ಕಟ್ಟೆ ಕಟ್ಟಿದ ಕಥೆ ಹೇಳುವ ಚಿತ್ರಗಳು

ಆಲಮಟ್ಟಿ ಜಲಾಶಯ ಸನ್ನದ್ಧಗೊಂಡು ನಿಲ್ಲಲು 40 ವರ್ಷಗಳೇ ಬೇಕಾದವು. ನಿರ್ಮಾಣ ಹಂತದ ಈ ಇತಿಹಾಸದ ಕಥೆ ಹೇಳುವ ನೂರಾರು ಭಾವಚಿತ್ರಗಳನ್ನು ಆಲಮಟ್ಟಿಯ ಪ್ರಧಾನ ಮುಖ್ಯ ಲೆಕ್ಕಾಧಿಕಾರಿಗಳ ಕಚೇರಿಯ ಆವರಣದ ಗೋಡೆಗಳ ಮೇಲೆ ಇದೀಗ ಅನಾವರಣಗೊಳಿಸಲಾಗಿದೆ.

ಯಂತ್ರಗಳ ಸಹಾಯವಿಲ್ಲದೆ ಜಲಾಶಯದ ಕಾಮಗಾರಿಯಲ್ಲಿ ನಿರತರಾಗಿರುವ ಕೂಲಿಕಾರ್ಮಿಕರು

ಭಾರತದ ಮಾಜಿ ಪ್ರಧಾನಿ ಲಾಲ್‌ಬಹಾದ್ದೂರ್‌ ಶಾಸ್ತ್ರಿಯವರು 1964 ಮೇ 22ರಂದು ಆಲಮಟ್ಟಿಯ ಕೃಷ್ಣಾ ಜಲಾಶಯಕ್ಕೆ ಅಡಿಗಲ್ಲು ಇರಿಸಿದ್ದರು. 2006 ಆಗಸ್ಟ್‌ 21ರಂದು ಆಗಿನ ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರಿಂದ ಈ ಜಲಾಶಯ ಲೋಕಾರ್ಪಣೆಯಾಯಿತು.

ಎಸ್.ಜಿ. ಬಾಳೇಕುಂದ್ರಿ, ಡಿ.ಎನ್‌. ದೇಸಾಯಿ ಅವರಂತಹ ನೀರಾವರಿ ತಜ್ಞರ ಪ್ರಯತ್ನದ ಫಲವಾಗಿ ಆಲಮಟ್ಟಿ ಕೃಷ್ಣಾ ಮೇಲ್ದಂಡೆ ಯೋಜನೆ ವ್ಯವಸ್ಥಿತವಾಗಿ ಅನುಷ್ಠಾನಗೊಂಡಿತು. ಮೊದಮೊದಲು ಯಾವುದೇ ಯಂತ್ರಗಳ ಸಹಾಯವಿಲ್ಲದೆ ಮಾನವ ಶಕ್ತಿಯಿಂದಲೇ ಅಲ್ಲಿನ ನಿರ್ಮಾಣ ಕಾರ್ಯಗಳು ನಡೆದವು. ಬರುಬರುತ್ತಾ ಮಾನವಶಕ್ತಿ ಕಡಿಮೆಯಾಗಿ ಯಂತ್ರಗಳ ಬಳಕೆ ಹೆಚ್ಚಿತು.

ಆಲಮಟ್ಟಿ ಜಲಾಶಯ ಸನ್ನದ್ಧಗೊಂಡು ನಿಲ್ಲಲು 40 ವರ್ಷಗಳೇ ಬೇಕಾದವು. ನಿರ್ಮಾಣ ಹಂತದ ಈ ಇತಿಹಾಸದ ಕಥೆ ಹೇಳುವ ನೂರಾರು ಭಾವಚಿತ್ರಗಳನ್ನು ಆಲಮಟ್ಟಿಯ ಪ್ರಧಾನ ಮುಖ್ಯ ಲೆಕ್ಕಾಧಿಕಾರಿಗಳ ಕಚೇರಿಯ ಆವರಣದ ಗೋಡೆಗಳ ಮೇಲೆ ಇದೀಗ ಅನಾವರಣಗೊಳಿಸಲಾಗಿದೆ.
ಆಲಮಟ್ಟಿ ಜಲಾಶಯ ನಿರ್ಮಾಣ ತಾಣಕ್ಕೆ ಇಂದಿರಾ ಗಾಂಧಿ ಅವರು ಭೇಟಿ ನೀಡಿದ ಕ್ಷಣ
ಆಲಮಟ್ಟಿ ಜಲಾಶಯ ನಿರ್ಮಾಣ ತಾಣಕ್ಕೆ ಇಂದಿರಾ ಗಾಂಧಿ ಅವರು ಭೇಟಿ ನೀಡಿದ ಕ್ಷಣ

ಆಲಮಟ್ಟಿಗೆ 1972ರಲ್ಲಿ ಭೇಟಿ ನೀಡಿದ ದೇಶದ ಆಗಿನ ಪ್ರಧಾನಿ ಇಂದಿರಾಗಾಂಧಿ ಹಾಗೂ ಅವತ್ತಿನ ಮೈಸೂರು ರಾಜ್ಯದ ಮಂತ್ರಿ ಮಹೋದಯರ ಚಿತ್ರಗಳು ಇಲ್ಲಿ ಕಾಣಸಿಗುತ್ತವೆ.

ಜಲಾಶಯದ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದ ಹಿರಿಯ ಅಧಿಕಾರಿಗಳಾದ ಎಸ್.ಜಿ. ಬಾಳೇಕುಂದ್ರಿ, ನಿವೃತ್ತರಾಗಿಯೂ ತಮ್ಮ ಬದುಕಿನ ಬಹುಸಮಯವನ್ನು ಕೃಷ್ಣಾ ಮೇಲ್ದಂಡೆ ಯೋಜನೆಗಾಗಿಯೇ ಮುಡುಪಾಗಿಟ್ಟ, 90ರ ಇಳಿವಯಸ್ಸಿನ ಡಿ.ಎನ್. ದೇಸಾಯಿ, ಕೃಷ್ಣಾ ಭಾಗ್ಯ ಜಲ ನಿಗಮ ಸ್ಥಾಪನೆಗೆ ಕಾರಣೀಭೂತರಾದ ಕ್ಯಾಪ್ಟನ್ ಎಸ್. ರಾಜಾರಾವ್‌, ಹರಿಕೃಷ್ಣ, ಎಸ್.ಎಸ್. ಮಗದಾಳ, ಡಾ ಎಸ್.ಎಂ. ಜಾಮದಾರ, ಕಪಿಲ್‌ಮೋಹನ್‌, ಅನಂತರಾಮು ಅವರಂತಹ ಅಧಿಕಾರಿಗಳ ಶ್ರಮವನ್ನು ಈ ಚಿತ್ರಗಳು ಸಾರಿ ಸಾರಿ ಹೇಳುತ್ತವೆ.

ಆಲಮಟ್ಟಿ ಜಲಾಶಯ ಅರವತ್ತರ ದಶಕದಲ್ಲಿ ಆರಂಭಗೊಂಡಾಗ ಇದ್ದ ಸನ್ನಿವೇಶ, ಕೂಲಿಕಾರ್ಮಿಕರ ಚಿತ್ರಗಳು ಮನಸ್ಸಿಗೆ ನಾಟುತ್ತವೆ. ತಲೆಗೆ ಟವೆಲ್ ಸುತ್ತಿಕೊಂಡಿರುವ ಗಂಡು ಕೂಲಿಗಳು, ಸೀರೆಯ ಸೆರಗಿನಿಂದ ತಲೆಯನ್ನು ಮುಚ್ಚಿಕೊಂಡು ಅದರ ಮೇಲೆ ಸಿಂಬೆಯನ್ನು ಇಟ್ಟುಕೊಂಡು, ಗಂಡುಗಚ್ಚಿ ಹಾಕಿ ಕೆಲಸ ನಿರ್ವಹಿಸುತ್ತಿರುವ ಮಹಿಳಾ ಕೂಲಿಗಳು, ಗಂಡುಗಚ್ಚಿ ಹಾಕಿನಿಂತು ಸಂಬಳದ ಜೊತೆಗೆ ಪೌಷ್ಟಿಕ ಆಹಾರಕ್ಕಾಗಿ ಮೊಟ್ಟೆಯನ್ನು ತೆಗೆದುಕೊಳ್ಳುತ್ತಿರುವ ಮಹಿಳೆಯರ ಸಾಲು, ಅಲ್ಲೊಂದು ಇಲ್ಲೊಂದು ಅಪರೂಪದ ಯಂತ್ರ... ಈ ದೃಶ್ಯಗಳು ಜಲಾಶಯ ನಿರ್ಮಾಣದ ಬಿಡುಬೀಸು ನೋಟಗಳನ್ನು ಕಟ್ಟಿಕೊಡುತ್ತವೆ. ಈ ನೂರಾರು ಚಿತ್ರಗಳು ಅವತ್ತಿನ ಸಂದರ್ಭದ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಯನ್ನೂ ಕೂಲಿಕಾರ್ಮಿಕರ ಭಾವನಾತ್ಮಕ ಚಿತ್ರಣವನ್ನೂ ನೀಡುತ್ತವೆ.

ಯಾವುದೇ ಯಂತ್ರಗಳ ಸಹಾಯವಿಲ್ಲದೆ ಕೇವಲ ಮಾನವ ಶಕ್ತಿಯಿಂದ ನಿರ್ಮಿಸುತ್ತಿರುವ ಜಲಾಶಯದ ಕಾಮಗಾರಿಯ ದೃಶ್ಯಗಳು ಬಲುರೋಚಕವಾಗಿವೆ.

ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಬಲದಂಡೆ, ಎಡದಂಡೆ, ಮುಳವಾಡ ಏತ ನೀರಾವರಿ ಯೋಜನೆ ಹಂತ-1,2 ಮತ್ತು3, ಚಿಮ್ಮಲಗಿ, ತಿಮ್ಮಾಪುರ, ರಾಮಥಾಳ ಹನಿ ನೀರಾವರಿ ಯೋಜನೆಗಳ ನಿರ್ಮಾಣದ ಚಿತ್ರಗಳನ್ನೂ ಇಲ್ಲಿ ಕಾಣಬಹುದು.

ಜಲಾಶಯ ನಿರ್ಮಾಣದಲ್ಲಿ ತೊಡಗಿದ್ದ ಮಹಿಳಾ ಕೂಲಿಕಾರ್ಮಿಕರಿಗೆ ಮೊಟ್ಟೆ ವಿತರಣೆ

ಆಲಮಟ್ಟಿ ಜಲಾಶಯದ ಕಾಮಗಾರಿಗಳ ವಿವಿಧ ಹಂತದ ನೂರಾರು ಚಿತ್ರಗಳನ್ನು ಸಂಗ್ರಹಿಸಿ ಫೋಟೊ ಗ್ಯಾಲರಿ ನಿರ್ಮಿಸಿದ್ದು ಇಲ್ಲಿಯ ಪ್ರಧಾನ ಮುಖ್ಯ ಲೆಕ್ಕಾಧಿಕಾರಿ ಕೆ.ಎನ್. ಗಂಗಾಧರ. ಫೋಟೊ ಸಂಗ್ರಹಕ್ಕಾಗಿ ವಿವಿಧ ಕಚೇರಿಗಳಿಗೆ ತೆರಳಿ, ತುಂಬಾ ಹಳೆಯದಾದ, ಮೂಲೆ ಸೇರಿದ್ದ ನೂರಾರು ಫೋಟೊ ನೆಗೆಟಿವ್‌ಗಳನ್ನು ಹುಡುಕಿ, ಅವುಗಳನ್ನು ಡಿಜಿಟಲೀಕರಣಗೊಳಿಸಿ ಸಂರಕ್ಷಿಸಿದ್ದಾರೆ. ಇದಕ್ಕೆ ಕೆಬಿಜೆಎನ್ಎಲ್ ಛಾಯಾಗ್ರಾಹಕ ಪ್ರಹ್ಲಾದಚಾರ್ಯ ಚಿಮ್ಮಲಗಿ ಸಾಥ್ ನೀಡಿದ್ದಾರೆ.2006ರಲ್ಲಿ ಆಗಿನ ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ಅವರು ಕೃಷ್ಣೆಗೆ ಬಾಗಿನ ಅರ್ಪಿಸುವ ಮೂಲಕ ಜಲಾಶಯ ಲೋಕಾರ್ಪಣೆ ಮಾಡಿದಾಗ...


 

Comments
ಈ ವಿಭಾಗದಿಂದ ಇನ್ನಷ್ಟು
ಹಿನ್ನೀರಲಿ ತೇಲುವ ಭವಿಷ್ಯದ ದೋಣಿ!

ಕರ್ನಾಟಕ ದರ್ಶನ
ಹಿನ್ನೀರಲಿ ತೇಲುವ ಭವಿಷ್ಯದ ದೋಣಿ!

17 Apr, 2018
ಬಿಸಿಲಲಿ ನಲಿವ ಮುಳ್ಳುಮುತ್ತುಗ

ಕರ್ನಾಟಕ ದರ್ಶನ
ಬಿಸಿಲಲಿ ನಲಿವ ಮುಳ್ಳುಮುತ್ತುಗ

17 Apr, 2018
ಕಲೆಯಲ್ಲಿ ಮೀಯಿಸುವ ಮೀಯ್ಯಾರು

ಕರ್ನಾಟಕ ದರ್ಶನ
ಕಲೆಯಲ್ಲಿ ಮೀಯಿಸುವ ಮೀಯ್ಯಾರು

17 Apr, 2018
ಸಿಳ್ಳೆ ಹೊಡೆಯುವ ಹರಟೆ ಮಲ್ಲರು!

ಹಳದಿ ಕಣ್ಣಿನ ಹರಟೆ ಮಲ್ಲ
ಸಿಳ್ಳೆ ಹೊಡೆಯುವ ಹರಟೆ ಮಲ್ಲರು!

10 Apr, 2018
ಎಲ್ಲುಂಟು ಸೋಗೆ ಚಾವಣಿ?

‘ನೈಸರ್ಗಿಕ ಎ.ಸಿ’
ಎಲ್ಲುಂಟು ಸೋಗೆ ಚಾವಣಿ?

10 Apr, 2018