ಹಾವಿನೊಡನೆ ಆಡುವ ಪೋರಿ!

ಹಾವು ಎಂದರೆ ಹುಲೇಕಲ್‌ ಮನೆತನದವರಿಗೆ ಅಚ್ಚುಮೆಚ್ಚು. ಈ ಮಗುವಿನ ಅಜ್ಜ ಸುರೇಶ ಅವರು ಅರಣ್ಯ ಇಲಾಖೆಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದವರು. ಮನೆಗಳಿಗೆ ನುಗ್ಗಿದ ಹಾವುಗಳನ್ನು ರಕ್ಷಣೆ ಮಾಡುತ್ತಿದ್ದವರು. ಪ್ರಶಾಂತ್‌ ಕೂಡ ಹಾವು ಹಿಡಿಯುವುದನ್ನು ಕಲಿತರು. ಈಗ ಅವರ ಎರಡೂವರೆ ವರ್ಷದ ಮಗಳು ಸಹ ಹಾವುಗಳನ್ನು ಹಿಡಿಯುತ್ತಿದ್ದಾಳೆ!

ಚಿತ್ರಗಳು: ಈರಪ್ಪ ನಾಯ್ಕರ್‌

ಪುಟ್ಟಿಯೊಬ್ಬಳು ಹಾವಿನೊಂದಿಗೆ ಕುಳಿತು ಆಟವಾಡುವ ಚಿತ್ರವೊಂದು ನಮ್ಮ ಕಚೇರಿಯಲ್ಲಿ ನೋಡಲು ಸಿಕ್ಕಿತು. ಆ ಚಿತ್ರವನ್ನು ನೋಡಿದ ತಕ್ಷಣ ಮಂಗನ ಜೊತೆಗೆ ಆಟವಾಡುತ್ತಿದ್ದ ಅಲ್ಲಾಪುರದ ಬಾಲಕನ ನೆನಪು ಬಂತು.

ಹಾವಿನೊಡನೆ ಆಡುವ ಈ ಪೋರಿಯನ್ನೂ ನೋಡಿ ಕೊಂಡು ಬಂದರಾಯಿತು ಎಂದು ಶಿರಸಿ ತಾಲ್ಲೂಕಿನ ಚಿಪಗಿ ಗ್ರಾಮಕ್ಕೆ ಹೊರಟೆ. ಅಲ್ಲಿದೆ ಪ್ರಶಾಂತ್‌ ಹುಲೇಕಲ್‌ ಅವರ ಮನೆ. ಪ್ರಶಾಂತ್‌ ಅವರ ಮಗಳು ಆಕರ್ಷಾಳೇ ಹಾವಿನೊಡನೆ ಆಟವಾಡುವ ಹುಡುಗಿ. ಅವರ ಮನೆಯ ಸುತ್ತಲೂ ಹಚ್ಚ ಹಸಿರು. ಹುಲ್ಲು, ಪೊದೆ ಮತ್ತು ವಿವಿಧ ಜಾತಿಯ ಮರಗಳು. ಸದಾ ಚಿಲಿ ಪಿಲಿ ಸದ್ದು ಮಾಡುವ ಹಕ್ಕಿಗಳು. ರಮಣೀಯ ಪರಿಸರ ಅಲ್ಲಿಯದು.

ಹಾವು ಎಂದರೆ ಹುಲೇಕಲ್‌ ಮನೆತನದವರಿಗೆ ಅಚ್ಚುಮೆಚ್ಚು. ಈ ಮಗುವಿನ ಅಜ್ಜ ಸುರೇಶ ಅವರು ಅರಣ್ಯ ಇಲಾಖೆಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದವರು. ಮನೆಗಳಿಗೆ ನುಗ್ಗಿದ ಹಾವುಗಳನ್ನು ರಕ್ಷಣೆ ಮಾಡುತ್ತಿದ್ದವರು. ಪ್ರಶಾಂತ್‌ ಕೂಡ ಹಾವು ಹಿಡಿಯುವುದನ್ನು ಕಲಿತರು. ಈಗ ಅವರ ಎರಡೂವರೆ ವರ್ಷದ ಮಗಳು ಸಹ ಹಾವುಗಳನ್ನು ಹಿಡಿಯುತ್ತಿದ್ದಾಳೆ!

ಚಿತ್ರಪಟಗಳಲ್ಲಿ ಹಾವು ನೋಡಿದರೇನೇ ಭಯ ಪಡುವ ಜನ ಇರುವಾಗ ಈ ಬಾಲಕಿಗೆ ಎಂಥ ಧೈರ್ಯ! ಹಾವು ಕಂಡರೆ ಎಂಥ ಖುಷಿ ಮೊಗದಲ್ಲಿ. ಹಾವು ಕಂಡಾಕ್ಷಣ ಪುಟ್ಟ ಹೆಜ್ಜೆಗಳನ್ನು ಇಡುತ್ತಾ ಆದರ ಹಿಂದೆಯೇ ಓಡುತ್ತಾ ಹಿಡಿದು ಆಟದ ಹಗ್ಗದ ಹಾಗೆ ಆಡಿಸಬಲ್ಲಳು. ಬಾಲ ಎತ್ತಿ ಅವುಗಳನ್ನು ಹೊರಳಾಡಿಸುತ್ತಾಳೆ. ಎಡೆ ಹೆತ್ತಿ ಕೂತರೆ ಅದನ್ನೇ ದಿಟ್ಟಿಸುತ್ತಾಳೆ. ಮುಂದೆ ಹಾವು ಸಾಗುತ್ತಿದ್ದರೆ ಅದಕ್ಕೆ ತನ್ನ ತೊದಲು ನುಡಿಯಲ್ಲೇ, ‘ಏಯ್‌ ಎಲ್ಲಿ ಹೋಗ್ತಿ’ ಎಂದು ಪ್ರೀತಿಯಿಂದ ಗದರಿಸುತ್ತಾಳೆ.

ಅದು ಹೇಗೆ ಈ ಪುಟ್ಟ ಪೋರಿಗೆ ಇಷ್ಟು ಧೈರ್ಯ ಬಂತು? ಅದಕ್ಕೆ ಉತ್ತರ ಇಲ್ಲಿದೆ. ಪ್ರಶಾಂತ್ ಅವರು ಹಾವು ಹಿಡಿಯಲು ಹೋಗುವಾಗ ಆಕರ್ಷಾಳನ್ನೂ ತಮ್ಮೊಂದಿಗೆ ಕರೆದುಕೊಂಡು ಹೋಗುತ್ತಾರೆ. ತಂದೆ ಹಾವುಗಳನ್ನು ಹೇಗೆ ರಕ್ಷಣೆ ಮಾಡುತ್ತಾರೆ ಎಂಬುದನ್ನು ಗಮನಿಸಿ, ಅದೇ ರೀತಿಯಲ್ಲಿ ತಾನೂ ಮಾಡುವುದನ್ನು ಕಲಿತಿದ್ದಾಳೆ.

‘ಒಂದು ದಿನ ಆಕೆ ತಮ್ಮನೊಂದಿಗೆ ಆಟ ಆಡುತ್ತಿರುವಾಗ ಒಂದು ಸಣ್ಣ ಹಾವು ಸಾಗುತ್ತಿತ್ತು. ಅದನ್ನು ಗಮನಿಸಿದ ಇವಳು, ನಾನು ಹಾವು ಹಿಡಿಯುವಾಗ ಹೇಗೆ ಬಟ್ಟೆಯನ್ನು ತೆಗೆದುಕೊಂಡು ಹಾವನ್ನು ತೆಪ್ಪಗೆ ಇರುವಂತೆ ಮಾಡುತ್ತಿದ್ದೆನೋ, ಅದೇ ರೀತಿಯಲ್ಲಿ ಮಾಡಿದ್ದಳು’ ಎಂದು ಪ್ರಶಾಂತ್‌ ಅವರು ನೆನೆಯುತ್ತಾರೆ. ಮಕ್ಕಳಲ್ಲಿ ಪ್ರಾಣಿ, ಪಕ್ಷಿ ಮತ್ತು ಪರಿಸರದ ಬಗ್ಗೆ ಅರಿವು ಮೂಡಿಸಬೇಕು. ಪರಿಸರಕ್ಕೆ ಪೂರಕವಾಗಿ ಬಾಳುವುದನ್ನು ಕಲಿಸಬೇಕು ಎಂದು ಅವರು ಸಲಹೆ ನೀಡುತ್ತಾರೆ.

ಸರ್ಪಗಳನ್ನು ಕಂಡರೆ ಮಾರು ದೂರ ಸರಿಯುವ ಮಂದಿ ನಡುವೆ ಅವುಗಳೊಂದಿಗೆ ಆಡಬಲ್ಲ ಆಕರ್ಷಾ ಧೈರ್ಯ ಎಲ್ಲರನ್ನೂ ಬೆಚ್ಚಿಬೀಳಿಸುವುದಂತೂ ನಿಜ.

 

Comments
ಈ ವಿಭಾಗದಿಂದ ಇನ್ನಷ್ಟು
ಸ್ವರ್ಗದ ತುಣುಕುಗಳು

ಕರ್ನಾಟಕ ದರ್ಶನ
ಸ್ವರ್ಗದ ತುಣುಕುಗಳು

20 Mar, 2018
ಖುಷಿಯ ದಾರಿಗೆ   ವಿವೇಕದ ದೀಪ

ಕರ್ನಾಟಕ ದರ್ಶನ
ಖುಷಿಯ ದಾರಿಗೆ ವಿವೇಕದ ದೀಪ

20 Mar, 2018
ಬಾಯ್ಕಳಕ ಬಯಲಾಟ

ಕರ್ನಾಟಕ ದರ್ಶನ
ಬಾಯ್ಕಳಕ ಬಯಲಾಟ

13 Mar, 2018
ಬಂತು ಯುದ್ಧ ಟ್ಯಾಂಕ್‌!

ರೋಚಕ ಸಂಗತಿ
ಬಂತು ಯುದ್ಧ ಟ್ಯಾಂಕ್‌!

13 Mar, 2018
ಕೊಳಲಿನ ಹಬ್ಬ

ಕರ್ನಾಟಕ ದರ್ಶನ
ಕೊಳಲಿನ ಹಬ್ಬ

6 Mar, 2018