ಕೊಟ್ಟೂರು ನೂತನ ತಾಲ್ಲೂಕಿಗೆ ಅಸ್ತಿತ್ವಕ್ಕೆ ಸಿದ್ಧತೆ
ಕೊಟ್ಟೂರು ಪಟ್ಟಣದಲ್ಲಿರುವ ಯಾತ್ರಿ ನಿವಾಸದಲ್ಲಿ ತಾಲ್ಲೂಕು ಕಚೇರಿ ಆರಂಭ ಮಾಡಲು ಉದ್ದೇಶಿಸಲಾಗಿದೆ


ಎ.ಎಂ. ಸೋಮಶೇಖರಯ್ಯ.
ಕೂಡ್ಲಿಗಿ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಹೊಸದಾಗಿ ರಚನೆಯಾಗುತ್ತಿರುವ ಕೊಟ್ಟೂರು ತಾಲ್ಲೂಕು ಕಚೇರಿಯಲ್ಲಿ 2018 ಜ.1ರಿಂದ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಆ ಮೂಲಕ ನೂತನ ತಾಲ್ಲೂಕು ಅಸ್ತಿತ್ವಕ್ಕೆ ಬೇಕಿರುವ ಎಲ್ಲಾ ಸಿದ್ಧತೆಗಳನ್ನು ಜಿಲ್ಲಾಡಳಿತ ಕೈಗೊಂಡಿದೆ.
ಕೊಟ್ಟೂರು ಪಟ್ಟಣದಲ್ಲಿರುವ ಯಾತ್ರಿ ನಿವಾಸದಲ್ಲಿ ತಾಲ್ಲೂಕು ಕಚೇರಿ ಆರಂಭ ಮಾಡಲು ಉದ್ದೇಶಿಸಲಾಗಿದೆ. ನೂತನ ತಾಲ್ಲೂಕು ಕೊಟ್ಟೂರು ವ್ಯಾಪ್ತಿಗೆ 29 ಕಂದಾಯ ಗ್ರಾಮಗಳನ್ನು ಸೇರ್ಪಡೆ ಮಾಡಿದ್ದು, ಇದೀಗ ಹೊಸಹಳ್ಳಿ ಹೋಬಳಿಯ ನಿಂಬಳಗೇರಿ ಗ್ರಾಮ ಪಂಚಾಯ್ತಿ ಸೇರಿದಂತೆ ಮಂಗಾಪುರ, ನಾಗೇನಹಳ್ಳಿ, ಕಂದಾಯ ಗ್ರಾಮಗಳನ್ನೂ ಸೇರಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದರಿಂದಾಗಿ ಕೊಟ್ಟೂರು ತಾಲ್ಲೂಕಿಗೆ ಒಟ್ಟು 32 ಕಂದಾಯ ಗ್ರಾಮಗಳು ಸೇರ್ಪಡೆಗೊಂಡಂತಾಗಿವೆ.
ಅವಿಭಜಿತ ಕೂಡ್ಲಿಗಿ ತಾಲ್ಲೂಕಿನಲ್ಲಿ 89 ಕಂದಾಯ ಗ್ರಾಮಗಳಿದ್ದವು. ಇದೀಗ ಅವುಗಳ ಪೈಕಿ 32 ಕಂದಾಯ ಗ್ರಾಮಗಳನ್ನು ನೂತನ ಕೊಟ್ಟೂರು ತಾಲ್ಲೂಕಿಗೆ ಹಂಚಿಕೆ ಮಾಡಲಾಗಿದೆ. ಇದರಿಂದಾಗಿ ನಿಂಬಳಗೇರಿ ಗ್ರಾಮ ಪಂಚಾಯಿತಿ ಮತ್ತು ಇದರ ವ್ಯಾಪ್ತಿಯ ಗ್ರಾಮಗಳ ಬಗ್ಗೆ ಉಂಟಾಗಿದ್ದ ಗೊಂದಲ ನಿವಾರಣೆಗೊಂಡಿದೆ.
ಈ ಮೊದಲು ಕೊಟ್ಟೂರು ತಾಲ್ಲೂಕು ಸೇರ್ಪಡಿಸಲು ನಿಗದಿಪಡಿಸಿದ ಕಂದಾಯ ಗ್ರಾಮಗಳ ಪಟ್ಟಿಯಲ್ಲಿ ನಿಂಬಳಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳನ್ನು
ಸೇರಿಸಿರಲಿಲ್ಲ. ನಿಂಬಳಗೇರಿ ಗ್ರಾಮದವರು ಕೂಡ್ಲಿಗಿ ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿ ಕೊಟ್ಟೂರು ನೂತನ ತಾಲ್ಲೂಕಿಗೆ ಸೇರ್ಪಡಿಸುವಂತೆ ಮನವಿ ಸಲ್ಲಿಸಿದ್ದರು.
ಅಧಿಸೂಚನೆಯ ಪ್ರಕಾರ ಕೊಟ್ಟೂರು ತಾಲ್ಲೂಕಿನ ಪೂರ್ವಕ್ಕೆ ಕೂಡ್ಲಿಗಿ ತಾಲ್ಲೂಕನ್ನು ಹೊಂದಿದ್ದರೆ, ಪಶ್ಚಿಮಕ್ಕ್ಕೆ ಹಡಗಲಿ ಮತ್ತು ಹರಪನಹಳ್ಳಿ ತಾಲ್ಲೂಕು, ಉತ್ತರಕ್ಕೆ ಹಗರಿಬೊಮ್ಮನಹಳ್ಳಿ ತಾಲ್ಲೂಕು ದಕ್ಷಿಣಕ್ಕೆ ಜಗಳೂರು ತಾಲ್ಲೂಕು ಗಡಿಯನ್ನು ಹೊಂದಿದೆ ಎಂದು ಕಂದಾಯ ಇಲಾಖೆಯ ಸಚಿವಾಲಯ ರಾಜ್ಯ ಪತ್ರದಲ್ಲಿ ಈ ವಿವರಗಳನ್ನು ಅಧಿಕೃತವಾಗಿ ಪ್ರಕಟಿಸಿದೆ.
ತಾಲ್ಲೂಕಿನ ಪ್ರಮುಖ ಸ್ಥಳಗಳು: ತಾಲ್ಲೂಕು ಕೇಂದ್ರದಲ್ಲಿರುವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನ ಹಾಗೂ ಪಂಚ ಪೀಠಗಳಲ್ಲಿ ಒಂದಾಗಿರುವ ಉಜ್ಜಯಿನಿ ಸದ್ಧರ್ಮ ಪೀಠ ನಾಡಿನಾದ್ಯಂತ ಪ್ರಸಿದ್ದಿ ಪಡೆದಿವೆ. ಇವುಗಳ ಜೊತೆಗೆ ಕೋಗಳಿಯ ಜೈನ ಬಸದಿಗಳು, ಅಂಬಳಿಯ ಕಲ್ಲೇಶ್ವರ ದೇವಸ್ಥಾನ ಪ್ರ್ರಮುಖ ಅಕರ್ಷಣೆಯಾಗಿದ್ದು ಪ್ರವಾಸಿ ತಾಣಗಳಾಗಲಿವೆ. ಅಲ್ಲದೆ ಗಜಾಪುರ ಬಳಿ ಇರುವ ಕುರ್ಕಿ ಲಿಂಗೇಶ್ವರ(ವಸಂತ ಮಲ್ಲಿಕಾರ್ಜುನ) ದೇವಸ್ಥಾನ, ಗಾಣಗಟ್ಟೆ ಮಾಯಮ್ಮ ದೇವಸ್ಥಾನ, ಚಿರಿಬಿ ಮೂಗಬಸವೇಶ್ವರ ದೇವಸ್ಥಾನ ಪ್ರಮುಖ ಧಾರ್ಮಿಕ ಕೇಂದ್ರಗಳು ನೂತನ ತಾಲ್ಲೂಕಿನಲ್ಲಿ ಬರಲಿವೆ.