಗ ರುಜಿನಗಳ ಕಾಟವೂ ಇಲ್ಲ. ಈ ಬಾರಿ ಕೈಗೊಂದಿಷ್ಟು ರೊಕ್ಕನೂ ಸಿಗತೈತೆ, ಜಾನುವಾರುಗಳ ಹೊಟ್ಟೆಗೆ ಹೊಟ್ಟು ದಕ್ಕತೈತೆ ಎನ್ನುವ ವಿಶ್ವಾಸ ನಮಗೆ ಮೂಡೈತೆ ನೋಡ್ರಿ’ ಎಂದು ಅಡವಿಭಾವಿ ಗ್ರಾಮದ ಸಂಗಪ್ಪಜ್ಜ ಗೌಡ್ರ ಸಂತಸದಿಂದ ಹೇಳಿದರು. ಈ ಭಾಗದಲ್ಲಿ ಹಿಂಗಾರು ಹಂಗಾಮಿನಲ್ಲಿ ಮುಖ್ಯವಾಗಿ ಜೋಳ, ಕಡಲೆ ಬೆಳೆಯುತ್ತಿದ್ದು ಕಡಲೆ ಕಾಳು ಕಟ್ಟುತ್ತಿದ್ದರೆ, ಜೋಳ ಅಬ್ಬರವಾಗಿ ಬೆಳೆಯುತ್ತಿದೆ.

ಎಳ್ಳು ಅಮಾವಾಸ್ಯೆ ರೈತರಿಗೆ ಸಂಭ್ರಮದ ಹಬ್ಬವಾಗಿದೆ. ಈ ದಿನಗಳಲ್ಲಿ ಫಸಲು ಕೈಗೂಡುವ ಸಮಯ. ಹಿಂಗಾರು ತೆನೆ ಹಿರಿಯುವ ತವಕದಲ್ಲಿರುತ್ತದೆ, ಕಾಳು ಕಟ್ಟುತ್ತಿರುವ ಹಚ್ಚ ಹಸುರಿನ ಜೋಳ, ಕಡಲೆ, ಕುಸುಬಿ, ಗೋಧಿ ಬೆಳೆಗಳನ್ನು ಹೊತ್ತ ಭೂಮಿ ತಾಯಿಗೆ ಸೀಮಂತ ಮಾಡಿ ಸಂತಸ ಹಂಚಿಕೊಳ್ಳುವ ಶುಭ ದಿನ ಈ ಎಳ್ಳು ಅಮವಾಸ್ಯೆಯಾಗಿದೆ.

ಈ ಭಾಗದಲ್ಲಿ ಹಬ್ಬದ ಚಟುವಟಿಕೆಗಳು ಭಾನುವಾರದಿಂದಲೇ ಆರಂಭವಾಗಿವೆ. ಯುವಕರು ಬಂಡಿ ತೊಳೆದು ಕೀಲೆಣ್ಣೆ ಉಣುಸಿ ಕೊಲ್ಲಾರಿ ಕಟ್ಟಿ ಎತ್ತುಗಳ ಮೈ ತೊಳೆದು ಅವುಗಳ ಕೋಡುಗಳಿಗೆ ಬಣ್ಣ ಹಚ್ಚಿ, ಕೊಂಬುಗುಣಸಿ ಹಾಕಿ, ಹಣೆ ಗೆಜ್ಜೆ, ಕೊರಳು ಗಂಟೆ ಕಟ್ಟಿ, ಮೈ ತುಂಬ ಚಿತ್ತಾರದ ಜೂಲ ಹೊಚ್ಚುತ್ತಾರೆ.

ಎಳ್ಳು ಹೋಳಿಗೆ, ಖಡಕ್ ಸಜ್ಜೆ ರೊಟ್ಟಿ, ಕರಿಗಡಬು, ತರಾವರಿ ಮಸಾಲೆ ಉಸುಳಿ, ಖಾರ ಸಾರು, ಎಣ್ಣೆಗಾಯಿ ಬದನೆ ಪಲ್ಲೆ, ಕೆನೆ ಮೊಸರು, ಚರಗದ ನೈವೇದ್ಯಕ್ಕೆ ತಯಾರಿಸಿದ ಜೋಳ, ಅವರೆ, ಅಕ್ಕಿಯ ಕಿಚಡಿಯನ್ನು ಹಬ್ಬಕ್ಕೆ ಸಿದ್ಧಪಡಿಸಲಾಗುತ್ತದೆ.

ಸಂಪ್ರದಾಯದಂತೆ ಹೊಲಗಳಲ್ಲಿ ಬನ್ನಿ ಗಿಡದ ಕೆಳಗೆ ಭರಮ ದೇವರೆಂದು ಐದು ಕಲ್ಲುಗಳನ್ನಿಟ್ಟು ಪೂಜಿಸುತ್ತಾರೆ. ನೈವೇದ್ಯವನ್ನು ಹೊಲದ ನಾಲ್ಕೂ ದಿಕ್ಕಿಗೂ ಉಗ್ಗುತ್ತಾರೆ. ಹುಲುಸಾಗಿ ಬೆಳೆ ಬರಲಿ ಎಂದು ಭೂಮಿ ತಾಯಿಗೆ ಉಡಿ ತುಂಬಿ ಎಲ್ಲರೂ ಒಂದೆಡೆ ಕುಳಿತು ಊಟ ಮಾಡುತ್ತಾರೆ.
 

Comments
ಈ ವಿಭಾಗದಿಂದ ಇನ್ನಷ್ಟು
‘ಆಧ್ಯಾತ್ಮಿಕ ಚಿಂತನೆಯಿಂದ ನೆಮ್ಮದಿ’

ಕುಷ್ಟಗಿ
‘ಆಧ್ಯಾತ್ಮಿಕ ಚಿಂತನೆಯಿಂದ ನೆಮ್ಮದಿ’

19 Jan, 2018

ತಾವರಗೇರಾ
ಜುಮಲಾಪುರ : ಪ್ರೌಢಶಾಲೆಯಲ್ಲಿ ಶುದ್ಧ ಕುಡಿವ ನೀರಿನ ಅಭಾವ

ನೀರಿನ ಸಮಸ್ಯೆ ನೀಗಿಸಲು ಕುಷ್ಟಗಿ ಶಾಸಕರು ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ನಿಗಮದಿಂದ ಶಾಲಾ ಕಟ್ಟಡ ಮತ್ತು ಕುಡಿಯುವ ನೀರಿಗಾಗಿ ₹ 8. 50 ಲಕ್ಷ...

19 Jan, 2018
ನೀರಾವರಿ ಯೋಜನೆ ನಿರ್ಲಕ್ಷಿಸಿದ್ದೆ ಸಾಧನೆ

ಕುಷ್ಟಗಿ
ನೀರಾವರಿ ಯೋಜನೆ ನಿರ್ಲಕ್ಷಿಸಿದ್ದೆ ಸಾಧನೆ

18 Jan, 2018
ಆತಂಕದ ನೆರಳಲ್ಲಿ ಆಶ್ರಯ ನಿವಾಸಿಗಳು

ಯಲಬುರ್ಗಾ
ಆತಂಕದ ನೆರಳಲ್ಲಿ ಆಶ್ರಯ ನಿವಾಸಿಗಳು

18 Jan, 2018
ಹೊಸ ತಾಲ್ಲೂಕು ಗರಿಗೆದರಿದ ನಿರೀಕ್ಷೆಗಳು

ಕನಕಗಿರಿ
ಹೊಸ ತಾಲ್ಲೂಕು ಗರಿಗೆದರಿದ ನಿರೀಕ್ಷೆಗಳು

18 Jan, 2018